ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವಿರೋಧ: ಕೇಂದ್ರದ ವಿರುದ್ದ ಎಸ್.ಆರ್ ಹಿರೇಮಠ್ ಮತ್ತು ಸಾಹಿತಿ ದೇವನೂರು ಮಹದೇವ್ ಕಿಡಿ….

Promotion

ಮೈಸೂರು,ಅ,23,2019(www.justkannada.in): ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದ ಸಹಿ ಹಾಕದಂತೆ ಜನಸಂಗ್ರಾಮ ಪರಿಷತ್ ನ ಸಂಸ್ಥಾಪಕ ಎಸ್.ಆರ್.ಹಿರೇಮಠ್ ಒತ್ತಾಯಿಸಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಜನಾಂದೋಲನಗಳ ಮಹಾ ಮೈತ್ರಿಯಿಂದ ಸುದ್ದಿಗೋಷ್ಠಿ ನಡೆಸಿ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಲಾಯಿತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಸಂಗ್ರಾಮ ಪರಿಷತ್ ನ ಸಂಸ್ಥಾಪಕ ಎಸ್.ಆರ್.ಹಿರೇಮಠ್, ದೇಶದ ಹಿತದೃಷ್ಠಿಯಿಂದ ಈ ಒಪ್ಪಂದಕ್ಕೆ ಸಹಿ ಹಾಕುವುದು ಸರಿಯಲ್ಲ. ಕೇಂದ್ರ ಸಚಿವ ಪಿಯೂಸ್ ಗೋಯಲ್ ಅವರು ಈ ವಿಷಯವನ್ನು ಸಮಗ್ರ ಪರಿಕಲ್ಪನೆ ಮಾಡಿಲ್ಲ. ನ.4 ರಂದು ಪ್ರಧಾನಿ ನರೇಂದ್ರ ಮೋದಿ ಬ್ಯಾಂಕಾಕ್ ಗೆ ತೆರಳಲಿದ್ದಾರೆ. ಅಲ್ಲಿ ಈ ಒಪ್ಪಂದಕ್ಕೆ ಸಹಿಹಾಕಲು ಮುಂದಾಗಿದ್ದಾರೆ. ಈ ಒಪ್ಪಂದದಿಂದ ರೈತರಿಗೆ ಸಾಕಷ್ಟು ತೊಂದರೆಯಾಗಲಿದೆ. ಕೂಡಲೆ ಒಪ್ಪಂದಕ್ಕೆ ಸಹಿಹಾಕುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಪ್ರಧಾನಿ ಮೋದಿ ವಿರುದ್ದ ಗುಡುಗಿದ ಸಾಹಿತಿ ದೇವನೂರು ಮಹದೇವು..

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುಡುಗಿದ ಸಾಹಿತಿ ದೇವನೂರು ಮಹದೇವು, 16 ದೇಶಗಳೊಂದಿಗೆ ಪ್ರಧಾನಿ ಮೋದಿ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಒಪ್ಪಂದದಿಂದ ದೇಶದ ರೈತರು ಮತ್ತು ಹಾಲು ಉತ್ಪಾದಕರು ಸಂಕಷ್ಟ ಎದುರಿಸಬೇಕಾಗುತ್ತೆ. ವಿದೇಶಿ ಬಂಡವಾಳಶಾಹಿಗಳು ಇದರ ಲಾಭ ಪಡೆಯಲಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ದೇಶದ ರೈತರು ಮತ್ತು ಹಾಲು ಉತ್ಪಾಧಕರ ಬಗ್ಗೆ ಗಮನಹರಿಸಬೇಕು. ಮೋದಿ ಪ್ರಧಾನಿಯಾದಾಗಿನಿಂದ ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿದೆ. ಇದು ಮುಂದುವರೆದರೆ ದೇಶ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲಿದೆ. ದೇಶದ ಹಿತ ಕಾಪಾಡಲು 52 ಇಂಚಿನ ಎದೆ ಬೇಕಾಗಿಲ್ಲ ಎದೆಯೊಳಗಿನ ಮಾನವೀಯತೆ ಬೇಕು ಎಂದು ಟಾಂಗ್ ಕೊಟ್ಟರು.

ಒಪ್ಪಂದಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದು ಸರಿಯಾದ ಕ್ರಮವಲ್ಲ- ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಈ ಒಪ್ಪಂದಿಂದ ವಿದೇಶಿ ವಸ್ತುಗಳು ಸುಂಕ ರಹಿತವಾಗಿ ದೇಶದ ಮಾರುಕಟ್ಟೆ ಪ್ರವೇಶಿಸಲಿವೆ. ಈ ಒಪ್ಪಂದದಿಂದ ದೇಶ ಅಭಿವೃದ್ಧಿಯಾಗುತ್ತೆ ಎಂದು ಭ್ರಮೆಯಲ್ಲಿದ್ದಾರೆ. ಇದರಿಂದ ಕೇವಲ ದೊಡ್ಡಮಟ್ಟದ ಉದ್ಯಮಿಗಳಿಗೆ ಲಾಭವಾಗಲಿದೆ. ರೈತರು ಮತ್ತು ಸಣ್ಣ ಉದ್ಯಮಿಗಳಿಗೆ ತೀವ್ರ ತೊಂದರೆಯಾಗಲಿದೆ ಎಂದು ಹೇಳಿದರು.

ಪಾರ್ಲಿಮೆಂಟ್ ನಲ್ಲಿ ಚರ್ಚಿಸದೇ ಕೇಂದ್ರ ಸರ್ಕಾರ ಒಪ್ಪಂದಕ್ಕೆ ಸಹಮತ ವ್ಯಕ್ತಪಡಿಸಿದೆ. ಇದನ್ನು ವಿರೋಧಿಸಿ ನಾಳೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಾಗುತ್ತದೆ. ದನಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ ನಾಳೆ ಮೈಸೂರಿನಲ್ಲಿ ರಾಮಸ್ವಾಮಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಯಲಿದ್ದು ಸಾಹಿತಿ ದೇವನೂರು ಮಹದೇವು ಸೇರಿ ಹಲವರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

Key words: mysore- SR Hiremath-Devanoor Mahadevu-badagalapura nagendra-centra governament