ಪೆಟ್ರೋಲ್-ಡೀಸೆಲ್ ದರ ಇಳಿಕೆ ಹಿನ್ನೆಲೆ: ಮೈಸೂರಿನಲ್ಲಿ ಬಿಜೆಪಿಯಿಂದ ಸಂಭ್ರಮಾಚರಣೆ: ಇದು ಕಣ್ಣೊರೆಸುವ ತಂತ್ರ ಎಂದ ಬಡಗಲಪುರ ನಾಗೇಂದ್ರ.

Promotion

ಮೈಸೂರು,ನವೆಂಬರ್,4,2021(www.justkannada.in):  ಕೇಂದ್ರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಿರುವ ಹಿನ್ನೆಲೆ  ಮೈಸೂರು ನಗರದ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಸಾರ್ವಜನಿಕರಿಗೆ ಸಿಹಿ ಹಾಗೂ ಗುಲಾಬಿ ಕೊಟ್ಟು ಸಂಭ್ರಮಾಚರಣೆ ಮಾಡಲಾಯಿತು.

ನಗರದ ಬಿಜೆಪಿ ಕಾರ್ಯಕರ್ತರು ಆರ್ ಟಿಓ ಪೆಟ್ರೋಲ್ ಬಂಕ್  ಬಳಿ ಪೆಟ್ರೋಲ್,  ಡಿಸೇಲ್ ಹಾಕಿಸಿಕೊಳ್ಳುವ ಸಾರ್ವಜನಿಕರಿಗೆ ಸಿಹಿ ಹಾಗೂ ಗುಲಾಬಿ ಕೊಟ್ಟು ಸಂಭ್ರಮಾಚರಣೆ ಮಾಡಿದರು.

ಈ ವೇಳೆ ಮಾತನಾಡಿದ ನಗರ ಓ.ಬಿ.ಸಿ.ಅಧ್ಯಕ್ಷ ಜೋಗಿಮಂಜು ಕೇಂದ್ರ ಹಾಗೂ ರಾಜ್ಯ ಸರ್ಕಾರ ದೀಪಾವಳಿಯ ಉಡುಗೊರೆಯಾಗಿ ಪೆಟ್ರೋಲ್ 7 ರೂ ಹಾಗೂ ಡಿಸೇಲ್ 12 ರೂ ಗಳ ಕಡಿಮೆ ಮಾಡಿ ಬಂಪರ್ ನೀಡಿದ್ದಾರೆ, ಇದರಿಂದಾಗಿ ಕೇಂದ್ರ ಸರ್ಕಾರಕ್ಕೆ ಒಂದು ಲಕ್ಷ ಕೋಟಿ ಹಾಗೂ ರಾಜ್ಯ ಸರ್ಕಾರಕ್ಕೆ  2200 ಕೋಟಿ ಹೊರೆಯಾಗುತ್ತದೆ. ಆದರೆ ಪೆಟ್ರೋಲ್ ಡೀಸೆಲ್ ಬೆಲೆ ಇಳಿಸುವ ಮೂಲಕ ಜನ ಸಾಮನ್ಯರ ಹೊರೆ ಕಡಿಮೆ ಮಾಡಿದ್ದಾರೆ. ಅದೇ ರೀತಿ ವಿರೋಧ ಪಕ್ಷ ಗಳ ಟೀಕೆಗಳಿಗೆ ಸರಿಯಾದ ಉತ್ತರ ನೀಡುವ ಮೂಲಕ ಅವರಿಗೆ ಕಡಿವಾಣ ಹಾಕಿದ್ದಾರೆ ಎಂದರು.

ಈ ಸಂಧರ್ಭದಲ್ಲಿ ನಗರಪಾಲಿಕೆ ಸದಸ್ಯ ಕೆ.ಜೆ.ರಮೇಶ್, ಮಾಜಿ ನಗರಪಾಲಿಕೆ ಸದಸ್ಯ ಜಯರಾಮ್, ಪ್ರಧಾನ ಕಾರ್ಯದರ್ಶಿ ಗೋಪಾಲ್, ಹರೀಶ್ ಅಂಕಿತ್, ಸೂರಜ್,ಪುರುಷೋತ್ತಮ, ಶಿವಪ್ಪ,ರವಿಕುಮಾರ್, ಸೋಮಶೇಖರ್, ರಾಜೇಶ್ ಮುಂತಾದವರು ಇದ್ದರು

ಪೆಟ್ರೋಲ್-ಡಿಸೇಲ್ ದರ ಇಳಿಕೆ ಕಣ್ಣೊರೆಸುವ ತಂತ್ರ- ಬಡಗಲಪುರ ನಾಗೇಂದ್ರ ಟೀಕೆ.

ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಹಸಿರುಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಪೆಟ್ರೋಲ್-ಡಿಸೇಲ್ ದರ ಇಳಿಕೆ  ಜನರ ಕಣ್ಣೊರೆಸುವ ತಂತ್ರ. ಉಪಚುನಾವಣೆಗಳಲ್ಲಿ ಸೋತ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿದೆ. ಜನಾಕ್ರೋಶಕ್ಕೆ ಮಣಿದು ದರ ಇಳಿಕೆ ಮಾಡಿದೆ. ಮತ್ತಷ್ಟು ದರ ಇಳಿಕೆ ಮಾಡಿ ಮಧ್ಯಮವರ್ಗದ ಜನರಿಗೆ ಅನುಕೂಲ ಮಾಡಿಕೊಡಬೇಕು. ಆದರೆ ಅಗತ್ಯ ವಸ್ತುಗಳು ಹಾಗೂ ಕೃಷಿ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆಯಿಂದ ಕೃಷಿ ಉಪಕರಣ, ಗೊಬ್ಬರ ಖರೀದಿಸಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಕೃಷಿ ಉಪಕರಣಗಳು ಹಾಗೂ ಗೊಬ್ಬರಗಳ ಬೆಲೆ ಇಳಿಸಬೇಕು ಎಂದು ಒತ್ತಾಯಿಸಿದರು.

Key words: Petrol-Diesel -Price Reduction-Celebration – BJP – Mysore