ಇಣುಕಿ ನೋಡುವ ಬಾ ರಂಗಭೂಮಿ ಒಳಹೊರಗ’: ಸಂಕಲ್ಪ ಗೆಳೆಯರ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ…

ಮೈಸೂರು,ನವೆಂಬರ್,12,2020(www.justkannadain): ಸಂಕಲ್ಪ ಗೆಳೆಯರ ಬಳಗದ ವತಿಯಿಂದ ನವೆಂಬರ್ 5ನೇ ತಾರೀಖು ಕನ್ನಡ ರಾಜ್ಯೋತ್ಸವವನ್ನು ಸಡಗರ, ಸಂಭ್ರಮದೊಂದಿಗೆ ಆಚರಿಸಲಾಯಿತು.

ಮುಂಜಾನೆ 8.30ಕ್ಕೆ ಏಸ್ಎಪಿ ಕಚೇರಿಯ ಆವರಣದಲ್ಲಿ ಕರೋನ ನಿಯಮಾವಳಿಗಳನ್ನು ಪಾಲಿಸಿ 12 ಜನ ಬಳಗದ ಸ್ವಯಂ-ಸೇವಕರು  ಧ್ವಜಾರೋಹಣ ಹಾಗು ತಾಯಿ ಭುವನೇಶ್ವರಿಯ ಪೂಜೆ  ನೆರೆವೇರಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಸಂಕಲ್ಪ ಬಳಗದಲ್ಲಿ ಪ್ರತಿ ಬಾರಿಯು ರಾಜ್ಯೋತ್ಸವಕ್ಕೆ ಒಂದು ವಿಷಯವನ್ನು ಆಯ್ದುಕೊಳ್ಳುವುದು ವಾಡಿಕೆ. ಅದೇ ರೀತಿ ಈ ಬಾರಿಯ ವಿಷಯ ಕನ್ನಡ ರಂಗಭೂಮಿ . ಇದಕ್ಕೆ ಇವರು ಕೊಟ್ಟ ಹೆಸರು ರಂಗಾಂತರಂಗ  –  ಇಣುಕಿ ನೋಡುವ ಬಾ ರಂಗಭೂಮಿ ಒಳಹೊರಗ. ರಂಗಭೂಮಿಯ ಸುತ್ತ ಕೇಂದ್ರೀಕೃತವಾಗಿ ಹಲವು ಪೂರ್ವಭಾವಿ ಸ್ಪರ್ಧೆ, ಮನರಂಜನಾ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ದೇಶದಲ್ಲಿ ನಡೆಯುತ್ತಿರುವ ಎಲ್ಲ ಕಾರ್ಯಕ್ರಮಗಳಂತೆ ಈ ಬಾರಿ ರಂಗಾಂತರಂಗ ಕೂಡ ವರ್ಚುಯಲ್ ಆಗಿ ನೆರವೇರಿಸಲಾಯಿತು. ಲೋಯ್ಡ್ಸ್  ಎಂಬ ಸ್ಟುಡಿಯೋದಿಂದ ಕಾರ್ಯಕ್ರಮವನ್ನು ಮೈಕ್ರೋಸಾಫ್ಟ್ ಟೀಮ್ಸ್ ಲೈವ್ ಮೂಲಕ ಎಲ್ಲ ಎಸ್ ಎ ಪಿ  ಉದ್ಯೋಗಿಗಳಿಗೆ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ನೋಡುವ ಸುವರ್ಣಾವಕಾಶವನ್ನು ಒದಗಿಸಲಾಯಿತು. ಈ ಸಮಾರಂಭವನ್ನು ಜರ್ಮನಿ ಹಾಗು ಯು.ಎಸ್.ಎ ಯಲ್ಲಿರುವ ಬಳಗದ ಸದಸ್ಯರು ಸಹ ವೀಕ್ಷಿಸಿದರು. ಸಂಕಲ್ಪ ಬಳಗದ ಸ್ವಯಂಸೇವಕರು ಸಮಾರಂಭಕ್ಕೆ ಯಾವುದೇ ಕುಂದು ಬಾರದಂತೆ  ಎಲ್ಲ ಕಾರ್ಯಕ್ರಮಗಳನ್ನು ಬಹಳ ಅಚ್ಚುಕಟ್ಟಾಗಿ ನೆರವೇರಿಸಿದರು.

ಮಧ್ಯಾಹ್ನ 2 ಗಂಟೆಗೆ ಪ್ರಾರ್ಥನೆಯೊಂದಿಗೆ ಶುರುವಾದ ಕಾರ್ಯಕ್ರಮ ಸುಮಾರು 3.5 ಘಂಟೆಗಳ ಕಾಲ ನಡೆದು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಕಾರ್ಯಕ್ರಮದಲ್ಲಿ ಹಲವಾರು ಕಲಾವಿದರು ಭಾಗವಹಿಸಿ ರಂಗಗೀತೆ, ಜನಪದ ಗೀತೆ, ಭಾವಗೀತೆಗಳನ್ನು ಹಾಡಿದರು. ಜೊತೆಗೆ ಸೊಗಸಾದ ನೃತ್ಯ,  ಸಂಕಲ್ಪ ಬಳಗದ ಕಲಾವಿದರಿಂದ  ನವರಸ ಭರಿತ ನಾಟಕ, ಹಾಗು ಡ್ರಮನಾನ್  ತಂಡದ ‘ಅಕ್ಷಯಾಂಬರ’ ನಾಟಕದ ಪ್ರದರ್ಶನ ನಡೆಯಿತು.kannada-rajyotsava-celebration-sankalpa-geleyara-balaga

ಈ ನಡುವೆ ಏಸ್ಎಪಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಸಿಂಧು ಗಂಗಾಧರನ್ ಅವರು ಮಾತನಾಡಿ ನಮ್ಮನಾಡು, ನುಡಿ ಹಾಗು ಸಂಸ್ಕೃತಿಯ ಬೆಳವಣಿಗೆಗೆ  ಕರೆ ಕೊಟ್ಟರು.  ಇದಕ್ಕೆಲ್ಲ ಮುಕುಟವಿಟ್ಟಂತೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಪ್ರಕಾಶ್ ಬೆಳವಾಡಿಯವರು ಸಮಾರಂಭಕ್ಕೆ ಮೆರುಗು ನೀಡಿದರು.  ಇವರು ರಂಗಭೂಮಿ ಹಾಗು ಚಲನಚಿತ್ರ ರಂಗದ ತಮ್ಮ ಅನುಭವಗಳನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡರು.  ಅನಿವಾಸಿ ಏಸ್ ಎ ಪಿ ಕನ್ನಡಿಗರ ರಾಜ್ಯೋತ್ಸವ ಸಂಭ್ರಮಾಚರಣೆಯ ವಿಡಿಯೋ ತುಣುಕುಗಳನ್ನು ಕೂಡ ಇಲ್ಲಿ ಪ್ರದರ್ಶಿಸಲಾಯಿತು.

ಕಾರ್ಯಕ್ರಮ ಸಂಜೆ 5.30ಕ್ಕೆ ವಂದನಾರ್ಪಣೆಯೊಂದಿಗೆ ಅಂತ್ಯಗೊಂಡಿತು. ಈ ಕಾರ್ಯಕ್ರಮ ಎಲ್ಲ ಕಲಾರಸಿಕರಿಗೆ, ರಂಗಪ್ರೇಮಿಗಳಿಗೆ ರಸದೌತಣ ನೀಡುವಲ್ಲಿ ಯಶಸ್ವಿಯಾಯಿತು ಎಂದರೆ ಅತಿಶಯೋಕ್ತಿ ಅಲ್ಲ. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಿ ಮೂಡಿ ಬರಲಿ ಹಾಗು ಇಂತಹ ಬಳಗಗಳು ಏಸ್ ಎ ಪಿ ಅಲ್ಲದೆ ವಿಶ್ವದ ಎಲ್ಲ ಕಡೆ ಬೆಳೆಯಲಿ ಎಂಬುದು ಜಸ್ಟ್ ಕನ್ನಡ ತಂಡದ ಹಾರೈಕೆ.

Key words: Kannada Rajyotsava- celebration –sankalpa geleyara balaga