ಉಕ್ರೇನಿನಿಂದ ವಾಪಸ್ ಬಂದ ವಿದ್ಯಾರ್ಥಿನಿಯರನ್ನು ಭೇಟಿ ಮಾಡಿ ಭರವಸೆ ನೀಡಿದ ಸಚಿವ ಅಶ್ವಥ್ ನಾರಾಯಣ್.

ಬೆಂಗಳೂರು,ಮಾರ್ಚ್,9,2022(www.justkannada.in):  ಯುದ್ಧಪೀಡಿತ ಉಕ್ರೇನಿನಿಂದ ಸುರಕ್ಷಿತವಾಗಿ ವಾಪಸ್ ಬಂದಿರುವ ಮಲ್ಲೇಶ್ವರಂ ಕ್ಷೇತ್ರದ ನಾಲ್ವರು ವಿದ್ಯಾರ್ಥಿನಿಯರನ್ನು ಈ ಕ್ಷೇತ್ರದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಭೇಟಿ ಮಾಡಿ, ಭರವಸೆ ತುಂಬಿದರು.

ಮಲ್ಲೇಶ್ವರಂನವರಾದ ಐಶ್ವರ್ಯಾ, ದಿವ್ಯಶ್ರೀ, ಲತಾಶ್ರೀ ಮತ್ತು ನಂದಿತಾ ಅವರು ಉಕ್ರೇನಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದರು. ಆದರೆ ಉಕ್ರೇನ್ ಮೇಲೆ  ರಷ್ಯಾ ಯುದ್ಧ ಸಾರಿದ ಮೇಲೆ ಇವರೆಲ್ಲ ಸಂಕಷ್ಟಕ್ಕೆ ಸಿಲುಕಿದ್ದರು. ಕೊನೆಗೆ, ಕೇಂದ್ರ ಸರಕಾರದ ಆಪರೇಷನ್ ಗಂಗಾ ಕಾರ್ಯಾಚರಣೆಯ ಮೂಲಕ ಇವರನ್ನೆಲ್ಲ ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ.

ಬೆಂಗಳೂರನ್ನು ತಲುಪಿದ ಈ ನಾಲ್ವರು ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರನ್ನು ಭೇಟಿಯಾದ ಸಚಿವ ಅಶ್ವಥ್ ನಾರಾಯಣ್, ಇವರ ವಿದ್ಯಾಭ್ಯಾಸದ ಮುಂದುವರಿಕೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುವುದಾಗಿ  ಭರವಸೆ ನೀಡಿದರು. ಜತೆಗೆ, ಉಕ್ರೇನಿನ ಪರಿಸ್ಥಿತಿಯ ಬಗ್ಗೆ  ಕೇಳಿ, ತಿಳಿದುಕೊಂಡರು. ಈ ಸಂದರ್ಭದಲ್ಲಿ ಮಲ್ಲೇಶ್ವರ ಮಂಡಲದ ಬಿಜೆಪಿ ಅಧ್ಯಕ್ಷೆ ಕಾವೇರಿ ಕೇದಾರನಾಥ್ ಮುಂತಾದವರು ಇದ್ದರು.

Key words: Minister -Ashwath Narayan – students – Ukraine