ಗಾಂಜಾ ಮಾಫಿಯಾ: ರಾಜ್ಯದಲ್ಲೇ ವಾರ್ಷಿಕ ಸಾವಿರ ಕೋಟಿ ರೂ. ವ್ಯವಹಾರ

ಬೆಂಗಳೂರು:ಆ-29: ವಿಭಿನ್ನ, ವಿಶಿಷ್ಟ ಭಾಷೆ, ಸಂಸ್ಕೃತಿ, ಸಂಪ್ರದಾಯದಿಂದಲೇ ವಿಶ್ವಭೂಪಟದಲ್ಲಿ ಗುರುತಿಸಿಕೊಂಡಿರುವ ಕರ್ನಾಟಕವೀಗ ಗಾಂಜಾ ಅಮಲಿನಲ್ಲಿ ತೇಲುತ್ತಿದೆ. ಮಕ್ಕಳಿಂದ ಹಿಡಿದು ಮಹಿಳೆಯರವರೆಗೆ ಕೂಲಿಕಾರ್ವಿುಕರಿಂದ ಟೆಕ್ಕಿಗಳವರೆಗೆ ಎಲ್ಲ ವಯೋಮಾನದವರೂ ಮಾದಕ ಅಮಲಿನ ಸುಳಿಗೆ ಸಿಕ್ಕಿಬೀಳುತ್ತಿದ್ದಾರೆ. ಹಾಡಹಗಲೇ ಡ್ರಗ್ಸ್ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಆನ್​ಲೈನ್​ನಲ್ಲೂ ಮಾರಾಟ ದಂಧೆ ಕುದುರುತ್ತಿದೆ. ಇದೆಲ್ಲದರ ಪರಿಣಾಮ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾದ ವಾರ್ಷಿಕ ಗಳಿಕೆ ಬರೋಬ್ಬರಿ 1 ಸಾವಿರ ಕೋಟಿ ರೂ. ದಾಟಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಡೆಸಿದ ತನಿಖೆಯಲ್ಲಿ ಮಾದಕ ಲೋಕದ ಸಮಗ್ರ ಚಿತ್ರಣ ಅನಾವರಣಗೊಂಡಿದೆ.

ಡ್ರಗ್ ಯಾರ್ಡ್ ಎಂಬ ಹಣೆಪಟ್ಟಿ ಹೊತ್ತಿರುವ ರಾಜ್ಯ ರಾಜಧಾನಿ ಬೆಂಗಳೂರು ಯುವಪೀಳಿಗೆಗೆ ಅಮಲೇರಿಸುವ ಅಡ್ಡೆಯಾಗಿ ಬದಲಾಗಿದೆ. ದೇಶ-ವಿದೇಶಗಳಲ್ಲಿರುವ ಪ್ರಮುಖ ಡ್ರಗ್ ಪೆಡ್ಲರ್​ಗಳ ಜತೆ ನೇರ ಸಂಪರ್ಕ ಹೊಂದಿರುವ ಇಲ್ಲಿನ ಡ್ರಗ್ಸ್ ಮಾಫಿಯಾ ಮಾದಕ ವಸ್ತುಗಳನ್ನು ಆಮದು ಮಾಡಿಕೊಂಡು ಬೇಡಿಕೆಗೆ ಅನುಗುಣವಾಗಿ ಬೇರೆಬೇರೆ ನಗರಗಳಿಗೆ ವ್ಯವಸ್ಥಿತವಾಗಿ ಪೂರೈಸುತ್ತಿದೆ. ರಾಜ್ಯ ಪೊಲೀಸ್ ಇಲಾಖೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವ ಹೊರತಾಗಿಯೂ ಈ ಡ್ರಗ್ಸ್ ಮಾಫಿಯಾಕ್ಕೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.

20ಕ್ಕೂ ಅಧಿಕ ಬಗೆಯ ಡ್ರಗ್ಸ್: ಗಾಂಜಾ, ಹಶಿಶ್, ಕೊಕೇನ್, ಬ್ರೌನ್​ಶುಗರ್, ಅಪೀಮು, ಹೆರಾಯಿನ್, ಕೆಟಾಮಿನ್, ಚರಸ್, ಎಲ್​ಎಸ್​ಡಿ ಬ್ಲಾಟಿಂಗ್ ಪೇಪರ್, ಕೆಂಪು, ಹಳದಿ, ನೀಲಿ, ಹಸಿರು ಬಣ್ಣದ ಎಂಡಿಎಂಎ ಮಾತ್ರೆ ಸೇರಿ 20ಕ್ಕೂ ಅಧಿಕ ಬಗೆಯ ಮಾದಕ ವಸ್ತುಗಳು ರಾಜ್ಯದಲ್ಲಿ ಪೂರೈಕೆಯಾಗುತ್ತಿದೆ.

ಆನ್​ಲೈನಲ್ಲೇ ಸೇಲ್!: ಆನ್​ಲೈನ್​ನಲ್ಲೇ ಡ್ರಗ್ಸ್ ಮಾರಾಟ ಮಾಡಲಾಗುತ್ತಿದೆ. ದಂಧೆಕೋರರು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಕೊಟ್ಟು ಸಂಪರ್ಕಕ್ಕೆ ಮೊಬೈಲ್ ನಂಬರ್ ಹಾಕುತ್ತಾರೆ. ಸಂಪರ್ಕ ಮಾಡುವ ಗ್ರಾಹಕರನ್ನು ಗೌಪ್ಯ ಸ್ಥಳಕ್ಕೆ ಕರೆಸಿಕೊಂಡು ಹಣ ಪಡೆದು ಡ್ರಗ್ಸ್ ಕೊಡುತ್ತಾರೆ. ಈ ದಂಧೆಯಲ್ಲಿ ಹೆಚ್ಚಾಗಿ ದಕ್ಷಿಣ ಆಫ್ರಿಕಾ ಪ್ರಜೆಗಳೇ ಭಾಗಿಯಾಗಿದ್ದಾರೆ.

ಪ್ರವಾಸ, ವ್ಯಾಪಾರ, ಶೈಕ್ಷಣಿಕ ವೀಸಾದಲ್ಲಿ ಭಾರತಕ್ಕೆ ಬಂದವರು ವೀಸಾ ಅವಧಿ ಮುಗಿದರೂ ವಾಪಸ್ ಹೋಗದೆ ಇಂತಹ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

1 ಸಾವಿರ ಕೆ.ಜಿ ಗಾಂಜಾ ಜಪ್ತಿ: ರಾಜ್ಯದಲ್ಲಿ ಕಳೆದ 5 ವರ್ಷದಲ್ಲಿ 1 ಸಾವಿರ ಕೆ.ಜಿಗಿಂತ ಹೆಚ್ಚು ಗಾಂಜಾ ಜಪ್ತಿ ಮಾಡಲಾಗಿದೆ. ಸಾರ್ವಜನಿಕರು ಅಥವಾ ಬಾತ್ಮೀದಾರರು ಕೊಟ್ಟ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಕೇಸ್ ದಾಖಲಿಸಿಕೊಳ್ಳುತ್ತಾರೆ. ಇದಕ್ಕಿಂತ ಬೃಹತ್ ಪ್ರಮಾಣದಲ್ಲಿ ಡ್ರಗ್ ಮಾಫಿಯಾ ನಡೆಯುತ್ತಿದೆ. ಇದಕ್ಕೆ ಪೊಲೀಸರ ಕೃಪಾಕಟಾಕ್ಷವೂ ಇದೆ ಎಂಬ ಆರೋಪವೂ ಕೇಳಿಬಂದಿದೆ.

ಟ್ರೋಲ್ ಫ್ರೀ ನಂಬರ್ ಸೇವೆ: ಬೆಂಗಳೂರು ಸಿಸಿಬಿ ಪೊಲೀಸರು 1908 ಟ್ರೋಲ್ ಫ್ರೀ ನಂಬರ್ ಸೇವೆಯನ್ನೂ ಆರಂಭಿಸಿದ್ದಾರೆ. ಡ್ರಗ್ಸ್ ಮಾರಾಟ ಗಮನಕ್ಕೆ ಬಂದರೆ ಕೂಡಲೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮಾಹಿತಿದಾರರ ಹೆಸರು ಗೌಪ್ಯವಾಗಿಡುವ ಭರವಸೆ ಕೊಟ್ಟಿದ್ದಾರೆ. ಆದರೆ, ಈ ಸೇವೆ ಆರಂಭವಾಗಿ 2 ವರ್ಷಗಳಾದರೂ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ.

ಬಣ್ಣದ ಜಗತ್ತಲ್ಲೂ ಅಮಲು: ಸಿನಿಮಾ ಹಾಗೂ ಫ್ಯಾಶನ್ ಲೋಕದಲ್ಲೂ ಡ್ರಗ್ಸ್ ಅಮಲು ಆವರಿಸಿದೆ. 2017ರಲ್ಲಿ ಕಾಲಿವುಡ್​ನಲ್ಲಿ ಬೆಳಕಿಗೆ ಬಂದಿದ್ದ ಡ್ರಗ್ ಮಾಫಿಯಾ ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು. ಒಟ್ಟು 15 ಸೆಲೆಬ್ರಿಟಿಗಳು ಮಾಫಿಯಾದಲ್ಲಿರುವ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಬೆಲೆಯೂ ವಿಭಿನ್ನ: ಗಾಂಜಾವನ್ನು ಗ್ರಾಂ ಲೆಕ್ಕದಲ್ಲಿ 100, 200, 500 ರೂ.ಗೆ ಮಾರಾಟ ಮಾಡುತ್ತಾರೆ. ಅದೇ ರೀತಿ ಅರ್ಧ ಅಥವಾ 1 ಗ್ರಾಂನಂತೆ ಎಂಡಿಎಂಎ ಪೌಡರ್ ಅನ್ನು ಪ್ಯಾಕೆಟ್​ಗೆ ತುಂಬಿ 10 ರಿಂದ 15 ಸಾವಿರ ರೂ.ವರೆಗೆ ಮಾರಾಟ ಮಾಡಲಾಗುತ್ತದೆ. ಹೀಗೆ ಒಂದೊಂದು ರೀತಿಯ ಡ್ರಗ್ಸ್​ಗೆ ಒಂದೊಂದು ರೇಟ್ ನಿಗದಿಪಡಿಸಲಾಗಿದೆ.

ಎಲ್ಲರಿಗೂ ಕೊಡಲ್ಲ: ಮಾರಾಟ ದಂಧೆಯಲ್ಲಿ ಕೋಡ್​ವರ್ಡ್ ಬಳಸಲಾಗುತ್ತದೆ. ಪರಿಚಿತ ಗಿರಾಕಿಯ ಮುಖಾಂತರ ಹೋದರಷ್ಟೇ ಸಿಗುತ್ತದೆ. ಅವರು ಹೇಳಿದ ಸ್ಥಳಕ್ಕೇ ಹೋಗಬೇಕು. ಬರುವ ಗಿರಾಕಿ ಗಮನಿಸಲು ಪ್ರತ್ಯೇಕ ತಂಡವೇ ನಿಗದಿಯಾಗಿರುತ್ತದೆ. ಸ್ವಲ್ಪ ಅನುಮಾನ ಬಂದರೂ ತಮಗೆ ಸಂಬಂಧವೇ ಇಲ್ಲವೆನ್ನುವಂತೆ ಸ್ಥಳದಿಂದ ಕಾಲ್ಕೀಳುತ್ತಾರೆ.

ಉತ್ತರದಿಂದ ದಕ್ಷಿಣ ಜಿಲ್ಲಾವಾರು ಚಿತ್ರಣ

ಮಂಗಳೂರು: ·ಮಂಗಳೂರಿನಲ್ಲಿ ಗಾಂಜಾ ಮಾರಾಟಕ್ಕೆ ಕೇರಳ ನಂಟಿದೆ ·ವಿದ್ಯಾರ್ಥಿಗಳಿಂದಲೇ ಮಾರಾಟ ಮಾಡಿಸುತ್ತಿರುವ ಪ್ರಕರಣ ಬೆಳಕಿಗೆ · ಒಂದೇ ತಿಂಗಳಿನಲ್ಲಿ 30ಕ್ಕೂ ಅಧಿಕ ಮಂದಿ ಡ್ರಗ್ಸ್ ಕೇಸಲ್ಲಿ ಬಂಧನ
ದಾವಣಗೆರೆ: ·ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಜಾಲ ಸಕ್ರಿಯ ·2019ರಲ್ಲಿ 12 ವೈದ್ಯಕೀಯ ವಿದ್ಯಾರ್ಥಿಗಳು ಸೇರಿ 27 ಜನರನ್ನು ಬಂಧಿಸಲಾಗಿದೆ ·ಗಡಿ ಭಾಗದ ನ್ಯಾಮತಿ, ಸವಳಂಗ, ಹೊನ್ನಾಳಿ ಮೂಲಕ ದಾವಣಗೆರೆಗೆ ಪೂರೈಕೆ ಪತ್ತೆ ·ವಾಟ್ಸಪ್​ನಲ್ಲಿ ಗೂಗಲ್​ನಲ್ಲಿ ಲೊಕೇಶನ್ ಶೇರ್ ಮಾಡಿ ಅಲ್ಲಿಗೆ ಕರೆಸಿಕೊಂಡು ಮಾರಾಟ
ಶಿವಮೊಗ್ಗ: ·ಗಾಂಜಾ ನಂಟು ಆಂಧ್ರಪ್ರದೇಶ ಮತ್ತು ಮುಂಬೈಗೂ ಹಬ್ಬಿರುವುದು ತನಿಖೆಯಲ್ಲಿ ದೃಢ ·ವಿಶಾಖಪಟ್ಟಣ, ಮುಂಬೈ ಮತ್ತು ಕಾರವಾರದಿಂದ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ · ಶಿಕಾರಿಪುರ, ಸಾಗರ, ಭದ್ರಾವತಿ, ಶಿರಾಳಕೊಪ್ಪ, ಹೊಸನಗರ ಭಾಗದಲ್ಲಿ ಹೆಚ್ಚಾಗಿ ದಂಧೆ ಬಳ್ಳಾರಿ· ಕುರುಗೋಡು ಸೇರಿದಂತೆ ವಿವಿಧೆಡೆ ಗಾಂಜಾ ಬೆಳೆದಿರುವ ಹಾಗೂ ಸಾಗಣೆ ಕೇಸ್ ದಾಖಲು · ಜಿಲ್ಲೆಯಲ್ಲಿ ಬೆಳೆಯುವ ಗಾಂಜಾವನ್ನು ಬೆಂಗಳೂರು ಸೇರಿ ವಿವಿಧ ಊರುಗಳಿಗೆ ಸಾಗಣೆ
ಕೋಟಿ ಕೋಟಿ ವಹಿವಾಟು

ಬೆಂಗಳೂರು ಒಂದರಲ್ಲೇ ವಾರ್ಷಿಕ 450ರಿಂದ 500 ಕೋಟಿ ರೂ. ವಹಿವಾಟು
ರಾಜ್ಯಾದ್ಯಂತ ವಾರ್ಷಿಕ 1 ಸಾವಿರ ಕೋಟಿ ರೂ.ಗೂ ಅಧಿಕ ವ್ಯವಹಾರ
ಬೆಂಗಳೂರಿಗೆ ಆಮದು ಮಾಡಿಕೊಂಡು ಚೆನ್ನೈ, ಮುಂಬೈ ಇತರ ನಗರಗಳಿಗೆ ಪೂರೈಕೆ
ಹೇಗೆ ಬರುತ್ತೆ? ಹೋಗುತ್ತೆ?

ಮುಂಬೈ, ಗೋವಾ, ಮಂಗಳೂರು, ಚೆನ್ನೈ, ವಿಶಾಖಪಟ್ಟಣ ಹಾಗೂ ಕೇರಳದಿಂದ ಸಮುದ್ರ ಮಾರ್ಗವಾಗಿ ಹಡಗುಗಳ ಮೂಲಕ ದೇಶ-ವಿದೇಶಗಳಿಗೆ ಡ್ರಗ್ಸ್ ಕಳ್ಳ ಸಾಗಾಣಿಕೆ ಮಾಡಲಾಗುತ್ತದೆ. ಆಂಧ್ರಪ್ರದೇಶದ ಕರ್ನಲ್, ಅನಂತಪುರ, ತಮಿಳುನಾಡಿನ ಕೃಷ್ಣಗಿರಿ, ಒಡಿಶಾ, ಬಾಂಗ್ಲಾದೇಶ ಮತ್ತು ಗೋವಾ, ಮಂಗಳೂರು, ಮೈಸೂರಿನಿಂದ ಬೆಂಗಳೂರಿಗೆ ರೈಲುಗಳಲ್ಲಿ ಪೂರೈಕೆಯಾಗುತ್ತಿದೆ. ಪೊಲೀಸರ ಕಣ್ತಪ್ಪಿಸಲು ಇತ್ತೀಚೆಗೆ ಬಸ್​ಗಳಲ್ಲಿ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳುತ್ತಾರೆ.

ಟಾರ್ಗೆಟ್ ಯಾರು!

ಟೆಕ್ಕಿಗಳು, ಶ್ರೀಮಂತ ವರ್ಗದ ಯುವಕ- ಯುವತಿಯರು
ಕೂಲಿ ಕಾರ್ವಿುಕರು, ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು
ಬಾರ್ ಆಂಡ್ ರೆಸ್ಟೋರೆಂಟ್, ಪಬ್​ಗಳಿಗೆ ಬರುವ ಗ್ರಾಹಕರು
ಬೆರಳೆಣಿಕೆ ಬಯಲು

ಪೊಲೀಸರ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕಳೆದ 3 ವರ್ಷದಲ್ಲಿ (2016 ರಿಂದ18ರವರೆಗೆ) 2,811 ಪ್ರಕರಣ ದಾಖಲಾಗಿವೆ. 2016ರಲ್ಲಿ 653 ಪ್ರಕರಣ ದಾಖಲಾದರೆ 2018ರಲ್ಲಿ 1,031 ಡ್ರಗ್ಸ್ ಮಾರಾಟಕ್ಕೆ ಸಂಬಂಧಿಸಿ ದಂತೆ ಕೇಸ್​ಗಳು ದಾಖಲಾಗಿವೆ. 2019ರಲ್ಲಿ ಕಳೆದ 6 ತಿಂಗಳಲ್ಲಿ 700ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.

ರಾಜ್ಯದ ಶಾಲಾ, ಕಾಲೇಜುಗಳನ್ನು ಮಾದಕ ಪದಾರ್ಥ ಮುಕ್ತ ಮಾಡ ಬೇಕೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಎಲ್ಲ ಕುಲಪತಿಗಳಿಗೆ ಪತ್ರ ಬರೆದಿದ್ದೇನೆ. ಕಾಲೇಜು ಆಡಳಿತ ಮಂಡಳಿ ಬೇಜವಾಬ್ದಾರಿತನದಿಂದ ಕೆಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ದಾಸರಾಗಿದ್ದಾರೆ. ಅಂತಹ ಕಾಲೇಜುಗಳ ಪರವಾನಗಿ ರದ್ದು ಮಾಡುವ ಚಿಂತನೆ ನಡೆಸಲಾಗಿದೆ.

| ಭಾಸ್ಕರ್ ರಾವ್ ನಗರ ಪೊಲೀಸ್ ಆಯುಕ್ತರು

ಪಶ್ಚಿಮಘಟ್ಟ ಅರಣ್ಯದಲ್ಲಿ ಅವ್ಯಾಹತ

ಪಶ್ಚಿಮಘಟ್ಟ ಕಾಡುಗಳು, ಮಂಗಳೂರು, ಚಾಮರಾಜನಗರ, ಮೈಸೂರು, ಕೋಲಾರ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯಲಾಗುತ್ತಿದೆ. ಇತ್ತೀಚೆಗೆ ಕೋಲಾರ, ಚಾಮರಾಜನಗರ ಸೇರಿ ಕೆಲವೆಡೆ ದಾಳಿ ನಡೆದಾಗ ಗಾಂಜಾ ಬೆಳೆ ಪತ್ತೆಯಾಗಿತ್ತು.

ರಾಜ್ಯದ ಡ್ರಗ್ಸ್ ಜಾಲದ ಮೇಲೆ ಖಾಕಿ ಕಣ್ಗಾವಲು: ನಿಯಂತ್ರಣಕ್ಕೆ ಪೊಲೀಸರಿಗೆ ತರಬೇತಿ
ರಾಜ್ಯದಲ್ಲಿ ಬೇರೂರಿರುವ ‘ಗಾಂಜಾ ಮಾಫಿಯಾ’ದ ಕರಾಳ ಚಿತ್ರಣದ ಬಳಿಕ ಎಚ್ಚೆತ್ತಿರುವ ಪೊಲೀಸ್ ಇಲಾಖೆ ರಾಜ್ಯದಲ್ಲಿರುವ ಡ್ರಗ್ ಪೆಡ್ಲರ್​ಗಳ ಮೇಲೆ ಹದ್ದಿನ ಕಣ್ಣಿಡಲು ನಿರ್ಧರಿಸಿದೆ.

ಮಾದಕ ವಸ್ತು ಜಾಲ ಪತ್ತೆ ಹಚ್ಚುವುದಕ್ಕಾಗಿಯೇ ಪೊಲೀಸರಿಗೆ ವಿಶೇಷ ತರಬೇತಿ ನೀಡುತ್ತಿರುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಆಡಳಿತ) ಡಾ.ಎಂ.ಎ.ಸಲೀಂ ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಯ ಕುರಿತು ಬುಧವಾರ ‘ಗಾಂಜಾ ಮಾಫಿಯಾ’ ಶೀರ್ಷಿಕೆಯಡಿ ಪ್ರಕಟವಾದ ತನಿಖಾ ವರದಿಗೆ ಪ್ರತಿಕ್ರಿಯಿಸಿರುವ ಈ ಅಧಿಕಾರಿಗಳು, ಮಾದಕ ವಸ್ತು ಪೂರೈಕೆ ಜಾಲ ಮಟ್ಟಹಾಕಲು ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ 1100ಕ್ಕೂ ಅಧಿಕ ಡ್ರಗ್ ಪೆಡ್ಲರ್​ಗಳಿದ್ದು, ಬೆಂಗಳೂರಿನಲ್ಲೇ 400ಕ್ಕೂ ಅಧಿಕ ಆರೋಪಿಗಳು ಸಕ್ರಿಯರಾಗಿದ್ದಾರೆ.

ನಾಕೋಟಿಕ್ಸ್ ಕಂಟ್ರೋಲ್ ಬ್ಯುರೋ (ಎನ್​ಸಿಬಿ) ಸಹಯೋಗದಲ್ಲಿ ರಾಜ್ಯದ ಠಾಣೆಗಳಿಗೂ ಡ್ರಗ್ಸ್ ಪತ್ತೆಹಚ್ಚುವ ಕಿಟ್ ವಿತರಿಸಲಾಗಿದೆ. ಡ್ರಗ್ ಪೆಡ್ಲರ್ ಪತ್ತೆಹಚ್ಚಿ ಅವರ ವಿರುದಟಛಿ ಕಾನೂನು ಕ್ರಮ ಕೈಗೊಳ್ಳಲು ವಿಶೇಷ ತರಬೇತಿ ನೀಡಲಾಗಿದೆ ಎಂದು ಸಲೀಂ ತಿಳಿಸಿದ್ದಾರೆ. ರಾಜಧಾನಿಯಲ್ಲಿ ಗಾಂಜಾ ದಂಧೆ ನಿಯಂತ್ರಿಸಲು ಆದ್ಯತೆ ಕೊಡಲಾಗುತ್ತಿದೆ. ಡ್ರಗ್ ಪೆಡ್ಲರ್​ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಸಿಬಿ ಪೊಲೀಸರಿಗೆ ಸೂಚಿಸಲಾಗಿದೆ. ಮಾದಕ ದ್ರವ್ಯ ವ್ಯಸನಕ್ಕೆ ಸಾವಿರಾರು ಯುವಜನತೆ ಬಲಿಯಾಗುತ್ತಿದ್ದಾರೆ. ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

ಬೆಳೆಗಾರರ ವಿರುದ್ಧವೂ ಕ್ರಮ

ರಾಜ್ಯದ ಕೆಲ ಹಳ್ಳಿಗಾಡಿನ ದಟ್ಟ ಅರಣ್ಯದೊಳಗೆ, ಮೆಕ್ಕೆಜೋಳ, ಹತ್ತಿ ಹೊಲದಲ್ಲಿ ಭಾರಿ ಪ್ರಮಾಣದಲ್ಲಿ ಗಾಂಜಾ ಬೆಳೆಯಲಾಗುತ್ತದೆ. ಪೊಲೀಸ್ ಮತ್ತು ಅಬಕಾರಿ ಇಲಾಖೆ ಎಷ್ಟೇ ಕಡಿವಾಣ ಹಾಕಿದರೂ ಗಾಂಜಾ ಬೆಳೆಯುವುದು ನಿಂತಿಲ್ಲ. ಪಶ್ಚಿಮ ಘಟ್ಟಗಳ ಕಾಡುಗಳು, ಮೈಸೂರು, ಕೋಲಾರ, ಶಿವಮೊಗ್ಗ ಸೇರಿ ರಾಜ್ಯದ ವಿವಿಧೆಡೆ ಗಾಂಜಾ ಬೆಳೆಸುತ್ತಿರುವ ಪ್ರದೇಶಗಳ ಮೇಲೆ ದಾಳಿ ನಡೆಸಿ ಅಂಥ ಬೆಳೆಗಾರರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಪೊಲೀಸರು ಸಜ್ಜಾಗಿದ್ದಾರೆ.

ಗಾಂಜಾ ಪೂರೈಕೆ ಜಾಲದಲ್ಲಿ ಅಪ್ರಾಪ್ತ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿರುವುದು ಗಮನಕ್ಕೆ ಬಂದಿದೆ. ಇಂತಹ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಬೇಕು. ಇವರಿಂದ ಬೇರೆ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು.

| ಭಾಸ್ಕರ್ ರಾವ್ ನಗರ ಪೊಲೀಸ್ ಆಯುಕ್ತ
ಕೃಪೆ:ವಿಜಯವಾಣಿ

ಗಾಂಜಾ ಮಾಫಿಯಾ: ರಾಜ್ಯದಲ್ಲೇ ವಾರ್ಷಿಕ ಸಾವಿರ ಕೋಟಿ ರೂ. ವ್ಯವಹಾರ

marijuana-mafia-karnataka-drugs-marijuana-state-police-vijayavani-investigation