ಸೋಂಕು ಪ್ರಕರಣ ಇಳಿಕೆ ತೋರಿಸಲು ಪರೀಕ್ಷೆ ಪ್ರಮಾಣ ಕಡಿಮೆ ಮಾಡುವುದು ಸರಿಯಲ್ಲ-ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್ ಕಿಡಿ…

ಬೆಂಗಳೂರು,ಮೇ,15,2021(www.justkannada.in): ‘ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣ ಸಂಖ್ಯೆ ಕಡಿಮೆ ತೋರಿಸಲು ಪರೀಕ್ಷೆ ಪ್ರಮಾಣ ಕಡಿಮೆ ಮಾಡಿರುವುದು ಸರಿಯಲ್ಲ. ಇದು ಸರ್ಕಾರವೇ ಜನರನ್ನು ಹತ್ಯೆ ಮಾಡುವ ನಿರ್ಧಾರ. ಜನರ ಸಾವಿಗೆ ಸರ್ಕಾರವೇ ನೇರ ಕಾರಣವಾಗುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.jk

ಸದಾಶಿವನಗರ ನಿವಾಸದಲ್ಲಿ   ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್ , ‘ಐಸಿಎಂಆರ್ ವರದಿ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸಬೇಕು ಎಂದು ಹೇಳಿದೆ. ಸರ್ಕಾರ ಶೇ. 50 ರಷ್ಟು ಪರೀಕ್ಷೆ ಕಡಿಮೆ ಮಾಡಲು ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ಪರೀಕ್ಷೆ ಮಾಡಿದಷ್ಟು ಜನ ಜಾಗೃತರಾಗಿರುತ್ತಾರೆ. ಸೋಂಕಿನ ಪ್ರಕರಣ ಹೆಚ್ಚಾಗುತ್ತದೆ ಎಂದು ಪರೀಕ್ಷೆ ಪ್ರಮಾಣ ಕಡಿಮೆ ಮಾಡುವುದು ಸರಿಯಲ್ಲ. ಜನರನ್ನು ಸರ್ಕಾರವೇ ಹತ್ಯೆ ಮಾಡಿದಂತೆ ಆಗುತ್ತದೆ. ಹೀಗಾಗಿ ಸರ್ಕಾರ ಹೆಚ್ಚಿನ ಪರೀಕ್ಷೆ ನಡೆಸಬೇಕು. ಇದರಿಂದ ಸೋಂಕಿತರು ಆರಂಭದಲ್ಲೇ ಗುಣಪಡಿಸಿಕೊಳ್ಳಲು ನೆರವಾಗುತ್ತದೆ. ಡಿಸಿಎಂ ಅಶ್ವಥ್ ನಾರಾಯಣ್ ಅವರು ಜವಾಬ್ದಾರಿ ವಹಿಸಿಕೊಂಡ ನಂತರ ಈ ರೀತಿ ಆದೇಶ ನೀಡಲಾಗಿದೆ ಎಂದು ಕಿಡಿಕಾರಿದರು.

ಸರ್ಕಾರ ಜೀವ ಉಳಿಸಲು ಯಾವ ಕ್ರಮ ಬೇಕಾದರೂ ತೆಗೆದುಕೊಳ್ಳಲಿ. ನಾವು ಸಹಕಾರ ನೀಡುತ್ತೇವೆ. ಆದರೆ ಮಾಡಿದ ತಪ್ಪನ್ನು ಒಪ್ಪಿಕೊಳ್ಳದೇ ನಾವು ಮಾಡಿದ್ದೆ ಸರಿ ಎನ್ನುವುದಾದರೆ ನಾವು ಅದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಸರ್ಕಾರದ ಕಾರ್ಯವೈಖರಿ ಬಗ್ಗೆ ನ್ಯಾಯಾಧೀಶರು ಏನೆಲ್ಲಾ ಹೇಳುತ್ತಿದ್ದಾರೆ, ಮಾಧ್ಯಮಗಳು ಏನು ವರದಿ ಮಾಡುತ್ತಿವೆ, ಜನ ಸಾಮಾನ್ಯರು ಏನು ಮಾತನಾಡುತ್ತಿದ್ದಾರೆ ಎಂಬುದನ್ನು ಸರಕಾರ ಗಮನಿಸಬೇಕು‌ ಎಂದರು.

ಮಂತ್ರಿಗಳು ಈಗ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಕೆಲಸ ಮಾಡಿ ಎಂದು ನಾನು ಕಳೆದ ತಿಂಗಳ 18 ರಂದೇ ಹೇಳಿದ್ದೆ. ವಿರೋಧ ಪಕ್ಷದವರು ಹೇಳಿದ್ದನ್ನು ಮಾಡಲು ಈ ಸರ್ಕಾರ ಬೇಕಾ? ಇವರ ಕೈಯಲ್ಲಿ ಇದನ್ನು ನಿಭಾಯಿಸಲು ಸಾಧ್ಯವಿಲ್ಲ. ಇವರು ಮನೆಗೆ ಹೋಗಿ, ರಾಜ್ಯಪಾಲರ ಆಡಳಿತ ಬರುವುದೇ ಉತ್ತಮ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

ಶ್ರೀನಿವಾಸ್ ಬೆಂಬಲಕ್ಕೆ ಕೆಪಿಸಿಸಿ ನಿಲ್ಲಲಿದೆ:

ದೆಹಲಿ ಪೊಲೀಸರು ರಾಷ್ಟ್ರೀಯ ಯುವ ಕಾಂಗ್ರೆಸ್ ಕಚೇರಿಗೆ ನುಗ್ಗಿ, ಯುವ ಅಧ್ಯಕ್ಷರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ವಿಚಾರ ತಿಳಿದಿದೆ. ಶ್ರೀನಿವಾಸ್ ಅವರು ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಯುವ ಹೋರಾಟದ ಮೂಲಕ ಬೆಳೆದು ಬಂದವರು ಎಂಬುದನ್ನು ದೆಹಲಿ ಪೊಲೀಸರು ಹಾಗೂ ಕೇಂದ್ರ ಸರ್ಕಾರ ಅರಿಯಬೇಕು. ಅವರ ಸೇವೆಗೆ ಇಡೀ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಕರ್ನಾಟಕದ ಮೂಲದ, ನನ್ನ ಆತ್ಮೀಯರಾದ ಶ್ರೀನಿವಾಸ್ ರಂತಹ ನಾಯಕರನ್ನು ಹೊಂದಲು ನಮಗೆ ಹೆಮ್ಮೆ ಇದೆ. ಅವರ ನಾಯಕತ್ವ ಗುಣ, ಅವರ ಸೇವೆಗೆ ನಾನು ಸೆಲ್ಯೂಟ್ ಮಾಡುತ್ತೇನೆ. ಅವರು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಈ ದೇಶಕ್ಕೆ ದೊಡ್ಡ ಆಸ್ತಿ.

ಕೇಂದ್ರ ಸರ್ಕಾರದ ಈ ನಡೆಯನ್ನು ನಾನು ಖಂಡಿಸುತ್ತೇನೆ. ಅವರು ಯುವಕರ ಆಂದೋಲನ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಶ್ರೀನಿವಾಸ್ ಅವರು ರಾಜಕೀಯ ಕೆಲಸ ಮಾಡುತ್ತಿಲ್ಲ. ಬದಲಿಗೆ ದೇಶದ ಜನರ ಸೇವೆಗೆ ಶ್ರಮಿಸುತ್ತಿದ್ದಾರೆ. ಮಾನವೀಯ ಸೇವೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಈ ಸಮಯದಲ್ಲಿ ಮೋಸ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳದೇ, ಜನರ ಸೇವೆ ಮಾಡುತ್ತಿರುವವರನ್ನು ವಿಚಾರಣೆ ಮಾಡುತ್ತಿದೆ ಎಂದು ಆರೋಪಿಸಿದರು.

ಹಾಗೆಯೇ ಎಲ್ಲ ಯುವಕರು ಶ್ರೀನಿವಾಸ್ ಅವರ ಪರ ನಿಲ್ಲಬೇಕು. ಅವರ ಪರಿಶ್ರಮ, ಅಪಾರ ಜನಸೇವೆಗೆ ಇಡೀ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಶ್ರೀನಿವಾಸ್ ಅವರ ಬೆನ್ನಿಗೆ ನಿಲ್ಲಲಿದೆ. ಶ್ರೀನಿವಾಸ್ ನೀವು ಯಾವುದೇ ಕಾರಣಕ್ಕೂ ಅಂಜಬೇಡಿ. ನಾವು ನಿಮ್ಮ ಜತೆಗಿದ್ದೇವೆ. ಇಂತಹ ಅಡೆತಡೆಗಳು ನಮಗೆ ಸಾಮಾನ್ಯ. ಎಂತಹ ಪರಿಸ್ಥಿತಿ ಬಂದರೂ ನಮ್ಮ ತಾಯ್ನಾಡಿನ ರಕ್ಷಣೆ ಮಾಡೋಣ ಎಂದರು.

ಶಿಕ್ಷಕರ ಸಾವಿಗೆ ಆಡಳಿತ ಹಾಗೂ ಸರ್ಕಾರವೇ ಹೊಣೆ…

ಚುನಾವಣಾ ಆಯೋಗ, ಸರ್ಕಾರ, ಎಲ್ಲ ರಾಜಕೀಯ ಪಕ್ಷಗಳು ಜಾಗ್ರತೆ ವಹಿಸಬೇಕಿತ್ತು. ಚುನಾವಣೆ ಮುಂದೂಡಬೇಕು ಎಂಬ ಸಲಹೆ ಇತ್ತಾದರೂ ಚುನಾವಣೆ ನಡೆಸುವುದು ಆಯೋಗದ ತೀರ್ಮಾನವಾಗಿತ್ತು. ನನ್ನನ್ನೂ ಸೇರಿ ನಾವು ರಾಜಕೀಯ ಪಕ್ಷದವರು ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಾಗಲಿಲ್ಲ. ಇಂದು ಬಸವಕಲ್ಯಾಣದಲ್ಲಿ 42 ಜನ ಶಿಕ್ಷಕರು ಕೊರೋನಾದಿಂದ ಮೃತಪಟ್ಟಿರುವುದು ನಮ್ಮೆಲ್ಲರ ಅಪರಾಧ. ನಾವು ಜನ ಸಂಘಟನೆ, ಮತ ಪಡೆಯಬೇಕು ಎಂಬ ಅಮಲಿನಲ್ಲಿದ್ದೆವು. ಆದರೆ ಸರ್ಕಾರ ಚುನಾವಣೆ ಕೆಲಸ ಮಾಡಿದ ನಮ್ಮ ಶಿಕ್ಷಕ ವೃಂದಕ್ಕೆ ರಕ್ಷಣೆ ನೀಡಬಹುದಾಗಿತ್ತು ಎಂದು ಡಿ.ಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.  corona testing-Reducing - not right-DK Shivakumar - against -government

ಇದಕ್ಕೆ ಚುನಾವಣೆ ನಡೆಸಿದ ಆಡಳಿತವೇ ಹೊಣೆ. ಸೋಂಕು ಹೆಚ್ಚುತ್ತಿದೆ, ಹೀಗಾಗಿ ಚುನಾವಣೆ ಮುಂದೂಡಿ ಎಂದು ಸರ್ಕಾರ ಹೇಳಿದ್ದರೆ, ಆಯೋಗ ಚುನಾವಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಕೆಲವರಿಗೆ ಆತುರವಾಗಿ ಚುನಾವಣೆ ಮಾಡಬೇಕಿತ್ತು. ಅದಕ್ಕೆ ಶಿಕ್ಷಕರನ್ನು ಬಲಿ ಕೊಟ್ಟಿದ್ದಾರೆ ಎಂದು ಕಿಡಕಾರಿದರು.

Key words: corona testing-Reducing – not right-DK Shivakumar – against -government