ರೋಗಿಗಳ ಜೀವಕ್ಕೆ ಕುತ್ತಾಗುವ ಆನ್​ಲೈನ್ ಕನ್ಸಲ್ಟೆನ್ಸಿ!

ಬೆಂಗಳೂರು:ಮೇ-16;ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವ ಬದಲು ಆನ್​ಲೈನ್ ವೈದ್ಯಕೀಯ ಸೇವೆ ಮೊರೆ ಹೋಗುತ್ತಿರುವಿರಾ? ಹಾಗಿದ್ದರೆ ಎಚ್ಚರ. ಸಮಯ ಹಾಗೂ ಹಣ ಉಳಿಸುವ ನಿಮ್ಮ ದೂರಾಲೋಚನೆ ನಿಮ್ಮ ಜೀವಕ್ಕೇ ಮುಳುವಾಗಬಹುದು!

ಆನ್​ಲೈನ್ ಸಮಾಲೋಚನೆಯಿಂದ ಅನುಕೂಲಕ್ಕಿಂತ ರೋಗಿಯ ಜೀವಕ್ಕೆ ಆಪತ್ತೇ ಹೆಚ್ಚೆಂದು ಕರ್ನಾಟಕ ಮೆಡಿಕಲ್ ಕೌನ್ಸಿಲ್ (ಕೆಎಂಸಿ) ಎಚ್ಚರಿಕೆ ಕೊಟ್ಟಿದೆ. ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ) ಮಾನದಂಡಗಳಿಗೆ ಒಳಪಟ್ಟು ಆನ್​ಲೈನ್ ಮೂಲಕ ಸೇವೆ ಒದಗಿಸಲು ಅವಕಾಶವಿದೆಯೇ ಎಂದು ಬೆಂಗಳೂರು ಚರ್ಮವೈದ್ಯರ ಸಂಘ (ಬಿಡಿಎಸ್) ಕೇಳಿದ ಮಾಹಿತಿಗೆ ಪ್ರತಿಕ್ರಿಯಿಸಿರುವ ಕೆಎಂಸಿ ಅದರಿಂದ ಉಂಟಾಗುವ ಅಪಾಯಗಳ ಸಮಗ್ರ ಮಾಹಿತಿಯನ್ನು ಬಿಚ್ಚಿಟ್ಟಿದೆ.

ರೋಗಿಯನ್ನು ದೈಹಿಕವಾಗಿ ಪರಾಮಶಿಸದ ಹೊರತು ಆತನ ರೋಗಗಳನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಆನ್​ಲೈನ್ ಮೂಲಕ ರೋಗವನ್ನು ತಪ್ಪಾಗಿ ಗ್ರಹಿಸಿದರೆ ಅಪಾಯದ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಆನ್​ಲೈನ್ ವೈದ್ಯಕೀಯ ಚಿಕಿತ್ಸೆ ಸೂಕ್ತವಲ್ಲ ಎಂಬುದು ಕೆಎಂಸಿ ನಿಲುವು.

ಕಾನೂನಲ್ಲಿ ಅವಕಾಶ ಇಲ್ಲ: ಆನ್​ಲೈನ್ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಕಾನೂನು ಅನುಮತಿ ನೀಡಿಲ್ಲ. ಕೆಲ ಐಟಿ ಕಂಪನಿಗಳು ಎಂಸಿಐ ಮಾನದಂಡ ಗಮನಿಸದೆ ತಾವು ಲಾಭ ಮಾಡಿಕೊಳ್ಳಲು ವೈದ್ಯರಿಗೆ ಆನ್​ಲೈನ್ ವೇದಿಕೆ ಒದಗಿಸುತ್ತಿವೆ. ವೈದ್ಯರು ಈ ಬಗ್ಗೆ ಎಚ್ಚರವಹಿಸಬೇಕು. ಇಲ್ಲದಿದ್ದರೆ ಸುಖಾಸುಮ್ಮನೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತಾಗುತ್ತದೆ ಎಂಬುದನ್ನು ಅರಿಯಬೇಕೆಂದು ಕರ್ನಾಟಕ ಮೆಡಿಕಲ್ ಕೌನ್ಸಿಲ್ ಅಧ್ಯಕ್ಷ ಡಾ.ಬಿ. ವೀರಭದ್ರಪ್ಪ ತಿಳಿಸಿದ್ದಾರೆ. ಭಾರತೀಯ ವೈದ್ಯಕೀಯ ಮಂಡಳಿ ಮುಂದೆ ಆನ್​ಲೈನ್ ವೈದ್ಯಕೀಯ ಸೇವೆ ಚರ್ಚೆಗೆ ಬಂದಾಗ ಪರಿಶೀಲಿಸಲಾಗುವುದು. ವಿದೇಶಗಳಲ್ಲಿ ಯಾವೆಲ್ಲ ಪದ್ಧತಿ ಅನುಸರಿಸಲಾಗುತ್ತಿದೆ ಎಂಬುದನ್ನು ನೋಡಬೇಕಿದೆ. ವೈದ್ಯರ ಹಿತ ಕಾಯುವುದರ ಜತೆಗೆ ರೋಗಿಗಳಿಗೂ ಭದ್ರತೆ ಒದಗಿಸುವುದು ಅವಶ್ಯಕ. ಆ ಎಲ್ಲ ಅಂಶಗಳನ್ನು ರ್ಚಚಿಸಿದ ನಂತರ ಆನ್​ಲೈನ್ ವ್ಯವಸ್ಥೆಗೆ ಲಭ್ಯವಿರುವ ಅವಕಾಶಗಳ ಬಗ್ಗೆ ಯೋಚಿಸಲಾಗುವುದು ಎಂದು ವೀರಭದ್ರಪ್ಪ ಹೇಳಿದರು.

ಆನ್​ಲೈನ್ ವೈದ್ಯಕೀಯ ಸೇವೆಯನ್ನು ವಿರೋಧಿಸುತ್ತೇವೆ. ಆರೋಗ್ಯಕ್ಕಾಗಿ ವೈದ್ಯರನ್ನು ಭೇಟಿ ಮಾಡುವುದಕ್ಕೂ ಸಮಯ ಇಲ್ಲ ಎಂದು ಹೇಳುವುದು ತಪು್ಪ. ರೋಗಿಯನ್ನು ಪ್ರತ್ಯಕ್ಷವಾಗಿ ಪರಿಶೀಲಿಸಿ ಚಿಕಿತ್ಸೆ ನೀಡಿದರೂ ವೈದ್ಯರ ಮೇಲೆ ಆರೋಪಗಳು ಬರುವುದಿದೆ. ಇನ್ನು, ಕಣ್ಣಿಗೆ ಕಾಣದ ವೈದ್ಯರನ್ನು ನಂಬುವುದು ಹೇಗೆ?

| ಡಾ. ಎಚ್.ಎನ್. ರವೀಂದ್ರ , ಅಧ್ಯಕ್ಷರು ಭಾರತೀಯ ವೈದ್ಯಕೀಯ ಸಂಘ(ಕರ್ನಾಟಕ)

ಅಪಾಯಗಳೇನು?

* ಕಣ್ಣಿಗೆ ಕಾಣದೆ ವೈದ್ಯಕೀಯ ಸಲಹೆ ನೀಡುವವರು ನಕಲಿ ವೈದ್ಯರೂ ಆಗಿರಬಹುದು.
* ಹಣದಾಸೆಗಾಗಿ ಯಾವುದೋ ರೋಗಕ್ಕೆ ಮತ್ಯಾವುದೋ ಸಲಹೆ ಕೊಡಬಹುದು.
* ಜನರಲ್ಲಿ ಆತಂಕ ಸೃಷ್ಟಿಸಿ ಆನ್​ಲೈನ್​ನಲ್ಲಿ 2ನೇ ಸಲಹೆ ಪಡೆಯಲು ಸೂಚಿಸಬಹುದು.
* ಸಣ್ಣಪುಟ್ಟ ಸಮಸ್ಯೆಯನ್ನೂ ದೊಡ್ಡ ರೋಗವೆಂದು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ
* ಒಂದು ವೇಳೆ ಅನಾಹುತವಾದರೆ ಯಾರನ್ನೂ ಹೊಣೆ ಮಾಡಲು ಅವಕಾಶವಿರುವುದಿಲ್ಲ.
ಗೂಗಲ್ ಮಾಹಿತಿ ಬೇಡ

ಯಾವುದೇ ರೋಗಕ್ಕೆ ಗೂಗಲ್ ಮೂಲಕ ಮಾಹಿತಿ ಪಡೆಯುವುದು ಅಪಾಯಕರ. ಕೆಲವು ವೆಬ್​ಸೈಟ್​ಗಳು, ಫೇಕ್ ಐಡಿಗಳಿಂದ ಸುಳ್ಳು ಮಾಹಿತಿ ಹರಿಬಿಡಲಾಗುತ್ತಿದ್ದು, ಸಣ್ಣಪುಟ್ಟ ಲಕ್ಷಣಗಳಿಗೂ ಅಪಾಯಕಾರಿ ರೋಗ ಎಂಬಂತೆ ಬಿಂಬಿಸಲಾಗಿರುತ್ತದೆ. ಕೆಲವು ವೆಬ್​ಸೈಟ್​ಗಳು ಹಿಟ್ ಪಡೆಯಲು ಇಂಥ ಮಾರ್ಗ ಹಿಡಿದರೆ ಇನ್ನೂ ಕೆಲವೆಡೆ ಅರ್ಧಂಬರ್ಧ ಮಾಹಿತಿ ನೀಡಲಾಗಿರುತ್ತದೆ. ಇಂತಹ ಮಾಹಿತಿಯಿಂದಲೇ ಹಲವರ ಬದುಕು ಹಾಳಾಗಿದೆ. ಲೈಂಗಿಕ ಸಮಸ್ಯೆಗಳಿಗೆ ಹೆಚ್ಚಾಗಿ ಗೂಗಲ್ ಮಾಡುವುದು ಒಂದೆಡೆಯಾದರೆ, ಗರ್ಭಿಣಿಯರು ತಮ್ಮಲ್ಲಿ ಕಂಡುಬರುವ ಬದಲಾವಣೆಗಳ ಬಗ್ಗೆ ಗೂಗಲ್​ನಲ್ಲಿ ಮಾಹಿತಿ ಪಡೆದು ಆತಂಕಕ್ಕೊಳಗಾಗುವ ಪ್ರಕರಣಗಳು ಹೆಚ್ಚುತ್ತಿವೆ.
ಕೃಪೆ;ವಿಜಯವಾಣಿ

ರೋಗಿಗಳ ಜೀವಕ್ಕೆ ಕುತ್ತಾಗುವ ಆನ್​ಲೈನ್ ಕನ್ಸಲ್ಟೆನ್ಸಿ!
online-consultancy-patient-health-hospital-online-hospital-treatment