ಹೆಚ್.ಡಿಕೆ ಮತ್ತು ಹೆಚ್.ಡಿ ರೇವಣ್ಣ ವಿರುದ್ಧ ಅಸಮಾಧಾನ: ಕ್ಷೇತ್ರದ ಜನರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಎಂದ ಶಾಸಕ ಎ.ಟಿ ರಾಮಸ್ವಾಮಿ.

ಹಾಸನ,ಫೆಬ್ರವರಿ,27,2023(www.justkannada.in):  ಮಾಜಿ ಸಚಿವ ಎ.ಮಂಜು ಅವರಿಗೆ ಅರಕಲಗೂಡು ಜೆಡಿಎಸ್ ಟಿಕೆಟ್  ನೀಡಲು ಮುಂದಾಗಿರುವ ಹಿನ್ನೆಲೆ ಜೆಡಿಎಸ್ ​ನಿಂದ  ದೂರು ಉಳಿದಿರುವ ಹಾಲಿ ಶಾಸಕ ಎಟಿ ರಾಮಸ್ವಾಮಿ ಕ್ಷೇತ್ರದ ಜನರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದಿದ್ದಾರೆ.

ಹಾಸನದಲ್ಲಿ ಇಂದು ಮಾತನಾಡಿದ ಶಾಸಕ ಎ.ಟಿ ರಾಮಸ್ವಾಮಿ, ನನಗೆ ಗೊತ್ತಿದೆ, ಇದು ರಾಜಕೀಯ ಸಂಕ್ರಮಣ ಕಾಲ. ನಾನು ಒಳ್ಳೆಯವನಾದರೆ ಆಶೀರ್ವಾದ ಮಾಡಿ, ಇಲ್ಲವಾದರೆ ಬೇಡ. ಯಾರಿಗೂ ಅನುಮಾನ ಬೇಡ ನಾನು ಚುನಾವಣೆಗೆ ಸ್ಪರ್ಧೆ ಮಾಡಿಯೇ ಮಾಡುತ್ತೇನೆ. ಹಾಸನದಲ್ಲಿ ಗುಲಾಮಗಿರಿ ಇದೆ . ಕೈಕಟ್ಟಿ ನಿಲ್ಲಬೇಕಿದೆ. ಮನೆಯ ಒಳಗೆ ಕರೆದು ಕೂರಿಸಿ ಮಾತನಾಡಿವ ಸ್ಥಿತಿ ಕೂಡ ಇಲ್ಲ.  ಜನರ ಆಶೀರ್ವಾದದಿಂದ ಗೆದ್ದು ಬರುತ್ತೇನೆ. ಜನರು ಸ್ವಾಭಿಮಾನ ಬೆಳೆಸಿಕೊಳ್ಳಬೇಕಿದೆ. ಎಲ್ಲ ಪಕ್ಷದ ನಾಯಕರು ನನ್ನ ಜೊತೆ ಮಾತನಾಡುತ್ತಿರೋದು ನಿಜ. ಕ್ಷೇತ್ರದ ಜನರ ಜತೆ ಚರ್ಚೆಮಾಡಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.

ಶಾಸಕಾಂಗ ಸಭೆಗೆ ಎ.ಟಿ.ರಾಮಸ್ವಾಮಿ ಬಂದಿಲ್ಲ ಎಂಬ ಹೆಚ್​.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಎ.ಟಿ ರಾಮಸ್ವಾಮಿ, ಹೆಚ್.​​ಡಿ ಕುಮಾರಸ್ವಾಮಿ ಅವರ ಬಗ್ಗೆ ಅಪಾರ ಗೌರವವಿದೆ. ಆದರೆ ಸತ್ಯ ಮರೆಮಾಚಬಾರದು. ಕುಮಾರಸ್ವಾಮಿಯೇ ಶಾಸಕಾಂಗ ಸಭೆಗೆ ಬಂದಿರಲಿಲ್ಲ, ನಾನು ಹೋಗಿದ್ದೆ. ಬೇಕಿದ್ದರೆ ಸಹಿ ಪುಸ್ತಕ ತೆಗೆದು ನೋಡಿ ಎಂದರು.

ಹಾಗೆಯೇ ಹೆಚ್.ಡಿ ರೇವಣ್ಣ ವಿರುದ್ದ ಕಿಡಿಕಾರಿದ ಎ.ಟಿ ರಾಮಸ್ವಾಮಿ, ಕ್ಷೇತ್ರದಲ್ಲಿ ಒಬ್ಬರು ನಾನೇ ಅಭ್ಯರ್ಥಿ ಎಂದು ಸಭೆ ಮಾಡುತ್ತಿದ್ದಾರೆ. ರೇವಣ್ಣ ಅನುಮತಿ ಇಲ್ಲದೆ ಇದೆಲ್ಲವೂ ನಡೆಯಲು ಸಾಧ್ಯವೇ? ಲೋಕಸಭೆ ಅಭ್ಯರ್ಥಿ ಆಯ್ಕೆ ಮಾಡುವಾಗ ಪ್ರಜ್ವಲ್ ಹೆಸರೇ ಇರಲಿಲ್ಲ. ಕಾರಣ ದೇವೇಗೌಡರು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಹೇಳಿರಲಿಲ್ಲ. ಪ್ರಜ್ವಲ್​ ಹೆಸರೇಳದಿದ್ದಕ್ಕೆ ಅಂದಿನಿಂದ ನನ್ನ ಮೇಲೆ ದ್ವೇಷ ಶುರುವಾಯ್ತು. ಹಿರಿಯ ಮುತ್ಸದ್ಧಿಯನ್ನೇ ಮನೆ, ಜಿಲ್ಲೆಯಿಂದ ಆಚೆ ಕಳಿಸಿದವರು ಇವರು. ಇನ್ನು ಇವರ ಮುಂದೆ ನಾನು ಯಾವ ಲೆಕ್ಕ. ಈಗಲೂ ಆ ಹಿರಿಯ ಜೀವ ನೋವಿನಿಂದ ನರಳಾಡುತ್ತಿದೆ ಎಂದು  ಬೇಸರ ವ್ಯಕ್ತಪಡಿಸಿದರು.

Key words: JDS- MLA- AT Ramaswamy – next decision – discussion – people