ದ್ವೇಷದಿಂದ ಭಾಷೆಯ ಬೆಳವಣಿಗೆ ಸಾಧ್ಯವಿಲ್ಲ- ಡಾ.ಧರಣಿದೇವಿ ಮಾಲಗತ್ತಿ…

kannada t-shirts

ಮೈಸೂರು,ನ,1,2019(www.justkannada.in): ಭಾಷೆ ಭಾಷೆಗಳ ನಡುವೆ ದ್ವೇಷ ಮೂಡುವಂತೆ ಮಾಡುವುದರಿಂದ ದೇಶ ಕಟ್ಟಲು ಆಗಲಿ ಅಥವಾ ಭಾಷೆ ಕಟ್ಟಲು ಆಗಲಿ ಸಾಧ್ಯವಿಲ್ಲ ಎಂದು ಮಹಿಳಾ ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲೆ ಡಾ.ಧರಣದೇವಿ ಮಾಲಗತ್ತಿ ಸೂಚ್ಯವಾಗಿ ನುಡಿದರು.

ನಗರದ ಚಾಮುಂಡಿ ಬೆಟ್ಟದ ತಪ್ಪಲಲ್ಲಿರುವ ಪೊಲೀಸ್ ಬಡಾವಣೆಯ ನೇತಾಜಿ ಉದ್ಯಾನವನದಲ್ಲಿ ಶುಕ್ರವಾರ ಸಮಾನ ಮನಸ್ಕರ ವೇದಿಕೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ 64ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಯಾವುದೇ ಭಾಷೆ ಬೆಳೆಯಬೇಕಾದಲ್ಲಿ ಸೌಹಾರ್ದತೆ ಎಂಬುದು ಪ್ರಮುಖ ಪಾತ್ರ ವಹಿಸುತ್ತದೆ. ಭಾಷೆ ಕಲಿಸುವ ಮೂಲಕ ಭಾಷೆಯನ್ನು ಬೆಳೆಸಬೇಕು. ಮಾತ್ರವಲ್ಲ, ಭಾಷೆಯ ಬಗ್ಗೆ ಎಲ್ಲರೂ ಜಾಗೃತರಾಗಬೇಕು ಎಂದರು.

ದೇಶಾಭಿಮಾನ ಹಾಗೂ ಭಾಷಾಭಿಮಾನ ತೋರಿಸಲು ಬೇರೆ ಬೇರೆ ವಿಧಾನಗಳಿವೆ. ಭಾಷೆಯ ಉಳಿವಿಗಾಗಿ ನಡೆಯುವ ವಿದ್ಯಮಾನಗಳು ಹೋರಾಟ ಎಂಬುದರ ಬದಲಾಗಿ ನಿರ್ಮಾಣಾತ್ಮಕವಾಗಿರಬೇಕು. ಆ ಪದ ಬಳಕೆಯಲ್ಲಿಯೂ ಕೂಡ ನಾವು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ಮಾಡಿದರು.  ಬದಲಾಗುತ್ತಿರುವ ಕಾಲಘಟ್ಟದಲ್ಲಿ ಭಾಷಾ ಸೌಹಾರ್ದತೆ ಬಹಳ ಮುಖ್ಯ ಎಂದ ಅವರು, ಪ್ರಸ್ತುತ ಸಂದರ್ಭದಲ್ಲಿ ಭಾಷೆಯ ಬಗ್ಗೆ ನಿಜವಾದ ಜ್ಞಾನ ಇಲ್ಲದಿರುವುದು ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಭಾಷೆ ಕಲಿಯುವುದರಿಂದ ಯಾರಿಗೂ ನಷ್ಟವಿಲ್ಲ, ಎಷ್ಟು ಭಾಷೆ ಕಲಿಯುತ್ತೇವೆಯೋ ಅಷ್ಟೇ ನಾವು ಯಶಸ್ಸು ಕಾಣುತ್ತೇ. ಇದರಿಂದ ಸೌಹಾರ್ದ ಸಂಬಂಧ ಇಟ್ಟುಕೊಳ್ಳಲು ಸಾಧ್ಯ. ಈ ಹಿನ್ನೆಲೆಯಲ್ಲಿಯೇ ನಮ್ಮ ಭಾಷೆಯನ್ನು ಬೇರೆಯವರಿಗೆ ಕಲಿಸುವ ಕೆಲಸ ಆಗಬೇಕು ಎಂದರು.

ದೇಶ, ರಾಷ್ಟ್ರ, ಭಾಷೆಯನ್ನು ಕಟ್ಟುವ ಕೆಲಸ ಆಗಬೇಕು ಎಂದ ಅವರು, ಮತ್ತೊಂದು ಭಾಷೆ ನಮ್ಮ ವೈರಿ ಆಗಬಾರದು. ಮುಂದಿನ ತಲೆಮಾರಿಗೆ ಭಾಷೆಯನ್ನು ಉಳಿಸಿ, ಬೆಳೆಸುವ ಕೆಲಸ ಆಗಬೇಕು, ಭಾಷೆಗೆ ಎಂದಿಗೂ ಸಾವಿಲ್ಲವಾದ್ದರಿಂದ ನಮ್ಮ ಭಾಷೆಯಾದ ಕನ್ನಡವನ್ನು ಭಾವನಾತ್ಮಕವಾಗಿ ನಾವು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷ ಥಾಮಸ್, ಪದಾಧಿಕಾರಿಗಳಾದ ಜಯಪಾಲನ್, ಮನುಕುಮಾರ್, ಮೋಹನ್ ಕುಮಾರ್, ನಂಜಯ್ಯ, ಶೋಭಾ ಧನಂಜಯ, ವೀಣಾಕಾಮತ್, ಸಿದ್ದರಾಜೇಗೌಡ ಮತ್ತಿತರರು ಉಪಸ್ಥಿತರಿದ್ದರು.

Key words: Language -cannot – developed – hatred-mysore- Dr. Dharani Devi Malankarati.

website developers in mysore