ಮಾಸ್ಕ್ ವಿತರಿಸಿ, ಜಾಗೃತಿ ಮೂಡಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್

ಹಾವೇರಿ, ಮೇ 02, 2020 (www.justkannada.in): ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸದಾ ಕಾರ್ಯಪ್ರವೃತ್ತರಾಗಿರುವ ಕೃಷಿಕರಿಗೆ ಸ್ಪಂದಿಸುತ್ತಿರುವ ಕೃಷಿ ಸಚಿವ ಬಿ‌.ಸಿ.ಪಾಟೀಲ್ ಇಂದು ತಾಲೂಕಿನ‌ ಚಿಂದಿ ಆಯುವವರಿಗೆ ಉಚಿತ ದಿನಸಿ ಸಾಮಾನುಗಳನ್ನು ವಿತರಿಸಿದರು.

ಅಲ್ಲದೇ ಆರೋಗ್ಯ ಇಲಾಖೆ,ರಟ್ಟಿಹಳ್ಳಿ,ಹಿರೇಕೆರೂರು ಪಟ್ಟಣ ಪಂಚಾಯಿತಿ ಸಿಬ್ಬಂದಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಉಚಿತ ಮಾಸ್ಕ್‌ಗಳನ್ನು ವಿತರಿಸಿದರು. ಈ ವೇಳೆ ಚಿಂದಿ ಆಯುವವ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಕೃಷಿ ಸಚಿವರು, ಸ್ವಚ್ಛತೆ ಜೊತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೈಚೀಲ ಹಾಗೂ ಮುಖಗೌಸುಗಳನ್ನು ಧರಿಸಬೇಕು.

ಲಾಕ್ಡೌನ್‌ ವಿಸ್ತರಣೆಯಿಂದ ಯಾರೂ ಆತಂಕಕ್ಕೊಳಗಬಾರದು. ಸಾಮಾಜಿಕ ಅಂತರವೊಂದೇ ಸದ್ಯಕ್ಕೆ ಕೊರೊನಾದಿಂದ ದೂರ ಉಳಿಯಬಲ್ಲ ಉಪಾಯವಾಗಿದೆ. ಸರ್ಕಾರ ಕಾರ್ಮಿಕರು ಕೃಷಿಕರೂ ಸೇರಿದಂತೆ ಎಲ್ಲರ ನೆರವಿಗೆ ಬದ್ಧವಾಗಿದೆ. ಧೃತಿಗೆಡದೇ ಎಲ್ಲರೂ ಒಟ್ಟಾಗಿ ಈ ಮಹಾಮಾರಿಯನ್ನು ಹೊಡೆದೋಡಿಸಬೇಕೆಂದು ಕರೆ ನೀಡಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು. ಬಿ ಬಣಕಾರ್, ಮಹೇಂದ್ರ ಬಡಳ್ಳಿ ಬಿ.ಸಿ.ಪಾಟೀಲರ ಈ ಸಾಮಾಜಿಕ ಕಳಕಳಿಗೆ ಜೊತೆಯಾದರು.