ಡಾ.ಕೆ. ಶಿವರಾಮಕಾರಂತ ಬಡಾವಣೆ: ಸರ್ವೋಚ್ಛ ನ್ಯಾಯಾಲಯ ನೇಮಿಸಿರುವ ಸಮಿತಿಯಿಂದ ಸಾರ್ವಜನಿಕರಿಂದ ಅರ್ಜಿ ಸ್ವೀಕಾರ

ಬೆಂಗಳೂರು: ಡಾ. ಕೆ. ಶಿವರಾಮಕಾರಂತ ಬಡಾವಣೆಗೆ ಸಂಬಂಧಿಸಿದಂತೆ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೇಮಕ ಮಾಡಿರುವ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿಯು ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲು 2021 ಏಪ್ರಿಲ್ 30 ರಂದು ಕೊನೆ ದಿನಾಂಕ ನಿಗದಿಪಡಿಸಿದೆ.

ಮಾನ್ಯ ಸರ್ವೋಚ್ಛ ನ್ಯಾಯಾಲಯವು ಡಾ. ಕೆ. ಶಿವರಾಮಕಾರಂತ ಬಡಾವಣೆಗೆ ಸಂಬಂಧಪಟ್ಟಂತೆ, ದಿನಾಂಕ 03.08.2018ಕ್ಕೆ ಮುಂಚಿತವಾಗಿ ನಿರ್ಮಿಸಲಾದ ಕಟ್ಟಡ ಮತ್ತು ಮನೆಗಳ ಬಗ್ಗೆ ವರದಿಯನ್ನು ನೀಡಲು ರಚಿಸಿರುವ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿಯು ಬಡಾವಣೆಯ ಅಧಿಸೂಚಿತ ಪ್ರದೇಶಗಳಲ್ಲಿ ಐದು ಸಹಾಯ ಕೇಂದ್ರಗಳನ್ನು ತೆರೆದು ಈಗಾಗಲೇ ದಾಖಲೆಗಳನ್ನು ಸಂಗ್ರಹಿಸುತ್ತಿದೆ.
ಸಾರ್ವಜನಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ಸಲ್ಲಿಸುತ್ತಿರುತ್ತಾರೆ. ಆನ್ಲೈನ್ ಪೋರ್ಟಲ್ jcc-skl.in ಮೂಲಕವೂ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 01.03.2021ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸಮಿತಿಯು ಚಾಲನೆ ನೀಡಿತ್ತು. ಈಗ ಅರ್ಜಿ ಸಲ್ಲಿಕೆಗೆ ಅಂತಿಮವಾಗಿ 30.04.2021ರ ಸಮಿತಿಯು ಗಡುವು ನೀಡಿದೆ. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಸಮಿತಿಯು ತಿಳಿಸಿರುತ್ತದೆ.