ಈ ವರ್ಷದ ಕಡಲೆಕಾಯಿ ಪರಿಷೆಯಲ್ಲಿ ವಿಶೇಷ ತೆಪ್ಪೋತ್ಸವ.

ಬೆಂಗಳೂರು, ನವೆಂಬರ್ 10, 2022 (www.justkannada.in): ಈ ಬಾರಿಯ ಕಡಲೆಕಾಯಿ ಪರಿಷೆ ಹಿಂದಿನ ವರ್ಷಗಳಿಗಿಂತ ವಿಶೇಷವಾಗಿರಲಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕದಿಂದಾಗಿ ಕಡಲೆಕಾಯಿ ಪರಿಷೆ ಅಷ್ಟು ವಿಜೃಂಭಣೆಯಿಂದ ನಡೆದಿರಲಿಲ್ಲ. ಹಾಗಾಗಿ ಈ ಬಾರಿ ನವೆಂಬರ್ 21ರಿಂದ ಆರಂಭವಾಗುವ ಈ ಹಬ್ಬ ವಿಶೇಷವಾಗಿರಲಿದೆ. ಅದೇನೆಂದರೆ ಕೆಂಪಾಂಬುದಿ ಕೆರೆಯಲ್ಲಿ ತೆಪ್ಪೋತ್ಸವವನ್ನು ನಡೆಸಲಾಗುವುದು.

ಈ ತೆಪ್ಪೋತ್ಸವವನ್ನು ಕಳೆದ ಸುಮಾರು ಒಂದು ದಶಕದಿಂದಲೂ ನಡೆಸಲಾಗಿರಲಿಲ್ಲ. ಜೊತೆಗೆ, ಈ ಬಾರಿ ಬ್ಯೂಗಲ್ ರಾಕ್ ಹಾಗೂ ನರಸಿಂಹಸ್ವಾಮಿ ದೇವಾಲಯದ ಬಳಿ ಸರಣಿ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿಯ ಕಡಲೆಕಾಯಿ ಪರಿಷೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಅಂದಾಜು ೬ ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆಯನ್ನು ಆಯೋಜಕರು ಹೊಂದಿದ್ದಾರೆ. ಈ ಕಾರ್ಯಕ್ರಮವನ್ನು ‘ಕಡಲೆಕಾಯಿ ಪರಿಷೆ’ ಅಥವಾ ಹಬ್ಬ ಎಂದು ಕರೆಯಲಾದರೂ ಸಹ ಇಲ್ಲಿ ಜಾತ್ರೆ ನಡೆದು ಕಡಲೆಕಾಯಿ ಜೊತೆಗೆ ಅನೇಕ ಇತರೆ ವಸ್ತುಗಳೂ ಸಹ ಮಾರಾಟವಾಗುತ್ತವೆ. ಆದರೆ ವಿವಿಧ ರೀತಿಯ ಕಡಲೆಕಾಯಿ ಮಾರಾಟ ಈ ಪರಿಷೆಯ ವಿಶೇಷತೆಯಾಗಿರುತ್ತದೆ.

ಇತಿಹಾಸಕಾರರ ಪ್ರಕಾರ, ಕಡಲೆಕಾಯಿಯ ಮೊದಲ ಬೆಳೆಯನ್ನು ದೊಡ್ಡ ಬಸವಣ್ಣನಿಗೆ ಅರ್ಪಿಸಿ ಆ ಮೂಲಕ ಕೃತಜ್ಞತೆಯನ್ನು ಸಲ್ಲಿಸುವುದು ಹಾಗೂ ಮುಂದಿನ ಮಾಸದಲ್ಲಿ ಹೆಚ್ಚು ಹಾಗೂ ಉತ್ತಮ ಬೆಳೆ ಲಭಿಸಲು ಎಂದು ಪ್ರಾರ್ಥಿಸುವುದು ಈ ಹಬ್ಬದ ಹಿಂದಿರುವ ನಿಜವಾದ ಉದ್ದೇಶವಾಗಿದೆ. ನಂಬಿಕೆಯಿಂದ ದಂತಕಥೆಯವರೆಗೆ ಈ ಕಡಲೆಕಾಯಿ ಪರಿಷೆಯ ಇತಿಹಾಸಕ್ಕೆ ಸಂಬಂಧಪಟ್ಟ ಪಾರಂಪರಿಕ ನೋಟಗಳು ದೊಡ್ಡ ಬಸವಣ್ಣನನ್ನು ಒಳಗೊಂಡಿದೆ. ಈ ಜಾತ್ರೆಯ ಹಿಂದಿರುವ ಮತ್ತೊಂದು ಜನಪ್ರಿಯ ನಂಬಿಕೆ ಏನೆಂದರೆ ವರ್ಷದ ಈ ಮಾಸದಲ್ಲಿ ರಾತ್ರಿ ವೇಳೆ ಹೆಚ್ಚು ಕತ್ತಲಾಗುವ ಕಾರಣದಿಂದಾಗಿ ಹಿಂದೆ ಸ್ಥಳೀಯ ಕಡಲೆಕಾಯಿ ಬೆಳೆಯುವ ರೈತರಿಗೆ ಪ್ರತಿ ರಾತ್ರಿ ಬೆಳೆ ನಾಶ ಹಾಗೂ ನಷ್ಟವಾಗುತಿತ್ತಂತೆ. ಹಾಗಾಗಿ ರೈತರೆಲ್ಲರೂ ಒಂದು ಕಡೆ ಸೇರಿ ರಾತ್ರಿ ವೇಳೆಯಲ್ಲಿ ಎಚ್ಚರವಾಗಿ ಇರಲು ನಿರ್ಧರಿಸಿದ್ದರಂತೆ.

ಒಂದು ದಿನ ಕತ್ತಲಿನಲ್ಲಿ, ಪೊದೆಗಳಲ್ಲಿ ಸದ್ದು ಬರುತ್ತಿದ್ದನ್ನು ಗಮನಿಸದ ರೈತರು ಅಲ್ಲಿ ಕಳ್ಳನಿರಬಹುದೆಂದು ಭಾವಿಸಿ ಎರಗಿದರಂತೆ. ಆದರೆ ಅಲ್ಲಿ ಒಂದು ದನ ಇರುವುದನ್ನು ನೋಡಿ ಅವರಿಗೆ ಆಶ್ಚರ್ಯವಾಯಿತಂತೆ. ರೈತರು ಎಸೆದಂತಹ ಒಂದು ಚೂಪಾದ ಲೋಹದ ವಸ್ತು ತಗುಲಿ ಆ ಎತ್ತು ಅಲ್ಲಿ ಸತ್ತು ಬಿದ್ದಿತ್ತು, ಇನ್ನೂ ಆಶ್ಚರ್ಯವೆಂಬಂತೆ ಆ ಎತ್ತು ಕಲ್ಲಾಗಿ ಪರಿವರ್ತನೆಯಾಗಿತ್ತಂತೆ. ಇದರಿಂದ ಬಹಳ ನೋಂದುಕೊಂಡ ರೈತರು, ಇದೇ ಎತ್ತು ಪೌರ್ಣಮಿ ದಿನಗಳಂದು ತಮ್ಮ ಬೆಳೆಯನ್ನು ಮೇಯುತಿತ್ತು ಎಂದು ಭಾವಿಸಿದರಂತೆ. ಹಿಂದೂ ಪುರಾಣಗಳ ಪ್ರಕಾರ, ‘ಬಸವ’ ಪರಮಶಿವನ ವಾಹನ ಹಾಗಾಗಿ ಎತ್ತುಗಳನ್ನು ಪವಿತ್ರವೆಂದು ನಂಬುತ್ತಾರೆ. ಹಾಗಾಗಿ ಸ್ಥಳೀಯ ಸಮುದಾಯದವರು ಆ ಕಲ್ಲಿನ ಎತ್ತಿನ ಸುತ್ತಲೂ ಒಂದು ದೇವಾಲಯವನ್ನು ನಿರ್ಮಾಣ ಮಾಡಿದರಂತೆ. ಇದು ರೈತರಿಗೆ ತಮ್ಮ ಅರಿವಲ್ಲದೆ ಎತ್ತನ್ನು ಕೊಂದ ಪಾಪವನ್ನು ತೊಳೆದುಕೊಳ್ಳಲು ಒಂದು ಪ್ರಾಯಶ್ಚಿತವೂ ಆಗಿತ್ತು.

ಮುಂದುವರೆದು, ದಂತಕಥೆಯ ಪ್ರಕಾರ, ಈ ದೇವಾಲಯದ ನಿರ್ಮಾಣ ಸಮಯದಲ್ಲಿ ಈ ಕಲ್ಲಿನ ‘ಬಸವ’ ಬೆಳೆಯುತ್ತಲೇ ಇತ್ತು ಎನ್ನಲಾಗಿದೆ. ಹಾಗಾಗಿ ಗ್ರಾಮಸ್ಥರು ಈ ಬೆಳೆಯುತ್ತಿರುವ ಬವಸನನ್ನು ನಿಲ್ಲಿಸಲು ಒಂದು ಪರಿಹಾರಕ್ಕಾಗಿ ಹುಡುಕಾಡತೊಡಗಿದರು. ಒಂದು ದಿನ ರಾತ್ರಿ, ಈ ಹಿಂದೆ ಎತ್ತನ್ನು ತನ್ನ ಅರಿವಿಲ್ಲದೆ ಕೊಂದಂತಹ ರೈತನಿಗೆ ಒಂದು ಕನಸು ಬಿತ್ತಂತೆ. ಆ ಕನಸಿನಲ್ಲಿ ಪರಮಶಿವ ಗೋಚರಿಸಿ ಕಲ್ಲಿನ ಬಸವನ ನೆತ್ತಿಯ ಮೇಲೆ ಒಂದು ತ್ರಿಶೂಲವನ್ನು ನೆಡುವಂತ ಸೂಚಿಸಿದನಂತೆ ಹಾಗೂ ರೈತರಿಗೆ ಪ್ರತಿ ವರ್ಷ ತಮ್ಮ ಕಡಲೆಕಾಯಿಯ ಮೊದಲನೇ ಬೆಳೆಯನ್ನು ಅದಕ್ಕೆ ಸಮರ್ಪಿಸುವಂತೆ ತಿಳಿಸಿದನಂತೆ. ಅಂದಿನಿಂದ ಪ್ರತಿ ವರ್ಷ ಈ ಹಬ್ಬ ಹಾಗೂ ಪದ್ಧತಿ ಮುಂದುವರೆದುಕೊಂಡು ಬಂದಿದೆ ಎಂದು ಜನರೂ ಈಗಲೂ ನಂಬಿದ್ದಾರೆ. ಇದಾದ ನಂತರ, ಕಲ್ಲಿನ ಬಸವ ಬೆಳೆಯಲಿಲ್ಲವಂತೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words:  Bangalore-special –kadalekayi parishe- festival.