ಕಾಂಗ್ರೆಸ್ ನಾಯಕರ ವಿರುದ್ದ ಮನುವಾದಿ ಮಾಧ್ಯಮಗಳ ದಾಳಿ ಶುರು- ಫೇಸ್ ಬುಕ್ ನಲ್ಲಿ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಚಾಟಿ.

ಮೈಸೂರು,ಮಾರ್ಚ್,20,2023(www.justkannada.in):  ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತ ಮತ್ತು ವಿಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪ, ವಾಕ್ಸಮರಗಳು ಜೋರಾಗುತ್ತಿದ್ದು,  ಈ ಮಧ್ಯೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಹೆಚ್.ಸಿ ಮಹದೇವಪ್ಪ ಅವರು ಫೇಸ್ ಬುಕ್ ಪೋಸ್ಟ್ ಮೂಲಕ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸುವುದರ ಜೊತೆಗೆ ಮಾಧ್ಯಮಗಳಿಗೆ ಕುಟುಕಿದ್ದಾರೆ.

ಫೇಸ್ ಬುಕ್ ನಲ್ಲಿ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ  ಬರೆದುಕೊಂಡಿರುವುದಿಷ್ಟು…

ಇಲ್ಲಿಂದ ಹಿಡಿದು ಚುನಾವಣಾ ದಿನದವರೆಗೂ ಸಿದ್ದರಾಮಯ್ಯನವರ ಆದಿಯಾಗಿ ಕಾಂಗ್ರೆಸ್ ಪಕ್ಷದ ನಾಯಕರುಗಳ ವಿರುದ್ಧ ಮನುವಾದಿ ಮಾಧ್ಯಮಗಳ ದಾಳಿ ಶುರುವಾಗಲಿದೆ. ಈ ದಾಳಿಯ ಮೊದಲ ಹಂತದ ಭಾಗವಾಗಿ ಕೋಲಾರದಲ್ಲಿ ನಿಲ್ತಾರಾ ಇಲ್ಲವಾ? ವರುಣಾಗೇ ಹೋಗ್ತಾರಾ? ಅವರಿಗೆ ಟಿಕೆಟ್ ಮಿಸ್, ಇವರಿಗೆ ಟಿಕೆಟ್ ಮಿಸ್ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.

ಇದಾದ ಬಳಿಕ ಎರಡನೇ ಹಂತದಲ್ಲಿ ಎಲ್ಲಾದರೂ ಒಂದು ಕೋಮು ಗಲಭೆಯನ್ನು ಬೇಕಂತಲೇ ಸೃಷ್ಟಿ ಮಾಡಿ ಅಲ್ಲಿ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಪಡೆದು ಯಾವುದೋ ಒಂದು ಧರ್ಮಕ್ಕೆ ಪಕ್ಷವನ್ನು ಬ್ರಾಂಡ್ ಮಾಡುವ ಕೆಲಸವನ್ನು ಮಾಡುತ್ತಾರೆ ಎಂದು ಸಚಿವ ಹೆಚ್.ಸಿ ಮಹದೇವಪ್ಪ ಕಿಡಿಕಾರಿದ್ದಾರೆ.

ಇನ್ನು ಮೂರನೇ ಹಂತದಲ್ಲಿ ಕಳೆದ ಚುನಾವಣೆಯಲ್ಲಿ ಮಾಡಿದ ಹಾಗೆ ಅಂಬರೀಶ್ – ಸಿದ್ದರಾಮಯ್ಯ ರೀತಿಯ ನಕಲಿ ಫೋನ್ ಸಂಭಾಷಣೆ ಆಡಿಯೋಗಳನ್ನು ವೈರಲ್ ಮಾಡುವುದು, ನನ್ನ ಕುರಿತಂತೆ ಮಾತನಾಡುವ ಫೋನ್ ಸಂಭಾಷಣೆಗಳನ್ನು ವೈರಲ್ ಮಾಡುವ ಕೆಲಸವನ್ನು ಮಾಡುತ್ತಾರೆ.

ಕೊನೆಯ ಘಟದಲ್ಲಿ ಮೋದಿ ಬಂದರು, ವಿಮಾನದಿಂದ ನೆಲಕ್ಕೆ ಹೆಜ್ಜೆ ಇಟ್ಟರು, ಮೂರು ಹೆಜ್ಜೆ ಹಾಕಿ slow motion ನಲ್ಲಿ ತಿರುಗಿದರು, ಕಾಮಗಾರಿಗಳನ್ನು ಉದ್ಘಾಟನೆ ಮಾಡಿದರು ( ಕಾಂಗ್ರೆಸ್ ಸರ್ಕಾರದಿಂದ ಮಂಜೂರಾದ ಕಾಮಗಾರಿ ಎಂದು ಹೇಳುವುದಿಲ್ಲ), ನಮ್ಮ ಮೋದಿ ವಿಶ್ವಗುರು, ಹಿಂದುತ್ವ ಅಪಾಯದಲ್ಲಿದೆ, ಪಾಕಿಸ್ತಾನ ಉಡೀಸ್, ಉರಿಗೌಡ ನಂಜೇಗೌಡ, ಟಿಪ್ಪು ಸುಲ್ತಾನ್, ಕೈಮಾ ಉಂಡೆ ಅಂತೆಲ್ಲಾ ಚುನಾವಣಾ ಕಥೆಗಳನ್ನು ಶುರು ಮಾಡಲಿದೆ ಎಂದು ಫೇಸ್ ಬುಕ್ ನಲ್ಲಿ ವ್ಯಂಗ್ಯವಾಡಿದ್ದಾರೆ.

ಪ್ರಜಾಪ್ರಭುತ್ವವು ಈ ದಿನ ದುರ್ಬಲ ಆಗುವಲ್ಲಿ ಮಾಧ್ಯಮ ಸಂಸ್ಥೆಗಳ ಪಾತ್ರವೂ ದೊಡ್ಡದಿದ್ದು ಆಡಳಿತ ಪಕ್ಷಗಳ ಜೊತೆಗೆ ಇವೂ ಸೇರಿಬಿಟ್ಟಂತೆ ಕಾಣುತ್ತಿವೆ ಎಂದು ಟೀಕಿಸಿರುವ ಹೆಚ್. ಸಿ ಮಹದೇವಪ್ಪ, ಪಾಪ ನಮ್ಮ ಎಷ್ಟೋ ಪತ್ರಕರ್ತ ಮಿತ್ರರು ಬದ್ಧತೆ ಇಟ್ಟುಕೊಂಡಿದ್ದರೂ ಕೂಡಾ ಮಾಧ್ಯಮ ಸಂಸ್ಥೆಗಳ ಮಾನಸಿಕ ಭ್ರಷ್ಟತೆಯ ಕಾರಣಕ್ಕೆ ಅಸಹಾಯಕರಾಗಿ ಪ್ರಜಾಪ್ರಭುತ್ವದ ಬಗ್ಗೆ ತಮ್ಮ ಬದ್ದತೆಯ ಕನಸನ್ನು ಕಾಣುತ್ತಿದ್ದಾರೆ. ಯುವ ಜನರೇ ಎಚ್ಚೆತ್ತುಕೊಳ್ಳಿ ಇಲ್ಲವಾದರೆ ಮುಂದೆ ಲೀಟರ್ ಪೆಟ್ರೋಲ್ ಗೆ 250 ರೂಪಾಯಿ ಆಗಲಿದೆ ಎಂದು ಫೇಸ್ ಬುಕ್ ಪೋಸ್ಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

Key words: facebook-post-HC Mahadevappa-media