ಜಿ.ಎನ್ ಮೋಹನ್ ಸ್ಪೆಷಲ್: ವಿಜಯಕ್ಕ ತಮ್ಮ ಋಣ ಸಂದಾಯ ಮಾಡಿಯೇ ಬಿಟ್ಟರು…!!

Promotion
ವಿಜಯಕ್ಕ ತಮ್ಮ ಋಣ ಸಂದಾಯ
ಮಾಡಿಯೇ ಬಿಟ್ಟರು…!!
—-
ಅವತ್ತು ನಾನು ನನ್ನ ಕ್ಯಾಮೆರಾ ಕ್ರ್ಯೂ ಜೊತೆಗೆ ಗಾಡಿ ಏರಲು ಸಜ್ಜಾಗಿದ್ದೆ. ಎದುರು ಸಿಕ್ಕವರು ಎಲ್ಲಿಗೆ ಎಂದು ಕೇಳಿದರು. ನಾನು ‘ಅಜ್ಜಿಮನೆ’ಗೆ ಎಂದೆ.
‘ಅಜ್ಜಿಮನೆ’ ಎನ್ನುವುದೊಂದು ಪ್ಲೇ ಹೋಮ್. ತಕ್ಷಣ ಅವರ ಕಣ್ಣು ಮೇಲೆಕೆಳಗಾಯಿತು.
ತಲೆಯ ಮೇಲೆ ಪ್ರಭಾವಳಿ ಇದ್ದವರ ನ್ಯೂಸ್ ಗಳಲ್ಲಿ ಮಾತ್ರ ಇರಬೇಕಾದ ನಾನು ಇದೇನಿದು ‘ಅಜ್ಜಿಮನೆ’ಗೆ ಎಂಬಂತೆ ನೋಡಿದರು.
ನಾನು ಅಜ್ಜಿಮನೆಗೆ ಹೋಗಲು ಇದ್ದ ಕಾರಣವೇ ಅದು.. ಅವರಿಗೆ ತಲೆಯಲ್ಲಿ ಕೋಡು ಇರಲಿಲ್ಲ, ಪ್ರಭಾವಳಿಯೂ ಇರಲಿಲ್ಲ ಎನ್ನುವುದು..
ನಾನು ಅಜ್ಜಿಮನೆಗೆ ಹೋಗದೆ ಇದ್ದರೆ ಅವರು ಏನೇನೂ ಕಳೆದುಕೊಳ್ಳುತ್ತಿರಲಿಲ್ಲ. ಆದರೆ ನಾನು ಬದುಕಿನಲ್ಲಿ ಶಾಲ್ಮಲೆಯಂತೆ ಇನ್ನೂ ನಿಷ್ಕಲ್ಮಶ ಪ್ರೀತಿ ಹರಿಯುತ್ತಿದೆ ಎನ್ನುವ ಸತ್ಯವನ್ನು ಕಂಡುಕೊಳ್ಳದೆ ಹೋಗುತ್ತಿದ್ದೆ.
ಅಜ್ಜಿಮನೆ ಎನ್ನುವುದು ‘ವಿಜಯಕ್ಕ’ ಎಂದೇ ಎಲ್ಲರಿಂದ ಕರೆಯಲ್ಪಡುವ ವಿಜಯಾ ಅವರ ಕೂಸು.
ನಗರದ ದಾವಂತದಲ್ಲಿ ಸಿಕ್ಕು ಒದ್ದಾಡುವವರ ಮಕ್ಕಳಾದರೂ ನೆಮ್ಮದಿಯಿಂದ ಅಜ್ಜಿಮನೆಯಲ್ಲಿರುವಂತೆ ಇರಲಿ ಎಂದು ಹುಟ್ಟುಹಾಕಿದ ತಾಣ ಅದು.
ಇದು ಇದೆ ಎಂದು ಗೊತ್ತಾದ ತಕ್ಷಣವೇ ನಾನು ಆಗ ನಾನು ರೂಪಿಸುತ್ತಿದ್ದ ‘ಹಾಯ್ ಬೆಂಗಳೂರು’ ಸರಣಿಗಾಗಿ ಕಾರು ಏರಿಯೇಬಿಟ್ಟಿದ್ದೆ.
ಅಜ್ಜಿಮನೆ ಒಳಹೊಕ್ಕಾಗ ಎಷ್ಟೊಂದು ಚಿಲಿಪಿಲಿ ಹಕ್ಕಿಗಳು. ಅವರ ಜೊತೆ ಆಡುತ್ತಾ ಹಾಡುತ್ತಾ ಗಂಟೆಗಟ್ಟಲೆ ಕಳೆದುಬಿಟ್ಟೆ.
ಹೀಗೆ ಅಲ್ಲಿ ಕೈಕುಲುಕಿದ್ದ ಅಕ್ಕ ಮತ್ತೆ ಕಾಣಿಸಿಕೊಂಡಿದ್ದು ಒಂದಷ್ಟು ವರ್ಷಗಳ ಹಿಂದೆ ಫೇಸ್ ಬುಕ್ ನಲ್ಲಿ.
ಈಗ ನೋಡಿದರೆ ವಿಜಯಕ್ಕ ಚಾರಣಕಾರ್ತಿ. ಆ ಬೆಟ್ಟದಲ್ಲಿ, ಬೆಳದಿಂಗಳಲ್ಲಿ.. ಎಲ್ಲೆಂದರಲ್ಲಿ ಅವರು ನಿಂತ ಫೋಟೋಗಳೇ. ಇನ್ನೊಂದಷ್ಟು ದಿನ ಬಿಟ್ಟು ನೋಡಿದರೆ ಆಕೆ ಛಾಯಾಗ್ರಾಹಕಿ.
ಅವರ ಕಣ್ಣು ನಾವು ನೋಡದ ಅಂಶಗಳ ಮೇಲೆ ನೆಟ್ಟಿದ್ದು ತಕ್ಷಣ ಗೊತ್ತಾಗಿ ಹೋಗುತ್ತಿತ್ತು.
ಇಂತಹ ವಿಜಯಕ್ಕ ಫೇಸ್ ಬುಕ್ ನಲ್ಲಿ ತಮ್ಮ ಆತ್ಮಕಥೆಯ ತುಣುಕುಗಳೇನೋ ಎನ್ನುವಂತೆ ಒಂದಷ್ಟು ತುಣುಕನ್ನು ಬರೆಯಲಾರಂಭಿಸಿದರು.
ಅವು ನನ್ನನ್ನು ಇನ್ನಿಲ್ಲದಂತೆ ತಾಕಿತು. ಹಾಗಾಗಿ ‘ಅವಧಿ’ಯಲ್ಲಿಯೂ ಕಾಣಿಸಿಕೊಂಡಿತು.
ಆ ನಂತರ ಒಂದು ದಿನ ಇದ್ದಕ್ಕಿದ್ದಂತೆ ಫೋನ್ ಮಾಡಿದ ವಿಜಯಕ್ಕ ನಾನೊಂದು ಶಾರ್ಟ್ ಫಿಲಂ ಮಾಡಿದ್ದೇನೆ ಎಂದರು.
‘ಹೌದಾ..!’ ಎಂದು ನಾನು ಆಶ್ಚರ್ಯದಿಂದ ಬಾಯಿ ತೆಗೆವ ಮುನ್ನವೇ ಕನ್ನಡ, ತುಳು. ಕೊಂಕಣಿ ಮೂರು ಭಾಷೆಯಲ್ಲಿ ಎಂದರು. ನಾನು ನಿಜಕ್ಕೂ ಬೆರಗಾದೆ.
‘ಒಂದು ಮುಷ್ಠಿ ಆಕಾಶ’ ಕಿರುಚಿತ್ರ ಬಿಡುಗಡೆ ಎಂದಾಗ ನಾನು ವಿಜಯಕ್ಕನ ಬೆನ್ನಿಗೆ ನಿಂತುಬಿಟ್ಟೆ.
ಅಷ್ಟು ಉತ್ಸಾಹದ ಬುಗ್ಗೆಯ ಚಿತ್ರವೊಂದು ಹಾಗೆ ಸದ್ದಿಲ್ಲದೇ ಒಂದಷ್ಟು ಜನ ನೋಡಿ ಮುಗಿದುಹೋಗಬಾರದು ಎನ್ನುವುದಷ್ಟೆ ನನ್ನ ಮನಸ್ಸಿನಲ್ಲಿದ್ದದ್ದು.
ಆ ನಂತರ ನೋಡಿದರೆ ಆ ಅದೇ ವಿಜಯಕ್ಕ ಅಡಿಗೆ ಮನೆಯಲ್ಲಿದ್ದಾರೆ. ಅರೆರೆ..!! ಎಂದು ನನ್ನ ಕಣ್ಣು ನಾನೇ ನಂಬದೆ ಅವರ ಪ್ರೊಫೈಲ್ ತಡಕಾಡಿದರೆ ಘಮ್ಮನೆಯ ವಾಸನೆ.
ಏನೆಂದು ನೋಡಿದರೆ ಕೋವಿಡ್ ನಲ್ಲಿ ಎಲ್ಲರೂ ಅಕ್ಷರಶಃ ಕುಸಿದು ಕೂತಿದ್ದಾಗ ಯಾವಾಗಲೂ ಚಾರಣ, ಛಾಯಾಗ್ರಹಣ ಎಂದು ತಿರುಗುತ್ತಿದ್ದ ಅಕ್ಕ ಒಂದಿಷ್ಟೂ ಕಂಗೆಡದೆ ಕುಸಿಯದೆ ಸೌಟು ಹಿಡಿದು ಅಡುಗೆ ಮನೆ ಹೊಕ್ಕಿಯೇಬಿಟ್ಟಿದ್ದರು.
‘ವಿಜ್ಜಿಸ್ ಕಿಚನ್’ ಎನ್ನುವ ಹೆಸರಲ್ಲಿ ಬೇಕಾದವರಿಗೆ ಸಿಹಿ ತಿಂಡಿ ಮಾಡಿ ಕಳಿಸುತ್ತಾ, ಎಲ್ಲರ ಬಾಯಲ್ಲೂ ಸಿಹಿಯೇ ಇರುವಂತೆ ನೋಡಿಕೊಳ್ಳುತ್ತಾ ಉತ್ಸಾಹದ ಬುಗ್ಗೆಯಾಗಿದ್ದರು.
ನಾನು ಮತ್ತೊಮ್ಮೆ ನನ್ನ ಸಲಾಂ ಅರ್ಪಿಸಿದೆ.
ಇದು ನನ್ನ ಮನಸ್ಸಲ್ಲಿತ್ತು. ‘ಅವಧಿ’ ಹೊಸ ರೆಕ್ಕೆ ಪಡೆದು ಹಾರಲು ಸಜ್ಜಾಗುವಾಗ ‘ನಿಮ್ಮ ಕಿಚನ್ ನ ಜಾಹೀರಾತೊಂದನ್ನು ‘ಅವಧಿ’ಯಲ್ಲಿ ಪ್ರಕಟಿಸುತ್ತೇನೆ. ಆದರೆ ಉಚಿತವಾಗಿ’ ಎನ್ನುವ ಕಂಡೀಷನ್ ಮಂಡಿಸಿದೆ.
ಆಗ ಅವರು ಬರೆದದ್ದು ‘ಮೋಹನ್, ಕೆಟ್ಟ ಸುದ್ದಿಯನ್ನು ಹೇಗೆ ಎದುರಿಸಬೇಕು ಎಂದು ನನ್ನ ಮನಸ್ಸಿಗೆ ರೂಢಿಯಾಗಿ ಹೋಗಿದೆ. ಆದರೆ ಒಳ್ಳೆಯ ಸಂಗತಿಯನ್ನು ಎದುರಿಸುವುದು ಅದಕ್ಕೆ ಗೊತ್ತಿಲ್ಲ’ ಅಂತ. ನಾನೂ ಮೌನವಾದೆ.
ಆಮೇಲೆ ವಿಜ್ಜಿಸ್ ಕಿಚನ್ ನ ‘ರಾಯಲ್ ಸ್ವೀಟ್’ ಜಾಹೀರಾತು ‘ಅವಧಿ’ಯೊಳಗೆ ಬಂತು.
ಅಕ್ಕ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದರು. ಅವರಿಗೆ ಸಿಕ್ಕ ಪ್ರೋತ್ಸಾಹದಿಂದಲೋ ಏನೋ ಇದಕ್ಕೆ ಹಣ ತೆಗೆದುಕೊಳ್ಳದೆ ನಾನು ಬಿಡುವುದಿಲ್ಲ ಎಂದು ಹಠ ಹಿಡಿದರು.GN Mohan Special.
‘ನನ್ನ ಹಠಕ್ಕೇನು ಕಡಿಮೆ ಆಯಸ್ಸಿದೆಯೇ’.. ನಾನು ಅದು ಹೇಗೆ ಸಾಧ್ಯ ಎಂದು ಕೂತೆ.
‘ಅವಧಿ’ಯ ತಂಡವೆಲ್ಲವೂ ಗಲ ಗಲ ಸದ್ದು ಮಾಡುತ್ತಾ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಪಾರ್ಸೆಲ್ ಒಂದು ಒಳಗೆ ಇಣುಕಿತು.
ಏನು ಎಂದು ತೆರೆದು ನೋಡಿದರೆ ಅಚ್ಚ ತುಪ್ಪದಲ್ಲಿ ಕರಿದ ಬಾದಾಮ್, ಪಿಸ್ತಾ ಸೇರಿದ್ದ ಸಿಹಿ ತಿಂಡಿಯೊಂದು ಕಣ್ಣು ಹೊಡೆಯುತ್ತಾ ಕುಳಿತಿತ್ತು.
ಅದರ ಪ್ಯಾಕಿಂಗ್ ರೀತಿಯಲ್ಲಿಯೇ ಇದು ‘ರಾಯಲ್ ಸ್ವೀಟ್ಸ್’ನಿಂದ ನೇರ ಬಂದದ್ದು ಎಂದು ಗೊತ್ತಾಗಿ ಹೋಗಿತ್ತು.
ವಿಜಯಕ್ಕ ತಮ್ಮ ಋಣ ಸಂದಾಯ ಮಾಡಿಯೇ ಬಿಟ್ಟಿದ್ದರು…!!