ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಶಾಸಕ ಸಾ.ರಾ.ಮಹೇಶ್

ಬೆಂಗಳೂರು, ಸೆಪ್ಟೆಂಬರ್ 11, 2022 (www.justkannada.in): ಶಾಸಕ ಸಾ.ರಾ.ಮಹೇಶ್ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ನನ್ನ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ್ದರು. ಆದರೆ ಪ್ರಾದೇಶಿಕ ಆಯುಕ್ತರು ಆರೋಪ ಸುಳ್ಳು ಎಂದು ಹೇಳಿದ್ದಾರೆ.

ಅವರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದೆ. ಆ ನಿಟ್ಟಿನಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ.  ಮೈಸೂರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.

ವಕೀಲ ಅರುಣ್ ಕುಮಾರ್ ಮಾತನಾಡಿ, ಐಎಎಸ್ ಅಧಿಕಾರಿಗಳಿಗೆ ಬುದ್ದಿ ಜಾಸ್ತಿ ಇರುತ್ತೆ. ರೋಹಿಣಿ ಸಿಂಧೂರಿ ಅವರು ಆಡಿಯೋದಲ್ಲಿ ಸಾ.ರಾ.ಮಹೇಶ್ ಜೈಲಲ್ಲಿ ಇರುತ್ತಾರೆ ಎಂದು ಆರೋಪ ಮಾಡಿದ್ದಾರೆ. ಈ ಸಂಬಂಧ ಸಾ.ರಾ.ಮಹೇಶ್ ಪರವಾಗಿ ಲೀಗಲ್ ನೋಟಿಸ್ ಜಾರಿ ಮಾಡಿದ್ದೆವು. 01-07-21ರಂದು ನೋಟಿಸ್ ನೀಡಲಾಗಿತ್ತು. ಸಾಮಾಜಿಕ ಜಾಲತಾಣದ ಆಡಿಯೋದಲ್ಲಿ ನಿಮ್ಮ ದ್ವನಿಯೇ, ಉದ್ದೇಶ ಪೂರ್ವಕವಾಗಿ ಮಾತನಾಡಿದ್ದೀರ ಎಂದು ಎರಡು ಪ್ರಶ್ನೆ ಕೇಳಿದ್ದೆವು. ಅವರು ಅದು ಖಾಸಗಿ ಸಂಭಾಷಣೆ ಅಂತ ಒಪ್ಪಿಕೊಂಡಿದ್ದಾರೆ. ಅದರ ಆಧಾರದ ಮೇಲೆ ೨ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹಾಕಿದ್ದೇವೆ ಎಂದರು.

ಒಂದು ಕೋಟಿ ರೂ. ನಷ್ಟ ಭರಿಸುವಂತೆ ಮೊಕದ್ದಮೆ ದಾವೆ ಹೂಡಿದ್ದೇವೆ.  20-10-2022ರಂದು ರೋಹಿಣಿ ಸಿಂಧೂರಿ ನ್ಯಾಯಾಲಯಕ್ಕೆ ಉತ್ತರ ಕೊಡಬೇಕಾಗುತ್ತೆ. ಈಗಾಗಲೇ ಖಾಸಗಿ ಸಂಭಾಷಣೆ ಅಂತ ಒಪ್ಪಿಕೊಂಡಿರುವುದರಿಂದ ಬೇರೆ ಹೇಳಿಕೆ ನೀಡಲು ಅವಕಾಶ ಇಲ್ಲ.  ಆ ಸಂಭಾಷಣೆಯ ಹಿನ್ನೆಲೆ, ಉದ್ದೇಶವನ್ನೂ ಕೇಸ್‌ಗೆ ಸೇರಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಹಿರಿಯ ವಕೀಲ ಅರುಣ್ ಕುಮಾರ್ ತಿಳಿಸಿದ್ದಾರೆ.