ಹೊರವರ್ತುಲ ರಸ್ತೆ ಭೂ ಪರಿಹಾರ ವಿತರಣೆ ಕುರಿತು ವಾರದಲ್ಲಿ ಸ್ಪಷ್ಟತೆ- ಡಿಸಿಎಂ ಡಾ. ಅಶ್ವತ್ಥನಾರಾಯಣ್

ಬೆಂಗಳೂರು,ಫೆ,28,2020(www.justkannada.in):  ನಗರದಲ್ಲಿ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಎದುರಾಗಿರುವ ಭೂ -ಸ್ವಾಧೀನ ಹಾಗೂ ಪರಿಹಾರ ವಿತರಣೆ ಕುರಿತ ಸಮಸ್ಯೆಗೆ ಇನ್ನೊಂದು ವಾರದಲ್ಲಿ ಸ್ಪಷ್ಟತೆ ಕಂಡುಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿರುವ ಹೊರವರ್ತುಲ ರಸ್ತೆಯ ಭೂ ಪರಿಹಾರ ವಿತರಣೆ ಹಾಗೂ ಇತರ ಸಂಬಂಧಿತ ವಿಷಯಗಳ ಬಗ್ಗೆ ರೈತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಿದ ನಂತರ ಡಾ. ಅಶ್ವತ್ಥನಾರಾಯಣ ಸುದ್ದಿಗಾರರ ಜತೆ ಮಾತನಾಡಿದರು.

“ಮೂಲಸೌಕರ್ಯದ ಕೊರತೆ ಹಾಗೂ ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಹೊರವರ್ತುಲ ರಸ್ತೆ ನಿರ್ಮಾಣ ಕಾರ್ಯ ತ್ವರಿತವಾಗಿ ಆಗಬೇಕೆಂಬ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರ ನಿರ್ಣಯಕ್ಕೆ ಪೂರಕವಾಗಿ ಈ ದಿನ ಸಭೆ ಸೇರಿ ಚರ್ಚೆ ನಡೆಸಲಾಗಿದೆ.  ಭೂ ಸ್ವಾಧೀನ ಹಾಗೂ ಪರಿಹಾರ ವಿತರಣೆ ಕುರಿತು ರೈತ ಪ್ರತಿನಿಧಿಗಳ ಸಲಹೆ ಪಡೆಯಲಾಗಿದೆ. ಅವರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಇನ್ನೊಂದು ವಾರದಲ್ಲಿ ಹೆಚ್ಚಿನ ಸ್ಪಷ್ಟತೆ ಪಡೆಯಲಾಗುವುದು,”ಎಂದು  ಅಶ್ವಥ್ ನಾರಾಯಣ್ ಹೇಳಿದರು.

“ಹೊರ ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಜಾಗವನ್ನು ನೋಟಿಫೈ ಮಾಡಿ 15 ವರ್ಷಕ್ಕಿಂತ ಹೆಚ್ಚು ಕಾಲ ಆಗಿದೆ.  2013ರ ಒಪ್ಪಂದಕ್ಕೆ ರೈತರ ಸಹಮತ ಇಲ್ಲ. ಬದಲಾದ ಪರಿಸ್ಥಿತಿಯಲ್ಲಿ ಅವರ ಬೇಡಿಕೆಗಳು ಬದಲಾಗಿದ್ದು, ಪರಿಹಾರದ ವಿಚಾರದಲ್ಲಿ ತಕರಾರಿದೆ.   ಈ ನಿಟ್ಟಿನಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಸೇರಿದಂತೆ ಇತರ ರೈತ ಪ್ರತಿನಿಧಿಗಳ ಜತೆ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎಸ್‌. ಆರ್. ವಿಶ್ವನಾಥ್‌ ನೇತೃತ್ವದಲ್ಲಿ ಅಧಿಕಾರಿಗಳು ಈಗಾಗಲೇ ಹಲವಾರು ಸುತ್ತಿನ ಮಾತುಕತೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.  ಸಹಮತದಲ್ಲಿ ಭೂ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ. ಈ  ಜಟಿಲ ಸಮಸ್ಯೆಗೆ ಆದಷ್ಟು ಬೇಗ ಸೂಕ್ತ ಪರಿಹಾರ ಕಂಡುಕೊಳ್ಳುವ ವಿಶ್ವಾಸ ಇದೆ,”ಎಂದು ಅವರು ತಿಳಿಸಿದರು.

ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ ಸಿಂಗ್, ಬಿಡಿಎ ಆಯುಕ್ತ ಪ್ರಕಾಶ, ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ ಇದ್ದರು.

Key words: Clarity – Outlander Road- – DCM Ashwathnarayan-bangalore