ಜಿ.ಎನ್ ಮೋಹನ್ ಸ್ಪೆಷಲ್: ಇಬ್ಬರು ಸಾಕ್ಷಿಪ್ರಜ್ಞೆಗಳ ನಡುವೆ.

ಬೆಂಗಳೂರು,ಮೇ,26,2021(www.justkannada.in):

ಇಬ್ಬರು ಸಾಕ್ಷಿಪ್ರಜ್ಞೆಗಳ ನಡುವೆ..

‘ನಾನು ಎಚ್ ಎಸ್ ದೊರೆಸ್ವಾಮಿ ಅವರನ್ನು ಭೇಟಿಯಾಗಬೇಕಲ್ಲಾ’ ಎಂದು ಮುಂಬೈನಿಂದ ಕರೆ ಮಾಡಿದ್ದು ಪಿ ಸಾಯಿನಾಥ್. ನಾನು ವಿಜಯಮ್ಮನವರ ಕಡೆ ನೋಡಿದೆ. ಅವರು ಸಾಯಿನಾಥ್ ಬರುತ್ತಾರೆ ಎನ್ನುವುದನ್ನು ಸಂಭ್ರಮವಾಗಿಸಿಕೊಂಡು ದೊರೆಸ್ವಾಮಿ ಅವರಿಗೆ ತಿಳಿಸಿದರು.

ಸಾಯಿನಾಥ್ ಅವರಿಗೆ ೧೦೦ ದಾಟಿದ ಸ್ವಾತಂತ್ರ್ಯ ಯೋಧರ ನೆನಪು ದಾಖಲಿಸುವ ಉತ್ಸಾಹ. ಅವರು ದೇಶದಲ್ಲಿ ಬದುಕುಳಿದಿರುವ ಎಲ್ಲಾ ಶತಾಯುಷಿ ಯೋಧರ ಪಟ್ಟಿ ಮಾಡಿದ್ದರು. ಹಲವು ವರ್ಷಗಳಿಂದ ದೊರೆಸ್ವಾಮಿ ಅವರ ಮಾತು ದಾಖಲಿಸುವ ಬಗ್ಗೆ ನೆನಪಿಸುತ್ತಲೇ ಇದ್ದರು.

‘ಬಹುರೂಪಿ ಬುಕ್ ಹಬ್’ ನೋಡಲೆಂದೇ ಬೆಂಗಳೂರಿಗೆ ಬಂದ ಸಾಯಿನಾಥ್ ತಾವು ಬರೆದ ‘ಬರ ಅಂದ್ರೆ  ಎಲ್ಲರಿಗೂ ಇಷ್ಟ’ ಕೃತಿಯ ಹಿಂದಿನ ಕಥೆಯನ್ನು ಓದುಗರ ಮುಂದೆ ಮೊದಲ ಬಾರಿಗೆ ಬಿಚ್ಚಿಟ್ಟರು. ಹೊರಡುವಾಗ ರಚ್ಛೆ ಹಿಡಿದ ಮಗುವಿನಂತೆ ‘ನಾಳೆಯೇ ದೊರೆಸ್ವಾಮಿ ಅವರನ್ನು ನೋಡಬೇಕು’ ಎಂದರು.

ಅವರು ಹೇಳಿದ ಸಮಯಕ್ಕೆ ದೊರೆಸ್ವಾಮಿ ಅವರ ಮನೆಗೆ ಕಾಲಿಟ್ಟಾಗ ಅವರು ಬಾಗಿಲಿಗೇ ಕಿವಿ ಕೊಟ್ಟು ಕೂತಿದ್ದವರಂತೆ ‘ಬನ್ನಿ ಸಾಯಿನಾಥ್ ನಿಮ್ಮನ್ನು ನೋಡಬೇಕು ಎಂದು ಎಷ್ಟು ದಿನದಿಂದ ಕಾದಿದ್ದೆ’ ಎಂದರು. ಸಾಯಿನಾಥ್ ಅವರದ್ದೂ ಡಿಟೋ ಉತ್ತರ. ಇಬ್ಬರು ದಿಗ್ಗಜರು ಕೈ ಕುಲುಕಿದರು.

ಸಾಯಿನಾಥ್ ಜೊತೆ ಇದ್ದ ನಾನು, ಶ್ರೀಜಾ, ಪ್ರೀತಿ ಸುಮಾರು ಎರಡು ಗಂಟೆಗಳ ಕಾಲ ಸಾಯಿನಾಥ್ ಮತ್ತು ದೊರೆಸ್ವಾಮಿ ಅವರ ನಡುವಿನ ಸಂಭಾಷಣೆಗೆ ಕಿವಿಯಾದೆವು.

ದೊರೆಸ್ವಾಮಿ ಅವರಿಗೆ ಅಂದು ಅದೇನು ಹುಕಿ ಬಂದಿತ್ತೋ ಅವರು ತಮ್ಮ ಹುಟ್ಟಿದ ಊರಿನಿಂದ ಆರಂಭಿಸಿ ತಾವು ಆಗ ಒರಗಿದ್ದ ಹಾಸಿಗೆಯ ದಿನಗಳವರೆಗೆ ಎಲ್ಲವನ್ನೂ ಬಣ್ಣಿಸಿದರು. ಸಾಯಿನಾಥ್ ಅವರಿಗೂ ಅದೇ ಬೇಕಿತ್ತು. ಏಕೆಂದರೆ ಸಾಯಿನಾಥ್ ಅವರು ಮುನ್ನಡೆಸುತ್ತಿರುವ ಗ್ರಾಮೀಣ ಭಾರತದ ದನಿ ಹಿಡಿದಿಡುವ ‘ಪರಿ’ ವೆಬ್ ಪತ್ರಿಕೆಗಾಗಿ ಎರಡು ಕ್ಯಾಮೆರಾಗಳು ಸತತವಾಗಿ ಅದನ್ನು ರೆಕಾರ್ಡ್ ಮಾಡಿಕೊಳ್ಳುತ್ತಿತ್ತು.

ದೊರೆಸ್ವಾಮಿ ಅವರ ಕಣ್ಣು, ಕಿವಿ ಹಾಗೂ ಮಾತು ಎಷ್ಟು ಸ್ಪಷ್ಟವಾಗಿತ್ತೆಂದರೆ ಎಲ್ಲರಿಗೂ ಅಚ್ಚರಿಯಾಗಿತ್ತು. ಅವರ ನೆನಪಿನ ಶಕ್ತಿಯಂತೂ ನಂಬಲಸಾಧ್ಯ.

ಪಿ ಸಾಯಿನಾಥ್ ಹೊರಟು ನಿಂತಾಗ ದೊರೆಸ್ವಾಮಿ ಅವರು ಅವರನ್ನು ಬಿಟ್ಟುಕೊಡಲು ಒಲ್ಲೆ ಎನ್ನುವಂತೆ ಕೈ ಬಿಗಿಯಾಗಿ ಹಿಡಿದರು. ‘ನೀವು ನಮ್ಮ ಸಾಕ್ಷಿಪ್ರಜ್ಞೆ’ ಎಂದರು. ಆಗಲೂ ಸಾಯಿನಾಥ್ ಅವರದ್ದು ಡಿಟೋ ಮಾತು.

ಇಬ್ಬರು ಸಾಕ್ಷಿಪ್ರಜ್ಞೆಗಳ ಪ್ರೀತಿಯ ಮಾತುಕತೆಗೆ ಸಾಕ್ಷಿಯಾಗಿ ನಾವು ಮೂವರೂ ನಿಂತಿದ್ದೆವು.

ಕೃಪೆ….

ಜಿ.ಎನ್ ಮೋಹನ್

Key words: GN Mohan- Special-Between -the two witnesses.