ತಮಿಳಿಗೆ ರಿಮೇಕ್​ ಆಗಲಿದೆ ಮಧುರ ಪ್ರೇಮಕಥೆ ‘ಅಂದವಾದ’

ಬೆಂಗಳೂರು,ನ,1,2019(www.justkannada.in): ಸ್ಟಾರ್​ ನಟನ ಚಿತ್ರಗಳು ಪರಭಾಷೆಗಳಿಗೆ ರಿಮೇಕ್​ ಆಗುವುದು ವಾಡಿಕೆ.  ಆದರೆ ಇಲ್ಲಿ ಹೊಸಬರ, ಭಿನ್ನಕಥೆಯ, ಪ್ರೇಮಕಾವ್ಯದ ಅಂದವಾದ ಚಿತ್ರ ಸೇರ್ಪಡೆಯಾಗುತ್ತಿದೆ. ಪ್ರಸಿದ್ಧ ನಟಿ ಆಶಿಕಾ ರಂಗನಾಥ್​ ಸಹೋದರಿ ಅನುಷಾ ರಂಗನಾಥ್​ ಪ್ರಧಾನ ಪಾತ್ರದಲ್ಲಿ ನಟಿಸಿರುವ ಚಿತ್ರವು ತಮಿಳಿಗೆ ರಿಮೇಕ್​ ಆಗಲಿದೆ. ಈ ಮೂಲಕ ಕನ್ನಡ ಚಿತ್ರಗಳಿಗೆ ಮತ್ತೆ ಗತಕಾಲದ ಇತಿಹಾಸ ಮರುಕಳಿಸಲಿದೆ.

ಸುಂದರ ಪ್ರೇಮಕಥೆ, ವಿಭಿನ್ನ ನಿರೂಪಣೆಯ ಮೂಲಕ ಗಮನ ಸೆಳೆದಿರುವ ಚಿತ್ರವು ಪ್ರೇಕ್ಷಕರ ಮನಗೆದ್ದಿದ್ದು ಪರಭಾಷೆಯನ್ನು ಆಕರ್ಷಿಸಿದೆ. ಹಾಡುಗಳು, ಚಿತ್ರಕಥೆಯ ಮೂಲಕ ಗಮನ ಸೆಳೆದಿರುವ ಚಿತ್ರವನ್ನು ತಮಿಳಿನ ನಿರ್ದೇಶಕರೊಬ್ಬರು ನಿರ್ದೇಶನ ಮಾಡಲು ಕೈಗೆತ್ತಿಕೊಂಡಿದ್ದಾರೆ.

ತಮಿಳಿನ 96 ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದ ಪ್ರೇಮ್​ ಕುಮಾರ್​ ಈ ಚಿತ್ರದ ಕಥೆಯನ್ನು ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಇದನ್ನು ತಮ್ಮ ಭಾಷೆಯಲ್ಲಿ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ನಿರ್ಮಾಪಕ ನಂದಗೋಪಾಲ್​ ಕೂಡ ಚಿತ್ರದ ರಿಮೇಕ್​ ಹಕ್ಕನ್ನು ಪಡೆಯಲು ಕಾತರರಾಗಿದ್ದಾರೆ. ಈ ಬಗ್ಗೆ ಸದ್ಯ ಮಾತುಕತೆಗಳು ನಡೆಯುತ್ತಿವೆ. ಶೀಘ್ರದಲ್ಲೇ ಇದರ ಬಗ್ಗೆ ಅಧಿಕೃತ ಮಾಹಿತಿಯನ್ನು ಚಿತ್ರತಂಡವು ಪ್ರಕಟಿಸಲಿದೆ.

ಚಿತ್ರವನ್ನು ಚಲ ಎಂಬುವವರು ನಿರ್ದೇಶನ ಮಾಡಿದ್ದಾರೆ. ಮಧುಶ್ರೀ ಗೋಲ್ಡನ್​ ಫ್ರೇಮ್ಸ್​ ಸಂಸ್ಥೆಯು ಚಿತ್ರಕ್ಕೆ ಬಂಡವಾಳ ಹೂಡಿದೆ. ವಿಕ್ರಮ್​ ವರ್ಮನ್​ ರಾಗ ಸಂಯೋಜನೆ ಮಾಡಿದ್ದಾರೆ. ಹರೀಶ್​ ಎನ್​ ಸೊಂಡೆಕೊಪ್ಪ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ. ಅಂದವಾದ ಚಿತ್ರದಲ್ಲಿ ಜೈ ನಾಯಕನಾಗಿದ್ದಾರೆ. ನಟಿ ಆಶಿಕಾ ರಂಗನಾಥ್​ ಅವರ ಅಕ್ಕ ಅನುಷಾ ರಂಗನಾಥ್​ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರು ಈ ಮುನ್ನ ಸೋಡಾಬುಡ್ಡಿ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿರುತೆರೆಯ ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ.

ಉಳಿದಂತೆ ಶ್ರೀಧರ್​, ಹರೀಶ್​ ರೈ, ಅಮರ್​ ಸಲ್ವಾ ತಾರಾಗಣದಲ್ಲಿದ್ದಾರೆ. ತಮಿಳಿಗೆ ರಿಮೇಕ್​ ಆಗುವ ಮೂಲಕ ಚಿತ್ರವು ಕನ್ನಡ ಚಿತ್ರರಂಗದ ಕೀರ್ತಿಯನ್ನು ಎತ್ತಿ ಹಿಡಿದಿದೆ. ಚಿತ್ರದ ಹಾಡುಗಳು ಇಂದಿಗೂ ಕೇಳುಗರು ಗುನುಗುತ್ತಿದ್ದಾರೆ. ಟ್ರೈಲರ್​ ಕೂಡ ಟ್ರೆಂಡಿಂಗ್​ ನಲ್ಲಿತ್ತು.

key words:Tamil- remake -andavada-film