ಬೆಂಕಿಯೊಂದಿಗೆ ಸರ್ಕಾರ ಆಟವಾಡುತ್ತಿದೆ: ಹಿಜಾಬ್ ಧರಿಸಲು ಅವಕಾಶ ನೀಡಿ- ಹೈಕೋರ್ಟ್ ಗೆ ಅರ್ಜಿದಾರರ ಪರ ವಕೀಲರಿಂದ ಮನವಿ.

ಬೆಂಗಳೂರು,ಫೆಬ್ರವರಿ,10,2022(www.justkannada.in): ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದು, ರಾಜ್ಯ ಸರ್ಕಾರ ಬೆಂಕಿಯೊಂದಿಗೆ ಆಟವಾಡುತ್ತಿದೆ. ಹಿಜಾಬ್ ಧರಿಸಲು ಅವಕಾಶ ಕೊಡಬೇಕು. ಹಿಜಾಬ್ ನಿಂದ ಬೇರೆಯವರಿಗೆ ಸಮಸ್ಯೆಯಿಲ್ಲ, ಇದು ಅವರವರ ಸಂಪ್ರದಾಯ ಎಂದು ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಮನವಿ ಮಾಡಿದರು.

ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ ಸಿಜೆ ರಿತುರಾಜ್ ಅವಸ್ತಿ, ನ್ಯಾ.ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾ.ಖಾಜಿ ಜೈಬುನ್ನೀಸಾ ಮೊಹಿದ್ದೀನ್ ಅವರನ್ನೊಳಗೊಂಡ ಪೂರ್ಣಪೀಠದಲ್ಲಿ ನಡೆಯುತ್ತಿದೆ.

ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ದೇವದತ್ ಕಾಮತ್, ಹಿಜಾಬ್ ಧರಿಸಲು ಅವಕಾಶ ಕೊಡಬೇಕು. ಹಿಜಾಬ್ ನಿಂದ ಬೇರೆಯವರಿಗೆ ಸಮಸ್ಯೆಯಿಲ್ಲ, ಇದು ಅವರವರ ಸಂಪ್ರದಾಯ. ರಾಜ್ಯ ಸರ್ಕಾರ ಬೆಂಕಿಯೊಂದಿಗೆ ಆಟವಾಡುತ್ತಿದ್ದು, ಸರ್ಕಾರದ ಆದೇಶ ಹಿಜಾಬ್ ಹಕ್ಕಲ್ಲ ಎಂದು ಹೇಳಿದ್ದಾರೆ ಎಂದು ಸರ್ಕಾರದ ವಸ್ತ್ರಸಂಹಿತೆ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಇದೇ ವೇಳೆ ವಕೀಲ ಸಂಜಯ್ ಹೆಗ್ಡೆ ಅವರು ವಾದ ಮಂಡಿಸಿದ್ದು, ಹಿಜಾಬ್ ಧರಿಸುವುದು ಮುಸ್ಲಿಂ ಮಹಿಳೆಯರ ಹಕ್ಕು. ಸಂವಿಧಾನದ ಪ್ರಶ್ನೆಗಳನ್ನು ಹೈಕೋರ್ಟ್ ನಿರ್ಧರಿಸಬೇಕು. ಉಡುಪಿಯ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವೇಳೆ  ಶಾಲೆಯ ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಜಾಬ್ ತೆಗೆಯುವಂತೆ  ಹೇಳಿದ್ದಾರೆ ಈ ಬಗ್ಗೆ ವಿದ್ಯಾರ್ಥಿನಿಯರು ಶಾಲಾ ಅಭಿವೃದ್ಧಿ ಮಂಡಳಿಗೆ ದೂರು ನೀಡಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆ ರಿತುರಾಜ್ ಅವಸ್ತಿ, ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಸಮವಸ್ತ್ರ ಸಂಬಂಧ ನಿಯಮ ಇಲ್ಲ. ಸಮವಸ್ತ್ರದ ಅಗತ್ಯವಿಲ್ಲವೇ..? ಎಂದು ಪ್ರಶ್ನಿಸಿದರು. .

ಸರ್ಕಾರದ ಪರ ವಾದ ಮಂಡಿಸಿದ  ಎಜಿ ಪ್ರಭುಲಿಂಗ ನಾವದಗಿ, ಹಿಜಾಬ್ ವಿವಾದದಿಂದಾಗಿ ರಾಜ್ಯಾದ್ಯಂತ ಗಲಭೆ ವಾತಾವರಣ ನಿರ್ಮಾಣವಾಗಿದೆ. ನಾಳೆವರೆಗೂ ಹೈಸ್ಕೂಲ್, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಕಾಲೇಜು ಆರಂಭಿಸಲು ಸರ್ಕಾರ ಸಿದ್ಧವಿದೆ. ಆದರೆ ಒಬ್ಬರು ಹಿಜಾಬ್, ಇನ್ನೊಬ್ಬರು ಕೇಸರಿ ಶಾಲು ಧರಿಸಲು ಒತ್ತಾಯ ಕೇಳಿಬರುತ್ತಿದೆ. ಇಂತಹ ಸಮಯದಲ್ಲಿ ಕಾಲೇಜು ಆರಂಭಿಸುವುದು ಕಷ್ಟ. ಶಾಲಾ ಅಭಿವೃದ್ಧಿ ಸಮಿತಿ ವಸ್ತ್ರಸಂಹಿತೆಗೆ ಬದ್ಧವಾಗಿರಬೇಕು. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹೇಳಿದರು.

Key words: Hijab -controversy-high court