ವಿವಿಗಳಲ್ಲಿ ವಿದ್ವಾಂಸರ ಕೊರತೆ: ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಬೇಸರ

 

ಮೈಸೂರು, ಸೆ.23, 2021 :(www.justkannada.in news) ವಿಶ್ವವಿದ್ಯಾಲಯಗಳಲ್ಲಿ ವಿದ್ವಾಂಸರು ಹಾಗೂ ವಿಧ್ವತ್ ಇರುವವರ ಸಂಖ್ಯೆ ಕ್ಷೀಣಿಸುತ್ತಿದ್ದು, ರಾಜಕೀಯ ಇಚ್ಛಾಶಕ್ತಿಯೇ ಇದಕ್ಕೆ ಕಾರಣ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಬೇಸರ ವ್ಯಕ್ತಪಡಿಸಿದರು.

ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿಶ್ವವಿದ್ಯಾಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಬಳಗ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ಸಿ.ನಾಗಣ್ಣ ಅವರು ರಚಿಸಿದ ಹತ್ತು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಹೇಳಿದಿಷ್ಟು…

ಡಾ.ಸಿ.ನಾಗಣ್ಣ ಸರಳ ವ್ಯಕ್ತಿ. ಪ್ರತಿಫಲ ಸಿಗಲಿ ಎಂಬ ಕಾರಣಕ್ಕೆ ಎಂದೂ ಅವರು ಕೆಲಸ ಮಾಡಲಿಲ್ಲ. ಆದರೆ, ಅವರ ವಿಧ್ವತ್ ಅನ್ನು ಯಾರೂ ಗಮನಿಸುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ವಿದ್ವಾಂಸರು, ವಿಧ್ವತ್ ಇರುವವರ ಸಂಖ್ಯೆ ವಿವಿಯಲ್ಲಿ ಕಡಿಮೆ ಆಗುತ್ತಿದೆ. ಅದರ ಪರಿಣಾಮ ಮೈಸೂರು ವಿಶ್ವವಿದ್ಯಾಲಯಕ್ಕೆ ಎ ಪ್ಲಸ್ ಬದಲು ಎ ಗ್ರೇಡ್ ಸಿಕ್ಕಿದೆ ಎಂದು ತಿಳಿಸಿದರು.

ಕೆಲ ವರ್ಷಗಳಿಂದ ಮಾನವಿಕ ವಿಭಾಗ ಎಂದರೆ ನಿರ್ಲಕ್ಷ್ಯ ಮನೋಭಾವ ಮೂಡುತ್ತಿದೆ. ಈ ವರ್ಷ ಎಂಎ ಮುಗಿಸಿದವರೆಲ್ಲ ಮುಂದಿನ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಹೋಗುತ್ತಿದ್ದಾರೆ. ಈ ಬಗ್ಗೆ ನಾವು ಕಳೆದ 10 ವರ್ಷದಿಂದ ಸರಕಾರ ಗಮನ ಸೆಳೆದಿದ್ದೇನೆ. ವಿಜ್ಞಾನ, ತಂತ್ರಜ್ಞಾನ ಶಿಕ್ಷಣದ ಬಗ್ಗೆ ಈ ದೇಶದಲ್ಲಿ ತಾತ್ಸಾರ ಭಾವನೆ ಇದೆ. ದೇಶ ಅಭಿವೃದ್ಧಿ ಹೊಂದಲು ವಿದ್ಯೆ ತುಂಬಾ ಮುಖ್ಯ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಭಾರತೀಯ ಮೆದುಳು ಬೇರೆಲ್ಲೂ ಇಲ್ಲ. ಆದರೆ ಅವರಿಗೆ ಪ್ರೋತ್ಸಾಹ ಇಲ್ಲ. ಹಳ್ಳಿ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಪ್ರತಿಭೆ ಅನಾವರಣ ಆಗುತ್ತಿಲ್ಲ. ರಾಜಕಾರಣಿಗಳಿಗೆ ಇಚ್ಛಾಶಕ್ತಿ ಕೊರತೆ ಇದೆ. ಪ್ರತಿಭಾವಂತರು ದೇಶದಲ್ಲಿ ಉಳಿಯುತ್ತಿಲ್ಲ. ಪರಿಗಣಿತರನ್ನು ಕಡೆಗಣಿಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದರು.

ಮೈವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಸುದ್ದಿಯಲ್ಲಿ ಸಾಹಿತ್ಯ ಹುಡುಕುವ ಗುಣ ಈ ಪುಸ್ತಕದಲ್ಲಿ ಇದೆ. ಡಾ.ಸಿ.ನಾಗಣ್ಣ ಅವರು ಸಂಶೋಧಕರು, ವಿದ್ವಾಂಸರು. ಅವರಿಗೆ ಮತ್ತಷ್ಟು ಪ್ರಶಸ್ತಿ ಹುಡುಕಿಕೊಂಡು ಬರಲಿ ಎಂದು ಶುಭ ಹಾರೈಸಿದರು.

ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್, ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್, ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಕಾಳಚೆನ್ನೇಗೌಡ, ಗಾಂಧಿಮಾರ್ಗಿ ಕೆ.ಟಿ.ವೀರಪ್ಪಗೌಡ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಂ.ಜಿ.ಮಂಜುನಾಥ್, ಪ್ರೊ.ನೀಲಗಿರಿ ತಳವಾರ್ ಸೇರಿದಂತೆ ಇತರರು ಇದ್ದರು.

ಬಿಡುಗಡೆಯಾದ ಹತ್ತು ಕೃತಿಗಳೆಂದರೆ?

ಹರಿವ ನದಿ ಸಾಕ್ಷಿ, ಅಳಬೇಡ ಕಂದ, ಸುದ್ದಿಯೇ ಸಾಹಿತ್ಯ, ಅರಿವಿನ ಹರಿವು, ದಿನದಿನದ ದಿಕ್ಸೂಚಿ, ವರ್ತಮಾನದ ಹೊನಲು, ಕ್ಷಣದೊಡಲ ಚರಿತ್ರೆ, ಮುನ್ನುಡಿ ಮುಕುರ, ಬಾನುಲಿ ಬಾಂಧವ್ಯ, ಹೆತ್ತ ತಾಯಿಯ ನೆನೆದು ಎಂಬ ಹತ್ತು ಕೃತಿಗಳು ಬಿಡುಗಡೆಯಾದವು.

key words : mysore-university-prof.naganna-book-relesed-rangappa-vc-uom