ಬೆಂಗಳೂರಿನಲ್ಲಿ ಮಳೆ ಅವಾಂತರ: ತಗ್ಗು ಪ್ರದೇಶಗಳು ಜಲಾವೃತ: ಜನರ ಪರದಾಟ.

ಬೆಂಗಳೂರು,ಸೆಪ್ಟಂಬರ್,5,2022(www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹಲವು ಬಡಾವಣೆಗಳು ಜಲಾವೃತಗೊಂಡು ಜನರು ಸಂಕಷ್ಟಕ್ಕೀಡಾಗಿರುವ ಘಟನೆ ನಡೆದಿದೆ.

ಮಳೆ ಬಂತೆಂದರೇ ಸಾಕು ಬೆಂಗಳೂರಿನ ಜನತೆಗೆ ಸಂಕಷ್ಟ ತಪ್ಪಿದಲ್ಲ ಎನ್ನುವಂತಾಗಿದೆ. ಅಂತೆಯೇ ನಿನ್ನೆಯೂ ಸಹ ಸುರಿದ ಧಾರಾಕಾರ ಮಳೆಗೆ ನಗರದ, ಸರ್ಜಾಪುರ ರಸ್ತೆ, ಬೆಳ್ಳಂದೂರು ಕ್ರಾಸ್, ಸರ್ಜಾಪುರ ಹಲಸೂರು, ಎಲೆಕ್ಟ್ರಾನ್ ಸಿಟಿ   ಸೇರಿ ಹಲವು ಬಡಾವಣೆಗಳು ಜಲಾವೃತವಾಗಿದ್ದು ನೀರು ನಿಂತು ರಸ್ತೆಗಳು ಕೆರೆಯಂತಾಗಿವೆ. ಮಳೆಗೆ ಇಂದಿರಾನಗರ ದ್ವೀಪದಂತಾಗಿದ್ದು ಜನರು ತೊಂದರೆ ಅನುಭವಿಸಿದ್ದಾರೆ.

ಸರ್ಜಾಪುರದ ದಿ ಕಂಟ್ರಿ ಸೈಡ್ ಲೇಔಟ್ ಜಲಾವೃತವಾಗಿದ್ದು,  ಲೇಔಟ್ ನಲ್ಲಿ ಸಿಲುಕಿದ್ದ ಜನರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ   ಸರ್ಜಾಪುರ, ಮಾರತ್ತಹಳ್ಳಿ ಭಾಗದಲ್ಲಿ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾದ  ಹಿನ್ನೆಲೆ ಐಟಿ-ಬಿಟಿ ಕಂಪನಿಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಭಾರಿ ಮಳೆಗೆ ಬೆಂಗಳೂರು-ತುಮಕೂರು ಸರ್ವಿಸ್ ರಸ್ತೆ ಜಲಾವೃತವಾಗಿದ್ದು, ಸರ್ವಿಸ್​ ರಸ್ತೆ ಜಲಾವೃತಗೊಂಡ ಪರಿಣಾಮ ಟ್ರಾಫಿಕ್ ​ಜಾಮ್ ಉಂಟಾಗಿದ್ದು,​​​​​​ ತುಮಕೂರು-ಬೆಂಗಳೂರು ರಸ್ತೆಯಲ್ಲಿ ವಾಹನ ಸವಾರರು ಪರದಾಡುವಂತ್ತಾಗಿದೆ. ನೆಲಮಂಗಲದ ಶಾಲೆಗೂ ಮಳೆ ನೀರು ನುಗ್ಗಿದ್ದು, ಶಾಲೆಯ ಕಾಂಪೌಂಡ್​ಗೆ ಹಾನಿಯಾಗಿದ್ದು, ಕೊಠಡಿಗಳಿಗೂ ನೀರು ನುಗ್ಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ವಾಜರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದ್ದು, ಪ್ರಾಥಮಿಕ ಶಾಲಾ ಕೊಠಡಿಯಲ್ಲಿದ್ದ ಕಲಿಕಾ ಸಾಮಾಗ್ರಿ ಹಾನಿಯಾಗಿವೆ. ಸರ್ಕಾರಿ ಶಾಲೆಯಿಂದ ನೀರು ಹೊರಹಾಕಲು ಹರಸಾಹಸ ಪಡುವಂತ್ತಾಗಿದೆ. ಒಟ್ಟಾರೆ ಮಳೆಯಿಂದಾಗಿ ಬೆಂಗಳೂರಿನಲ್ಲಿ ಸಂಕಷ್ಟಗಳ ಸರಮಾಲೆ ಎದುರಾಗಿದ್ದು ಮಕ್ಕಳು ಮಹಿಳೆಯರು ಹೈರಾಣಾಗಿದ್ದಾರೆ.

Key words: Rain – Bengaluru- flooded-People