ಔರಂಗಾಬಾದ್ ಅನ್ನು ಸಾಂಭಾಜಿನಗರ, ಒಸ್ಮಾನಾಬಾದ್ ಅನ್ನು ಧಾರಾಶಿವ್ ಎಂದು ಮರುನಾಮಕರಣ ಮಾಡಲು ನಿರ್ಧಾರ

ಮುಂಬೈ, ಜೂನ್ 30, 2022 (www.justkannada.in): ದಿವಂಗತ ಶಿವಸೇನಾ ಮುಖ್ಯಸ್ಥ ಬಾಳಾಸಾಹೆಬ್ ಠಾಕ್ರೆ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಾಗೂ ಮಹಾರಾಷ್ಟ್ರ ರಾಜ್ಯದ ಜನರ ಬಹು ದಿನಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ಬುಧವಾರದಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಮಹಾರಾಷ್ಟ್ರದ ಔರಂಗಾಬಾದ್ ನಗರವನ್ನು ಸಾಂಭಾಜಿನಗರ ಹಾಗೂ ಒಸ್ಮಾನಾಬಾದ್ ಅನ್ನು ಧಾರಾಶಿವ್ ಎಂದು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಅಂಗೀಕರಿಸಿದ್ದಾರೆ.

ಮುಂದಿನ ವರ್ಷದಿಂದ ಆರಂಭವಾಗಬಹುದೆಂದು ನಿರೀಕ್ಷಿಸಲಾಗಿರುವ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ದಿವಂಗತ ರೈತರ ನಾಯಕ ಡಿ.ಬಿ. ಪಾಟೀಲ್ ಅವರ ಹೆಸರಿಡಲಾಗುವುದು.ಮರಾಠ್ವಾಡಾ ಪ್ರದೇಶದ ಎರಡು ಪ್ರಮುಖ ನಗರಗಳಾಗಿರುವ ಔರಂಗಾಬಾದ್ ಹಾಗೂ ಒಸ್ಮಾನಾಬಾದ್ ನಗರಗಳನ್ನು ಕ್ರಮವಾಗಿ ಸಾಂಭಾಜಿನಗರ ಹಾಗೂ ಧಾರಾಶಿವ್ ಎಂದು ಮರುನಾಮಕರಣ ಮಾಡುವಂತೆ ಬಹು ದಿನಗಳಿಂದ, ಅಂದರೆ ಭಾಳಾಸಾಹೇಬ್ ಠಾಕ್ರೆ ಅವರು ಶಿವಸೇನೆಯ ಮುಖ್ಯಸ್ಥರಾಗಿದ್ದಾಗನಿಂದಲೂ ಬೇಡಿಕೆಯಿತ್ತು.

ಈ ಹಿಂದೆ ೧೯೯೫-೯೯ರಲ್ಲಿ ಶಿವಸೇನಾ-ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಸಂಬಂಧ ಪ್ರಯತ್ನವನ್ನು ಮಾಡಲಾಗಿತ್ತು. ಆದರೆ ಅನುಷ್ಠಾನವಾಗಿರಲಿಲ್ಲ. ೨೦೧೯ರಲ್ಲಿ ಶಿವಸೇನೆ ಪುನಃ ಅಧಿಕಾರಕ್ಕೆ ಬಂದ ನಂತರ, ಎನ್‌ ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಇರುವ ಹೊರತಾಗಿಯೂ ಈ ಬೇಡಿಕೆಯ ಕುರಿತು ಮರುಪ್ರಸ್ತಾಪಿಸಿತ್ತು ಮತ್ತು ಅನುಷ್ಠಾನಗೊಳಿಸಲು ಬಲವಾಗಿ ಪ್ರತಿಪಾದಿಸಿತ್ತು. ಔರಂಗಾಬಾದ್ ನಗರಕ್ಕೆ ಬಹಳ ದೀರ್ಘವಾದ ಚರಿತ್ರೆ ಇದೆ ಹಾಗೂ ವಿವಿಧ ಕಾಲಮಾನಗಳಲ್ಲಿ ಈ ನಗರವನ್ನು ವಿವಿಧ ಹೆಸರುಗಳಿಂದ ಕರೆಯಲಾಗುತಿತ್ತು.

ಈ ನಗರ – ಸತವಾಹನ, ವಕಟಕ, ಚಾಲುಕ್ಯ, ರಾಷ್ಟ್ರಕೂಟ, ಯಾದವ, ಖಿಲ್ಜಿ, ತುಘಲಕ್, ಬಹಮನಿ ಸುಲ್ತಾನರು, ನಿಜಾಂ ಶಾಹಿ, ಮೊಘಲರ ಅಡಿ ಡೆಕ್ಕನ್ ಸುಲ್ತಾನರು, ಹಾಗೂ ಹೈದ್ರಾಬಾದ್ ನಿಜಾಮರು ಮತ್ತು ಮರಾಠರು ಹಾಗೂ ಬ್ರಿಟಿಷರು ಹೀಗೆ ವಿವಿಧ ಸಾಮ್ರಾಜ್ಯಗಳ ಪ್ರಭಾವ ಹಾಗೂ ಆಳ್ವಿಕೆಯನ್ನು ಕಂಡಿದೆ.

ಔರಂಗಾಬಾದ್ ನಗರ, ದಕ್ಷಿಣಪಥದ ಪ್ರವೇಶದ್ವಾರದಲ್ಲಿ ಕಾರ್ಯತಾಂತ್ರಿಕ ಸ್ಥಳದಲ್ಲಿರುವ ಕಾರಣದಿಂದಾಗಿ ಇಲ್ಲಿ ಅನೇಕ ಸಾಮ್ರಾಜ್ಯಗಳು ಆಳ್ವಿಕೆ ನಡೆಸಿ, ಸೋಲನ್ನುಂಡಿವೆ. ಗೋದಾವರಿ ನದಿಯ ತಟದಲ್ಲಿರುವ ಪ್ರಾಚೀನ ಪಟ್ಟಣ ಪೈಥನ್ ಔರಂಗಾಬಾದ್‌ ನಲ್ಲಿದೆ. ಐತಿಹಾಸಿಕ ಹಾಗೂ ಪೌರಾಣಿಕ ಯುಗಗಳಲ್ಲಿ ಈ ಸ್ಥಳ ಪ್ರತಿಸ್ಥಾನ ಎಂದು ಗುರುತಿಸಿಕೊಂಡಿತ್ತು. ಈ ಸ್ಥಳ ಬೌದ್ಧ, ಜೈನ್ ಹಾಗೂ ಬ್ರಾಹ್ಮಣ ಸಾಹಿತ್ಯಕ್ಕೆ ಹೆಸರುವಾಸಿಯಾಗಿತ್ತು.

ಮಹಾರಾಷ್ಟ್ರ, ಕರ್ನಾಟಕ ಹಾಗೂ ಮಧ್ಯ ಪ್ರದೇಶ ಭಾಗಗಳನ್ನು ವ್ಯಾಪಿಸುವಂತೆ ತುಂಗಭದ್ರ ಹಾಗೂ ನರ್ಮದಾ ನದಿಗಳ ನಡುವೆ ದಿಯೋಗಿರಿ ಅಥವಾ ದೇವಗಿರಿಯಿಂದ ಯಾದವರು ಆಳುತ್ತಿದ್ದರು. ಅಲ್ಲಾವುದ್ದಿನ ಖಿಲ್ಜಿ ೧೨೯೬ರಲ್ಲಿ ಯಾದವ ಅರಸನಾದ ಕೃಷ್ಣನನ್ನು ಸೋಲಿಸಿ, ಅಡಿಯಾಳಾದ ಜನರಲ್ ಮಲ್ಲಿಕ್ ಕಫೂರ್‌ ನ ನಿಯಂತ್ರಣದಡಿ ಒಪ್ಪಿಸಿದ್ದ. ನಂತರದಲ್ಲಿ ಮೊಹಮ್ಮದ್ ಬಿನ್ ತುಘಲಕ್ ದೆಹಲಿಯ ಸುಲ್ತಾನನಾದ, ಹಾಗೂ ೧೩೨೭ರಲ್ಲಿ ರಾಜಧಾನಿಯನ್ನು ದಿಯೋಗಿರಿಗೆ ಸ್ಥಳಾಂತರಿಸಿದ ಮತ್ತು ಅದನ್ನು ದೌಲತಾಬಾದ್ ಎಂದು ಮರುನಾಮಕರಣ ಮಾಡಿದ. ಆದರೆ ೧೩೩೪ರಲ್ಲಿ ದೆಹಲಿ ಪುನಃ ರಾಜಧಾನಿಯಾಯಿತು.

೧೪೯೯ರಲ್ಲಿ ದೌಲತಾಬಾದ್ ಅಹ್ಮದ್‌ ನಗರ ಆಳ್ವಿಕೆಯ ಭಾಗವಾಯಿತು. ಸಿದ್ದಿ ನಾಯಕನಾದ ಮಲಿಕ್ ಅಂಬರ್ ಅಹ್ಮದ್‌ನಗರ ಆಳ್ವಿಕೆಯಲ್ಲಿ ೧೬೧೦ರಲ್ಲಿ ಖರ್ಕಿಗ ಅಥವಾ ಖಡ್ಕಿ ಎಂಬ ಹೆಸರಿನ ಹೊಸ ನಗರವನ್ನು ರಾಜಧಾನಿಯಾಗಿ ಸ್ಥಾಪಿಸಿದ. ಮಲಿಕ್ ಅಂಬರ್‌ ನನ್ನು ಭಾರತಕ್ಕೆ ಗುಲಾಮನಾಗಿ ಕರೆತರಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಆತ ಅಹ್ಮದ್‌ನಗರ ಸಲ್ತನೇತ್‌ನ ಜನಪ್ರಿಯ ಪ್ರಧಾನ ಮಂತ್ರಿಯಾಗಿ ಬೆಳೆದ.

ಈತನ ನಂತರ ಅವನ ಮಗ ಫತೇಹ್ ಖಾನ್ ಅಧಿಕಾರಕ್ಕೆ ಬಂದ, ಆತ ಈ ನಗರದ ಹೆಸರನ್ನು ಫತೇಹ್‌ ನಗರ ಎಂದು ಮರುನಾಮಕರಣ ಮಾಡಿದ. ೧೬೩೬ರಲ್ಲಿ ಡೆಕ್ಕನ್ ಪ್ರಾಂತ್ಯದ ಮೊಘಲ್ ವೈಸ್‌ರಾಯ್ ಆಗಿದ್ದಂತಹ ಔರಂಗ್‌ ಜೇಬ್ ಈ ನಗರವನ್ನು ತನ್ನ ವಶಕ್ಕೆ ಪಡೆದುಕೊಂಡ.

೧೬೫೩ರಲ್ಲಿ ಔರಂಗ್‌ ಜೇಬ್ ಈ ನಗರವನ್ನು “ಔರಂಗಾಬಾದ್” ಎಂದು ಮರುನಾಮಕರಣ ಮಾಡಿ, ಮೊಘಲ್ ಸಾಮ್ರಾಜ್ಯದ ಡೆಕ್ಕನ್ ಪ್ರದೇಶದ ರಾಜಧಾನಿಯನ್ನಾಗಿಸಿದ. ಒಸ್ಮಾನಾಬಾದ್, ಹೈದ್ರಾಬಾದ್‌ ನ ಕೊನೆಯ ರಾಜ ಮೀರ್ ಒಸ್ಮಾನ್ ಆಲಿ ಖಾನ್‌ ನ ಹೆಸರಿನಂದ ಬಂದಿದ್ದರೆ, ಧಾರಾಶಿವ್, ಆ ನಗರದ ಬಳಿಯಿರುವ ಆರನೇ ಶತಮಾನದ ಗುಹೆಗಳಿಂದ ಪ್ರೇರಣೆ ಪಡೆದುಕೊಂಡಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Decision -rename -Aurangabad – Sambhajinagar-Osmanabad – Dharashiv