ಘನತೆ ಬಿಟ್ಟು ‘ಸೊಂಟ’ದ ವಿಷಯವನ್ನು ‘ಸಂತೋಷ’ದಿಂದ ಟ್ರೋಲ್ ಮಾಡುವುದು ತರವೇ…?

Promotion

ಮೈಸೂರು,ಆ,22,2020(www.justkannada.in): ನಿನ್ನೆ ಸಿಎಂ ಬಾಗಿನ  ಅರ್ಪಿಸುವ ಸಂದರ್ಭದಲ್ಲಿ ನಡೆದ ಕ್ಷಣ ಮಾತ್ರದ ಘಟನೆಯನ್ನು  ಕೆಲವರು ತೀರಾ ವಿಕೃತಿಗೊಳಿಸಿ ಟ್ರೋಲ್ ಮಾಡುತ್ತಿದ್ದಾರೆ . ಈ ಟ್ರೋಲ್ ಗೆ ಸಾಮಾಜಿಕ ವಿವಿಧ ವರ್ಗಗಳಿಂದ ತೀವ್ರ ವ್ಯಕ್ತವಾಗಿದೆ.

ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಅವರ ಮಾಧ್ಯಮ ಸಲಹೆಗಾರರಾಗಿದ್ದ ಹಾಗೂ ಹಿರಿಯ ಪತ್ರಕರ್ತರ ದಿನೇಶ್ ಅಮಿನ್ ಮಟ್ಟು ಹಾಗೂ ಮಹಿಳಾ ಹಿರಿಯ ಪತ್ರಕರ್ತೆ ಪ್ರೀತಿ ನಾಗರಾಜ್  ತಮ್ಮ ಫೇಸ್ ಬುಕ್ ಪುಟದಲ್ಲಿ ‘ಟ್ರೋಲಿಗರ’ನ್ನ ಟೀಕಿಸಿದ್ದಾರೆ.

ನಿನ್ನೆ ನಡೆದ ಘಟನೆ ಬಗ್ಗೆ ಟ್ರೋಲ್ ಮಾಡಿರುವ ಕುರಿತು ದಿನೇಶ್ ಅಮಿನ್ ಮಟ್ಟು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದು  ಟೀಕಿಸಿದ್ದು ಹೀಗೆ…

ಕಳೆದ ಲೋಕಸಭಾ ಚುನಾವಣೆಯ ಕಾಲದಲ್ಲಿ ಪತ್ರಕರ್ತರೊಬ್ಬರು ಸಂದರ್ಶಿಸುತ್ತಾ ರಾಹುಲ್ ಗಾಂಧಿಯವರಿಗೆ ‘’ ನರೇಂದ್ರಮೋದಿ ಅವರಿಂದ ನೀವು ಏನನ್ನು ಕಲಿತಿದ್ದೀರಿ? ಎಂದು ಪ್ರಶ್ನಿಸಿದ್ದರು.

ಥಟ್ಟನೆ ಉತ್ತರಿಸಿದ ರಾಹುಲ್ ‘’ ಅವರ ಹಾಗೆ ಆಗಬಾರದು ಎನ್ನುವುದನ್ನು ಕಲಿತೆ’’ ಎಂದಿದ್ದರು.. ಅದನ್ನು ಕೇಳಿ ನಾನೇ ಒಂದು ಕ್ಷಣ ಹೌಹಾರಿ ಬಿಟ್ಟಿದ್ದೆ. ಆ ಒಂದು ಉತ್ತರಕ್ಕಾಗಿ ಅವಕಾಶ ಸಿಕ್ಕರೆ ಒಮ್ಮೆ ರಾಹುಲ್ ಕೈಕುಲಕಬೇಕೆಂದಿದ್ದೇನೆ.

ಇಂತಹದ್ದೊಂದು ಸಾಮಾನ್ಯ ತಿಳುವಳಿಕೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇದ್ದಿದ್ದರೆ ಕಳೆದ ಸಂಜೆಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವ ‘ಬಾಗಿನ ಅಪಘಾತ’ವನ್ನು ಈ ಮಟ್ಟದಲ್ಲಿ ಟ್ರೋಲ್ ಮಾಡುತ್ತಿರಲಿಲ್ಲ. ತಥಾಕಥಿತ ‘ಭಕ್ತ’ರನ್ನು ವಿರೋಧಿಸುವುದೆಂದರೆ ‘ಭಕ್ತ’ರಾಗುವುದಲ್ಲ’ ಎನ್ನುವುದನ್ನು ತಿಳಿದುಕೊಳ್ಳದೆ ಇದ್ದರೆ ಇಂತಹ ಹರಾಕಿರಿಗಳು ನಡೆಯುತ್ತಾ ಇರುತ್ತವೆ. ಅಂದ ಹಾಗೆ, ಸೊಂಟದ ವಿಷಯದ ಬಗೆಗಿನ ಟ್ರೋಲ್ ಗಳನ್ನು ಹೆಚ್ಚು ‘ಸಂತೋಷ’ದಿಂದ ವೈರಲ್ ಮಾಡುತ್ತಿರುವುದು ಸಂಘ ಪರಿವಾರದವರು ಎನ್ನುವುದು ಕೂಡಾ ಕುತೂಹಲಕರ ಸಂಗತಿ.CM bs yeddyurappa-MP- Sumalatha ambarish-troll- criticize-journalists-Dinesh ameen mattu-Preethi nagaraj

ಕಾಂಗ್ರೆಸ್ ಪಕ್ಷದಲ್ಲಿಯೇ ಇರುವ ಮತ್ತು ಈ ಪಕ್ಷದ ಪರವಾಗಿರುವ ಹೆಣ್ಣುಮಕ್ಕಳು ನಿನ್ನೆಯಿಂದ ಈ ಟ್ರೋಲ್ ಗಳನ್ನು ಯಾವರೀತಿ ವಿರೋಧಿಸುತ್ತಿದ್ದಾರೆ ನೋಡಿ. ಟ್ರೋಲ್ ಮಾಡಲೇ ಬೇಕೆಂದಿದ್ದರೆ ಸಚಿವರಾದ ಅಶೋಕ್ ಮತ್ತು ಸಿ.ಟಿ.ರವಿ ಅವರನ್ನು ನಮ್ಮ ರಂಗಣ್ಣ ಪುಲ್ ರಾಂಗ್ ಆಗಿ ಹಿಗ್ಗಾಮುಗ್ಗಾ ಝಾಡಿಸಿದ್ದ ಕ್ಲಿಪ್ಪಿಂಗ್ ಇದೆ ನೋಡಿ.

ಕೆಪಿಸಿಸಿಯ ಸಾಮಾಜಿಕ ಮಾಧ್ಯಮ ಇತ್ತೀಚೆಗೆ ಅತಿಸಕ್ರಿಯವಾಗಿರುವುದು ಸಂತೋಷದ ವಿಚಾರ. ಆದರೆ ಸಾಮಾಜಿಕ ಮಾಧ್ಯಮಗಳೆಂದರೆ ಕೇವಲ ಟ್ರೋಲ್ ಗಳಲ್ಲ. ಅವರಲ್ಲಿರುವುದು ಸುಳ್ಳುಗಳು, ಅನ್ಯಾಯಗಳು,ದ್ರೋಹಗಳು, ವೈಫಲ್ಯಗಳು,ಆತ್ಮವಂಚನೆಗಳು ಮಾತ್ರ. ಸತ್ಯ,ನ್ಯಾಯ,ಧರ್ಮಕ್ಕೂ ಅವರಿಗೆ ಆಗಿ ಬರುವುದಿಲ್ಲ. ಅಂತಹವರನ್ನು ಎದುರಿಸಲು ಎಷ್ಟೊಂದು ಸರಕುಗಳು.

ಇಂದು ಭಕ್ತ ಪಡೆಯನ್ನು ಸಮರ್ಥವಾಗಿ ಎದುರಿಸುತ್ತಿರುವವರು ಕಾಂಗ್ರೆಸ್ ಪಕ್ಷ ಅಲ್ಲ. ಅದು ಬಿಜೆಪಿ ಪಕ್ಷ ಸರ್ಕಾರ ಮತ್ತು ಸಂಘ ಪರಿವಾರದ ಅಸಲಿ ಮುಖವನ್ನು ಕಷ್ಟಪಟ್ಟು ಸಂಶೋಧನೆ ನಡೆಸಿ, ವಿಚಾರಗಳನ್ನು ಮಥನ ಮಾಡಿ ಅನಾವರಣಗೊಳಿಸುತ್ತಿರುವ ಸಾಮಾಜಿಕ ಕಾರ್ಯಕರ್ತರು.

ಮೊನ್ನೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ದಲಿತ-ಹಿಂದುಳಿದ ಜಾತಿಗಳ ನಕಲಿ ನಾಯಕ ಎಂದು ಗೇಲಿ ಮಾಡಿದ್ದರು. ಅಷ್ಟಕ್ಕೆ ನಿಲ್ಲಿಸದೆ “ಸಿದ್ದರಾಮಯ್ಯನವರ ಕಾಲದಲ್ಲಿ 24 ಹಿಂದುಗಳ ಹತ್ಯೆ ನಡೆದಿದೆ, ಅವರೆಲ್ಲರೂ ಹಿಂದುಳಿದ ಜಾತಿಯವರು, ಅವರ ಮನೆಗಳಿಗೆ ಹೋಗಿಲ್ಲ..” ಇತ್ಯಾದಿ ಆರೋಪಗಳನ್ನು ಮಾಡಿದ್ದರು.

ಇದು ಮರುದಿನದ ಪತ್ರಿಕೆಗಳಲ್ಲಿ ಮಹತ್ವದ ಸುದ್ದಿಯಾಗಿ ಪ್ರಕಟವಾಯಿತು. ಇದು ಸುಳ್ಳು ಆರೋಪ ಎನ್ನುವುದನ್ನು ಸಾಬೀತುಪಡಿಸುವ ಪ್ರಯತ್ನವನ್ನು ಸಂಜೆಯ ವರೆಗೆ ಯಾರೂ ಮಾಡಲಿಲ್ಲ. ಎಲ್ಲರೂ ಯಡಿಯೂರಪ್ಪನವರ ಸೊಂಟದ ವಿಷಯ ಎಂದು ಟ್ರೋಲ್ ಮಾಡಲು ಬ್ಯುಸಿಯಾಗಿದ್ದರು.

ಕೊನೆಗೆ ಸಿದ್ದರಾಮಯ್ಯನವರೇ ಸಂಜೆ ಆರುವರೆ ಗಂಟೆಗೆ ನಳಿನ್ ಕುಮಾರ್ ಕಟೀಲ್ ಅವರ ಸುಳ್ಳನ್ನು ಟ್ವೀಟ್ ಗಳ ಮೂಲಕ ದಾಖಲೆ ಸಹಿತ ಬೆತ್ತಲೆಗೊಳಿಸಬೇಕಾಯಿತು. ಈ ದಾಖಲೆಗಳು ಕಾಂಗ್ರೆಸ್ ಕಚೇರಿಯಲ್ಲಿ ಲಭ್ಯ ಇತ್ತು. ರಾಮಲಿಂಗಾರೆಡ್ಡಿಯವರು ಗೃಹಸಚಿವರಾಗಿದ್ದಾಗ 2013-18ರ ವರೆಗೆ ಕೋಮುಸಂಘರ್ಷದಲ್ಲಿ ಹತ್ಯೆಯಾಗಿರುವ 45 ವ್ಯಕ್ತಿಗಳ ವಿವರವನ್ನು FIR ಸಹಿತ ಮುದ್ರಿಸಿ ಪುಸ್ತಕರೂಪದಲ್ಲಿ ಹಂಚಿ ಒಂದು ಒಳ್ಳೆಯ ಕೆಲಸ ಮಾಡಿದ್ದರು. Quint ವೆಬ್ ಮಾಧ್ಯಮದ ವರದಿಗಾರ ಶ್ರುತಿಸಾಗರ್ ದೆಹಲಿಯಿಂದ ಬಂದು ಹತ್ಯೆಗೀಡಾದ ಈ ಎಲ್ಲರ ಮನೆಗೆ ಹೋಗಿ ಕುಟುಂಬದ ಸದಸ್ಯರ ಜೊತೆ ಮಾತನಾಡಿ ಎರಡು ಕಂತುಗಳಲ್ಲಿ ವಿವರವಾಗಿ ವರದಿ ಮಾಡಿದ್ದರು. ಆ ವರದಿಗಳನ್ನು ಕನ್ನಡಕ್ಕೆ ಅನುವಾದಿಸಿ ವಾರ್ತಾಭಾರತಿ ಪತ್ರಿಕೆ ಪ್ರಕಟಿಸಿತ್ತು.

ನಳಿನ್ ಕುಮಾರ್ ಕಟೀಲ್ ಅವರನ್ನು ಸುಳ್ಳುಗಳನ್ನು ಬೆತ್ತಲೆ ಮಾಡಲು ಇಷ್ಟು ಸಾಕಿತ್ತು. ಯಾರೂ ಅದನ್ನು ಮಾಡಿರಲಿಲ್ಲ. ಸಿದ್ದರಾಮಯ್ಯನವರು ಟ್ವೀಟ್ ಮಾಡಿದ ನಂತರ ರಾತ್ರಿ ಮಲಗಿದ್ದ ಸಿ.ಟಿ.ರವಿ ಎಚ್ಚೆತ್ತು ಎರಡು ವಿಡಿಯೋ ಮಾಡಿ ಬಡಬಡಿಸಿದ್ದಾರೆ. ಟ್ಟೀಟ್ ಗಳಲ್ಲಿ ಎತ್ತಿದ್ದ ಯಾವ ಪ್ರಶ್ನೆಗೂ ಉತ್ತರ ಇಲ್ಲ.

ಇನ್ನೂ ಮಜಾ ಎಂದರೆ ನಿನ್ನೆ ನಳಿನ್ ಕುಮಾರ್ ಕಟೀಲ್ ಮಾತುಗಳನ್ನು ಎರಡು ಕಾಲಂನಲ್ಲಿ ದಪ್ಪಕ್ಷರದ ಎರಡು ಸಾಲಿನ ಹೆಡ್ಡಿಂಗ್ ನೊಂದಿಗೆ ಪ್ರಕಟಿಸಿದ್ದ ವಿಶ್ವಾಸಾರ್ಹ ಪತ್ರಿಕೆ, ಅದಕ್ಕೆ ಉತ್ತರ ನೀಡಿದ್ದ ಸಿದ್ದರಾಮಯ್ಯನವರ ಪ್ರತಿಕ್ರಿಯೆಯನ್ನು ಎರಡು ಪ್ಯಾರಾಗಳ ಬಾಕ್ಸ್ ಮಾಡಿದೆ, ಆದರೆ ಸಿದ್ದರಾಮಯ್ಯನವರ ಟ್ವೀಟ್ ಗೆ ನಳಿನ್ ಕುಮಾರ್ ಕಟೀಲ್ ನೀಡಿದ್ದ ಪ್ರತಿಕ್ರಿಯೆಯನ್ನು ಮತ್ತೆ ಮೂರು ಕಾಲಮ್ ಗಳಲ್ಲಿ ಪ್ರಕಟಿಸಿದೆ.

ಮುಖ್ಯವಾಹಿನಿ ಮಾಧ್ಯಮಗಳೇ ಹಾದಿ ತಪ್ಪುತ್ತಿರುವಾಗ ಸಾಮಾಜಿಕ ಮಾಧ್ಯಮಗಳನ್ನು ಕೂಡಾ ಸಮರ್ಥವಾಗಿ ಬಳಸಿಕೊಳ್ಳದೆ ಕೇವಲ ಟ್ರೋಲ್ ಗಳಿಗಷ್ಟೇ ಸೀಮಿತಗೊಳಿಸಿದರೆ ದೇಶಕ್ಕೆ ಹೇಗೂ ಕಷ್ಟ, ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಕಷ್ಟ.

ಟ್ರೋಲಿಗರ ವಿರುದ್ದ ಫೇಸ್ ಬುಕ್ ನಲ್ಲಿ ಮಹಿಳಾ ಹಿರಿಯ ಪತ್ರಕರ್ತೆ ಪ್ರೀತಿ ನಾಗರಾಜ್ ಕಿಡಿಕಾರಿದ್ದು ಹೀಗೆ

ನಿನ್ನೆ ಬಾಗಿನದ ಸಮಯದಲ್ಲಿ ನಡೆದ ಘಟನೆಯನ್ನು ಟ್ರೋಲ್ ಮಾಡುವುದು ಅಂದರೆ ಬಿಜೆಪಿಗೆ ಅವಮಾನ ಮಾಡಿದ ಹಾಗೆ ಅಲ್ಲ. ಬದಲಿಗೆ ನಮ್ಮನ್ನು ನಾವೇ ಅವಮಾನ ಮಾಡಿಕೊಂಡ ಹಾಗೆ.

ಅದರಲ್ಲಿ ಗಲೀಜು ಭಾಷಾ ಬಳಕೆಯ ಹೊರತು ಮತ್ಯಾವ ಘನ ಉದ್ದೇಶದ ಸಾಧನೆಯೂ ಆಗಿಲ್ಲ. ರಾಜಕೀಯದಲ್ಲಿ ಆ ಹೆಣ್ಣು ಮಗಳು, ಹಾಲಿ ಎಂಪಿ ಇನ್ನೂ ಸಾಕಷ್ಟು ಮಾಗಬೇಕಿದೆ ಎನ್ನುವುದು ನಮಗೆ ನೆನಪಿರಬೇಕು. ಇಂತಹ ಸಂಕುಚಿತ ಅಭಿಪ್ರಾಯಗಳು ಅವರನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಇದು ಅವರ ಬಗ್ಗೆ ಅಷ್ಟೇ ಅಲ್ಲ, ಸಾಮಾಜಿಕ ಬದುಕಿನಲ್ಲಿ ಇರುವ ಎಲ್ಲಾ ಮಹಿಳೆಯರ ಬಗ್ಗೆಯೂ ಇರಲೇಬೇಕಾದ ಕನಿಷ್ಠ ಗೌರವವನ್ನು ತೋರಿಸುವ ಅಭ್ಯಾಸವನ್ನು ಪಕ್ಷಾತೀತವಾಗಿ ನಾವು ಮಾಡಿಕೊಳ್ಳಬೇಕು.

ಇನ್ನು ಯಡಿಯೂರಪ್ಪ ಅವರು ಪಕ್ಕದಲ್ಲಿದ್ದ ವ್ಯಕ್ತಿ (ಗಂಡಸು ಹೆಂಗಸು ಅಥವಾ ಮತ್ಯಾರೆ ಆಗಿರಬಹುದು) ಯನ್ನು ಸ್ಪರ್ಶ ಮಾಡಿದ ರೀತಿಯಲ್ಲಿ ಯಾವ ವಿಕೃತಿಯೂ ಇರಲಿಲ್ಲ, ಅದೊಂದು ಇಂಪಲ್ಸಿವ್ ಅಥವಾ ರಿಫ್ಲೆಕ್ಸ್ ಆಧಾರಿತ gesture (not even a touch) ಎನ್ನುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಅದರಿಂದ ಮಹಿಳಾ ಎಂಪಿ ಒಂದು ನಿಮಿಷ conscious ಆದರು ಎನ್ನುವುದು ಕೆಲವು ಕ್ಲಿಪಿಂಗ್ ಗಳಲ್ಲಿ ಕಾಣಿಸಿತು. ಇದೂ ಕೂಡ ಒಂದು reflex action ಆಗಿತ್ತು, ಅವರನ್ನು ಅಥವಾ ಯಾರನ್ನೂ ಮತ್ಯಾರೋ ಹೀಗೆ, ಒಂದು ಪಕ್ಷ ಅವರ ಮಕ್ಕಳೇ ಮುಟ್ಟಿದರೂ ಕೂಡ ಆಗಬಹುದಾದ ಒಂದು ಪ್ರತಿಕ್ರಿಯೆಯ ರೂಪದ ಕ್ಷಣಿಕ ಮುಜುಗರದ ಪರಿಣಾಮ ಇದು.

ಸರ್ಕಾರ, ಸಿ ಎಂ, ಎಂ ಪೀ, ಮಂತ್ರಿಗಳು ಎಲ್ಲರನ್ನೂ ಖಂಡಿತಾ ಟೀಕೆ ಮಾಡೋಣ. ಆದರೆ ಸಿನಿಮಾ ಥಿಯೇಟರಿನ ಕತ್ತಲಿನಲ್ಲಿ ಕೂತ ಹಸಿ ಹಸಿ ಬಯಕೆಯ ಹುಡುಗ ಹುಡುಗಿಯರನ್ನು ಕಟ್ಟೆಗೆ ಕೂತ ಬೊಚ್ಚು ಬಾಯಿಯ ಖಾಲೀ ಜನ ವರ್ಣಿಸುವ ಹಾಗೆ ಅಲ್ಲ. ಸಾಮಾಜಿಕ ಜೀವನದಲ್ಲಿ ಪ್ರಶ್ನಾರ್ಹ ನಡವಳಿಕೆ ತೋರಿದಾಗ ಖಂಡಿತಾ ಪ್ರಶ್ನೆ ಮಾಡೋಣ.

ನಮ್ಮ ಉದ್ದೇಶ ಟೀಕೆ ಎರಡಕ್ಕೂ ಒಂದು ಸಾಮಾಜಿಕ ಘನತೆ ಇರಬೇಕು. ಇಲ್ಲದಿದ್ದರೆ ಟ್ವೀಟಿಗೆ ಎಂಟಾಣೆ ಪಡೆಯುವ ಟ್ರೋಲುಗಳ ಭಾಷೆಗೂ ಅವರ ಹೊಲಸು ಬಾಯಿಗೂ, ನಮ್ಮ ಆಲೋಚನೆಗಳಿಗೂ ಯಾವ ವ್ಯತ್ಯಾಸವೂ ಇರಲ್ಲ.

ನನ್ನ ಎದುರಾಳಿಯ ಘನತೆ ನನ್ನದೂ ಕೂಡ ಎಂದುಕೊಂಡಾಗ ಮಾತ್ರ ಆಟಕ್ಕೆ ಒಂದು ಉತ್ತಮ ಅಖಾಡ ಇರುತ್ತದೆ. ದೊಡ್ಡವರು ಹೇಳಿಲ್ಲವೇ? ಗುದ್ದಾಡಿದರೂ ಗಂಧ ತೇಯುವವರ ಜೊತೆ ಆಡಬೇಕು. ಕನ್ನಡಿಯಲ್ಲಿ ನೋಡಿದರೆ ನಮ್ಮ ಮುಖ ನಮಗೆ ಸಹ್ಯ ಅನ್ನಿಸಬೇಕು. CM bs yeddyurappa-MP- Sumalatha ambarish-troll- criticize-journalists-Dinesh ameen mattu-Preethi nagaraj.

Key words: CM bs yeddyurappa-MP- Sumalatha ambarish-troll- criticize-journalists-Dinesh ameen mattu-Preethi nagaraj