ಜಿ.ಎನ್ ಮೋಹನ್ ಸ್ಪೆಷಲ್ : ಹೆಮ್ಮಿಂಗ್ವೇ ಎಂಬ ಕಡಲಹಕ್ಕಿ

Promotion

ಹೆಮ್ಮಿಂಗ್ವೇ ಎಂಬ
ಕಡಲಹಕ್ಕಿ
—————
ಜಿ ಎನ್ ಮೋಹನ್

ಹವಾನಾಕ್ಕೆ ಅನತಿ ದೂರದಲ್ಲಿರುವ ಹೋಟೆಲೊಂದರಲ್ಲಿ, ಸಂಭ್ರಮವೋ ಸಂಭ್ರಮ.

ನೊಬೆಲ್ ಪ್ರಶಸ್ತಿ ಪಡೆದ ಹೆಮ್ಮಿಂಗ್ವೇ ಅವರ ‘ಓಲ್ಡ್ ಮ್ಯಾನ್ ಅಂಡ್ ಸೀ’ ಕೃತಿಯ ಕೇಂದ್ರ ಪಾತ್ರ ಎಂದೇ ಬಣ್ಣಿಸಲ್ಪಟ್ಟ ಗ್ರೆಗೋರಿಯೋ ಫ್ಯೂಂಟೆಸ್ ಗೆ ನೂರು ತುಂಬುವ ಸಂತಸದಲ್ಲಿ ಭಾಗಿಯಾಗಲು ಮೂಲೆ ಮೂಲೆಗಳಿಂದ ಜನ ಆಗಮಿಸಿದ್ದರು.

ಕ್ಯೂಬಾದಲ್ಲಿ ಜರುಗುತ್ತಿದ್ದ ವಿಶ್ವ ವಿದ್ಯಾರ್ಥಿ ಹಾಗೂ ಯುವಜನ ಸಂಘಟನೆಯ ಉತ್ಸವಕ್ಕೆ ಬಂದ ಪ್ರತಿನಿಧಿಗಳು, ಪತ್ರಕರ್ತರು, ಹೋಟೆಲ್ ಗೆ ಧುಮ್ಮಿಕ್ಕಿದರು. ಫ್ಯೂಂಟೆಸ್ ದೋಣಿಯಾಕಾರದ ಕೇಕ್ ಕತ್ತರಿಸಿದ್ದೇ ತಡ- ಅಲ್ಲಿ ಹರಿದದ್ದು ಹೆಮ್ಮಿಂಗ್ವೇ ನೆನಪು.

ಅರ್ನೆಸ್ಟ್ ಹೆಮ್ಮಿಂಗ್ವೇ ಕ್ಯೂಬಾದ ಎದೆಯ ಮೇಲೆ ಹೆಮ್ಮೆಯಿಂದ ಬೀಗುತ್ತಿರುವ ಪದಕ. ಕ್ಯೂಬಾದ ಮೂಲೆ ಮೂಲೆಯಲ್ಲಿ ಈತನ ನೆನಪು ಹರಡಿ ಹೋಗಿದೆ.

ಅಮೆರಿಕದ ಈ ಸಾಹಿತಿ ಎದೆತುಂಬಿ ಪ್ರೀತಿಸಿದ್ದು ಕ್ಯೂಬಾವನ್ನು.

ಕ್ಯೂಬಾದ ಕಡಲ ತೀರದಲ್ಲಿ ಅಡ್ಡಾಡಿಹೋಗಲು ಬಂದ ಹೆಮ್ಮಿಂಗ್ವೇ ಮತ್ತೆ ಅಮೆರಿಕಾಗೆ ಹಾರಲೇ ಇಲ್ಲ. ಕ್ಯೂಬಾವನ್ನೇ ಮನೆ ಮಾಡಿಕೊಂಡರು. ದಶಕಗಳ ಕಾಲ ಮೀನುಗಾರರೊಂದಿಗೆ ಬೆರೆತು, ಮೀನುಗಾರ ಹೆಮ್ಮಿಂಗ್ವೇ ಆಗಿಹೋದರು.

ಕ್ಯೂಬಾದ ನೆನಪುಗಳ ಖಜಾನೆಯ ಮೇಲೆ ಕೈಯಿಟ್ಟರೆ ಸಾಕು ಹೆಮ್ಮಿಂಗ್ವೇ ಹೆಸರು ಮೇಲೆದ್ದು ಬರುತ್ತೆದೆ. ಕಡಲ ತೀರದ ಮೀನುಗಾರರಿಲಿ, ಬೀಚ್ ಗಳಲ್ಲಿ ಮೈಯೊಡ್ಡಿ ಮಲಗುವವರಿರಲಿ, ವಿಹಾರಕ್ಕೆಂದು ದೋಣಿ ಹತ್ತಿ ತೇಲುವವರಿರಲಿ ಎಲ್ಲರೂ ‘ಇವ ನಮ್ಮವ, ಇವ ನಮ್ಮವ’ ಎನ್ನುತ್ತಾರೆ.

‘ಪಾಪಾ’ ಎಂದರೆ ಸಾಕು ಕ್ಯೂಬನ್ನರ ಮುಖ ಅರಳುತ್ತದೆ. ಅದು ಅವರು ಹೆಮ್ಮಿಂಗ್ವೇಗೆ ಕೊಟ್ಟ ಪ್ರೀತಿಯ ಹೆಸರು. ಹೀಗೆ ಪಾಪಾ ಹೆಮ್ಮಿಂಗ್ವೇ ನೆನಪುಗಳು ಝರಿಯಾಗಿ ಹರಿಯುತ್ತಲೇ ಇದೆ.

ಹೆಮ್ಮಿಂಗ್ವೇ ಬದುಕು ಹಾಗೂ ಬರಹ ಎರಡೂ ಕ್ಯೂಬನ್ನರಿಗೆ ಪ್ರಿಯ. ಸಾಹಿತ್ಯಕ್ಕೆ ಕೈಮುಗಿದು ದಿಢೀರನೆ ಯುದ್ಧ ಭೂಮಿಯಲ್ಲಿ ಸೇನೆಯ ಟ್ರಕ್ ಚಾಲಕನಾದ, ಗುಂಡೇಟು ತಗುಲಿದರೂ ಸೈನಿಕರನ್ನು ಬದುಕಿಸಿದ ಹೆಮ್ಮಿಂಗ್ವೇ ನಿಜ ಅರ್ಥದಲ್ಲಿ ಜನಪರ.

ಹೆಮ್ಮಿಂಗ್ವೇ ನೆನಪನ್ನು ಕ್ಯೂಬಾ ಜತನದಿಂದ ಕಾಯ್ದುಕೊಂಡು ಬಂದಿದೆ. ಹೆಮ್ಮಿಂಗ್ವೇ ಉಂಡ, ಓಡಾಡಿದ, ಮೀನು ಹಿಡಿದ ಜಾಗ, ಕುಡಿದು ಕೇಕೆ ಹಾಕಿದ ನೆಲ, ಇಣುಕಿ ನೋಡಿದ ಕಿಟಕಿ, ಕುಳಿತ ಸ್ಟೂಲ್… ಎಲ್ಲವೂ ಈಗ ಇಲ್ಲಿ ಹೆಮ್ಮಿಂಗ್ವೇ ನೆನಪನ್ನು ಚಿಮ್ಮಿಸುತ್ತದೆ.

ಹವಾನಾದ ಎದೆಯಲ್ಲಿ ಇರುವ ‘ಫ್ಲೋರಿಡಿಟಾ’ ಬಾರ್ ಸದಾ ತನ್ನ ಜಾಹೀರಾತಿನಲ್ಲಿ ಹೆಮ್ಮಿಂಗ್ವೇ ಈ ಬಾರ್ ಗೆ ಬಂದು ರಮ್ ಹಾಗೂ ನಿಂಬೆ ಹುಳಿ ಬೆರೆಸಿ ‘ಡೈಕ್ವಿರಿ’ ಕುಡಿದ ಚಿತ್ರವನ್ನು ಪ್ರಕಟಿಸುತ್ತದೆ.jk-logo-justkannada-logo

1932 ರಿಂದ 1939ರ ವರೆಗೆ ಹೆಮ್ಮಿಂಗ್ವೇ ಉಳಿದುಕೊಂಡಿದ್ದ ‘ಆಯಂಬೋಸ್ ಮುಂಡೋಸ್’ ಹೋಟೆಲ್ ಗೆ ಈಗಲೂ ಜನ ಹೆಮ್ಮಿಂಗ್ವೇ ನೆನಪು ಆಯ್ದುಕೊಳ್ಳಲು ಧಾವಿಸುತ್ತಾರೆ.

ಹಳೆಯ ಹವಾನಾದ ಕಿರಿದಾದ ಓಣಿಗಳಲ್ಲಿ ಇರುವ ‘ಲಾ ಬೊಡೆಕ್ವಿಟಾ ಡೆಲ್ ಮೀಡಿಯೋ’ ಹೋಟೆಲ್ ನ ಕೋಣೆಗಳ ಗೋಡೆಗಳಲ್ಲಿ ಹೆಮ್ಮಿಂಗ್ವೇ ಛಾಯಾಚಿತ್ರಗಳು ತುಂಬಿವೆ.

ಹವಾನಾದ ಪೂರ್ವದಿಕ್ಕಿನಲ್ಲಿರುವ ಕೊಜಿಮಾರ್ ಗ್ರಾಮಕ್ಕೆ ಬಂದರಂತೂ ಎಲ್ಲೆಲ್ಲೂ ಹೆಮ್ಮಿಂಗ್ವೇ.

ಹೆಮ್ಮಿಂಗ್ವೇ ಮತ್ತು ಗ್ರೆಗೋರಿಯೋ ಫ್ಯೂಂಟೆಸ್ ಒಂದೇ ಜೀವ ಎನ್ನುವಂತೆ ಬೆರೆತುಹೋದರು. ನೂರು ತುಂಬಿದ ಫ್ಯೂಂಟೆಸ್ ಹೆಮ್ಮಿಂಗ್ವೇಯ ಬಗ್ಗೆ ಇರುವ ನಡೆದಾಡುವ ನೆನಪಿನ ಸಂಚಿಕೆ.

ಫ್ಯೂಂಟಸ್ ಒಮ್ಮೆ ಹಡಗಿನಲ್ಲಿ ಬರುವಾಗ ಸಮುದ್ರದಲ್ಲಿ ಎದ್ದ ಅಬ್ಬರದ ಅಲೆಗಳ ಮಧ್ಯೆ ಪುಟ್ಟ ದೋಣಿಯಲ್ಲಿ ಗುದ್ದಾಡುತ್ತಿದ್ದವನೊಬ್ಬನನ್ನು ಕಂಡರು. ಹಾಗೂ ಹೀಗೂ ಮಾಡಿ ಅವರ ಜೀವ ಉಳಿಸಿದ್ದಾಯಿತು. ಹಾಗೆ ಉಳಿದಾತ ಹೆಮ್ಮಿಂಗ್ವೇ.

ಜೀವ ಉಳಿಸಿದ ಫ್ಯೂಂಟೆಸ್ ನನ್ನು ‘ದೋಣಿಯ ಚಾಲಕನಾಗಿ ಬಾ’ ಎಂದು ಹೆಮ್ಮಿಂಗ್ವೇ ಬೆಂಬತ್ತಿದ್ದರು. ಫ್ಯೂಂಟೆಸ್ ಒಪ್ಪಿದ್ದೇ ತಡ ಕ್ಯೂಬಾವನ್ನು ಸುತ್ತುವರಿದಿರುವ ಕೆರೆಬ್ಬಿಯನ್ ಸಮುದ್ರದ ಎಲ್ಲೆಡೆ ಇವರು ಮೇಲಿಂದ ಮೇಲೆ ಕಂಡರು.

ಹೆಮ್ಮಿಂಗ್ವೇಯ ‘ಪೈಲಾರ್’ ದೋಣಿಗೆ ಸುಸ್ತೇ ಇರಲಿಲ್ಲ.

ದೋಣಿಯಲ್ಲಿ ಹೋಗುವಾಗ ಫ್ಯೂಂಟಸ್ ಸಮುದ್ರದ ಅಲೆಗಳ ಮಧ್ಯೆ ಗುದ್ದಾಡುವ ಮೀನುಗಾರರ ಕಥೆ ಹೇಳುತ್ತಾ ಹೋದರು. ತಮ್ಮ ಜೀವನವನ್ನು ಬಣ್ಣಿಸಿದರು. ಹೆಮ್ಮಿಂಗ್ವೇ ಸಹ ಹತ್ತು ಹಲವರೊಂದಿಗೆ ಬೆರೆತು, ಸಾಕಷ್ಟು ಅರಿತರು.

ಹೆಮ್ಮಿಂಗ್ವೇ ನೆನಪಿನ ಚೀಲದಿಂದ ಒಂದೊಂದೇ ಕಾದಂಬರಿಗಳು ಈ ಬದುಕನ್ನು ಆಧರಿಸಿ ಹೊರ ಜಿಗಿದವು. ‘ಐಲ್ಯಾಂಡ್ ಇನ್ ದಿ ಸೀ’ ಅಷ್ಟು ಸಾಕಾಗಿತ್ತು.

ನೊಬೆಲ್ ಸಾಹಿತ್ಯ ಪ್ರಶಸ್ತಿ ಕೊಜಿಮಾರಿನ ಕಡಲ ತೀರಕ್ಕೆ ಬಂತು.

ಹೆಮ್ಮಿಂಗ್ವೇ ‘ನಾನು ಕೊಜಿಮಾರೋನ ಪ್ರಜೆ’ ಎಂದು ಹೆಮ್ಮೆಯಿಂದ ಬಣ್ಣಿಸಿಕೊಳ್ಳುತ್ತಿದ್ದರು.

ಕಡಲು, ಇಲ್ಲಾ ಕೊಜಿಮಾರೋನ ಬಾರ್ ಹೆಮ್ಮಿಂಗ್ವೇಯ ಪ್ರೀತಿಯ ತಾಣ. ಸಮುದ್ರದ ಕಡೆಗೆ ಮುಖಮಾಡಿ ನಿಂತ ‘ಲಾ ಥೆರ್ರಾಜ್’ ಬಾರ್ ನ ಕಿಟಕಿಯಲ್ಲಿ ನಿಂತು ಮನೆಗೆ ಹೋಗುತ್ತಿದ್ದ ಮೀನುಗಾರರನ್ನು ಹೆಮ್ಮಿಂಗ್ವೇ ‘ರಂ’ ಕುಡಿಯಲು ಕೈಬೀಸಿ ಕರೆಯುತ್ತಿದ್ದರು.

ಈಗ ಈ ಕಿಟಕಿ ಪ್ರವಾಸಿಗರ ಪ್ರಮುಖ ತಾಣ. ಈ ಕಿಟಕಿಯಿಂದ ಕೈಬೀಸಿ ಫೋಟೋ ತೆಗೆಸಿಕೊಳ್ಳದ ಪ್ರವಾಸಿಗನೇ ಇಲ್ಲ.

ಕೊಜಿಮಾರೋನ ಪ್ರತೀ ಮೀನುಗಾರರ ಮನೆಯ ಗೋಡೆಯಲ್ಲಿ ಈ ‘ಪಾಪಾ’ ಇನ್ನೂ ನಗುತ್ತಿದ್ದಾನೆ. ಹೆಮ್ಮಿಂಗ್ವೇ ನೆನಪು ಎಷ್ಟು ಸಿಹಿಯಾದದ್ದೆಂದರೆ ಕೊಜಿಮಾರೋನ ಕಡಲ ಕಿನಾರೆಯಲ್ಲಿ ಮೀನುಗಾರರೆಲ್ಲಾ ಸೇರಿ ಸಮುದ್ರದತ್ತ ಮುಖಮಾಡಿ ನಿಂತ ಹೆಮ್ಮಿಂಗ್ವೇ ಪ್ರತಿಮೆಯನ್ನು ನಿಲ್ಲಿಸಿದ್ದಾರೆ.

ಫ್ಯೂಂಟೆಸ್ ಅಂತೂ ತಮ್ಮ ನೆನಪಿನ ಗಣಿಯಿಂದ ನೆನಪು ಹೆಕ್ಕುತ್ತಲೇ ಇರುತ್ತಾರೆ.

ಎರಡನೇ ಮಹಾಯುದ್ಧ ನಡೆಯುವಾಗ ಈ ಇಬ್ಬರೂ ನಾಜಿಗಳ ಸಬ್ ಮೇರಿನ್ ಗಳನ್ನು ಪತ್ತೆ ಹಚ್ಚಿದ್ದನ್ನು ಹೆಮ್ಮೆಯಿಂದ ಬಣ್ಣಿಸುತ್ತಾರೆ. ಈ ನೆನಪೇ ‘ಐಲ್ಯಾಂಡ್ಸ್ ಇನ್ ದಿ ಸ್ಟ್ರೀಮ್’ ಕಾದಂಬರಿಗೆ ಪ್ರೇರಣೆಯಾಯಿತು.

ಹೆಮ್ಮಿಂಗ್ವೇ ಸದಾ ಫ್ಯೂಂಟೆಸ್ ರೊಂದಿಗೆ, ‘ನಿನಗಾಗಿ ಮತ್ತು ನನಗಾಗಿ ಒಂದು ಕಾದಂಬರಿ ಬರೆಯುತ್ತೇನೆ’ ಎನ್ನುತ್ತಿದ್ದರು. ಈ ಕಾರಣಕ್ಕಾಗಿಯೇ ‘ಎ ಫೇರ್ ವೆಲ್ ಟು ಆರ್ಮ್ಸ್’ ಹೊರಬಂತು.GN Mohan Special.

ಹೆಮ್ಮಿಂಗ್ವೇ ಅವರಿಗೆ ನೊಬೆಲ್ ಮುಕುಟ ತಂದುಕೊಟ್ಟ ‘ದಿ ಓಲ್ಡ್ ಮ್ಯಾನ್ ಅಂಡ್ ದಿ ಸೀ’ಯ ಓಲ್ಡ್ ಮ್ಯಾನ್ ಈ ಫ್ಯೂಂಟೆಸ್ ಅವರೇ ಎಂದು ಜಗತ್ತಿನಾದ್ಯಂತ ಚರ್ಚೆಯಾಗಿದೆ. ಆದರೆ, ಫ್ಯೂಂಟೆಸ್ ಹೇಳುವುದೇ ಬೇರೆ…

ಹೆಮ್ಮಿಂಗ್ವೇ ಮತ್ತು ಫ್ಯೂಂಟೆಸ್ ಇಬ್ಬರೂ ಒಮ್ಮೆ ದೋಣಿಯಲ್ಲಿ ಹೋಗುವಾಗ ಕ್ಯೂಬಾದ ಹಡಗು ಕಟ್ಟೆಯ ಆಚೆ ದೋಣಿಯೊಂದರಲ್ಲಿ ಒಬ್ಬ ಮುದುಕ ಹಾಗೂ ಬಾಲಕನನ್ನು ಕಂಡರು. ಮುದುಕ ಆಗ ತಾನೇ ಹಿಡಿದ ಮರ್ಲಿನ್ ಮೀನನ್ನು ಶಾರ್ಕ್ ನ ಬಾಯಿಂದ ತಪ್ಪಿಸಲು ಹೆಣಗಾಡುತ್ತಿದ್ದ.

ಇದನ್ನು ನೋಡಿದ ಹೆಮ್ಮಿಂಗ್ವೇ ದೋಣಿ ಅಲ್ಲಿಗೆ ಹೋಯಿತು.

ಮುದುಕನನ್ನು ರಕ್ಷಿಸಲು ಹೋದ ಹೆಮ್ಮಿಂಗ್ವೇಯನ್ನು ಆತ ನಿಂದಿಸಿದ. ಹೆಮ್ಮಿಂಗ್ವೇ ಹೇಳಿದರು. ‘ಆತ ನಾವು ಮೀನು ಕದಿಯಲು ಬಂದಿದ್ದೇವೆ ಎಂದು ಭಾವಿಸಿರಬೇಕು, ಬೇಡ ನಡಿ’ ಇದು ‘ಓಲ್ಡ್ ಮ್ಯಾನ್’ಗೆ ಎಳೆಯಾಯಿತು.

ಹೆಮ್ಮಿಂಗ್ವೇಯೇ ಒಮ್ಮೆ ‘ಕೊಜಿಮಾರ್ ನ ನಾವಿಕರ ನೆನಪುಗಳನ್ನು ಆಧರಿಸಿ ಈ ಪುಸ್ತಕ ಬರೆದಿದ್ದೇನೆ’ ಎಂದಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ.

ಫ್ಯೂಂಟೆಸ್ ರ ಕಣ್ಣು ಮಂಜಾಗುವುದು ಹೆಮ್ಮಿಂಗ್ವೇ ಅವರ ಮನೆಯಿಂದ ಬಂದ ಒಂದು ಪತ್ರ ‘ಎಲ್ ಪೈನಾರ್’ ದೋಣಿಯನ್ನು ನಿಮಗೆ ಕೊಡಬೇಕೆಂದು ಹೆಮ್ಮಿಂಗ್ವೇ ವಿಲ್ ನಲ್ಲಿ ಬರೆದಿದ್ದಾರೆ ಎಂಬ ಸುದ್ದಿ ತಂದಾಗ.

ಹೆಮ್ಮಿಂಗ್ವೇ 1961ರಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ಹೆಮ್ಮಿಂಗ್ವೇ ಈಗಲೂ ಕ್ಯೂಬಾದಲ್ಲಿ ಜೀವಂತ ನೆನಪು. ಹೆಮ್ಮಿಂಗ್ವೇ ಬದುಕಿದ್ದ ಕೊಜಿಮಾರ್ ನ ಮನೆ ಈಗ ಹೆಮ್ಮಿಂಗ್ವೇ ಮ್ಯೂಸಿಯಂ ಆಗಿ ಬದಲಾಗಿದೆ. ಫ್ಯೂಂಟೆಸ್ ಗೆ ನೀಡಿದ ‘ಎಲ್ ಪೈನಾರ್’ ದೋಣಿ ಈ ಸಂಗ್ರಹಾಲಯದಲ್ಲಿ ಜನರ ಮುಂದೆ ಕಥೆಗಳನ್ನು ಹರಡುತ್ತಿದೆ.

ಹೆಮ್ಮಿಂಗ್ವೇ ನೆನಪಿಗಾಗಿ ಅಂತಾರಾಷ್ಟ್ರೀಯ ಮರ್ಲಿನ್ ಮೀನು ಹಿಡಿಯುವ ಸ್ಪರ್ಧೆಯನ್ನು ನಡೆಸುತ್ತಾ ಬಂದಿದೆ. ಮೀನುಗಾರರು ನಡೆಸುವ ಉತ್ಸವಗಳು ಹೆಮ್ಮಿಂಗ್ವೇ ಹೆಸರನ್ನು ಹೊತ್ತಿವೆ. ಹತ್ತು ಹಲವು ಉತ್ಸವಗಳಲ್ಲಿ ಹೆಮ್ಮಿಂಗ್ವೇ ಟ್ಯಾಬ್ಲೋಗಳು ಕಾಣಿಸಿಕೊಳ್ಳುತ್ತವೆ.

ಹೆಮ್ಮಿಂಗ್ವೇ ಪ್ರೀತಿಸಿದ ಅದೇ ‘ರಂ’, ಅದೇ ಊಟ ಈಗ ಪ್ರವಾಸಿಗರ ಪ್ರಿಯವಾದ ಆಹಾರವಾಗಿದೆ.

1929ರಲ್ಲಿ ಕ್ರಾಂತಿಯಾದ ವರ್ಷವೇ ಹೆಮ್ಮಿಂಗ್ವೇ ಹೆಸರಿನಲ್ಲಿ ಜರುಗುವ ಮರ್ಲಿನ್ ಮೀನು ಹಿಡಿಯುವ ಸ್ಪರ್ಧೆಯಲ್ಲಿ ಫಿಡೆಲ್ ಕ್ಯಾಸ್ಟ್ರೋ 215 ಕೆ.ಜಿ. ತೂಕದ ಮೀನು ಹಿಡಿದು ಟ್ರೋಫಿ ಬುಟ್ಟಿಗೆ ಹಾಕಿಕೊಂಡಿದ್ದರು.

ಹೆಮ್ಮಿಂಗ್ವೇ ಫಿಡೆಲ್ ಕ್ಯಾಸ್ಟ್ರೋಗೆ ಟ್ರೋಫಿ ನೀಡುತ್ತಿರುವ ಚಿತ್ರಗಳಂತೂ ಎಲ್ಲೆಡೆ ಹರಡಿಹೋಗಿವೆ.