ಕನ್ನಡದಲ್ಲೇ ಅನುತ್ತೀರ್ಣ!

ಬೆಂಗಳೂರು:ಜೂ-22: ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2019ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಆರು ಸಾವಿರ ವಿದ್ಯಾರ್ಥಿಗಳು ಪ್ರಥಮ ಭಾಷೆ ಕನ್ನಡದಲ್ಲಿ ಅನುತ್ತೀರ್ಣರಾಗಿದ್ದಾರೆ. ಆ ಮೂಲಕ ರಾಜ್ಯದಲ್ಲೇ ವ್ಯಾಸಂಗ ಮಾಡಿ ಕನ್ನಡ ಭಾಷೆಯಲ್ಲಿ ಪಾಸ್ ಆಗಲು ವಿದ್ಯಾರ್ಥಿಗಳು ಕಷ್ಟ ಪಡುತ್ತಿರುವುದು ತಿಳಿದು ಬಂದಿದೆ.

ಪ್ರಥಮ ಭಾಷೆ-5,945, ದ್ವಿತೀಯ ಭಾಷೆಯಲ್ಲಿ 11,806 ಮತ್ತು ತೃತೀಯ ಭಾಷೆಯಲ್ಲಿ 9,141, ಗಣಿತ-21,273, ವಿಜ್ಞಾನ-4,925 ಹಾಗೂ ಸಮಾಜ ವಿಜ್ಞಾನ -10,873 ವಿದ್ಯಾರ್ಥಿಗಳು ಕಡಿಮೆ ಅಂಕಗಳಿಸಿದ್ದಾರೆ. ಆಂಗ್ಲಭಾಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಅನುತ್ತೀರ್ಣರಾಗಿದ್ದಾರೆ ಎಂಬುದು ತಿಳಿದು ಬಂದಿದೆ.

ಮೂರು ಭಾಷೆ ಮತ್ತು ಮೂರು ವಿಷಯ ಸೇರಿ ಒಟ್ಟಾರೆ 6 ವಿಷಯಗಳ ಪರೀಕ್ಷೆಯಲ್ಲಿ 485 ವಿದ್ಯಾರ್ಥಿಗಳು 10ಕ್ಕಿಂತ ಕಡಿಮೆ ಅಂಕಗಳಿಸಿರುವುದು ಶಿಕ್ಷಕರಲ್ಲಿ ಆತಂಕ ಮೂಡಿಸಿದೆ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ ದರೂ ವಿದ್ಯಾರ್ಥಿಗಳು ಶ್ರಮಪಟ್ಟು ವ್ಯಾಸಂಗ ಮಾಡದಿರುವುದು ಶಿಕ್ಷಕರು ಮತ್ತು ಪಾಲಕರಲ್ಲಿ ಬೇಸರ ತಂದಿದೆ.

ಬಹು ಭಾಷಾ ಜನರು ವಾಸಿಸುವ ಬೆಂಗಳೂರಿನಲ್ಲೇ ಹೆಚ್ಚಿನ ವಿದ್ಯಾರ್ಥಿಗಳು ಕನ್ನಡ ಭಾಷೆ ಪಾಸಾಗಲು ಕಷ್ಟ ಪಡುತ್ತಿದ್ದಾರೆ. 34 ಶೈಕ್ಷಣಿಕ ಜಿಲ್ಲೆಗಳ ಅಂಕಿ ಅಂಶಗಳನ್ನು ಗಮನಿಸಿದಾಗ ಬೆಂ.ದಕ್ಷಿಣದಲ್ಲಿ 1176 ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಕಲಬುರಗಿ- 589, ಬೆಂ.ಉತ್ತರ-551 ವಿದ್ಯಾರ್ಥಿಗಳಿದ್ದಾರೆ. ಉತ್ತರ ಕನ್ನಡ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದರು, ಇಲ್ಲಿನ ಅನುತ್ತೀರ್ಣ ವಿದ್ಯಾರ್ಥಿಗಳ ಪ್ರಮಾಣ ಕೇವಲ 16 ಮಾತ್ರ. ಕೊಡಗು-23, ರಾಮನಗರ-28 ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ.

ಎಸ್ಸೆಸ್ಸೆಲ್ಸಿ ಫಲಿತಾಂಶ: 2019ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 8.25 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 6,083,36 ವಿದ್ಯಾರ್ಥಿಗಳು(ಶೇ.73.70) ಉತ್ತೀರ್ಣರಾಗಿದ್ದರು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ.1.77 ಫಲಿತಾಂಶ ಹೆಚ್ಚಳವಾಗಿದೆ. ಮಾಧ್ಯಮವಾರು ಫಲಿತಾಂಶ ಪರಿಶೀಲಿಸಿದಾಗ ಕನ್ನಡದಲ್ಲಿ ಶೇ.67.33 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದಾರೆ. ಆಂಗ್ಲ ಭಾಷೆಯಲ್ಲಿ ಶೇ.81.23 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ವಿದ್ಯಾರ್ಥಿಗಳು ಏಕೆ ಕಡಿಮೆ ಅಂಕಗಳಿಸಿ ಅನುತ್ತೀರ್ಣರಾಗುತ್ತಿದ್ದಾರೆ ಎಂಬುದಕ್ಕೆ ಕಾರಣ ಹುಡುಕಿ ಬೋಧನಾ ಗುಣ ಮಟ್ಟ ಹೆಚ್ಚಿಸಿಕೊಳ್ಳುವಂತೆ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ.

| ವಿ.ಸುಮಂಗಲಾ ನಿರ್ದೇಶಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ

ಕೃಪೆ:ವಿಜಯವಾಣಿ

ಕನ್ನಡದಲ್ಲೇ ಅನುತ್ತೀರ್ಣ!
govts school student fail in kannada