ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿನ ಪ್ರತಿಭಟನೆಗಳಿಗೆ ಮಹಾರಾಣಿ ಕ್ಲಸ್ಟರ್ ವಿವಿ ಆಕ್ಷೇಪಣೆ.

ಬೆಂಗಳೂರು, ಜುಲೈ 29, 2022 (www.justkannada.in): ಬೆಂಗಳೂರು ಮಹಾನಗರದ ಹೃದಯಭಾಗದಲ್ಲಿರುವ ಫ್ರೀಡಂ ಪಾರ್ಕ್ ನಲ್ಲಿ ಪ್ರತಿ ದಿನ ನಡೆಯುವ ಪ್ರತಿಭಟನೆಗಳಿಂದಾಗಿ, ಪಕ್ಕದಲ್ಲೇ ಇರುವ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಬೋಧಕರು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಗಂಭೀರ ತೊಂದರೆಯಾಗುತ್ತಿದೆ.

ಇದರಿಂದಾಗಿ ವಿಶ್ವವಿದ್ಯಾಲಯವು ಈ ತೊಂದರೆಗೆ ಪರಿಹಾರ ಕಲ್ಪಿಸುವಂತೆ ಸರ್ಕಾರದ ಮೊರೆ ಹೋಗುವುದರ ಜೊತೆಗೆ, ಪೋಲಿಸ್ ದೂರು ಹಾಗೂ ನ್ಯಾಯಾಲಯದ ಮೆಟ್ಟಿಲನ್ನು ಏರಲು ಆಲೋಚಿಸುತ್ತಿದೆ.

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯವು ಫ್ರೀಡಂ ಪಾರ್ಕ್ ನ ಸುತ್ತಮುತ್ತಲಿನ ಪ್ರದೇಶದಲ್ಲಿ ಮಹಾರಾಣಿ ಕಲಾ, ವಿಜ್ಞಾನ, ವಾಣಿಜ್ಯ ಹಾಗೂ ವ್ಯವಹಾರ ನಿರ್ವಹಣಾ ಕಾಲೇಜು ಹಾಗೂ ಹೋಂ ಸೈನ್ಸ್ ಕಾಲೇಜು ಸೇರಿದಂತೆ ಮೂರು ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಈ ಕಾಲೇಜುಗಳ ಸಿಬ್ಬಂದಿಗಳ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ಎಲ್ಲಾ ಪ್ರತಿಭಟನೆಗಳೂ ಸಹ ಫ್ರೀಡಂ ಪಾರ್ಕ್ ನಲ್ಲಿ ಅಂತ್ಯಗೊಳ್ಳುವುದು ಹಾಗೂ ನಡೆಯುವುದರಿಂದಾಗಿ ಅವರ ಶೈಕ್ಷಾಣಿಕ ಚಟುವಟಿಕೆಗಳ ಮೇಲೆ ಗಂಭೀರವಾದ ಪರಿಣಾಮ ಬಿರುತ್ತಿರುವುದರ ಜೊತೆಗೆ ಮಾನಸಿಕ ಕಿರಿಕಿರಿಯನ್ನು ಉಂಟು ಮಾಡುತ್ತಿದೆ.

ಈ ಸಂಬಂಧ ಮಾತನಾಡಿದ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರೊಬ್ಬರು, “ಫ್ರೀಡಂ ಪಾರ್ಕ್ ನಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಪ್ರತಿಭಟನೆ ನಡೆಯುತ್ತಲೇ ಇರುತ್ತದೆ, ಒಂದು ದಿನವೂ ಬಿಡುವಿರುವುದಿಲ್ಲ. ಪ್ರತಿಭಟನೆಯಲ್ಲಿ ಅತೀ ಹೆಚ್ಚಿನ ಧ್ವನಿ ಹೊರಹಾಕುವ ಧ್ವನಿವರ್ಧಕಗಳನ್ನು ಬಳಸುತ್ತಾರೆ, ಜೊತೆಗೆ ನೂರಾರು ಸಂಖ್ಯೆಯ ಪ್ರತಿಭಟನಾಕಾರರು ಜೋರಾಗಿ ಘೋಷಣೆಗಳನ್ನು ಕೂಗುತ್ತಿರುತ್ತಾರೆ. ಇದರಿಂದಾಗಿ ತರಗತಿಗಳಿಗೆ ಬಹಳ ತೊಂದರೆಯಾಗಿದೆ,” ಎಂದರು. ನಮ್ಮ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗುತ್ತಿದೆ ಎಂಬ ಭಾವನೆ ನಮ್ಮನ್ನು ಕಾಡುತ್ತಿದೆ. ಏಕೆಂದರೆ ಎಡೆಬಿಡದ ಶಬ್ಧದಿಂದಾಗಿ ನಮಗೆ ಪಾಠ, ಪ್ರವಚನ ಹೇಳಿಕೊಡುವುದೇ ಸಾಧ್ಯವಾಗುತ್ತಿಲ್ಲ,” ಎನ್ನುವುದು ಮತ್ತೊಬ್ಬ ಬೋಧಕ ಸಿಬ್ಬಂದಿಯ ಅಭಿಪ್ರಾಯ.

ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲು ಆಗಮಿಸುವ ಪ್ರತಿಭಟನಾಕಾರರು ಮಹಾರಾಣಿ ವಿಶ್ವವಿದ್ಯಾಲಯದ ಮುಂಭಾಗದ ಪ್ರವೇಶದ್ವಾರದ ಬಳಿ ವಾಹನಗಳನ್ನು ನಿಲ್ಲಿಸುವುದಲ್ಲದೆ, ಆವರಣದೊಳಗೆಲ್ಲಾ ಓಡಾಡುತ್ತಿರುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಬಹಳ ಕಿರಿಕಿರಿ ಉಂಟಾಗುತ್ತದೆ. “ಇಲ್ಲಿ ವಾಹನಗಳನ್ನು ನಿಲ್ಲಿಸಿರುವ ಕಾರಣದಿಂದಾಗಿ ನಮಗೆ ವಿಶ್ವವಿದಯಾಲಯದ ಪ್ರವೇಶದ್ವಾರದಿಂದ ಹೊರಗೆ ಬರಲೇ ೪೦ ನಿಮಿಷಗಳು ಬೇಕಾಗುತ್ತದೆ. ಬೆಳಿಗಿನ ಸಮಯದಲ್ಲಂತೂ ಪ್ರತಿ ದಿನ ರ್ಯಾಲಿಗಳು ನಡೆಯುವ ಕಾರಣದಿಂದಾಗಿ ವಾಹನದಟ್ಟಣೆ ವಿಪರೀತವಾಗಿರುತ್ತದೆ. ಅದರಿಂದಾಗಿ ತರಗತಿಗಳಿಗೆ ಹಾಜರಾಗುವುದೂ ಸಹ ವಿಳಂಬವಾಗುತ್ತದೆ,” ಎನ್ನುವುದು ವಿದ್ಯಾರ್ಥಿಗಳ ಗೋಳಾಗಿದೆ.

ಈ ಸಂಬಂಧ ಮಾತನಾಡಿದ ವಿಶ್ವವಿದ್ಯಾಲಯದ ಉಪಕುಲಪತಿ ಎಲ್.ಗೋಮತಿ ಅವರು, “ಈ ಹಿಂದೆಯೂ ನಾವು ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್ ನಿಂದ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಸರ್ಕಾರಕ್ಕೆ ನಾವು ಹಲವು ಮನವಿಗಳನ್ನು ಸಲ್ಲಿಸಿದ್ದೇವೆ. ಈಗಲೂ ಪುನಃ ಅದೇ ಪ್ರಯತ್ನ ಮಾಡಲಿದ್ದೇವೆ,” ಎಂದರು.

ಇತ್ತೀಚೆಗೆ ಮಾನ್ಯ ಉಚ್ಛ ನ್ಯಾಯಾಲಯವು ರಸ್ತೆಗಳ ಮೇಲೆ ಪ್ರತಿಭಟನಾ ರ್ಯಾಲಿಗಳನ್ನು ನಡೆಸುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ ಎಂದು ತಿಳಿಸಿ ಎಲ್ಲಾ ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ನಡೆಸುವಂತೆ ಸೂಚನೆ ನೀಡಲು ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Maharani -Cluster –university- Objection – Protests -Freedom Park- Bengaluru.