ಮೋಹನ್ ಕೊಂಡಜ್ಜಿ ಕೇಳಿದ ನೆಹರೂ ಪ್ರಸಂಗ …

ಬೆಂಗಳೂರು,ಜೂನ್,20,2021(www.justkannada.in):

ಇಪ್ಪತ್ತು ವರ್ಷ ಹಿಂದಿನ ಘಟನೆ. ಮಾಜಿ ಮುಖ್ಯಮಂತ್ರಿ ಹಿರಿಯ ಮುತ್ಸದ್ದಿ ನಿಜಲಿಂಗಪ್ಪನವರ ಚಿತ್ರದುರ್ಗ ನಿವಾಸಕ್ಕೆ ಸೋನಿಯಾ ಗಾಂಧಿ ಭೇಟಿ ನೀಡುತ್ತಾರೆ ಎನ್ನುವ ಸುದ್ದಿ ಬಂತು. ನಿಜಲಿಂಗಪ್ಪನವರು ತಮ್ಮ ಸಹಾಯಕ ಮಂಜು ಬಳಿ ” ಮನೆಯಲ್ಲಿ ಎಷ್ಟು ಟೀ ಕಪ್ ಇದಾವೆ ” ಎಂದು ಕೇಳಿದರು. ಆರು ಕಪ್ ಇದಾವೆ ಎಂದು ಮಂಜು ಹೇಳಿದರು. ” ಮುಂದಿನ ವಾರ ಸೋನಿಯಾಗಾಂಧಿ ಮನೆಗೆ ಬರುತ್ತಿದ್ದಾರೆ . ಇನ್ನೂ ಆರು ಕಪ್ ಜೋಡಿಸಿ ಕೊಂಡು ಬಾ. ಹಾಗೆಯೇ ಸಂವಿಧಾನದ ಪುಸ್ತಕವನ್ನು ಒರೆಸಿಡು ” ಎಂದು ಹೇಳುತ್ತಾರೆ.jk

ಆಗ ಸನಿಹದಲ್ಲೇ ಇದ್ದ ಕೊಂಡಜ್ಜಿ ಮೋಹನ್ ” ಸರ್ , ಕಾಂಗ್ರೆಸ್ ಭ್ರಷ್ಟಾಚಾರಿಗಳ ಪಕ್ಷ ಎಂದು ತೊರೆದು ಬಂದಿದ್ದೀರಿ . ಈಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನ ಮನೆಗೆ ಕರೆದು ಕೊಳ್ಳುತ್ತಿದ್ದೀರಲ್ಲ ” ಎಂದು ಸಹಜವಾಗಿ ಕೇಳುತ್ತಾರೆ.

ಆಗ ನಿಜಲಿಂಗಪ್ಪನವರು ” ಮೋಹನ್ , ಆಗ ನಾನು ಕಾಂಗ್ರೆಸ್ ಕಾರ್ಯ ಸಮಿತಿ ಸದಸ್ಯನಾಗಿದ್ದೆ. ಸಹಜವಾಗಿ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಬಗ್ಗೆ ಸಭೆಯಲ್ಲಿ ಮಾತನಾಡಿ ಪ್ರಧಾನಿ ನೆಹರು ಅವರಿಗೆ ಇರಸು ಮುರಸು ಉಂಟು ಮಾಡಿದೆ. ಮುಂದಿನ ಕಾಂಗ್ರೆಸ್ ಕಾರ್ಯ ಸಮಿತಿ ಸಭೆಗೆ ನೆಹರು ಅವರು ತಮ್ಮ ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ ಬಂದರು. ಸದಸ್ಯರೆಲ್ಲರಿಗೂ ತಮ್ಮ ಪಾಸ್ ಬುಕ್ ತೆರೆದು ಅದರಲ್ಲಿದ್ದ ಬ್ಯಾಲೆನ್ಸ್ ತೋರಿಸಿದರು .  ತಾವು ಬರೆದಿದ್ದ ಪುಸ್ತಕಗಳಿಗೆ ಬರುತ್ತಿದ್ದ ರಾಯಲ್ಟಿ , ಮತ್ತು ಇತರೆ ಮೂಲಗಳಿಂದ ಬರುತ್ತಿದ್ದ ಆದಾಯಗಳು ಎಲ್ಲವನ್ನೂ ಹೇಳಿದರು. ಕಡೆಯಲ್ಲಿ ತಾವು ಹೊದ್ದಿದ್ದ ಬೆಲೆ ಬಾಳುವ ಕಾಶ್ಮೀರಿ ಪಷಿಮಾನ್ ಶಾಲನ್ನು ಬಿಚ್ಚಿ ಅದರಲ್ಲಿ ಹರಿದು ಹೋಗಿದ್ದ ಜಾಗಕ್ಕೆ ಡಾರ್ನ್ ಮಾಡಿಸಿ ತೇಪೆ ಹಾಕಿ ಕೊಂಡಿದ್ದನ್ನೂ ತೋರಿಸಿದರು. ಪ್ರಧಾನಿಯವರ ಈ ಪಾರದರ್ಶಕತೆ ಪ್ರಸಂಗ ನೋಡಿ ಇಡೀ ಸಮಿತಿ ದಂಗು ಬಡಿದು ಹೋಯಿತು ” ಎಂದು ಹೇಳಿದರು .

” ಇವತ್ತಿನ ರಾಜಕೀಯ ಪರಿಸ್ಥಿತಿ ನೋಡಿದಾಗ ನಾವು ಭ್ರಷ್ಟಾಚಾರದಲ್ಲಿ ಎಷ್ಟು ಪಾತಾಳಕ್ಕೆ ಕುಸಿದು ಹೋಗಿದ್ದೇವೆ  ನೋಡಿ. ಸೋನಿಯಾ ಗಾಂಧಿ ತಾವೇ ನನ್ನ ಮನೆಗೆ ಬರುತ್ತೇವೆ ಎಂದಾಗ ಅವರನ್ನು ಬರ ಬೇಡಿ ಎಂದು ಹೇಳುವುದು ಶಿಷ್ಟಾಚಾರ ಆಗುವುದಿಲ್ಲ. ಬರಲಿ ಅವರಿಗೆ ಹೇಳ ಬೇಕಾದ ವಿಚಾರಗಳನ್ನು ಹೇಳಿ ಕಳುಹಿಸುತ್ತೇನೆ ” ಎಂದು ಹೇಳುತ್ತಾರೆ.

ಸೋನಿಯಾ ಗಾಂಧಿ ನಿಜಲಿಂಗಪ್ಪನವರ ಮನೆಗೆ ಬಂದಾಗ ಅವರಿಗೆ ಸಂವಿಧಾನದ ಪ್ರತಿ ನೀಡಿ ” ಇದರಲ್ಲಿರುವ ನಿರ್ದೇಶಕ ತತ್ವಗಳನ್ನು ನಿಷ್ಠೆಯಿಂದ ಅನುಷ್ಠಾನ ಮಾಡಿ ಆಡಳಿತ ನಡೆಸಿ . ನಿಮಗೆ ಒಳ್ಳೆಯದಾಗಲಿ ” ಎಂದು ಹರಸಿ ಕಳುಹಿಸುತ್ತಾರೆ.

ಇತ್ತೀಚಿಗೆ ನಿಧನರಾದ ನಮ್ಮೆಲ್ಲರ ನೆಚ್ಚಿನ ಕವಿ  ಸಿದ್ದಲಿಂಗಯ್ಯ ಅವರ ಮನೆಗೆ ಅಮಿತ್ ಶಾ ಅವರು ಭೇಟಿ ನೀಡಿದ್ದ ವಿಷಯದ ಹಿನ್ನೆಲೆಯಲ್ಲಿ ಕೊಂಡಜ್ಜಿ ಮೋಹನ್ ನಿಜಲಿಂಗಪ್ಪನವರು ಮತ್ತು ನೆಹರು ಅವರಿಗೆ ಸಂಬಂದಿಸಿದ ಈ ವಿಷಯವನ್ನು ಹಂಚಿ ಕೊಂಡರು.

ನೆಹರೂ ಕಾಲದ ರಾಜಕೀಯ ಭ್ರಷ್ಟಾಚಾರದ ವಿಷಯಗಳು ಮತ್ತು ಅವತ್ತಿನ ಪ್ರಾಮಾಣಿಕತೆ ಪ್ರಸಂಗವನ್ನು ಇವತ್ತಿನ ಜನರ ಮುಂದೆ ಹಂಚಿಕೊಳ್ಳುವುದಷ್ಟೇ ಈ ಪೋಸ್ಟ್ ಉದ್ದೇಶ. ಅದರಿಂದಾಚೆಗೆ ಕಾಲು ಕೆರೆದು ಜಗಳ ಮಾಡುವವರು ದಯವಿಟ್ಟು ಇದನ್ನು ಗಮನಿಸಿ ಕೊಳ್ಳಿ .

 

ಕೃಪೆ : ವಿಶುಕುಮಾರ್,

ನಿವೃತ್ತ ನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆ.ಬೆಂಗಳೂರು

Key words: former PM-javaharlal neharu- S.Nijalingappa-mohan kondajji