ಬಾಲ ವಿಕಾಸ ಯೋಜನೆಗೆ ಗ್ರಹಣ: ಅನುದಾನ ಕೊರತೆ ನೆಪ, ಹಸನಾಗದ ಕಿವುಡ-ಮೂಕ ಮಕ್ಕಳ ಬದುಕು

ಬೆಂಗಳೂರು:ಆ-30: ಜನಿಸುವಾಗಲೇ ಕಿವುಡತನವಿರುವ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮೂಲಕ ಬೆಳಕು ನೀಡುವ ಮಹತ್ವಾಕಾಂಕ್ಷಿ ‘ರಾಷ್ಟ್ರೀಯ ಬಾಲ ವಿಕಾಸ ಕಾರ್ಯಕ್ರಮವನ್ನು ಅನುದಾನದ ಕೊರತೆ ನೆಪವೊಡ್ಡಿ ರಾಜ್ಯದಲ್ಲಿ ಸ್ಥಗಿತಗೊಳಿಸಲಾಗಿದೆ. ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸುವ ಶಸ್ತ್ರ ಚಿಕಿತ್ಸೆಗೆ ಕನಿಷ್ಠ 7 ರಿಂದ 15 ಲಕ್ಷ ರೂ. ಖರ್ಚಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಬಡವರಿಗಾಗಿ ರಾಷ್ಟ್ರೀಯ ಬಾಲ ವಿಕಾಸ ಯೋಜನೆ ಜಾರಿಗೆ ತಂದಿದ್ದು, ಯೋಜನೆಯಲ್ಲಿ ಪ್ರತಿ ರಾಜ್ಯದಲ್ಲಿ ವರ್ಷಕ್ಕೆ ಅಂದಾಜು 20 ರಿಂದ 30 ಮಕ್ಕಳು ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾರೆ. ರಾಜ್ಯದಲ್ಲೂ 2017ರ ಆಗಸ್ಟ್​ನಲ್ಲಿ ಕಾರ್ಯಕ್ರಮ ಜಾರಿಗೆ ತಂದಿತ್ತು.

ಕೆ.ಸಿ. ಜನರಲ್ ಆಸ್ಪತ್ರೆ ಮತ್ತು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಉಚಿತವಾಗಿ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸುವ ಶಸ್ತ್ರ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ 2018ರ ಡಿಸೆಂಬರ್​ನಿಂದ ಯೋಜನೆ ಸ್ಥಗಿತವಾಗಿದೆ. ಈವರೆಗೆ 40 ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನೋಂದಣಿಯಾಗಿದ್ದ 200ಕ್ಕೂ ಹೆಚ್ಚು ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ನಡೆಸಿಲ್ಲ. ಸರ್ಕಾರದ ಮಾರ್ಗಸೂಚಿ ಪ್ರಕಾರ 5 ವರ್ಷ ತುಂಬುವ ಮೊದಲೇ ಶಸ್ತ್ರ ಚಿಕಿತ್ಸೆ ನಡೆಸಬೇಕು. ಆ ನಂತರ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸಿದರೂ ನಿಷ್ಪ್ರಯೋಜಕ.

13 ಬಾರಿ ಪತ್ರ: ಕಾರ್ಯಕ್ರಮದಡಿಯಲ್ಲಿ ನೋಂದಣಿ ಮಾಡಿರುವ 200ಕ್ಕೂ ಹೆಚ್ಚು ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ನಡೆಸಬೇಕಿದೆ. ನೋಂದಣಿಯಾಗಿರುವ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ನಡೆಸುವಂತೆ ಕೆ.ಜಿ. ಜನರಲ್ ಆಸ್ಪತ್ರೆಯ ವೈದ್ಯಾಧಿಕಾರಿಗಳು 13 ಬಾರಿ ಪತ್ರ ಬರೆದಿದ್ದರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕ್ರಮ ಕೈಗೊಂಡಿಲ್ಲ.

ಶಸ್ತ್ರ ಚಿಕಿತ್ಸೆ ಮಾಡಿಸಲು ಕೆ.ಜಿ. ಜನರಲ್ ಆಸ್ಪತ್ರೆಯಲ್ಲಿ ನೋಂದಣಿ ಮಾಡಿಸಿದರೂ ಪ್ರಯೋಜನವಾಗಲಿಲ್ಲ. ವಿಧಿಯಿಲ್ಲದೇ ಖಾಸಗಿ ಆಸ್ಪತ್ರೆಯಲ್ಲಿ 15 ಲಕ್ಷ ರೂ. ಖರ್ಚು ಮಾಡಿ ಶಸ್ತ್ರ ಚಿಕಿತ್ಸೆ ಮಾಡಿಸಿ ಸಾಲಗಾರನಾಗಿದ್ದೇನೆ. ಸಂಸದರ ನಿಧಿಯಿಂದ ಪರಿಹಾರ ಪಡೆಯಲೆಂದು ಸಾಕಷ್ಟು ಅಲೆದರೂ ಪ್ರಯೋಜನವಾಗಲಿಲ್ಲ.

| ವೆಂಕಟೇಶ್ ನವೀನ್ ತಂದೆ, ವಿದ್ಯಾನಗರ, ಬೆಂಗಳೂರು

ಕೇಂದ್ರ ಸರ್ಕಾರ ಅನುದಾನ ಸ್ಥಗಿತಗೊಳಿಸಿದ್ದರಿಂದ ರಾಜ್ಯದಲ್ಲಿ ರಾಷ್ಟ್ರೀಯ ಬಾಲ ಸುರಕ್ಷತಾ ಕಾರ್ಯಕ್ರಮ ರದ್ದು ಮಾಡಲಾಗಿದೆ. ಖಾಸಗಿ ಕಂಪನಿಗಳಿಂದ ಸಿಎಸ್​ಆರ್ ಫಂಡ್ ಸಂಗ್ರಹಿಸಿ ಶಸ್ತ್ರ ಚಿಕಿತ್ಸೆಗೆ ಅವಕಾಶ ಕಲ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ.

| ಪಂಕಜ್​ಕುಮಾರ್ ಪಾಂಡೆ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಕೃಪೆ:ವಿಜಯವಾಣಿ

ಬಾಲ ವಿಕಾಸ ಯೋಜನೆಗೆ ಗ್ರಹಣ: ಅನುದಾನ ಕೊರತೆ ನೆಪ, ಹಸನಾಗದ ಕಿವುಡ-ಮೂಕ ಮಕ್ಕಳ ಬದುಕು
eclipse-for-the-children-evolution-project