ಇಂಚಲದ ಪ್ರತಿ ಕುಟುಂಬದಲ್ಲೂ ಸೈನಿಕರು: ಊರಿನ 200ಕ್ಕೂ ಹೆಚ್ಚು ಜನ ಸೈನ್ಯದಲ್ಲಿ, ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ

ಇಂಚಲ(ಬೆಳಗಾವಿ):ಆ-15: ಸವದತ್ತಿ ತಾಲೂಕಿನ ಇಂಚಲ ‘ಶಿಕ್ಷಕರ ತವರೂರು’ ಎಂದೇ ಹೆಸರು ವಾಸಿ. ಈ ಗ್ರಾಮ ದೇಶಸೇವೆಗಾಗಿ ಸೈನಿಕರನ್ನು ಅರ್ಪಿಸುವಲ್ಲಿಯೂ ಅಷ್ಟೇ ಖ್ಯಾತಿ ಪಡೆದಿದೆ. ಭಾರತೀಯ ಸೇನೆಯ ಪ್ರಮುಖ ಹುದ್ದೆಗಳಲ್ಲಿ ಊರಿನ ಕುಡಿಗಳು ಸೇವೆಗೈಯ್ಯುತ್ತಿರುವುದು ವಿಶೇಷ.

ಬೈಲಹೊಂಗಲ ಪಟ್ಟಣದಿಂದ 5 ಕಿ.ಮೀ. ದೂರದಲ್ಲಿ ಇಂಚಲ ಗ್ರಾಮ ಇದೆ. ಅಂದಾಜು 10 ಸಾವಿರ ಜನಸಂಖ್ಯೆ ಹೊಂದಿದ ಗ್ರಾಮದಲ್ಲಿ 200ಕ್ಕಿಂತ ಅಧಿಕ ದೇಶಪ್ರೇಮಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 70 ಸೈನಿಕರು ನಿವೃತ್ತರಾಗಿ ಗ್ರಾಮಕ್ಕೆ ಮರಳಿದ್ದರೆ, ಹಾಲಿ 130 ಯೋಧರು ಭಾರತಾಂಬೆಯ ಸೇವೆಯಲ್ಲಿ ತೊಡಗಿದ್ದಾರೆ! ದೆಹಲಿಯ ಆರ್ವಿು ಪೋಸ್ಟಲ್ ಸರ್ವೀಸ್​ನಲ್ಲಿ ಸಿದ್ಧರಾಮ ಜಂಬಗಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮದ್ರಾಸ್ ರೆಜಿಮೆಂಟ್​ನಲ್ಲಿ ಯಲ್ಲನಗೌಡ ಮಲ್ಲೂರ ಕರ್ನಲ್ ಆಗಿದ್ದಾರೆ. ಅಲ್ಲದೆ, ಮೂವರು ಸುಬೇದಾರ ಮೇಜರ್ ಹಾಗೂ ಎಂಟು ಮಂದಿ ಸುಬೇದಾರ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಸಮಸ್ಯೆಗಳು ಮತ್ತು ಬೇಡಿಕೆಗಳ ಬಗ್ಗೆ ರ್ಚಚಿಸುವ ನಿಟ್ಟಿನಲ್ಲಿ 2006ರಲ್ಲಿ ಶಿವಯೋಗೀಶ್ವರ ಮಾಜಿ ಸೈನಿಕರ ಸಂಘ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡಿದ್ದಾರೆ. ಈವರೆಗೆ ಈ ಸಂಘದಲ್ಲಿ 70 ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ. ಸಂಘದ ಮೂಲಕ ಹಲವು ಸಾಮಾಜಿಕ ಚಟುವಟಿಕೆ ಕೈಗೊಳ್ಳಲಾಗುತ್ತಿದೆ.

ಸ್ವಾತಂತ್ರ್ಯೊತ್ಸವ ಸೇರಿ ವಿಶೇಷ ಸಂದರ್ಭ ಊರಿನ ಶಾಲೆಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳಿದಾಗ, ವಿದ್ಯಾರ್ಥಿಗಳಲ್ಲಿ ಭಾರತೀಯ ಸೇನೆ ಬಗ್ಗೆ ತಿಳಿವಳಿಕೆ ಮೂಡಿಸುತ್ತೇವೆ. ಸೈನಿಕರಾಗುವಂತೆ ಪ್ರೇರಣೆ ತುಂಬುತ್ತೇವೆ.

| ಶಿವಪ್ಪ ಪಟ್ಟಿಹಾಳ ಮಾಜಿ ಸೈನಿಕ

ಒಂದೇ ಕುಟುಂಬದಲ್ಲಿ 13 ಯೋಧರು!

‘ನಮ್ಮ ಮನೆತನದಲ್ಲಿ 13 ಜನ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇವೆ. 7 ಮಂದಿ ನಿವೃತ್ತರಾಗಿದ್ದರೆ, 6 ಮಂದಿ ಕರ್ತವ್ಯದಲ್ಲಿದ್ದಾರೆ. ಇಂಥದ್ದೊಂದು ಅವಕಾಶ ದಕ್ಕಿದ್ದು ನಮ್ಮ ಪುಣ್ಯ’ ಎಂದು ನಿವೃತ್ತ ಸೈನಿಕ ಮಹಾಂತೇಶ ಶಿವಪುತ್ರಪ್ಪ ಬಾಗೇವಾಡಿ ಹೇಳುತ್ತಾರೆ.

ರಕ್ತಗತವಾಗಿ ಬಂದ ದೇಶಸೇವೆ ಗುಣ

ಶೈಕ್ಷಣಿಕವಾಗಿ ಮುಂದುವರಿದ ಇಂಚಲದಲ್ಲಿ ಪ್ರಾಥಮಿಕದಿಂದ ಪದವಿ ಹಂತದವರೆಗಿನ ಶಿಕ್ಷಣ ಲಭ್ಯವಿದೆ. ಶಾಲೆ ಮತ್ತು ಕೌಟುಂಬಿಕ ಹಂತದಲ್ಲಿ ಬಾಲ್ಯದಿಂದಲೇ ಮಕ್ಕಳಲ್ಲಿ ದೇಶಸೇವೆ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ನಿರಂತರವಾಗಿ ನಡೆದುಕೊಂಡು ಬಂದಿದೆ. ಇದೇ ಕಾರಣಕ್ಕೆ, ಯುವಕರು ದೇಶಸೇವೆಯತ್ತ ಆಸಕ್ತಿ ತಳೆಯುತ್ತಿದ್ದಾರೆ. ಈಗ ಸೇನೆ ಸೇರಲು ತುದಿಗಾಲಲ್ಲಿ ನಿಂತ ಯುವಕರಿಗೂ ಕೊರತೆ ಇಲ್ಲ.

ದೇಶಸೇವೆ ಎಂದರೆ ನಮಗೆ ಪಂಚಪ್ರಾಣ. ಒಂದೋ ಶಿಕ್ಷಕನಾಗಿ ಮಕ್ಕಳ ಭವಿಷ್ಯ ಕಟ್ಟಬೇಕು. ಇಲ್ಲದಿದ್ದರೆ ಗಡಿಯಲ್ಲಿ ದೇಶ ಕಾಯಬೇಕೆಂಬುದು ನಮ್ಮ ಮಹದಾಸೆ. ಇದಕ್ಕಾಗಿ ಸೇನೆ ಸೇರಿದ್ದು, ನೆಮ್ಮದಿ ಕಂಡಿದ್ದೇವೆ.

| ಹುಸೇನಸಾಬ್ ವಕ್ಕುಂದ ಅಧ್ಯಕ್ಷ, ಶಿವಯೋಗೀಶ್ವರ ಮಾಜಿ ಸೈನಿಕರ ಸಂಘ, ಬೆಳಗಾವಿ
ಕೃಪೆ:ವಿಜಯವಾಣಿ

ಇಂಚಲದ ಪ್ರತಿ ಕುಟುಂಬದಲ್ಲೂ ಸೈನಿಕರು: ಊರಿನ 200ಕ್ಕೂ ಹೆಚ್ಚು ಜನ ಸೈನ್ಯದಲ್ಲಿ, ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ
inchal-belagavi-soldier-india-army-patriotism-independence-day