ಜಿ.ಎನ್ ಮೋಹನ್ ಸ್ಪೆಷಲ್ : ಥರಾವರಿ ಸೋಪ್ ಮಧ್ಯೆ ಅಂಟುವಾಳದ ಸಿಪ್ಪೆ…

kannada t-shirts

ಥರಾವರಿ ಸೋಪ್ ಮಧ್ಯೆ
ಅಂಟುವಾಳದ ಸಿಪ್ಪೆ…
—-
ಎಣಿಸಿದೆ. ಕರೆಕ್ಟಾಗಿ ಎಣಿಸಿದೆ –ಒಂದು ಎರಡು ಮೂರು..
ಹೌದು, ಮೂರು ಸೋಪಿತ್ತು.jk-logo-justkannada-logo

ಎಲ್ಲದರ ಪ್ಯಾಕ್ ಓಪನ್ ಆಗಿತ್ತು. ಬಳಸಿದ್ದಾರೆ ಅನ್ನೋದಕ್ಕೆ ಪ್ರೂಫ್ ಇತ್ತು. ಏನು ಪ್ರಾಬ್ಲಂ ಇವರ ಮನೇಲಿ ಅಂತಾ ಯೋಚ್ನೆ ಆಯ್ತು.

ಆಗ ನಾನು ಆರನೇದೋ ಏಳನೇದೋ ಕ್ಲಾಸಲ್ಲಿದ್ದೆ. ಅಣ್ಣನ ಬಾಲ ಹಿಡಕೊಂಡು ಓಡಾಡೋದೇ ಕಸಬು. ಧಾರವಾಡದಲ್ಲಿದ್ದ ಅಣ್ಣ ‘ನಮ್ಮ ಕ್ಲಾಸ್ ಮೇಟ್ ಮನೆಗೆ ಕರ್ಕೊಂಡು ಹೋಗ್ತೀನಿ ಬನ್ನಿ’ ಅಂತ ಕರ್ಕೊಂಡು ಹೋದ್ರು.

ಆವಾಗ್ಲೇ ಈ ಶಾಕ್ ಎದುರಾದದ್ದು.

ಬಚ್ಚಲ ಮನೆಗೆ ಹೋದಾಗ್ಲೇ ಈ ಮೂರು ಸೋಪ್ ಕಂಡಿದ್ದು. ಬಚ್ಚಲ ಮನೆ ಅಂದ್ರೆ ಗೋಪಾಲ್ ಟೂಥ್ ಪೌಡರ್, ಮೈ ತಿಕ್ಕೋಕೆ ಒಂದು ಒರಟು ಕಲ್ಲು, ಮುಖ ತೊಳೆಯೋದಕ್ಕೆ ಒಂದು ಸೋಪು, ಅಂತಾ ಅಂದ್ಕೊಂಡಿದ್ದ ನಮಗೆ, ಮೂರು ಟೂಥ್ ಬ್ರಷ್, ಮೂರು ಸೋಪು ಶಾಕ್ ತಂದಿತ್ತು.

ಗಂಡ, ಹೆಂಡತಿ ಒಂದು ಮಗು ಇದ್ದ ಮನೆ ಅದು. ಯಾವುದನ್ನು ನೋಡಿದ್ರೂ ಮೂರೊಂದ್ಲ ಮೂರು ಅನ್ನೋ ಪರಿಸ್ಥಿತಿ. ನಮ್ಮನೇಲಿ ಅಪ್ಪ, ಅಮ್ಮ, ಏಳು ಜನ ಮಕ್ಕಳು. ಆದ್ರೆ ಸೋಪು ಮಾತ್ರ ಒಂದೇ.

ದೇವ್ರು ಒಂದು ಕ್ಷಣ ನನ್ನ ತಲೆ ತೆಗ್ದು ಅಲ್ಲಿ ಕ್ವೆಶ್ಚನ್ ಮಾರ್ಕ್ ಇಟ್ಟಿದ್ದಾನೇನೋ ಅನ್ನುವಷ್ಟು ಗೊಂದಲ. ಆಮೇಲೆ ನಾನೇ ಡಿಸೈಡ್ ಮಾಡ್ಕೊಂಡೆ. ಅವ್ರ ಮನೇಲಿ ಎಲ್ಲರಿಗೂ ಕಾಯಿಲೆ ಇದೆ. ಅದ್ಕೆ ಒಬ್ರು ಸೋಪು ಒಬ್ರು ಬಳಸಲ್ಲ ಅಂತಾ.

ಮೊನ್ನೆ ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಶಾರೂಕ್ ಬಟ್ಟೆ ಬಿಚ್ಚಿ ಗುಲಾಬಿ ಪಕಳೆ ಹರಡಿಕೊಂಡು ಬಾತ್ ಟಬ್ ನಲ್ಲಿ ಕೂತ್ಕೊಂಡಿದ್ದನ್ನ ನೋಡಿದ್ನಲ್ಲ, ಫಳ್ಳಂತ ಇದು ತಲೆಗೆ ಬಂತು.

ಆಗ ಬಚ್ಚಲ ಮನೆ ಬಾತ್ ರೂಂ ಆಗಿರಲಿಲ್ಲ. ತೆಂಗಿನಕಾಯಿ ಚಿಪ್ಪು, ಸೀಮೆ ಎಣ್ಣೆ, ಊದು ಕೊಳವೆ, ಬೆಂಕಿ ಒಲೆ ಮಾಯವಾಗಿ ವಾಟರ್ ಹೀಟರ್ ಬಂದಿರಲಿಲ್ಲ. ಒಲೆಯಿಂದೆದ್ದ ಹೊಗೆ ಗೋಡೆಯನ್ನೆಲ್ಲ ಕಪ್ಪು ಮಾಡಿತ್ತು. ಅದು ಹೋಗಿ ಟೈಲ್ಸ್ ಬಂದಿರಲಿಲ್ಲ.

ಹಾಗಾಗೀನೇ ಶಾರೂಕ್ ನಮ್ಮನೆಯ ಬಚ್ಚಲ ಮನೆಗೆ ಬರಲೇ ಇಲ್ಲ. ಅಥ್ವಾ ನಮ್ಮ ಬಚ್ಚಲ ಮನೆಯಿಂದ ಯಾವ ಶಾರೂಕ್ಕೂ ಹೊರಗಡೆ ಹೋಗ್ಲಿಲ್ಲ.

ಯಾಕೋ ಗೊತ್ತಿಲ್ಲ. ಈವಾಗ ಸಿಇಟಿ, ಐಐಎಂ, ಐಐಎಸ್, ಲಾ ಸ್ಕೂಲು, ಮೌಂಟ್ ಕಾರ್ಮೆಲ್, ಡಿಡಿಎಲ್ ಜೆ, ಫೋರಂ ಮಾಲ್, ಐ ಮ್ಯಾಕ್ಸ್ ಗೂ ಸೋಪಿಗೂ ಏನೋ ಒಂಥರಾ ಕನೆಕ್ಷನ್ ಇದೆ ಅನ್ಸುತ್ತೆ.

‘ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೆ ಆರೋಗ್ಯ.. ಲೈಫ್ ಬಾಯ್ ಲೈಫ್ ಬಾಯ್…’ ಅನ್ನೋ ಹಾಡು.. ಸಾರಿ, ಜಿಂಗಲ್ ನಮ್ಗೆ ಸಾಕಾಗಿತ್ತು. ಅದನ್ನ ಸೋಪಂತ ಕರದ್ರೂ ನಡೀತಿತ್ತು. ಇಟ್ಟಿಗೆ ಅಂತ ಕರೆದ್ರೂ ಆಗ್ತಿತ್ತು. ಆದ್ರೆ ಈಗ ಎಲ್ಲಾ ಥರಾ ಥರಾ.GN Mohan Special.

ಐಶ್ವರ್ಯ ರೈನ ನೋಡೋಕ್ಕೆ ಈಗ ಯಾರಿಗೂ ಟೈಮಿಲ್ಲ. ಆದ್ರಿಂದ ತಾವೇ ಐಶ್ವರ್ಯ ರೈ ಆಗೋದಕ್ಕೆ ಇಷ್ಟಪಡ್ತಾರೆ ಅಂತಾ ಲಕ್ಸ್ ಸೋಪ್ ಬಗ್ಗೆ ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಲೇಖನ ಇತ್ತು.

ಅರೆ! ಬೇಕಾಗಿರೋ ಸೋಪ್ ಹಾಕ್ಕೊಂಡು ನಮಗೆ ಬೇಕಾಗಿರೋ ಥರಾ ಬದಲಾಗೋದು ಸಾಧ್ಯಾನಾ? ಹಾಗಾದ್ರೆ ಕುರೂಪಿಯಾಗಿದ್ದಳಲ್ಲ, ಅವಳು ಸೋಪ್ ಹಚ್ಕೊಂಡಿದ್ರೆ ಸಾಕಾಗಿತ್ತು.

ಶಾಪ ವಿಮೋಚನೆಗೆ ಯಾಕೆ ರಾಜಕುಮಾರ ಬರ್ಲಿ ಅಂತಾ ಕಾಯ್ಬೇಕಾಗಿತ್ತು? ಕಪ್ಪೆ, ರಾಜಕುಮಾರ ಆಗಿ ಬದಲಾಗೋದಕ್ಕೆ ಯಾಕೆ ಸುಂದರಿ ಟಚ್ ಗೇ ಕಾಯ್ಬೇಕಾಗಿತ್ತು?
ಸೋಪುಗಳೆಲ್ಲ ಆ ಕಾಲ್ದಲ್ಲೇ ಇದ್ದಿದ್ರೆ ಪಾಪ, ಎಷ್ಟೊಂದು ಅಜ್ಜಿ ಕಥೆಗಳು ಮಟಾಶ್ ಆಗಿ ಹೋಗ್ತಿತ್ತು.

ಸೋಪುಗಳ ಸ್ಕೋಪು ಈಗ ಜಾಸ್ತಿ ಆಗಿದೆ. ನೀವು ಮೈಸೂರ್ ಸ್ಯಾಂಡಲ್, ಚಂದ್ರಿಕಾ, ಹಮಾಮ್ ಬಳಸಿದ್ರೆ ಹಳ್ಳಿ ಗುಗ್ಗು ಅನ್ನೋ ಥರಾ ನೋಡ್ತಾರೆ. ಡೆಟಾಲ್, ಮೆಡಿಮಿಕ್ಸ್ ಬಳಸಿದ್ರೆ ಪೇಶಂಟ್, ಲಕ್ಸ್, ಲಿರಿಲ್ ಬಳಸಿದ್ರೆ ಎಜುಕೇಟೆಡ್, ಎವಿಟಾ, ಡೋವ್ ಬಳಸಿದ್ರೆ ಗ್ರೇಟ್.

ಯಾಕೋ ಗೊತ್ತಿಲ್ಲ. ಒಂದು ಮನೇಲಿ ಮೂರು ಸೋಪು ಅನ್ನೋ ಶಾಕ್ ನನ್ನಲ್ಲಿ ಎಷ್ಟು ಆಳಕ್ಕಿಳಿದುಬಿಟ್ಟಿದೆ ಅಂದ್ರೆ, ಯಾರದಾದ್ರೂ ಬಚ್ಚಲ ಮನೆಗೋಗೋ ಸಂದರ್ಭ ಬಂದ್ರೆ ಕಣ್ಣು ಆಟೋಮ್ಯಾಟಿಕ್ ಆಗಿ ಸೋಪ್ ಟ್ರೇ ಕಡೆ ನೋಡುತ್ತೆ. ಆಮೇಲೆ ಯಾವ ಸೋಪು ಅಂತಾ ನೋಡುತ್ತೆ.

ಈಗಂತೂ ಯಾರ ಮನೆಗೋಗ್ಲಿ, ಬಚ್ಚಲ ಮನೆ ಅನ್ನೋ ಬದ್ಲು ಫೋರಂ ಮಾಲ್ ಗೆ ಹೋಗಿದ್ದೀನೇನೋ ಅಂತ ಕನ್ ಫ್ಯೂಸ್ ಆಗುತ್ತೆ. ಟೂಥ್ ಬ್ರಷ್, ಹೇರ್ ಆಯಿಲ್, ಹೇರ್ ಕ್ರೀಮ್, ಟಿಶ್ಯೂಪೇಪರ್, ಟವಲ್..

ನಮ್ಮಮ್ಮ ಯಾವಾಗ್ಲೂ ಹೇಳ್ತಿದ್ರು. ಹುಟ್ಟಿದ ಪ್ರತಿಯೊಬ್ರಿಗೂ ಒಂದು ಜೋಡೀನ ದೇವ್ರು ಗಂಟು ಹಾಕಿರ್ತಾನೆ ಅಂತ. ಶಿವನೇ ಕನ್ ಫ್ಯೂಸ್ ಆದ್ನೇನೋ. ಅಥವಾ ಕಾಲವೇ ಹಾಗಾಗೋಯ್ತೇನೋ. ಹುಟ್ಟಿದ ಎಲ್ರಿಗೂ ಒಂದು ಜೋಡಿ ಹುಡ್ಕೋ ಹಾಗೆ ಒಂದು ಸೋಪು, ಒಂದು ಟವಲ್ಲು, ಒಂದು ಹೇರ್ ಕ್ರೀಮು… ಪಾಪ, ಶಿವನಿಗೂ ಕಲಿಗಾಲ ಬಂತಲ್ಲಪ್ಪಾ!

ಮೊನ್ನೆ ಇನ್ನೇನು ರೈಲು ಹೊರಡ್ಬೇಕು. ತುಂಬಾ ದೂರ ಹೋಗೋದಿತ್ತು. ಕಣ್ಣಲ್ಲಿ ನೀರು ತುಂಬ್ಕೊಂಡು ನಡುಗ್ತಿದ್ದ ತುಟೀನಾ ಕಂಟ್ರೋಲ್ ಮಾಡ್ತಾ, ‘ಐ ಮಿಸ್ ಯೂ’ ಅಂತ ಹೇಳಿದ ಸಂಗಾತಿ ನೆನಪಿಗೆ ಅಂತ ಕೊಟ್ಟಿದ್ದು ಒಂದು ಕವರ್.

ಚುಕುಬುಕು ರೈಲಲ್ಲಿ ಗಂಟೆಗಟ್ಲೆ ಪ್ರಯಾಣ ಮಾಡಿ ಮನೇಗೆ ಬಂದ ತಕ್ಷಣ ಓಪನ್ ಸೆಸೇಮ್ ಅಂತ ಮಂತ್ರ ಜಪಿಸಿ ಕವರ್ ಬಿಚ್ಚಿ ನೋಡ್ದೆ – ಮೈ ತೊಳೆಯೋದಕ್ಕೆ ಅಂಟುವಾಳದ ಸಿಪ್ಪೆ.
ಯಾಕೋ ಗೊತ್ತಿಲ್ಲ. ಬಚ್ಚಲ ಮನೆ, ತೆಂಗಿನ ಚಿಪ್ಪು, ಊದು ಕೊಳವೆ, ಗೋಡೆ ಮೇಲಿನ ಕಪ್ಪು ಮಸಿ, ಮನೆ ಮೇಲಿನ ಚಿಮಣಿ, ಹೊಗೆ ಮೆತ್ತಿದ್ದ ಅಮ್ಮನ ಕೆಮ್ಮು.. ಎಲ್ಲ ನೆನಪಾಯ್ತು.

‘ಅಮೆರಿಕದ ಮಾರುಕಟ್ಟೆಯಲ್ಲಿ ಹಚ್ಚಗೆ ಕೊಯ್ದ ಕೊತ್ತಂಬರಿ ಸೊಪ್ಪು’ ಅನ್ನುತ್ತಾರಲ್ಲ ರಾಮಾನುಜನ್, ಹಾಗೇನೇ ನನ್ನ ಬಾತ್ ರೂಮಲ್ಲಿ ಈಗ ಥರಾವರಿ ಬ್ರಾಂಡ್ ಸೋಪ್ ಮಧ್ಯೆ ಒಂದು ಅಂಟುವಾಳದ ಸಿಪ್ಪೆ.

website developers in mysore