ಬೆಂಗಳೂರು ನಗರದಲ್ಲಿ ಕಣ್ಮರೆಯಾದ ಬಸ್ ತಂಗುದಾಣ…!

ಬೆಂಗಳೂರು, ಆಗಸ್ಟ್ 31, 2021 (www.justkannada.in): ದೊಡ್ಡ ನಗರಗಳಲ್ಲಿ ವಸ್ತುಗಳು ಕಳವಾಗುವುದು ಸಾಮಾನ್ಯ. ಈ ಕುರಿತು ನಾವು ಸಾಕಷ್ಟು ಸುದ್ದಿಗಳನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಅದೇನು ಗೊತ್ತಾ? ನೀವು ನಂಬುವಿರೋ ಇಲ್ಲವೋ, ಬೆಂಗಳೂರಿನ ತಂಬುಚೆಟ್ಟಿ ಪಾಳ್ಯದಲ್ಲಿ ಬಸ್ ತಂಗುದಾಣವೇ ಕಣ್ಮರೆಯಾಗಿದೆ.

ಬೆಂಗಳೂರಿನ ಹೊಯ್ಸಳ ನಗರದ ಲಯನ್ಸ್ ಕ್ಲಬ್ ವತಿಯಿಂದ ೨೦೧೬ರಲ್ಲಿ ಬಿಎಂಟಿಸಿ ಬಸ್‌ ಗಳಿಗಾಗಿ ಕಾಯುವವರ ಅನುಕೂಲಕ್ಕಾಗಿ ಒಂದು ಬಸ್ ತಂಗುದಾಣವನ್ನು ನಿರ್ಮಿಸಲಾಗಿತ್ತು. ಬಸ್ಸಿಗಾಗಿ ಕಾಯುವವರಿಗೆ ಬಿಸಿಲು, ಮಳೆಯಿಂದ ರಕ್ಷಣೆಯನ್ನು ಒದಗಿಸುವ ಉದ್ದೇಶದೊಂದಿಗೆ ಈ ಬಸ್ ತಂಗುದಾಣವನ್ನು ನಿರ್ಮಿಸಿಲಾಗಿತ್ತು. ಆದರೆ ಅದು ರಾತ್ರೋರಾತ್ರಿ ಕಳುವಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಕೋರಿ ಸ್ಥಳೀಯರು ಧರಣಿ ನಡೆಸುತ್ತಿದ್ದಾರೆ.

ಕೆ.ಆರ್.ಪುರಂ ರೈಸಿಂಗ್ ಎಂಬ ಸಂಸ್ಥೆಯ ಅಧ್ಯಕ್ಷರಾದ ಪುರುಷೋತ್ತಮ್ ಪಿ. ಅವರು ಈ ಕುರಿತು ಮಾತನಾಡಿ, “ಶುಕ್ರವಾರ ರಾತ್ರಿ ಬಸ್ ತಂಗುದಾಣ ಕಣ್ಮರೆಯಾಗಿರುವುದು ನಮಗೆ ತಿಳಿದುಬಂತು. ನಮಗೆಲ್ಲಾ ಇದರ ಬಗ್ಗೆ ಬಹಳ ಆಶ್ಚರ್ಯವಾಗಿದೆ. ಯಾರಾದರೂ ಬಸ್ ತಂಗುದಾಣವನ್ನೇ ಕದ್ದೊಯ್ಯುತ್ತಾರೆ ಎಂದರೆ ನಂಬಲಾಗದ ವಿಚಾರ. ಆದರೂ ಇದು ನಡೆದಿದೆ. ಹೊಯ್ಸಳ ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುತ್ತಿರುತ್ತಾರೆ. ಆದರೂ ಇಂತಹ ಘಟನೆ ನಡೆದಿರುವುದು ನಮ್ಮೆಲ್ಲರ ನಿದ್ದೆ ಗೆಡಿಸಿದೆ,” ಎಂದರು.

ಆ ಸಮಯದಲ್ಲಿ ಬಿಬಿಎಂಪಿ, ಇಲ್ಲಿ ಬಸ್ ತಂಗುದಾಣವನ್ನು ನಿರ್ಮಾಣ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆಗ ಲಯನ್ಸ್ ಬೆಂಗಳೂರು ಹೊಯ್ಸಳನಗರ, ಬಸ್ ತಂಗುದಾಣವನ್ನು ನಿರ್ಮಿಸಿಕೊಡುವುದಾಗಿ ತಿಳಿಸಿತು. “ಇಲ್ಲಿ ಬಸ್ ತಂಗುದಾಣ ನಿರ್ಮಿಸಲು ರೂ.೧.೫೦ ಲಕ್ಷ ಖರ್ಚು ಮಾಡಲಾಗಿತ್ತು. ಕೆ.ಆರ್.ಪುರಂ ವಾರ್ಡ್ ನ  ಆಗಿನ ಕಾರ್ಪೊರೇಟರ್ ಪೂರ್ಣಿಮಾ ಶ್ರೀನಿವಾಸ್ ಅವರು ಇದನ್ನು ಉದ್ಘಾಟಿಸಿದ್ದರು. ಕಳ್ಳರು ಬಸ್ ತಂಗುದಾಣವನ್ನೇ ಕದ್ದೊಯ್ದಿದ್ದಾರೆ ಎಂದರೇ, ಈ ನಗರ ಎಷ್ಟು ಸುರಕ್ಷಿತ ಎಂಬುದನ್ನು ನೀವೇ ಯೋಚಿಸಿ,” ಎಂದರು

ಈ ಘಟನೆಯಲ್ಲಿ ಹತ್ತಿರದಲ್ಲಿರುವ ಕಟ್ಟಡದ ಮಾಲೀಕರ ಕೈವಾಡವಿದೆ ಎನ್ನುವುದು ಸ್ಥಳೀಯರ ಶಂಕೆಯಾಗಿದೆ. “ಈ ಘಟನೆಗೆ ಕಾರಣರಾದವರೇ ಈ ಸ್ಥಳದಲ್ಲಿ ಪುನಃ ಬಸ್ ತಂಗುದಾಣವನ್ನು ನಿರ್ಮಿಸಬೇಕು. ಇದೇ ಸ್ಥಳದಲ್ಲಿ ಬಸ್ ತಂಗುದಾಣವನ್ನು ನಿರ್ಮಿಸದೇ ಇದ್ದರೆ ನಾವು ಬೆಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ಸಲ್ಲಿಸುತ್ತೇವೆ,” ಎಂದು ಸಾಮಾಜಿಕ ಕಾರ್ಯಕರ್ತ ಬಾಲಾಜಿ ರಘೋತ್ತಮ್ ತಿಳಿಸಿದ್ದಾರೆ.

ಬಿಬಿಎಂಪಿ ಕೌನ್ಸಿಲ್‌ ನ ಮಾಜಿ ನಾಮನಿರ್ದೇಶಿತ ಕಾರ್ಪೊರೇಟರ್ ಆಂತೊಣಿ ಸ್ವಾಮಿ ಅವರು ಈ ಕುರಿತು ಮಾತನಾಡಿ, “ಈ ಘಟನೆಗೆ ಯಾರು ಕಾರಣರು ಎಂದು ನಮಗೆ ಗೊತ್ತಿಲ್ಲ. ಪೊಲೀಸರಿಗೆ ದೂರು ನೀಡಿದ್ದೇವೆ,” ಎಂದರು.

ಬಿಬಿಎಂಪಿ ವಾರ್ಡ್ ಇಂಜಿನಿಯರ್ ಜಗದೀಶ್ ಅವರು ಈ ಕುರಿತು ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Bus stand-robbory- Bangalore- city