ನಿರಾಶ್ರಿತ 47 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಿದ ಸಚಿವೆ ಶಶಿಕಲಾ ಜೊಲ್ಲೆ.

ವಿಜಯಪುರ,ಆಗಸ್ಟ್,9,2021(www.justkannada.in): ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ತಾರಾಪುರ ಗ್ರಾಮದ  ನಿರಾಶ್ರಿತ ಜನರಿಗೆ ಸಚಿವೆ ಶಶಿಕಲಾ ಜೊಲ್ಲೆ ಹಕ್ಕು ಪತ್ರ ವಿತರಣೆ ಮಾಡಿದರು.

2010 ರಿಂದ ಬಗೆಹರಿಯದ ಪ್ರಕರಣವನ್ನು ಬಗೆಹರಿಸಿ ನಿಜವಾದ ಫಲಾನುಭವಿಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಹಕ್ಕುಪತ್ರ ವಿತರಣೆ ಮಾಡಿದರು. ಭಿಮಾ ಏತನೀರಾವರಿ ಯೋಜನೆಯಲ್ಲಿ ತಾರಾಪರು ಗ್ರಾಮದ ಜನರು ಮನೆಗಳನ್ನು ಕಳೆದುಕೊಂಡಿದ್ದರು.  ಪುನರ್ವಸತಿಗಾಗಿ ಬದಲಿ ನಿವೇಶನದ ಹಕ್ಕು ಪತ್ರ ನೀಡುವಂತೆ ಜನರು ನಿರಂತರ ಹೋರಾಟ ನಡೆಸುತ್ತಿದ್ದರು.

ಸುಮಾರು 18 ಎಕರೆ ಜಾಗದಲ್ಲಿ ವಸತಿ ನಿವೇಶನಗಳ ನಿರ್ಮಾಣ ಮಾಡಲಾಗಿದೆ.  2016 ರಲ್ಲಿ ಅಂದಿನ ಸಿಂಧಗಿ ಕ್ಷೇತ್ರದ ಶಾಸಕರಾಗಿದ್ದ ರಮೇಶ್ ಬೂಸನೂರು ಅವರ ಅಧ್ಯಕ್ಷತೆಯಲ್ಲಿ 199 ನಿವೇಶನಗಳ ಹಂಚಿಕೆ ಮಾಡಲಾಗಿತ್ತು. ಈ ನಿವೇಶನಗಳ. ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಗ್ರಾಮದ ಜನರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ.

2020 ರಲ್ಲಿ ಭಿಮಾನದಿಯಲ್ಲಿ ಪ್ರವಾಹ ಉಂಟಾಗಿ ತಾರಾಪುರ ಗ್ರಾಮ ಸಂಪೂರ್ಣ ಜಲಾವೃತವಾಗಿತ್ತು. ಆ ಸಂದರ್ಭದಲ್ಲಿ ಗ್ರಾಮಸ್ಥರನ್ನು ಸ್ಥಳೀಯ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿತ್ತು.

2020 ರಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಆಗ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು,  ತಾರಾಪುರ ಗ್ರಾಮಕ್ಕೆ ಭೇಟಿ ನೀಡಿ, ಮನೆ ಮಠ ಕಳೆದುಕೊಂಡಿದ್ದ ಜನರಿಗೆ ಪುನರ್ವಸತಿ ಕಲ್ಪಿಸಿ ಹಕ್ಕು ಪತ್ರ ವಿತರಿಸುವ ಭರವಸೆ ನೀಡಿದ್ದರು.

2016 ಎಲ್ಲಿ ಹಂಚಿಕೆಯಾದ ಹಕ್ಕುಪತ್ರಗಳ ತಾರತಮ್ಯ ಸರಿಪಡಿಸಲು ಸಿಂಧಗಿ ತಹಸೀಲ್ದಾರ್, ಸಿಂಧಗಿ ತಾಲೂಕು ಪಂಚಾಯತಿ ಕಾರ್ಯ ನಿರ್ಹವಣಾಧಿಕಾರಿ ಹಾಗೂ ಕೆ ಎನ್ ಎನ್ ಎಲ್ ಅಫಜಲಪುರ್ ಸಹಾಯಕ ಕಾರ್ಯ ನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಜಂಟಿ ಸಮಿತಿ ರಚನೆ ಮಾಡಲಾಯಿತು.

2021 ರ ಫೆಬ್ರವರಿಯಲ್ಲಿ ಫಲಾನುಭವಿಗಳ ಆಯ್ಕೆಯ ತಾತ್ಕಾಲಿಕ ಪಟ್ಟಿ ಪ್ರಕಟಿಸಿ, ಸಾರ್ವಜನಿಕರಿಂದ ಆಕ್ಷೇಪಣೆಗೆ ಅವಕಾಶ ಕಲ್ಪಿಸಿ ಅಂತಿಮವಾಗಿ 2021 ರ ಏಪ್ರಿಲ್ ಫಲಾನುಭವಿಗಳ ಅಂತಿಮ ಮಟ್ಟಿ ಸಿದ್ದಪಡಿಸಿ 19 ನಿವೇಶನಗಳನ್ನು ವಾಪಸ್ ಪಡೆದು,47 ಜನರಿಗೆ ಹಕ್ಕು ಪತ್ರ ವಿತರಿಸಲು ತೀರ್ಮಾನಿಸಲಾಗಿತ್ತು.

ಕಳೆದ 2020 ರ ಅಕ್ಟೋಬರ್ ತಿಂಗಳಿನಲ್ಲಿ ತಾರಾಪುರ ಗ್ರಾಮದ ಜನತೆಗೆ ಮಾತು ಕೊಟ್ಟಂತೆ ಸಚಿವರಾದ ಶಶಿಕಲಾ ಜೊಲ್ಲೆ 47 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ್ದಾರೆ.

Key words: Minister -Sasikala Jolle -issued  – Charter- 47 homeless -families