ಜನಸಾಮಾನ್ಯರಂತೆ ಬಸ್ ನಲ್ಲೇ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಡಿ.ಕೆ ಶಿವಕುಮಾರ್.

ಮೈಸೂರು,ಜುಲೈ,15,2022(www.justkannada.in): ಇಂದು ಆಷಾಢ ಮಾಸದ 3ನೇ ಶುಕ್ರವಾರದ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು.

ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ವಿಐಪಿ ಪಾಸ್ ಗಳನ್ನು ರದ್ದು ಮಾಡಿದ ಹಿನ್ನೆಲೆ, ಡಿಕೆ ಶಿವಕುಮಾರ್ ಅವರು ಪತ್ನಿ ಜೊತೆ ಜನಸಾಮಾನ್ಯರಂತೆ ಕೆಎಸ್ ಆರ್ ಟಿಸಿ ಬಸ್ ನಲ್ಲೇ ದೇವಿ ದರ್ಶನಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಬಸ್‌ನಲ್ಲೇ ಪ್ರಯಾಣಿಕರ ಜತೆ ಪ್ರಯಾಣಿಸಿದ ಡಿ.ಕೆ. ಶಿವಕುಮಾರ್ ಗೆ  ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್  ಕಾಂಗ್ರೆಸ್ ಮುಖಂಡರು  ಸಾಥ್ ನೀಡಿದರು.

ತಾಯಿ ಚಾಮುಂಡೇಶ್ವರಿ ದರ್ಶನ ಬಳಿಕ ಸಿದ್ದರಾಮೋತ್ಸವ ಆಚರಣೆ ವಿಚಾರ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ಅದು ಬರೀ ಹುಟ್ಟುಹಬ್ಬ ವಿಚಾರ ಅಲ್ಲ. ಅದರ ಮೂಲಕ ಕಾಂಗ್ರೆಸ್ ಸರ್ಕಾರ ಆಡಳಿತ ಸಂದರ್ಭದ ಪ್ರಗತಿಗಳ ಬಗ್ಗೆ ಮೆಲುಕು ಹಾಕುತ್ತೇವೆ. ನಮ್ಮ ಆಡಳಿತ ಅವಧಿಯಲ್ಲಿ ಏನಾಗಿತ್ತು, ಈಗ ಪರಿಸ್ಥಿತಿ ಏನಾಗಿದೆ ಎನ್ನುವುದನ್ನು ಜನರಿಗೆ ಆ ಮೂಲಕ ವಿವರಿಸುತ್ತೇವೆ. ಬಿಜೆಪಿಯವರು ವಿನಾಕಾರಣ ಇದರ ಬಗ್ಗೆ ಮಾತನಾಡುತ್ತಿದ್ದಾರೆ ಅಷ್ಟೇ ಎಂದರು.

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ವಿಚಾರ‌ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಕರ್ನಾಟಕದಲ್ಲಿ 350ಕಿ.ಮಿ ಯಾತ್ರೆ ನಡೆಯುತ್ತದೆ. ಅದರ ರೂಪುರೇಷೆಗಳು ಈಗ ಸಿದ್ದವಾಗುತ್ತಿವೆ. ಕೇರಳದಿಂದ ಕರ್ನಾಟಕಕ್ಕೆ ಯಾತ್ರೆ ಬರಲಿದೆ. ಅದರ ಎಲ್ಲಾ ರೂಪುರೇಷೆಗಳು ಶೀಘ್ರದಲ್ಲೇ ಅಂತಿಮವಾಗುತ್ತೆ. ಜುಲೈ19ರಂದು ಮೈಸೂರಿಗೆ ಬಂದು ಅದರ ಪೂರ್ವಾಭಾವಿ ಸಭೆಗಳನ್ನು ನಡೆಸುತ್ತೇನೆ ಎಂದರು.

Key words: DK Shivakumar -Chamundi Hill – bus – common people