ಪ್ರಸ್ತುತ ಕೌಶಲ್ಯಗಳಿಗೆ ಹೆಚ್ಚು ಬೇಡಿಕೆ: ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು: ಚಿಂತನೆ, ಸೃಜನಶೀಲತೆ, ಸಹಯೋಗ ಮತ್ತು ಸಂವಹನ ಕೌಶಲ್ಯಗಳಿಗೆ ಪ್ರಸ್ತುತ ಹೆಚ್ಚು ಬೇಡಿಕೆಯಿದೆ. ಮಾತನಾಡುವ ಮೊದಲು ಯೋಚಿಸಿ, ಯೋಚಿಸುವ ಮೊದಲು ಓದಿ ಎಂಬುದನ್ನು ಒತ್ತಿ ಹೇಳಬೇಕಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬುಧವಾರ ಅಂತರ್ ವಿಶ್ವವಿದ್ಯಾಲಯ ಬೋಧಕರ ಶಿಕ್ಷಣ ಕೇಂದ್ರದಿಂದ ಆಯೋಜಿಸಿದ್ದ “ರೀಡಿಂಗ್ ಅಂಡ್ ರಿಪ್ಲೆಕ್ಟಿಂಗ್ ಆನ್ ಟೆಕ್ಸ್ಟ್”, “ಅಂಡ್ ಡಿಫೈಂಗ್ ಡೆಬಕ್ಲೆಸ್” ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಚಿಂತನೆ, ಸೃಜನಶೀಲತೆ, ಸಹಯೋಗ ಮತ್ತು ಸಂವಹನ ಕೌಶಲ್ಯಗಳು ಪಠ್ಯದಾಚೆಗೆ ಯೋಚಿಸುವುದನ್ನು ಕಲಿಸುತ್ತವೆ. ವಿದ್ಯಾರ್ಥಿಗಳಿಗೆ ಈ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕಿದೆ. ಈ ನಿಟ್ಟಿನಲ್ಲಿ ರೀಡಿಂಗ್ ಅಂಡ್ ರಿಪ್ಲೆಕ್ಟಿಂಗ್ ಆನ್ ಟೆಕ್ಸ್ಟ್ ಕೃತಿಯು ಶಿಕ್ಷಕರಿಗೆ ಹೆಚ್ಚು ಸಹಕಾರಿಯಾಗಿದೆ ಎಂದರು.

ಓದುವುದು ಮತ್ತು ಪ್ರತಿಬಿಂಬಿಸುವುದು ಪರಿಣಾಮಕಾರಿಯಾಗಿದೆ. ಎನ್‌ಸಿಟಿಇ 2014ರಿಂದ ಶಿಕ್ಷಕರ ಶಿಕ್ಷಣ ಕಾರ್ಯಕ್ರಮಗಳಿಗಾಗಿ ಪಠ್ಯಗಳನ್ನು ಓದುವುದು ಮತ್ತು ಮರು ಆಯ್ಕೆ ಮಾಡುವುದು ಎಂಬ ಕೋರ್ಸ್ ಅನ್ನು ವೃತ್ತಿಪರ ಸಾಮರ್ಥ್ಯಗಳನ್ನು ಹೆಚ್ಚಿಸುವ ಕೋರ್ಸ್‌ಗಳ ಅಡಿಯಲ್ಲಿ ಸಂಯೋಜಿಸಲಾಗಿದೆ. ಈ ಕೋರ್ಸ್ ಮೂಲಕ ಗುಂಪುಗಳಲ್ಲಿ ಪ್ರತ್ಯೇಕವಾಗಿ ಮತ್ತು ಸಂವಾದಾತ್ಮಕವಾಗಿ ಓದಲು, ಯೋಚಿಸಲು, ಕಲಿಯಲು ವಾತಾವರಣವನ್ನು ಸೃಷ್ಟಿಸುವ ಉದ್ದೇಶವಾಗಿದೆ ಎಂದು ಹೇಳಿದರು.

ಈ ಪುಸ್ತಕಗಳು ಶಿಕ್ಷಕರು ಮತ್ತು ವಿದ್ಯಾರ್ಥಿ ಶಿಕ್ಷಕರ ಅಗತ್ಯಗಳನ್ನು ಪೂರೈಸುತ್ತದೆ. ಸಮುದಾಯವು ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರುತ್ತದೆ ಮತ್ತು ಜೀವನದ ಪ್ರತಿಯೊಂದು ಹಂತದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಕುಟುಂಬ ಮತ್ತು ಸಮುದಾಯದ ಅಗಾಧ ಪ್ರಭಾವದ ಬೆಳಕಿನಲ್ಲಿ ಒಬ್ಬ ವ್ಯಕ್ತಿಯು ಮಾಡುವ ಆಯ್ಕೆಯು ಸೀಮಿತವಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬದಲಾಗುವ ಸಾಮಾಜಿಕ ಪರಿಸ್ಥಿತಿಗಳು, ಸಾಮಾನ್ಯ ವ್ಯಕ್ತಿಯ ಜೀವನವನ್ನು ಸುತ್ತುವರೆದಿರುವ ಸ್ಪರ್ಧಾತ್ಮಕ ವಾತಾವರಣ ಮತ್ತು ಸ್ಥಿರ ಜೀವನ ಹಾಗೂ ಮಧ್ಯಮ ವರ್ಗದ ಕುಟುಂಬದ ಆಕಾಂಕ್ಷೆಗಳನ್ನು ಈ ಪುಸ್ತಕದಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ ಎಂದು ತಿಳಿಸಿದರು.

“ರೀಡಿಂಗ್ ಅಂಡ್ ರಿಪ್ಲೆಕ್ಟಿಂಗ್ ಆನ್ ಟೆಕ್ಸ್ಟ್ ಕೃತಿ ಕುರಿತು ಹೈದರ್‌ಬಾದ್ ಇಂಗ್ಲಿಷ್ ಅಂಡ್ ಫಾರಿನ್ ಭಾಷೆಗಳ ವಿವಿ ನಿವೃತ್ತ ಪ್ರಾಧ್ಯಪಾಕ ಡಾ.ಜಿ.ರಾಜಗೋಪಾಲ್ ಹಾಗೂ ಡಿಫೈಂಗ್ ಡೆಬಕ್ಲೆಸ್ ಕೃತಿ ಕುರಿತು ಪ್ರಾದೇಶಿಕ ಶಿಕ್ಷಣ ಸಂಸ್ಥೆ ಸಹಾಯಕ ಪ್ರಾಧ್ಯಾಪಕ ಡಾ.ಕರುಣಾಕರನ್ ಬಿ.ಶಾಜಿ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಪ್ರಾದೇಶಿಕ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಪ್ರೊ.ವೈ.ಶ್ರೀಕಾಂತ್, ಪ್ರೊ.ವಿ.ಡಿ.ಭಟ್, ಪ್ರೊ.ಜಿ.ವಿ.ಗೋಪಾಲ್ ಇತರರು ಉಪಸ್ಥಿತರಿದ್ದರು.