ಯುವ ಜನ ವಿರೋಧಿ, ಭ್ರಷ್ಟ ಸರ್ಕಾರ ಕಿತ್ತೊಗೆದು ರಾಜ್ಯ ಭವಿಷ್ಯ ರೂಪಿಸುವ ಸರ್ಕಾರ ತರುವುದಾಗಿ ಶಪಥ ಮಾಡಿ- ಸಿದ್ಧರಾಮಯ್ಯ ಕರೆ.

Promotion

ಬೆಳಗಾವಿ,ಮಾರ್ಚ್,20,2023(www.justkannada.in): ಇಂದು ಇಲ್ಲಿ ಸೇರಿರುವ ಯುವ ಜನರು ಕರ್ನಾಟಕದಲ್ಲಿರುವ ಯುವ ಜನರ ವಿರೋಧಿ, ಭ್ರಷ್ಟ ಸರ್ಕಾರ ಸರ್ಕಾರವನ್ನು ಕಿತ್ತೊಗೆದು ಮುಂದಿನ 5 ವರ್ಷಗಳ ಕಾಲ ರಾಜ್ಯದ ಭವಿಷ್ಯವನ್ನು ರೂಪಿಸುವ ಸರ್ಕಾರವನ್ನು ತರುತ್ತೇವೆ ಎಂದು ಶಪಥ ಮಾಡಬೇಕು ಎಂದು ಬೆಳಗಾವಿಯಲ್ಲಿ ನಡೆದ ಯುವಕ್ರಾಂತಿ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಕರೆ ನೀಡಿದರು.

ಯುವಕ್ರಾಂತಿ ಸಮಾವೇಶದಲ್ಲಿ ಮಾತನಾಡಿದ  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಿಷ್ಟು…

ರಾಜೀವ್‌ ಗಾಂಧಿ ಅವರು 18 ವರ್ಷ ತುಂಬಿದ ಎಲ್ಲ ಯುವಕ, ಯುವತಿಯರಿಗೆ ಮತದಾನದ ಹಕ್ಕು ನೀಡಿದ್ದರು, ಇದರಿಂದ ದೇಶದ ಯುವ ಜನರು ರಾಜಕೀಯದಲ್ಲಿ ಭಾಗವಹಿಸಲು ಸಾಧ್ಯವಾಗಿದೆ. ಇದಕ್ಕಾಗಿ ನಾವು ಅವರನ್ನು ಈ ಸಂದರ್ಭದಲ್ಲಿ ನೆನೆಯಲೇಬೇಕು. ಜಗತ್ತಿನಲ್ಲಿ ದೊಡ್ಡ ರಾಜಕೀಯ ಬದಲಾವಣೆಯನ್ನು ತರಲು ಯುವ ಜನರಿಂದ ಮಾತ್ರ ಸಾಧ್ಯ ಎಂಬುದನ್ನು ನಾವು ಇತಿಹಾಸದಲ್ಲಿ ನೋಡಿದ್ದೇವೆ. ರಾಜೀವ್‌ ಗಾಂಧಿ ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದರಿಂದ ದೇಶದ ಯುವಜನರಿಗೆ ಉದ್ಯೋಗ ಸಿಗಲು ಸಾಧ್ಯವಾಯಿತು.

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು 9 ವರ್ಷವಾಗುತ್ತಾ ಬಂದಿದೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದು 4 ವರ್ಷ ತುಂಬುತ್ತಾ ಬಂದಿದೆ. ರಾಜ್ಯ ಬಿಜೆಪಿ ನಾಯಕರು ತಮ್ಮದು ಡಬ್ಬಲ್‌ ಇಂಜಿನ್‌ ಸರ್ಕಾರ ಎಂದು ಬಹಳಾ ಬಡಾಯಿ ಕೊಚ್ಚಿಕೊಂಡರು. ಕಳೆದ 9 ವರ್ಷದಲ್ಲಿ ದೇಶದ ಯುವ ಜನರಿಗೆ ನೀವು ಏನು ಮಾಡಿದ್ದೀರಿ? ಎಂದು ಕೇಳಲು ಬಯಸುತ್ತೇನೆ. ಇಂದು ಮೋದಿ ಅವರು ಓಟಿಗಾಗಿ ಮೇಲಿಂದ ಮೇಲೆ ರಾಜ್ಯಕ್ಕೆ ಬರುತ್ತಿದ್ದಾರೆ. ಬೆಳಗಾವಿಯಲ್ಲಿ ಪ್ರವಾಹ ಬಂದಾಗ ಬರಲಿಲ್ಲ, ಕೊರೊನಾ ಬಂದಾಗ ಆಮ್ಲಜನಕ ಸಿಗದೆ ರಾಜ್ಯದಲ್ಲಿ ನೂರಾರು ಜನ ಸತ್ತಾಗ, ಚಿಕಿತ್ಸೆ ಸಿಗದೆ ಲಕ್ಷಾಂತರ ಜನ ಸತ್ತಾಗ ಮೋದಿ ಅವರು ಕರ್ನಾಟಕಕ್ಕೆ ಬರಲಿಲ್ಲ.  ಈಗ ಚುನಾವಣೆ ಬರುತ್ತಿರುವುದರಿಂದ ಬರುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಟೀಕಿಸಿದರು.

ರಾಜ್ಯದಲ್ಲಿ ಮುಖ್ಯಮಂತ್ರಿಯಾದಿಯಾಗಿ ಇಡೀ ಸರ್ಕಾರವೇ ಭ್ರಷ್ಟವಾಗಿದೆ. ಇಲ್ಲಿನ ಸರ್ಕಾರಕ್ಕೆ ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಮೋದಿ ಅವರನ್ನು ಪದೇ ಪದೇ ಕರೆದುಕೊಂಡು ಬಂದು ಚುನಾವಣೆ ಗೆಲ್ಲಬಹುದು ಎಂದು ಲೆಕ್ಕಾಚಾರ ಹಾಕಿದ್ದಾರೆ, ಆದರೆ ಮತ್ತೆ ಮತ್ತೆ ನಾಡಿನ ಜನರನ್ನು ದಡ್ಡರನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಮೋದಿಯವರಿಗೆ ತಿಳಿಸಲು ಬಯಸುತ್ತೇನೆ ಎಂದು ಸಿದ್ಧರಾಮಯ್ಯ ಕುಟುಕಿದರು.

ಪಾಕಿಸ್ತಾನ, ಚೀನಾ, ಹಿಂದುತ್ವ ಎಂದು ಹೇಳಿ ಜನರ ಮತ ಪಡೆದು ಅಧಿಕಾರಕ್ಕೆ ಬಂದ ನಂತರ ಮೋದಿ ಅವರು ಸಂಪೂರ್ಣವಾಗಿ ಯುವ ಜನರನ್ನು ಮರೆತಿದ್ದಾರೆ. 2014ರಲ್ಲಿ ಈ ದೇಶದ ಯುವ ಜನರಿಗೆ ಪ್ರತೀ ವರ್ಷ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದು ಅವರು ಹೇಳಿದ್ದರು, ಈಗ 9 ವರ್ಷದಲ್ಲಿ 18 ಉದ್ಯೋಗ ನೀಡಬೇಕಿತ್ತು ಆದರೆ ಇದಕ್ಕೂ ಹೆಚ್ಚಿನ ಸಂಖ್ಯೆಯ ಉದ್ಯೋಗಗಳು ನಷ್ಟವಾಗಿದೆ. ಕೇಂದ್ರ ಸರ್ಕಾರದ ತಲೆಬುಡವಿಲ್ಲದ ಆರ್ಥಿಕ ನೀತಿಗಳಿಂದಾಗಿ ಲಕ್ಷಾಂತರ ಎಂ,ಎಸ್‌,ಎಂ,ಇ ಗಳು ಮುಚ್ಚಿಹೋದವು. ಇದರಿಂದ ಇಲ್ಲಿ ಉದ್ಯೋಗಗಳು ಸಿಗುವುದು ಕಷ್ಟವಾಯಿತು, ದೇಶದ 12,89,000 ಯುವ ಜನರು ಹೊರದೇಶದಲ್ಲಿ ಉದ್ಯೋಗ ಹುಡುಕಿಕೊಂಡು ಹೋಗಿದ್ದಾರೆ, ಈ ರೀತಿ ಪ್ರತಿಭಾ ಪಲಾಯನಕ್ಕೆ ನಿಮ್ಮ ಬಳಿ ಉತ್ತರವಿದೆಯಾ ಮೋದಿಜೀ? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

ಮೋದಿ ಅವರು ರಾಜ್ಯಕ್ಕೆ ಬಂದಾಗ ನಿರುದ್ಯೋಗ, ಭ್ರಷ್ಟಾಚಾರ, ರೈತರು, ಮಹಿಳೆಯರ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ, ಕೇವಲ ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪ ಮಾಡಿ ಜನರ ದಾರಿ ತಪ್ಪಿಸಲು ಹೊರಟಿದ್ದೀರಿ, ಇದರಿಂದ ನಿಮಗೆ ಯಾವ ಪ್ರಯೋಜನವೂ ಆಗಲ್ಲ ಮೋದಿಜೀ ಎಂದು ವಾಗ್ದಾಳಿ ನಡೆಸಿದ ಸಿದ್ಧರಾಮಯ್ಯ, ಇಂದು ಹಣದ ಮೂಲಕ ಚುನಾವಣೆ ಗೆಲ್ಲಬೇಕು ಎಂದು ಬಿಜೆಪಿಯವರು ಹೊರಟಿದ್ದಾರೆ, ಇದೂ ಕೂಡ ಅವರಿಂದ ಸಾಧ್ಯವಾಗಲ್ಲ ಕಾರಣ ಇಲ್ಲಿನ ಸರ್ಕಾರ “40% ಕಮಿಷನ್‌ ಸರ್ಕಾರ” ಎಂದು ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಜನಜನಿತವಾಗಿದೆ. ಇಲ್ಲಿ ನಡೆಯುವ ಎಲ್ಲಾ ನೇಮಕಾತಿಗಳಲ್ಲಿ ಲಂಚ ಕೊಡಬೇಕು, ನಾವು ಅಧಿಕಾರದಲ್ಲಿದ್ದಾಗ 1 ಲಕ್ಷದ 62 ಸಾವಿರ ಸರ್ಕಾರಿ ಉದ್ಯೋಗಗಳನ್ನು ಮತ್ತು ಖಾಸಗಿ ಕ್ಷೇತ್ರದಲ್ಲಿ 11 ರಿಂದ 12 ಲಕ್ಷ ಉದ್ಯೋಗಗಳನ್ನು ಯುವಜನರಿಗೆ ನೀಡಿದ್ದೆವು. ಬಿಜೆಪಿ ಬಂದ ಮೇಲೆ ಉದ್ಯೋಗ ಸೃಷ್ಟಿ ನಿಂತು ಹೋಗಿದೆ. ಮತ್ತೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಆಗಬೇಕಾದರೆ ಕಾಂಗ್ರೆಸ್‌ ನಿಂದ ಮಾತ್ರ ಸಾಧ್ಯ ಎಂದರು.

ಶಿಕ್ಷಣ ಕ್ಷೇತ್ರಕ್ಕೆ ಅನುದಾನ ನೀಡದೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡದೆ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡುತ್ತಿದ್ದಾರೆ. ಎಸ್‌,ಎಸ್‌,ಎಲ್‌,ಸಿ ಪೂರ್ವ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನಯಾಪೈಸೆ ವಿದ್ಯಾರ್ಥಿ ವೇತನ ನೀಡಿಲ್ಲ. ಹೊಸ ಶಿಕ್ಷಣ ನೀತಿಯ ಮೂಲಕ ಅವೈಜ್ಞಾನಿಕ, ವೈಚಾರಿಕವಲ್ಲದ ಶಿಕ್ಷಣ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಅಪಾಯದಲ್ಲಿದೆ ಎಂದು ಸಿದ್ಧರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಯುವ ಜನರೇ ದೇಶದ ಮತ್ತು ರಾಜ್ಯದ ಭವಿಷ್ಯ. ನಾಡಿದ ಆರ್ಥಿಕತೆ, ನಿಮ್ಮ ಭವಿಷ್ಯವನ್ನು ಉಳಿಸಿಕೊಳ್ಳಲು ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ತೀರ್ಮಾನಕ್ಕೆ ಬರಬೇಕು. ನೀವು ಮಾತ್ರ ಅಲ್ಲ, ಎಲ್ಲಾ ಯುವಜನರಲ್ಲೂ ಈ ಬಗ್ಗೆ ಜಾಗೃತಿಯನ್ನು ಮೂಡಿಸುವ ಮೂಲಕ ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರಕ್ಕೆ ತರಲು ಕಾರಣಿಕರ್ತರಾಗಬೇಕು ಎಂದು ತಮ್ಮೆಲ್ಲರಲ್ಲಿ ಕೈಮುಗಿದು ಮನವಿ ಮಾಡುತ್ತೇನೆ ಎಂದರು.

Key words: belgavi-congress-yuvakranthi- samavesha- Former CM-Siddaramaiah