ಇಂದು ಮಂಡ್ಯ ಜಿಲ್ಲೆ ಭಾರತೀನಗರದಲ್ಲಿ ಜಿ.ಮಾದೇಗೌಡ ಅಂತ್ಯಕ್ರಿಯೆ

ಬೆಂಗಳೂರು, ಜುಲೈ 18, 2021 (www.justkannada.in): ಶನಿವಾರ ರಾತ್ರಿ ನಿಧನರಾದ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ, ಮಾಜಿ ಸಂಸದ ಜಿ.ಮಾದೇಗೌಡ (94) ಅಂತ್ಯ ಕ್ರಿಯೆ ಇಂದು ನಡೆಯಲಿದೆ.

ಪಾರ್ಥಿವ ದೇಹವನ್ನು ನಗರದ ಗಾಂಧಿಭವನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು, ಭಾನುವಾರ ಭಾರತೀನಗರ ಸಮೀಪದ ಹನುಮಂತನಗರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಭಾನುವಾರ ಬೆಳಗ್ಗೆ ಮಂಡ್ಯ ಬಂದೀಗೌಡ ಬಡಾವಣೆಯಲ್ಲಿನ ನಿವಾಸದಲ್ಲಿ 9.15ರವರೆವಿಗೂ ಸಾರ್ವಜನಿಕರಿಗೆ ಮಾದೇಗೌಡರ ಪಾರ್ಥೀವ ಶರೀರದ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. 9.30ರಿಂದ ಕಾಲ ನಗರದ ವಿ.ವಿ.ರಸ್ತೆಯಲ್ಲಿನ ಗಾಂಧಿ ವನದ ಆವರಣದಲ್ಲಿ ಗೌಡರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗುತ್ತದೆ.

ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಗೆಜ್ಜಲಗೆರೆ, ಮದ್ದೂರು ಮಾರ್ಗವಾಗಿ ಗೊರವನಹಳ್ಳಿ ಗೇಟ್, ಛತ್ರದಹೊಸಹಳ್ಳಿ ಮಾರ್ಗವಾಗಿ ಅವರ ಸ್ವಗ್ರಾಮ ಗುರುದೇವರಹಳ್ಳಿಗೆ ಬೆಳಗ್ಗೆ 11ಕ್ಕೆ ಮಾದೇಗೌಡರ ಪಾರ್ಥೀವ ಶರೀರವನ್ನು ತೆಗೆದುಕೊಂಡು ಹೋಗಲಾಗುತ್ತದೆ.  ನಂತರ ಚಿಕ್ಕರಸಿನಕೆರೆ ಮಾರ್ಗವಾಗಿ ಭಾರತಿನಗರ ಪ್ರಮುಖ ಬಿದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.

ಭಾರತಿ ಕಾಲೇಜಿನಲ್ಲೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮಧ್ಯಾಹ್ನ 2.30ಕ್ಕೆ ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ.