ಮಂಡ್ಯದಲ್ಲಿ ಗುಪ್ತಗಾಮಿನಿಯಂತೆ ಸುಮಲತಾ ಅಂಬರೀಷ್ ಕೈ ಹಿಡಿದ ಮತದಾರರು ಯಾರು ಗೊತ್ತ…?

 

ಮೈಸೂರು, ಮೇ 25, 2019 : (www.justkannada.in news) ಒಕ್ಕಲಿಗರ ಭದ್ರಕೋಟೆ ಎನ್ನಿಸಿಕೊಂಡಿದ್ದ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾರ ಗೆಲುವಿಗೆ ಹಲವಾರು ಕಾರಣಗಳಿವೆ. ಈ ಪೈಕಿ ಸದ್ದಿಲ್ಲದೆ ಸುಮಲತಾ ಕೈ ಹಿಡಿದ ಮತಗಳು ಅಂದ್ರೆ ‘ ಅಹಿಂದ ‘ ವರ್ಗದ್ದು.

ಗೌಡರದ್ದೇ ಪ್ರಭಾಲ್ಯವಿರುವ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಸ್ಪರ್ಧಿಸುತ್ತಿದ್ದಾರೆ ಎಂಬುದು ತಿಳಿದೋಡನೆ, ಜೆಡಿಎಸ್ ಮುಖಂಡರು ಉರುಳಿದ ದಾಳವೇ ಜಾತಿಯ ವಿಚಾರ. ಕೆ.ಟಿ.ಶ್ರೀಕಂಠೇಗೌಡ, ಎಲ್.ಆರ್.ಶಿವರಾಮೇಗೌಡ ಸೇರಿದಂತೆ ಅನೇಕರು ಸುಮಲತಾ ಜಾತಿಯನ್ನು ಪ್ರಸ್ತಾಪಿಸಿದರು. ಆಕೆ ಮಂಡ್ಯ ಗೌಡ್ತಿಯಲ್ಲ. ನಾಯ್ಡು ಎಂದು ಪ್ರಚಾರವನ್ನೇ ಮಾಡಿದರು. ಜತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ವಿರುದ್ಧವು ಇದೇ ಅಸ್ತ್ರ ಬಳಿಸಿದರು. ಆಮೂಲಕ ಜಿಲ್ಲೆಯಲ್ಲಿನ ಒಕ್ಕಲಿಗ ಮತಗಳನ್ನು ಕ್ರೂಡೀಕರಿಸಲು ಮುಂದಾದರು. ಇದು ಯಶ ನೀಡುತ್ತದೆ. ಮಗನ ಗೆಲುವು ಶತಸ್ಥಿತ ಎಂದೇ ಸಿಎಂ ಕುಮಾರಸ್ವಾಮಿ ಭಾವಿಸಿದ್ದರು. ಈ ಕಾರಣದಿಂದಲೇ ಅವರು ನಿಖಿಲ್ 2 ಲಕ್ಷ ಮತಗಳ ಲೀಡ್ ನಿಂದ ಗೆಲ್ಲುತ್ತಾನೆ ಎಂದು ಹೇಳಿಕೆ ನೀಡಿದ್ದು.

ಆದರೆ ಈ ಹಂತದಲ್ಲಿ ಜೆಡಿಎಸ್ ಮುಖಂಡರು ಅದರಲ್ಲೂ ಒಕ್ಕಲಿಗ ಸಮುದಾಯದವರು ಒಂದು ಅಂಶವನ್ನು ಮರೆತರು.
ಅದೇನು ಅಂದ್ರೆ, ಪ್ರಬಲವಾಗಿರುವ ಒಂದು ವರ್ಗ ಬಹಿರಂಗವಾಗಿ ಒಗ್ಗೂಡುತ್ತಿದೆ ಎಂಬುದು ತಿಳಿದ ಕೂಡಲೇ ಇತರೆ ಸಮುದಾಯದ ಮತದಾರರು ಪ್ರಬಲ ಅಭ್ಯರ್ಥಿಯ ವಿರುದ್ಧ ಸದ್ದಿಲ್ಲದೆ ಒಗ್ಗೂಡಲು ಆರಂಭಿಸುತ್ತಾರೆ ಎಂಬುದು. ಇದರ ಫಲವೇ ಸುಮಲತಾ ಅಂಬರೀಷ್ ಗೆ ಲಕ್ಷ ಮತಗಳ ಲೀಡ್ ಲಭಿಸಲು ಕಾರಣವಾದದ್ದು. ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಮತಗಳು ಸುಮಲತಾ ಅಂಬರೀಷ್ ಗೆ ಹರಿದು ಬಂತು.

ಜತೆಗೆ ಒಕ್ಕಲಿಗ ಸಮುದಾಯದ ಕೆಲ ಪ್ರಜ್ಞಾವಂತರು, ಜೆಡಿಎಸ್ ಕೈ ಹಿಡಿಯಲಿಲ್ಲ. ಜೆಡಿಎಸ್ ಮುಖಂಡರ ಕೆಳಮಟ್ಟದ ರಾಜಕೀಯಕ್ಕೆ ಬೇಸತ್ತು, ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದು ಸುಮಲತಾರ ಲೀಡ್ ಹೆಚ್ಚಾಗಲು ಕಾರಣವಾಯ್ತು.

ಅಹಿಂದ ವರ್ಗದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಖುದ್ದು ನಿಖಿಲ್ ಪರವಾಗಿ ಬ್ಯಾಟಿಂಗ್ ಮಾಡಿದರು ಅದು ಪ್ರಯೋಜನವಾಗಲಿಲ್ಲ. ಮೈತ್ರಿ ಧರ್ಮದ ಪಾಲನೆ ಹೆಸರಲ್ಲಿ ಸಿದ್ದುಗೆ ನಿಖಿಲ್ ಪರ ಮತ ಯಾಚಿಸುವುದು ಅನಿವಾರ್ಯವಾಗಿತ್ತು. ಆದರೆ ಜಿಲ್ಲೆಯ ಅಹಿಂದ ಮತದಾರರಿಗೆ ಮಾತ್ರನ ನಿಖಿಲ್ ಗೆ ಮತ ಹಾಕುವ ಯಾವುದೇ ಅನಿವಾರ್ಯತೆ ಇರಲಿಲ್ಲ. ಆದ್ದರಿಂದಲೇ ಅವರು ಯಾರ ಮಾತಿಗೂ ಸೊಪ್ಪು ಹಾಕದೆ, ಸದ್ದಿಲ್ಲದೆ ಸುಮಲತಾ ಅಂಬರೀಷ್ ಪರ ಮತ ಹಾಕುವ ಮೂಲಕ ಸ್ವಾಭಿಮಾನ ಪ್ರದರ್ಶಿಸಿದರು.

In mandya OBC voters plays major role in sumalatha ambarish victory. they cast their vote against vokkaliga candidate