“ಮಾಧ್ಯಮವೃಕ್ಷ ಕೊಳೆಯುತ್ತಿದೆಯೇ…? – ಕೃಷ್ಣ ಪ್ರಸಾದ್‌

 

ಬೆಂಗಳೂರು, ಮೇ 09, 2019 : ವೃತ್ತಿಯಲ್ಲಿ ಜೀವನದುದ್ದಕ್ಕೂ ಇಂಗ್ಲಿಷ್‌ ಪತ್ರಕರ್ತನಾಗಿರುವ ನನಗೆ ಕನ್ನಡದ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಇಂದಿನ ಅಪಾಯಕಾರಿ ಸ್ಥಿತಿಯನ್ನು ನೋಡಿದಾಗ ತೀರಾ ಆತಂಕವಾಗುತ್ತದೆ, ಬೇಸರವಾಗುತ್ತದೆ. ಒಂದೆಡೆ, ಸುದ್ದಿಮನೆಗಳಲ್ಲಿ ಭಾರಿ ಪ್ರಮಾಣದ ಬೌದ್ಧಿಕ ನಿರ್ವಾತ ಸ್ಥಿತಿ ನಿರ್ಮಾಣವಾಗಿದೆ. ಸಮತೋಲಿತ, ಸೂಕ್ಷ್ಮ ನೋಟ ಹಾಗೂ ಗಟ್ಟಿತನದ ಮೂಲಕ ಓದುಗರ ಮತ್ತು ನಾಯಕರ ಮನಸ್ಸುಗಳನ್ನು ರೂಪಿಸಿದ ಹಿರಿಯರು ಮರೆಗೆ ಸರಿದಿದ್ದಾರೆ. ಆ ಜಾಗಕ್ಕೆ ಮಾರುಕಟ್ಟೆಯ ಹೆಸರಿನಲ್ಲಿ ಗಟ್ಟಿಯಾಗಿ ಅರಚುವುದು, ಕಾಮಿಕ್ ಪುಸ್ತಕಗಳಲ್ಲಿರುವಂತಹ ಆಲೋಚನೆಗಳು ಮತ್ತು ಗಂಭೀರವಲ್ಲದ ಚಿಂತನೆಗಳು ಬಂದು ಕುಳಿತಿವೆ.
ಇನ್ನೊಂದೆಡೆ, ವೈಯಕ್ತಿಕ ಹಾಗೂ ಸಾಂಸ್ಥಿಕ ಪ್ರಾಮಾಣಿಕತೆಯ ಕೊರತೆ ಕಾಣುತ್ತಿದೆ. ಈ ಒಂದೂವರೆ ತಿಂಗಳ ಅವಧಿಯಲ್ಲೇ ಕನ್ನಡದ ಸುಮಾರು 15 ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆಗಳ ಮೇಲೆ ಬ್ಲ್ಯಾಕ್‌ಮೇಲ್‌, ಸುಲಿಗೆ, ನಕಲಿ ದಾಖಲೆ ಸೃಷ್ಟಿ, ಲಂಚಗುಳಿತನದ ಹಲವು ಆರೋಪಗಳು ಬಂದಿವೆ. ಇದಕ್ಕಿರುವ ಪುರಾವೆಗಳು ನಂಬಲರ್ಹವಲ್ಲದಿರಬಹುದು ಎಂದು ಹೇಳಿಬಿಡುವುದು ಸುಲಭ. ಆದರೆ, ಇಲ್ಲಿನ ಸ್ಥಿತಿ ಅದೆಷ್ಟು ಅಪರಾಧಿಕವಾಗಿದೆ, ಅದೆಷ್ಟು ವ್ಯಾಪಕವಾಗಿದೆ, ಅದೆಷ್ಟು ನಿರ್ಲಜ್ಜವಾಗಿದೆ ಅಂದರೆ, ಆತ್ಮಸಾಕ್ಷಿ ಇರುವ ಕನ್ನಡಿಗರು ತಾವು ಓದುವ, ನೋಡುವ ಸುದ್ದಿ ಹಾಗೂ ಅಭಿಪ್ರಾಯಗಳ ಬಗ್ಗೆ ಚಿಂತಿಸಬೇಕಾಗಿದೆ.
* ವಿಜಯಪುರದಲ್ಲಿ, ವೈದ್ಯರೊಬ್ಬರಿಗೆ ಬ್ಲ್ಯಾಕ್‌ಮೇಲ್‌ ಮಾಡಿದ್ದಕ್ಕಾಗಿ ‘ಸುವರ್ಣ ನ್ಯೂಸ್‌’ನ ವರದಿಗಾರ ಹಾಗೂ ಕ್ಯಾಮೆರಾಮನ್‌ನನ್ನು ಬಂಧಿಸಲಾಯಿತು. ‘ನಮ್ಮೊಳಗಿನ ಒಬ್ಬ ಕಳ್ಳನನ್ನು ಹಿಡಿಯಲಾಗಿದೆ’ ಎಂದು ವಾಹಿನಿಯು ಅವಮಾನದಿಂದ ವರದಿ ಮಾಡಬೇಕಾಯಿತು.
* ಬೆಂಗಳೂರಿನಲ್ಲಿ ‘ಪಬ್ಲಿಕ್‌ ಟಿ.ವಿ’ ಸಿಬ್ಬಂದಿಯೊಬ್ಬ ತಾನು ಟಿ.ವಿ.9 ಕಡೆಯವ ಎಂದು ಹೇಳಿಕೊಂಡು, ‘ಸಮಯ ನ್ಯೂಸ್‌’ ವರದಿಗಾರರೊಬ್ಬರ ಜೊತೆ ಸೇರಿ ವೈದ್ಯರೊಬ್ಬರನ್ನು ಬೆದರಿಸಿ, 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಕ್ಕಾಗಿ ಬಂಧಿತನಾದ.
* ಬಿ.ಎಸ್. ಯಡಿಯೂರಪ್ಪ ವಿರುದ್ಧ ದೇವದುರ್ಗದಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಯ ನಿವೃತ್ತ ವರದಿಗಾರರೊಬ್ಬರ ಹೆಸರು ಪ್ರಸ್ತಾಪವಾಗಿದೆ. ‘ಆಪರೇಷನ್ ಕಮಲ’ದ ಭಾಗವಾಗಿ ಜೆಡಿಎಸ್‌ ಶಾಸಕರೊಬ್ಬರ ಮಗನ ಮೂಲಕ ದೊಡ್ಡ ಮೊತ್ತದ ಹಣದ ಆಮಿಷ ಒಡ್ಡಿದ ಆಡಿಯೊ ತುಣುಕು ಬಹಿರಂಗವಾದ ನಂತರ ಈ ಪ್ರಸಂಗ ನಡೆದಿದೆ.
* ಸಚಿವ ಎಂ.ಬಿ. ಪಾಟೀಲ ಅವರು ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದರು ಎನ್ನಲಾದ 2017ನೇ ಇಸವಿಯ ನಕಲಿ ಪತ್ರವೊಂದನ್ನು ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ‘ವಿಜಯವಾಣಿ’ ಪ್ರಕಟಿಸಿತು ಎಂಬ ಆರೋಪ ಬಂದ ನಂತರ, ‘ಉದಯ್ ಇಂಡಿಯಾ’ದ ವಿಶೇಷ ಬಾತ್ಮೀದಾರರೊಬ್ಬರನ್ನು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಂಧಿಸಲಾಯಿತು.
* ಈಗ ಸ್ಥಗಿತಗೊಂಡಿರುವ ‘ಫೋಕಸ್ ಟಿ.ವಿ’ಗೆ ಕೆಲಸ ಮಾಡುತ್ತಿದ್ದ ಪತ್ರಕರ್ತರೊಬ್ಬರನ್ನು ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿದ್ದಕ್ಕಾಗಿ ಹಾಗೂ ತಿರುಚಿದ ದೃಶ್ಯಾವಳಿ, ಆಡಿಯೊ ತುಣುಕು ಇಟ್ಟುಕೊಂಡು ಬಿಜೆಪಿಯ ಶಾಸಕರೊಬ್ಬರಿಗೆ ಬ್ಲ್ಯಾಕ್‌ಮೇಲ್‌ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ.
‘ಪೋಸ್ಟ್‌ಕಾರ್ಡ್‌ ನ್ಯೂಸ್‌’ ವೆಬ್‌ಸೈಟ್‌ನ ಸಂಪಾದಕ ಎಂದು ಹೇಳಿಕೊಂಡಿರುವ ವ್ಯಕ್ತಿಯನ್ನು ಎಂ.ಬಿ. ಪಾಟೀಲರ ನಕಲಿ ಪತ್ರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಶಕ್ಕೆ ಪಡೆಯಲಾಗಿದೆ. ‘ವಿಶ್ವವಾಣಿ’ ಪತ್ರಿಕೆಯ ಅಂಕಣಕಾರ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು 49 ಮಾಧ್ಯಮ ಸಂಸ್ಥೆಗಳ ವಿರುದ್ಧ ಪ್ರಕಟಣಾಪೂರ್ವ ತಡೆಯಾಜ್ಞೆ ತಂದಿದ್ದರು. ಮುಖ್ಯವಾಹಿನಿಯ ಮಾಧ್ಯಮಗಳಿಗೆ ಸಂಬಂಧಿಸಿದ ಎಲ್ಲ ಘಟನೆಗಳನ್ನು ಇವುಗಳ ಜೊತೆಗಿಟ್ಟು ನೋಡಿದರೆ, ಕನ್ನಡ ಮಾಧ್ಯಮ ಲೋಕ ಕೊಳೆಯುತ್ತಿರುವ ಸ್ಥಿತಿಯಲ್ಲಿ ಇಲ್ಲ ಎನ್ನುವುದು ಕಷ್ಟ. ಇಲ್ಲಿ ಮೌನದ ವಿಚಿತ್ರ ಪಿತೂರಿ ಕಾಣಿಸುತ್ತಿದೆ. ಯಾರು ಕೂಡ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲು ಬಯಸುತ್ತಿಲ್ಲ.
ಕರ್ನಾಟಕದಲ್ಲಿ ಇಂಥ ಪ್ರಕರಣಗಳು ಇದೇ ಮೊದಲಿಗೆ ಆಗುತ್ತಿವೆ ಅಥವಾ ಇವೆಲ್ಲ ಕನ್ನಡ ಮಾಧ್ಯಮ ಲೋಕದಲ್ಲಿ ಮಾತ್ರ ಆಗುತ್ತಿವೆ ಎಂದು ಯಾರೂ ಹೇಳುತ್ತಿಲ್ಲ. ಪತ್ರಿಕಾವೃತ್ತಿಯಲ್ಲಿ ಕಪ್ಪು ಚುಕ್ಕೆಗಳು ಮೊದಲಿನಿಂದಲೂ ಇದ್ದವು. ರಾಮಕೃಷ್ಣ ಹೆಗಡೆ ಅವರಿಂದ ಆರಂಭವಾಗಿ ಎಸ್.ಎಂ. ಕೃಷ್ಣ ಅವರವರೆಗೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದವರು, ಕೆಲವು ಪತ್ರಕರ್ತರನ್ನು ಜಿ–ಪ್ರವರ್ಗದ ನಿವೇಶನ ನೀಡಿ ಒಲಿಸಿಕೊಳ್ಳುವುದು ಸುಲಭ ಎಂಬುದನ್ನು ಕಂಡುಕೊಂಡಿದ್ದರು. ಇಬ್ಬರು ವರದಿಗಾರರು ವರದಿಗಾರಿಕೆಗಿಂತಲೂ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಆದೇಶ– ಒಂದಿಷ್ಟು ಹಣಕ್ಕಾಗಿ– ತಂದುಕೊಡುವ ಕೌಶಲಕ್ಕಾಗಿ ಹೆಚ್ಚು ಖ್ಯಾತರಾಗಿದ್ದರು.
ಅವಶ್ಯಕತೆ’ಯ ಸ್ಥಾನದಲ್ಲಿ ‘ದುರಾಸೆ’ ಬಂದು ಕುಳಿತಿರುವ ಉದಾರೀಕರಣ ನಂತರದ ಕಾಲಘಟ್ಟದಲ್ಲಿ ವಿಸಿಟಿಂಗ್‌ ಕಾರ್ಡ್‌ಗಳನ್ನೂ ಆದಾಯದ ಮೂಲವಾಗಿ ಪತ್ರಕರ್ತರು ಬಳಸಿಕೊಳ್ಳುವುದನ್ನು ದೇಶದೆಲ್ಲೆಡೆ ಕಾಣಬಹುದು. ಇದು ಕರ್ನಾಟಕದಲ್ಲಿ ಆಶ್ಚರ್ಯಕರ ಹಂತ ತಲುಪಿದೆ. ಸರ್ಕಾರದ ಪತ್ರಿಕಾ ಪ್ರಕಟಣೆಯನ್ನು ಸುದ್ದಿಯಾಗಿಸಲೂ ಕೆಲವರು ಹಣ ಕೇಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿಯೊಬ್ಬರು ಹೇಳಿದ್ದಾರೆ. ಹೀಗಿರುವಾಗ, ಟಿ.ವಿ. ವರದಿಗಾರರೊಬ್ಬರು ಎಂಜಿನಿಯರಿಂಗ್‌ ಕಾಲೇಜು ನಡೆಸುತ್ತಿದ್ದಾರಂತೆ ಎನ್ನುವ ಮಾತು ಅಚ್ಚರಿ ಮೂಡಿಸುವುದೇ?
ಭ್ರಷ್ಟಾಚಾರದ ವ್ಯಾಪಕತ್ವದ ವಿಚಾರದಲ್ಲಿ ಪತ್ರಿಕೋದ್ಯಮವು ರಾಜಕಾರಣವನ್ನು ಮೀರಿಸಿದಂತೆ ಕಾಣುತ್ತಿದೆ– ಮಾಧ್ಯಮದ ಅತಿಗಳ ಬಗ್ಗೆ ರಾಜಕಾರಣಿಗಳೇ ದೂರುವಷ್ಟರಮಟ್ಟಿಗೆ! ಭಾಷೆ ಮತ್ತು ಸಾಹಿತ್ಯದಲ್ಲಿ ಶ್ರೀಮಂತ ಇತಿಹಾಸ ಹೊಂದಿರುವ ರಾಜ್ಯವೊಂದಕ್ಕೆ ಇದಕ್ಕಿಂತ ನಾಚಿಕೆಗೇಡಿನ ಸ್ಥಿತಿ ಇನ್ನೊಂದಿರಲು ಸಾಧ್ಯವೇ? ‘ಅವರ ಪ್ರಾಮಾಣಿಕತೆ ಎಷ್ಟು’ ಎಂಬ ಪ್ರಶ್ನೆಗೆ ಮತ್ತೆ ಮತ್ತೆ ಗುರಿಯಾಗುವ ಮಾಲೀಕರು, ಸಂಪಾದಕರು, ನಿರೂಪಕರು, ವಾಹಿನಿಗಳ ಮುಖ್ಯಸ್ಥರ ಸಂಖ್ಯೆಯನ್ನು ನೋಡಿ ಹೇಳುವುದಾದರೆ, ಕನ್ನಡ ಪತ್ರಿಕೋದ್ಯಮದ ವೃಕ್ಷವು ಮೇಲಿನಿಂದ ಕೊಳೆಯುತ್ತಿದೆ ಎಂಬುದು ಖಚಿತ. ಅವರು ತಮ್ಮ ಕೈಕೆಳಗಿನ ಸಹೋದ್ಯೋಗಿಗಳಿಗೆ ಮಾರ್ಗದರ್ಶನ ನೀಡುವ, ಅವರ ವಿರುದ್ಧ ಮಾತನಾಡುವ ಅಥವಾ ಅವರನ್ನು ಹದ್ದುಬಸ್ತಿನಲ್ಲಿ ಇಡುವ ಸ್ಥಿತಿಯಲ್ಲಿಲ್ಲ ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ.
ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಿಕಾಸಂಸ್ಥೆಗಳು, ವಾಹಿನಿಗಳು, ಪ್ರೆಸ್‌ ಕ್ಲಬ್‌ ಮತ್ತು ವರದಿಗಾರರ ಕೂಟಗಳ ಜೊತೆ ಸೇರಿ ಪತ್ರಕರ್ತರಿಗೆ ನೈತಿಕ ನಿಯಮಗಳನ್ನು ರೂಪಿಸುವ ಕೆಲಸ ಆರಂಭಿಸಲು ಇದು ಸಕಾಲ. ಬದ್ಧತೆ, ಪ್ರಾಮಾಣಿಕತೆಯುಳ್ಳ ಪತ್ರಕರ್ತರನ್ನು ತೊಡಗಿಸಿಕೊಳ್ಳಬಹುದು. ವಿಶ್ವಾಸಾರ್ಹತೆ ಮುಖ್ಯ ಎಂಬುದರ ಬಗ್ಗೆ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಅಕಾಡೆಮಿಕ್ ವಲಯದ ಹಿರಿಯರು ಮತ್ತು ಸುದ್ದಿಮನೆಯ ಹಿರಿಯರು ಮಾರ್ಗದರ್ಶನ ನೀಡಬೇಕು. ಪತ್ರಿಕಾ ಸ್ವಾತಂತ್ರ್ಯ ಕಾಯುವುದರ ಜೊತೆಗೇ, ‘ಪತ್ರಿಕಾ ವೃತ್ತಿಯ ಗುಣಮಟ್ಟ ಕಾಯುವುದು’ ಕೂಡ ಭಾರತೀಯ ಪತ್ರಿಕಾ ಮಂಡಳಿಯ ಕೆಲಸಗಳಲ್ಲಿ ಒಂದು. ಮಾಧ್ಯಮ ಭ್ರಷ್ಟಾಚಾರದ ಬಗ್ಗೆ ಜನ ನಿರ್ಭೀತಿಯಿಂದ ಹೇಳುವಂತೆ ಮಾಡಲು ಸಾರ್ವಜನಿಕ ವಿಚಾರಣೆಗಳನ್ನು ಅದು ನಡೆಸಬೇಕು. ಪತ್ರಿಕಾವೃತ್ತಿನಿರತರ ಅಪರಾಧಗಳನ್ನು ಜಗತ್ತಿಗೆ ತಿಳಿಸಲು ನಾಗರಿಕರು ಸಾಮಾಜಿಕ ಜಾಲತಾಣಗಳನ್ನು ವಿವೇಚನೆಯಿಂದ ಬಳಸಿಕೊಳ್ಳಬೇಕು. ಈ ವೃತ್ತಿಗೆ ಒಂದಿಷ್ಟು ಗೌರವ ಪುನಃ ಬರಬೇಕು ಎಂದಾದರೆ ಬೇಡದ ಕಾರಣಗಳಿಗಾಗಿ ತನ್ನ ಹೆಸರು ಬಹಿರಂಗವಾಗುತ್ತದೆ ಎನ್ನುವ ಭೀತಿ ಪತ್ರಕರ್ತರಲ್ಲಿ ಹುಟ್ಟಿಸುವುದೇ ದಾರಿ.
ವಿಧಾನಸೌಧದ ಪ್ರವೇಶದ್ವಾರದ ಮೇಲೆ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಬರೆದಿದೆ. ಸಾಹಿತಿ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಅವರು ಪತ್ರಿಕಾವೃತ್ತಿಯನ್ನು ‘ದೇವರ ಆಯ್ಕೆಯ ವೃತ್ತಿ’ ಎಂದಿದ್ದರು. ಎರಡನ್ನೂ ಒಂದಾಗಿಸಿ ಓದಿದರೆ, ಕರ್ನಾಟಕದ ರಾಜಕೀಯ ಹಾಗೂ ಪತ್ರಿಕೋದ್ಯಮದಲ್ಲಿ ನಾಸ್ತಿಕರೇ ತುಂಬಿದ್ದಾರೆ ಎಂದು ಅನಿಸುತ್ತದೆ.

ಕೃಪೆ : ಪ್ರಜಾವಾಣಿ.

 

media-journalist-kannada-bangalore-press