ಸಂಸದ ಪ್ರತಾಪ್ ಸಿಂಹ ವರ್ತನೆ ಅನಾಗರಿಕವಾದದ್ದು:  ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಕಾಂಗ್ರೆಸ್ ವಕ್ತಾರ ಹೆಚ್.ಎ ವೆಂಕಟೇಶ್ ಆಗ್ರಹ.

ಮೈಸೂರು,ಫೆಬ್ರವರಿ,15,2023(www.justkannada.in): ಶಾಸ್ತ್ರೀಯ ಕನ್ನಡ ಸ್ವಾಯುತ್ತ ಕೇಂದ್ರಕ್ಕೆ ಜಯಲಕ್ಷ್ಮಿ ವಿಲಾಸ ಅರಮನೆ ಹಸ್ತಾಂತರ ಕುರಿತಂತೆ ಸಂಸತ್ ಸದಸ್ಯ ಪ್ರತಾಪ ಸಿಂಹ ವರ್ತನೆ ಅನಾಗರಿಕವಾದದ್ದು. ವಿಶ್ವವಿದ್ಯಾನಿಲಯದ ವ್ಯವಸ್ಥೆಯಲ್ಲಿ ಕುಲಪತಿ, ಕುಲಸಚಿವ ತಮ್ಮದೇ ಆದ ಘನತೆ, ಗೌರವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಆದರೆ ಸಂಸದ ಪ್ರತಾಪ್ ಸಿಂಹ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಕುಲ ಸಚಿವರನ್ನು ಪಕ್ಕಕ್ಕೆ ಕೂರಿಸಿ ಅವರಿಗೆ ನಿಗದಿಯಾದ ಕುರ್ಚಿಯಲ್ಲಿ ಕುಳಿತು ವಿಶ್ವವಿದ್ಯಾನಿಲಯದ ಆಡಳಿತಕ್ಕೆ ಧಮ್ಕಿ ಆಗಿರುವುದು ಅತ್ಯಂತ ಸೂಚನೀಯ ಸಂಗತಿಯಾಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಹೆಚ್.ಎ ವೆಂಕಟೇಶ್,  ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮೂರು ಬಾರಿ ಸಾಮಾನ್ಯ ಪದವಿಧರ ಕ್ಷೇತ್ರದಿಂದ ಚುನಾಯಿತ ಸೆನೆಟ್ ಸದಸ್ಯನಾಗಿ, ಒಮ್ಮೆ ಒಮ್ಮೆ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಸಿಂಡಿಕೇಟ್ ಸದಸ್ಯನಾಗಿ, ಶಿಕ್ಷಣ ಮಂಡಳಿಯ ಸದಸ್ಯನಾಗಿ ಹಾಗೂ ಹಲವಾರು ವಿವಿಧ ಉಪ ಸಮಿತಿಗಳಲ್ಲಿ ಕೆಲಸ ಮಾಡಿರುವ ಅನುಭವದಲ್ಲಿ ಹೇಳಬೇಕಾದರೆ, ಯಾವ ಸಂಸತ್ ಸದಸ್ಯರು ಅಥವಾ ಚುನಾಯಿತ ಪ್ರತಿನಿಧಿಯಾಗಲಿ ವಿಶ್ವವಿದ್ಯಾನಿಲಯದ ಕಾರ್ಯಸೌಧದಲ್ಲಿ ಕುಲಪತಿಗಳ, ಕುಲ ಸಚಿವರ, ಸಿಂಡಿಕೇಟ್ ಸದಸ್ಯರ ಸಭೆ ನಡೆಸಿದ ಉದಾಹರಣೆಗಳಿಲ್ಲ. ವಿಶ್ವವಿದ್ಯಾನಿಲಯದ ಕಾಯ್ದೆಯಲ್ಲೂ ಆಸ್ಪದ ಇಲ್ಲ. ಕುಲಸಚಿವೆ ವಿ. ಆರ್. ಶೈಲಜಾ ಒಬ್ಬ ಮಹಿಳೆ ಎಂಬುದನ್ನು ಗಮನಿಸದೆ ನಿಂದಿಸಿರುವುದು ಸಂಸದರ ಘನತೆಗೆ ಸರಿ ಹೊಂದುವುದಿಲ್ಲ. ಕುಲಾಧಿಪತಿಗಳಾದ ರಾಜ್ಯಪಾಲರು ಮಧ್ಯಪ್ರವೇಶಿಸಿ ಪ್ರತಾಪ್ ಸಿಂಹ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸರ್ಕಾರದಿಂದ ನಾಮಕರಣಗೊಂಡು ಶಿಕ್ಷಣ ಮಂಡಳಿ ಸದಸ್ಯರಾಗಿರುವ ವಿಧಾನಪರಿಷತ್ ಸದಸ್ಯರು ಕುಲಪತಿಗಳು, ಕುಲಸಚಿವರು ಕೂರುವ ಸ್ಥಳದಲ್ಲೇ ಕುಳಿತು ಸಭಾ ನಡವಳಿಕೆಗೆ ಅಪಚಾರವೆಸಗುತ್ತಿದ್ದಾರೆ.  ಸದಸ್ಯರಿಗೆ ನಿಗದಿಯಾದ ಸ್ಥಳದಲ್ಲೇ ಕೂರಬೇಕೆ ಹೊರತು ತಾವೇ ಕುಲಪತಿಗಳೊಂದಿಗೆ ಕುಳಿತು ಶಿಷ್ಟಾಚಾರ ಉಲ್ಲಂಘನೆ ಆಗುತ್ತಿದೆ. ಇದಕ್ಕೆ ರಾಜ್ಯಪಾಲರು ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಹೆಚ್.ಎ ವೆಂಕಟೇಶ್ ಆಗ್ರಹಿಸಿದರು.

Key words: MP Pratapa Simha- behavior -Congress spokesperson- H.A Venkatesh