Friday, September 11, 2026

BDA Apartments

Home Front Page ಉತ್ತರ ಕರ್ನಾಟಕ ದೇವಸ್ಥಾನಗಳ ಅಭಿವೃದ್ದಿಗೆ ವಿಶೇಷ ಕಾರ್ಯಸೂಚಿ ರಚನೆ : ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ.

ಉತ್ತರ ಕರ್ನಾಟಕ ದೇವಸ್ಥಾನಗಳ ಅಭಿವೃದ್ದಿಗೆ ವಿಶೇಷ ಕಾರ್ಯಸೂಚಿ ರಚನೆ : ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ.

 

ಬೆಳಗಾವಿ, ಡಿ.24, 2021 : (www.justkannada.in news ) ಪ್ರಪ್ರಥಮ ಬಾರಿಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಉತ್ತರ ಕರ್ನಾಟಕ ದೇವಸ್ಥಾನಗಳ ಅಭಿವೃದ್ದಿಗೆ ವಿಶೇಷ ಕಾರ್ಯಸೂಚಿ ರಚಿಸುವಂತೆ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಹಾಗೂ ರಾಜ್ಯ ಧಾರ್ಮಿಕ ಪರಿಷತ್ತಿನ ಅಧ್ಯಕ್ಷೆ ಶಶಿಕಲಾ ಜೊಲ್ಲೆ ಸೂಚನೆ ನೀಡಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 3 ನೇ ರಾಜ್ಯ ಧಾರ್ಮಿಕ ಪರಿಷತ್ತಿನ 15 ನೇ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಉತ್ತರ ಕರ್ನಾಟಕ ಹಾಗೂ ಇನ್ನಿತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಸಮಗ್ರ ಅಭಿವೃದ್ದಿ:

ಬೆಳಗಾವಿ ಜಿಲ್ಲೆಯಲ್ಲಿರುವ ಪ್ರಮುಖ ಎ ದರ್ಜೆಯ ದೇವಸ್ಥಾನ ಸವದತ್ತಿಯ ರೇಣುಕಾ ಯಲ್ಲಮ್ಮ. ಈ ದೇವಸ್ಥಾನಕ್ಕೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಪ್ರತಿವರ್ಷ ಆಗಮಿಸುತ್ತಾರೆ. ಭಕ್ತರುಗಳಿಗೆ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ದಿಯ ಕುರಿತು ವಿಶೇಷ ಚರ್ಚೆ ನಡೆಸಲಾಯಿತು. ಈಗಾಗಲೇ 3.58 ಕೋಟಿ ವೆಚ್ಚದಲ್ಲಿ ಬಳಿಗಾರ ಕಟ್ಟೆ ರಸ್ತೆಯ ಅಭಿವೃದ್ದಿ ಕಾರ್ಯದ ಬಗ್ಗೆ ಅಂದಾಜುಪಟ್ಟಿಯನ್ನು ತಯಾರಿಸಲಾಗಿದೆ. ಇದಕ್ಕೆ ಅಗತ್ಯವಿರುವ ಅನುದಾನದ ಬಿಡುಗಡೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವೆ ಸೂಚಿಸಿದರು.

ದೇವಾಲಯದ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡುವ ಸಂಬಂಧ ಘನತ್ಯಾಜ್ಯ ಮತ್ತು ದ್ರವತ್ಯಾಜ್ಯ ಸಂಸ್ಕರಣಾ ಯೋಜನೆಯ ಡಿಪಿಆರ್‌ ನ್ನು ಶೀಘ್ರವಾಗಿ ಸಿದ್ದಗೊಳಿಸಿ.

ಮಹದೇಶ್ವರ ಬೆಟ್ಟದ ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವಸ್ಥಾನದಿಂದ ಸಿ ದರ್ಜೆಯ ದೇವಸ್ಥಾನಗಳ ದತ್ತು. ಈ ಬಗ್ಗೆ ದತ್ತು ತಗೆದುಕೊಳ್ಳಬೇಕಾದ ಸಿ ದರ್ಜೆಯ ದೇವಸ್ಥಾನಗಳ ಪಟ್ಟಿಯನ್ನು ತಯಾರಿಸಿ ಪ್ರಾಧಿಕಾರಕ್ಕೆ ಕಳುಹಿಸಲು ಸೂಚನೆ.

ರಾಜ್ಯದ ಎ ಮತ್ತು ಬಿ ದರ್ಜೆಯ ದೇವಸ್ಥಾನಗಳಿಂದ ಸಾಮಾನ್ಯ ಸಂಗ್ರಹಣ ನಿಧಿಗೆ ಪ್ರತಿವರ್ಷ ಶೇಕಡಾ 10 ರಷ್ಟು ವಂತಿಗೆಯನ್ನು ಸಂಗ್ರಹಿಸಲಾಗುತ್ತದೆ. ಇದನ್ನು ಕಡಿಮೆ ಆದಾಯವಿರುವ ದೇವಸ್ಥಾನಗಳ ಅಭಿವೃದ್ದಿಗೆ ಬಳಸಲಾಗುತ್ತದೆ. ಈ ನಿಧಿಗೆ ವಂತಿಗೆ ಸಂಗ್ರಹಕ್ಕೆ ಆದ್ಯತೆ ನೀಡಬೇಕಾಗಿದೆ. ಪ್ರತಿವರ್ಷ ದೇವಸ್ಥಾನದ ಲೆಕ್ಕಪತ್ರ ಪರಿಶೀಲನೆಯಾಗಿ ಜೂನ್‌ ತಿಂಗಳ ಒಳಗಾಗಿ ಆಯುಕ್ತರಿಗೆ ಆಡಿಟ್‌ ವರದಿ ನೀಡದಿದ್ದಲ್ಲಿ ಆಯಾ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಿ ಶಿಸ್ತು ಕ್ರಮ ಜರುಗಿಸುವಂತೆ ಸೂಚಿಸಿ ಸಚಿವೆ ಜೊಲ್ಲೆ.

ಮಲೈ ಮಹದೇಶ್ವರ ಸ್ವಾಮಿ ದೇವಸ್ಥಾನದಿಂದ ವಂತಿಗೆ ಸಂಗ್ರಹ:

ಮಹದೇಶ್ವರ ಬೆಟ್ಟದ ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವಾಲಯದ ವಾರ್ಷಿಕ ಆದಾಯದಿಂದ ಸಾಮಾನ್ಯ ಸಂಗ್ರಹಣಾ ನಿಧಿಗೆ ವಂತಿಗೆಯನ್ನು ನೀಡಲಾಗುತ್ತಿಲ್ಲ. ಈ ದೇವಸ್ಥಾನದಿಂದಲೂ ವಂತಿಗೆ ಯನ್ನು ನೀಡುವಂತೆ ಪ್ರಾಧಿಕಾರಕ್ಕೆ ಸೂಚನೆ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಮದುರ್ಗದ ಗೊಡಚಿ ವೀರಭದ್ರ ದೇವಸ್ಥಾನ, ಬೆಳಗಾವಿಯ ಪಂಥಬಾಳೇಕುಂದ್ರಿ ಶ್ರೀ ದತ್ತ ದೇವಸ್ಥಾನ, ಶ್ರೀ ಪರಮಾರ್ಥನಿಕೇತನ ಹರಿಮಂದಿರ, ರಾಯಭಾಗದ ಶ್ರೀ ಮಹಾಕಾಳಿ (ಮಾಯಕ್ಕ) ದೇವಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳ ಅಭಿವೃದ್ದಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಸರಕಾರದ ಪ್ರಧಾನ ಕಾರ್ಯದರ್ಶಿಗಳಾದ ತುಷಾರ್‌ ಗಿರಿನಾಥ್‌, ಮುಜರಾಯಿ ಆಯುಕ್ತರಾದ ಶ್ರೀಮತಿ ರೋಹಿಣಿ ಸಿಂಧೂರಿ, ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.

key words : Minister for Muzarai- Haj & Wakf- Govt. of Karnataka -shashikala-jolley-rohini.sindoori-belagavi