ರಾಷ್ಟ್ರೀಯ ಶಿಕ್ಷಣ ನೀತಿಗೆ ಜಾರಿಗೆ ಮೈಸೂರು ವಿವಿ ಮಾದರಿ

Promotion

 

ಮೈಸೂರು, ಜು.27, 2021 : (www.justkannada.in news ) ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೆ ಮೈಸೂರು ವಿಶ್ವವಿದ್ಯಾನಿಲಯ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಸ್. ಅಯ್ಯಪ್ಪನ್ ಅಭಿಪ್ರಾಯ ಪಟ್ಟರು.

ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಕ್ರಾರ್ಡ್ ಹಾಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಸಂಸ್ಥಾಪನಾ ದಿನಾಚರಣೆ’ಯಲ್ಲಿ ಮಾತನಾಡಿದ ಅವರು ಹೇಳಿದಿಷ್ಟು…

ಮೈಸೂರು ವಿವಿ ಸ್ಥಾಪನೆಯಾಗಿ 105 ವರ್ಷಗಳಾಗಿದ್ದು, ಇಂದಿಗೂ ಹೊಸಹೊಸ ಆವಿಷ್ಕಾರಗಳ ಮೂಲಕ ವಿಶ್ವದ ಗಮನ ಸೆಳೆದಿದೆ. ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಉದ್ದೇಶವೆಂದರೆ ಮಲ್ಪಿ ಡಿಸಿಪ್ಲಿನರಿ ಹಾಗೂ ಫ್ಲೆಕ್ಸಿಬಿಲಿಟಿ. ಮೈಸೂರು ವಿವಿ ಇವೆರಡನ್ನೂ ಜತನದಿಂದ ಕಾಪಾಡಿಕೊಂಡು ಬಂದಿದೆ. ಸಬಲ, ಸದೃಢತೆ ಹಾಗೂ ಸಕ್ರಿಯ ಮೈಸೂರು ವಿವಿ ಧ್ಯೇಯವಾಗಿದೆ ಎಂದು ಶ್ಲಾಘಿಸಿದರು.

ಮೈಸೂರು ವಿವಿ ಮೂರು ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿದೆ. 74 ವಿಭಾಗಗಳಿವೆ, 234 ಕಾಲೇಜು ಇದರ ವ್ಯಾಪ್ತಿಗೆ ಬರುತ್ತದೆ. 1.36 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಹಭಾಗಿತ್ವ ಹೊಂದಿದೆ. ಇಷ್ಟೆಲ್ಲಾ ಹೆಗ್ಗಳಿಕೆ ಇರುವ ಮೈಸೂರು ವಿವಿಯನ್ನು ಹೊಗಳದೆ ಇರಲು ಹೇಗೆ ಸಾಧ್ಯ? ಎಂದು ಸಂತಸ ವ್ಯಕ್ತಪಡಿಸಿದರು.

ವಿಜ್ಞಾನ. ಕೌಶಲ್ಯ ಹಾಗೂ ಜ್ಞಾನ ವಿಕಸನಕ್ಕೆ ಮೈಸೂರು ವಿವಿ ತನ್ನದೆ ಕೊಡುಗೆ ನೀಡುತ್ತಿದ್ದು, ಇಲ್ಲಿ ಓದಿದವರು ವಿಜ್ಞಾನ, ಸಾಹಿತ್ಯ, ರಾಜಕೀಯ, ಸಂಗೀತ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯವೊಂದು ಸುಂದರ ಮುಕುಟುವಿದ್ದಂತೆ. ಅದರಲ್ಲಿ ನೂರಾರು ಹರಳುಗಳಿವೆ. ಆ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿ ಎಂದು ಆಶಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ವಿವಿಯನ್ನು ಸ್ಥಾಪನೆ ಮಾಡಿ ಇಂದಿಗೆ 105 ವರ್ಷಗಳಾಯಿತು. ದೂರದೃಷ್ಟಿಯಿಂದ ಅಂದಿನ ಮೈಸೂರು ಮಹಾರಾಜರು ಈ ವಿವಿಯನ್ನು ಸ್ಥಾಪಿಸಿದರು. ಆ ಕಾರಣಕ್ಕಾಗಿಯೇ ಗಾಂಧೀಜಿ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ರಾಜರ್ಷಿ ಎಂದು ಮುಕ್ತಕಂಠದಿಂದ ಹೊಗಳಿದರು.  ನಾಲ್ವಡಿ ಅವರು ಇಟ್ಟ ಒಂದೊಂದು ಹೆಜ್ಜೆಯೂ ನಾಡಿನ ಪ್ರಗತಿಗೆ ಮಹತ್ವದ ಮೈಲಿಗಲ್ಲಾಯಿತು ಎಂದು ಹೇಳಿದರು.

ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ಮಾಡುವ ಅವರ ಕನಸು ನನಸಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ವಿವಿಯನ್ನು ಜುಲೈ 27, 1916ರಲ್ಲಿ ಸ್ಥಾಪನೆ ಮಾಡಿದರು. ಇವರ ದೂರದೃಷ್ಟಿಯನ್ನು ಸಮರ್ಥವಾಗಿ ಅನುಷ್ಠಾನಗೊಳಿಸಿದವರು ಸರ್.ಎಂ.ವಿಶ್ವೇಶ್ವರಯ್ಯ ಅವರು. ಹಾಗಾಗಿ ಇಂದಿನ ಈ ದಿನವನ್ನು ನೆನೆಯುವುದು ಎಲ್ಲರ ಆದ್ಯ ಕರ್ತವ್ಯ ಆಗಿದೆ ಎಂದರು.

ವಿವಿ ಕುಲಸಚಿವರಾದ ಪ್ರೊ.ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್, ಕೆ-ಸೆಟ್ ಸಂಯೋಜನಾಧಿಕಾರಿ ಪ್ರೊ.ರಾಜಶೇಖರ ಸೇರಿದಂತೆ ಬೋಧಕರು, ಬೋಧಕೇತರರು ಹಾಜರಿದ್ದರು.

 

key words : mysore-university-foundation-day-celebration-vc-hemanth-kumar-mysore