ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಲ್ಲಿ ಇನ್ಮುಂದೆ ಪ್ರತಿವರ್ಷ 10 ಗಣ್ಯರಿಗೆ ಗೌರವ- ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಘೋಷಣೆ…

ಮೈಸೂರು,ಜೂ,3,2020(www.justkannada.in):  ಮೈಸೂರು ಹಾಗೂ ರಾಜ್ಯಕ್ಕೆ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರ. ಅವರಿಗೆ ಗೌರವ ಸಲ್ಲಿಸುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಇನ್ನು ಪ್ರತಿ ವರ್ಷ ಅವರ ಹೆಸರಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ನಾಡಿನ 10 ಗಣ್ಯರಿಗೆ ಜಿಲ್ಲಾಡಳಿತ ವತಿಯಿಂದ ಗೌರವಿಸಲಾಗುವುದು ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆ ಪ್ರಯುಕ್ತ ಮೈಸೂರಿನ ಕೆ.ಆರ್.ವೃತ್ತದಲ್ಲಿರುವ ಅವರ ಪುತ್ಥಳಿಗೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಮಾಲಾರ್ಪಣೆ ಮಾಡಿದರು. ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ನಾಗೇಂದ್ರ, ಮೇಯರ್ ಇದ್ದರು.

ಬಳಿಕ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಪ್ರಸ್ತುತ ಕೊರೋನಾ ಇರುವ ಕಾರಣ ಗಣ್ಯರ ಗುರುತಿಸುವ ಕಾರ್ಯವಾಗಲಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಸಾಧಕರನ್ನು ಆಯ್ಕೆ ಮಾಡಿ ಗೌರವಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಲಿದೆ. ಈ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಗೌರವ ಸೂಚಿಸಲಾಗುವುದು ಎಂದು ತಿಳಿಸಿದರು.nalwadi-krishnaraja-wodeyar-mysore-honor-elite-minister-st-somashekhar

ಝೂ ತೆರೆಯಲು ಇನ್ನೆರಡು ದಿನದಲ್ಲಿ ಆದೇಶ….

ಮೈಸೂರು ಜಯಚಾಮರಾಜೇಂದ್ರ ಮೃಗಾಲಯ ತೆರೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಅಲ್ಲಿಂದಲೂ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದ್ದು, ಇನ್ನು ಎರಡ್ಮೂರು ದಿನದಲ್ಲಿ ಆದೇಶ ಹೊರಬೀಳಲಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಸಿಎಂ ಹುದ್ದೆ ಖಾಲಿ ಇಲ್ಲ

ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಗಳಾಗುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಸ್.ಟಿ ಸೋಮಶೇಖರ್,  ರಾಜ್ಯದಲ್ಲಿ ಮುಖ್ಯಮಂತ್ರಿಗಳ ಹುದ್ದೆ ಖಾಲಿ ಇಲ್ಲ. ಬಿ.ಎಸ್.ಯಡಿಯೂರಪ್ಪ ಅವರು  3 ವರ್ಷ ಆಡಳಿತ ನಡೆಸಲಿದ್ದಾರೆ. ಸರ್ಕಾರಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ಸುಮ್ಮನೆ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಮಾತು ತಪ್ಪಿಲ್ಲ

ಮುಖ್ಯಮಂತ್ರಿಗಳು ಎಂದೂ ಮಾತು ತಪ್ಪದವರು. ನಮಗೆ ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆ. ಇನ್ನು ಬಿಜೆಪಿ ಶಿಸ್ತಿನ ಪಕ್ಷ. ಇಲ್ಲಿ ಎಲ್ಲೂ ಅಸಮಾಧಾನ ಇಲ್ಲ. ವಿಧಾನಪರಿಷತ್ ಸದಸ್ಯ ಸ್ಥಾನದ ಬಗ್ಗೆ ಯಾರೂ ಲಾಬಿ ನಡೆಸುತ್ತಿಲ್ಲ. ಮೈಸೂರು ಸೇರಿದಂತೆ ಆಯಾ ಭಾಗದ ಮುಖಂಡರು, ಆಕಾಂಕ್ಷಿಗಳು ಅಲ್ಲಿನ ಸಚಿವರು, ಸಂಸದರು ಹಾಗೂ ಶಾಸಕರಲ್ಲಿ ಚರ್ಚೆ ಮಾಡುವುದು ಸಹಜ. ಇದನ್ನೇ ಲಾಬಿ ಎನ್ನಲಾಗದು ಎಂದು ಸಚಿವ ಸೋಮಶೇಖರ್ ತಿಳಿಸಿದರು.

ಮಾಜಿ ಸಚಿವ ಎಚ್. ವಿಶ್ವನಾಥ್ ಮಾತ್ರವಲ್ಲ, ಆರ್.ಶಂಕರ್, ಎಂಟಿಬಿ ನಾಗರಾಜ್, ಪ್ರತಾಪ್ ಗೌಡ ಪಾಟೀಲ್ ಎಲ್ಲರೂ ಪರಿಷತ್ತಿನ ಆಕಾಂಕ್ಷಿತರಿದ್ದು, ಇವರೆಲ್ಲರಿಗೂ ಸ್ಥಾನ ನೀಡುವಂತೆ ನಾವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್  ತಿಳಿಸಿದರು.

ಕೋವಿಡ್ ಬಗ್ಗೆ ಭಯ ಬೇಡ

ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಈಗಾಗಲೇ ನಿಯಂತ್ರಣಕ್ಕೆ ಬಂದಿದೆ. ಆದರೆ, ಮುಂಬೈ ಸೇರಿದಂತೆ ಹೊರ ರಾಜ್ಯದಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ ಇವರೆಲ್ಲರ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲರನ್ನೂ ಕ್ವಾರಂಟೇನ್ ಮಾಡಲಾಗಿದ್ದು, ಯಾರೂ ಭಯಪಡುವುದು ಬೇಡ ಎಂದು ಸಚಿವ ಎಸ್ .ಟಿ ಸೋಮಶೇಖರ್ ತಿಳಿಸಿದರು.

Key words: Nalwadi Krishnaraja Wodeyar-mysore-honor- elite-Minister – ST Somashekhar