ಶಾಲಾ ಮಕ್ಕಳ ಬ್ಯಾಗ್‌ ಗಳಲ್ಲಿ ಕಾಂಡೋಮ್‌,  ಸಿಗರೇಟ್‌ ಗಳು ಪತ್ತೆ.

ಬೆಂಗಳೂರು, ನವೆಂಬರ್ 30, 2022 (www.justkannada.in): ಬೆಂಗಳೂರಿನ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್‌ ಗಳನ್ನು ಬಳಸುವುದಕ್ಕೆ ಕಡಿವಾಣ ಹಾಕುವ ಸಲುವಾಗಿ ನಡೆಸಿದ ಅನಿರೀಕ್ಷಿತ ತಪಾಸಣೆಯಿಂದ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳ ಸದಸ್ಯರಿಗೆ ಆಘಾತವನ್ನುಂಟು ಮಾಡಿದೆ.

ಎಂಟು, ಒಂಬತ್ತು ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಪುಸ್ತಕಗಳ ಚೀಲಗಳಿಂದ ಸೆಲ್‌ ಫೋನ್‌ ಗಳ ಜೊತೆಗೆ, ಕಾಂಡೋಮ್‌ ಗಳು, ಗರ್ಭನಿರೋಧಕ ಮಾತ್ರೆಕಗಳು, ಲೈಟರ್‌ ಗಳು, ಸಿಗರೇಟ್‌ ಗಳು, ವೈಟನೆರ್‌ಗಳು ಹಾಗೂ ನಗದು ಲಭಿಸಿರುವ ಸುದ್ದಿ ಬಹಿರಂಗಗೊಂಡಿದೆ.

ಶಾಲೆಗಳಲ್ಲಿ ಮೊಬೈಲ್ ಫೋನ್‌ ಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ದೂರುಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕೆಎಎಂಎಸ್) ಶಾಲೆಗಳಲ್ಲಿ ವಿದ್ಯಾರ್ಥಿಗಳ ಬ್ಯಾಗುಗಳ ತಪಾಸಣೆ ನಡೆಸಿತು. ಆದರೆ ಇದರಿಂದ ಬಂದ ಫಲಿತಾಂಶ ಮಾತ್ರ ಅನಿರೀಕ್ಷಿತವಾಗಿದೆ.

ಈ ಹಿನ್ನೆಲೆಯಲ್ಲಿ ಕೆಲವು ಶಾಲೆಗಳು ಪೋಷಕರು-ಶಿಕ್ಷಕರ ಸಭೆಗಳನ್ನು ಏರ್ಪಡಿಸಿವೆ. “ಪೋಷಕರಿಗೂ ಸಹ ಈ ಸುದ್ದಿ ತಿಳೀದು ಆಘಾತವುಂಟಾಗಿದೆ. ಮಕ್ಕಳಲ್ಲಿ ಉಂಟಾಗಿರುವ ಈ ದಿಢೀರ್ ನಡವಳಿಕೆ ಬದಲಾವಣೆಗಳ ಬಗ್ಗೆ ಪೋಷಕರಲ್ಲಿಯೂ ಆತಂಕವನ್ನು ಉಂಟು ಮಾಡಿದೆ,” ಎಂದು ನಾಗರಬಾವಿಯ ಶಾಲೆಯೊಂದರ ಪ್ರಾಂಶುಪಾಲರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಈ ಸನ್ನಿವೇಶವನ್ನು ಬಹಳ ಸೂಕ್ಷ್ಮ ಹಾಗೂ ಎಚ್ಚರಿಕೆಯಿಂದ ನಿರ್ವಹಿಸಲು ಶಾಲೆಗಳು ನಿರ್ಧರಿಸಿದ್ದು, ವಿದ್ಯಾರ್ಥಿಗಳನ್ನು ವಜಾಗೊಳಿಸುವುದರ ಬದಲಾಗಿ ಪೋಷಕರಿಗೆ ನೋಟಿಸುಗಳನ್ನು ನೀಡಿ, ಆ ಮೂಲಕ ತಮ್ಮ ಮಕ್ಕಳಿಗೆ ಸೂಕ್ತ ಆಪ್ತಸಮಾಲೋಚನೆ ಒದಗಿಸುವಂತೆ ಶಿಫಾರಸ್ಸು ಮಾಡಿವೆ. “ಶಾಲೆಗಳಲ್ಲಿ ಆಪ್ತಸಮಾಲೋಚನಾ ಚಟುವಟಿಕೆಗಳಿದ್ದರೂ ಸಹ, ಮಕ್ಕಳಿಗೆ ಹೊರಗಡೆಯಿಂದ ಅಗತ್ಯ ನೆರವನ್ನು ಒದಗಿಸುವಂತೆ ತಿಳಿಸಿ 10 ದಿನಗಳವರೆಗೆ ರಜೆಯನ್ನು ನೀಡಿದ್ದೇವೆ,” ಎಂದು ಆ ಶಾಲೆಯ ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಮಾತನಾಡಿರುವ ಮತ್ತೊಂದು ಶಾಲೆಯ ಪ್ರಾಂಶುಪಾಲರು ತಿಳಿಸಿರುವಂತೆ 10ನೇ ತರಗತಿಯಲ್ಲಿ ಓದುತ್ತಿರುವ ಓರ್ವ ಬಾಲಕಿಯ ಬ್ಯಾಗ್‌ ನಲ್ಲಿ ಕಾಂಡೋಮ್ ಸಿಕ್ಕಿದೆ. “ಆಕೆಯನ್ನು ಪ್ರಶ್ನಿಸಿದರೆ, ಆಕೆ ತನ್ನ ಸಹಪಾಠಿಗಳನ್ನು ಅಥವಾ ಆಕೆ ಹೋಗುವ ಖಾಸಗಿ ಟ್ಯೂಷನ್ ಅನ್ನು ದೂರಿದಳು.”

ಈ ಸಂಬಂಧ ಮಾತನಾಡಿದ ಕೆಎಎಂಎಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರು ಶೇ.೮೦ ರಷ್ಟು ಶಾಲೆಗಳಲ್ಲಿ ಈ ರೀತಿ ತಪಾಸಣೆಗಳನ್ನು ನಡೆಸಲಾಗಿವೆ. “ಓರ್ವ ವಿದ್ಯಾರ್ಥಿಯ ಬ್ಯಾಗಿನಿಂದ (ಐ-ಪಿಲ್) ಲಭಿಸಿದೆ. ಜೊತೆಗೆ, ಕೆಲವು ವಿದ್ಯಾರ್ಥಿಗಳ ಕುಡಿಯುವ ನೀರಿನ ಬಾಟಲಿಯಲ್ಲಿ ಮದ್ಯ ಸೇರಿದದೂ ಕಂಡು ಬಂದಿದೆ,” ಎಂದು ಮಾಹಿತಿ ನೀಡಿದರು.

“ಈ ಆಘಾತದಿಂದ ಹೊರಬರಲು ನಾವು ಹೆಣಗಾಡುವಂತಾಗಿದೆ. ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಸಹಪಾಠಿಗಳಿಗೆ ಕಿರುಕುಳ ನೀಡುವುದು, ಹಾಗೂ ಅಸಭ್ಯ ಭಾಷೆಯನ್ನು ಬಳಸುವುದು, ಬಾಲಕಿಯರತ್ತ ಕೆಟ್ಟ ಸನ್ನೆಗಳನ್ನು ಮಾಡುವಂತಹ ಸಂಗತಿಗಳು ಹೆಚ್ಚಾಗುತ್ತಿವೆ. ಈ ರೀತಿಯ ನಡವಳಿಕೆ 5ನೇ ತರಗತಿ ಮಕ್ಕಳಲ್ಲಿಯೂ ಕಂಡು ಬರುತ್ತಿರುವುದು ಆಘಾತಕಾರಿಯಾಗಿದೆ,” ಎಂದು ಕುಮಾರ್ ಅವರು ತಿಳಿಸಿದ್ದಾರೆ.

ಅಭಯ ಆಸ್ಪತ್ರೆಯ ಮನೋವೈದ್ಯರಾದ ಡಾ. ಎ. ಜಗದೀಶ್ ಅವರು ಈ ಕುರಿತು ಮಾತನಾಡುತ್ತಾ, “ಒಂದು ಪ್ರಕರಣದಲ್ಲಿ ತಾಯಿ ಒಬ್ಬರೇ ಪೋಷಕರಾಗಿರುವ ಮಹಿಳೆಯೊಬ್ಬರಿಗೆ ಅವರ 14 ವರ್ಷ ವಯಸ್ಸಿನ ಮಗನ ಪಾದರಕ್ಷೆ ಇಡುವ ರ್ಯಾಲಕ್‌ ನಿಂದ ಕಾಂಡೋಮ್ ದೊರೆತಿದೆಯಂತೆ. ಆದರೆ ಈ ವಯಸ್ಸಿನ ಕೆಲವು ಮಕ್ಕಳಿಗೆ ಏನೇನೋ ತಿಳಿದುಕೊಳ್ಳುವ ಕುತೂಹಲವಿರುತ್ತದೆ, ಅದರಿಂದಾಗಿ ಪ್ರಯೋಗ ಮಾಡಲು ಬಯಸುತ್ತಾರೆ. ಇಂತಹ ಅನಿಸಿಕೆಗಳಲ್ಲಿ ಧೂಮಪಾನವೂ ಸೇರಿದ್ದು, ಅದರಿಂದ ಮಾದಕವಸ್ತುಗಳ ಸೇವನೆಯೂ ಆರಂಭವಾಗಬಹುದು. ಜೊತೆಗೆ, ಬಾಲಕ-ಬಾಲಕಿಯರು ಮಡಿಮೈಲಿಗೆ ಇಲ್ಲದೆ ಸೋಷಿಯಲೈಜಿಂಗ್ ಹೆಸರಿನಲ್ಲಿ ತುಂಬಾ ಹತ್ತಿರವಾಗುವುದು ಪರಸ್ಪರ ಶಾರೀರಿಕ ಆಕರ್ಷಣೆಗೆ ದಾರಿ ಮಾಡಿಕೊಡಬಹುದು,” ಎಂದು ತಿಳಿಸಿದರು. ಪೋಷಕರಿಗೆ ಅವರ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಅಗತ್ಯವಿರುವುದಾಗಿ ಅವರು ತಿಳಿಸಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Condoms- cigarettes- found -school –children- bags.