ಬೆಂಗಳೂರಿನಲ್ಲಿ ಜ. 18 ರಂದು ವಿವೇಕದೀಪೀನಿ ರಾಷ್ಟ್ರೀಯ ಮಹಾ ಸಮಾವೇಶ: ಕಾರ್ಯಕ್ರಮಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ….

ಬೆಂಗಳೂರು, ಜ 13,2020(www.justkannada.in):  ಶಿಕ್ಷಣದಲ್ಲಿ ನೈತಿಕ ಮೌಲ್ಯಗಳನ್ನು ಮೂಡಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ವೇದಾಂತ ಭಾರತಿ ಸಂಸ್ಥೆ ಈ ತಿಂಗಳ  18 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ “ವಿವೇಕದೀಪೀನಿ ರಾಷ್ಟ್ರೀಯ ಮಹಾ ಸಮಾವೇಶ ” ಏರ್ಪಡಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಲಕ್ಷಾಂತರ ಮಕ್ಕಳನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಶ್ರೀ ಶಂಕರ ಭಾರತಿ ಮಹಾಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಲಕ್ಷಾಂತರ ಮಕ್ಕಳಿಂದ ಶಂಕರಾಚಾರ್ಯ ವಿರಚಿತ ಪ್ರಶ್ನೋತ್ತರ ಮಾಲಿಕೆಯಿಂದ ಸಂಗ್ರಹವಾದ ” ವಿವೇಕದೀಪೀನಿ” ಯ ಸಾಮೂಹಿಕ ಪಠಣ ಸಹ ಇದೇ ಸಂದರ್ಭದಲ್ಲಿ ನಡೆಯಲಿದ್ದು, ಶಿಕ್ಷಣದಲ್ಲಿ ಮರೆಯಾಗುತ್ತಿರುವ ನೈತಿಕತೆಯನ್ನು ಪುನರ್ ಸ್ಥಾಪಿಸಲು ಒತ್ತು ನೀಡಲಾಗುವುದು ಎಂದು ವೇದಾಂತ ಭಾರತಿ ಸಂಸ್ಥೆಯ ಅಧ್ಯಕ್ಷ ಹಾಗೂ ಮಹಾಸಮಾವೇಶದ ಮುಖ್ಯಸ್ಥರೂ ಆದ ಎಸ್.ಎಸ್. ನಾಗಾನಂದ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀನವದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ವ್ಯಕ್ತಿತ್ವ ವಿಕಸನದ ಮೂಲಕ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಈ ಸಮಾವೇಶ ಏರ್ಪಡಿಸಲಾಗಿದೆ. ವಿವೇಕದೀಪೀನಿಯನ್ನು ಎಲ್ಲಾ ಪ್ರೌಢ ಶಾಲೆಗಳಲ್ಲಿ ಬೋಧಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಬೆಂಗಳೂರಿನಲ್ಲಿ ಪ್ರಸ್ತುತ 500ಕ್ಕೂ ಹೆಚ್ಚು ಪ್ರೌಢಶಾಲೆಗಳಿಂದ ಸುಮಾರು 2 ಲಕ್ಷ ವಿದ್ಯಾರ್ಥಿಗಳು ವಿವೇಕದೀಪಿನಿಯನ್ನು ಅಭ್ಯಾಸ ಮಾಡುತ್ತಿದ್ದಾರೆ. ವಾರದಲ್ಲಿ ಒಂದು ಅಥವಾ ಎರಡು ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ.  ನೈತಿಕತೆಯ ಬೆಳಕು ದೇಶದೆಲ್ಲೆಡೆ ಹರಡಬೇಕು, ರಾಷ್ಟ್ರಮಟ್ಟದಲ್ಲಿ ಈ ಕುರಿತು ಜಾಗೃತಿ ಮೂಡಬೇಕೆನ್ನುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ವೇದಾಂತ ಭಾರತಿ ಸಂಸ್ಥೆಯ ಟ್ರಸ್ಟಿ ಸಿ.ಎಸ್. ಗೋಪಾಲ ಕೃಷ್ಣ ಮಾತನಾಡಿ, ಶ್ರೀ ಶಂಕರಾಚಾರ್ಯ ವಿರಚಿತ ಪ್ರಶ್ನೋತ್ತರ ರತ್ನಮಾಲಿಕೆಯಿಂದ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದ 37 ಪದ್ಯಗಳನ್ನು ಆಯ್ದು ವಿವೇಕದೀಪಿನೀ ಎಂಬ ಪುಸ್ತಕದಲ್ಲಿ ಅರ್ಥಸಹಿತ ವಿವರಣೆ ನೀಡಲಾಗಿದೆ. ವ್ಯಕ್ತಿ ಶುದ್ಧಿಯುಂಟಾದಾಗಲೇ ಸಮಾಜ ಶುದ್ಧಿ, ತನ್ಮೂಲಕ ರಾಷ್ಟ್ರೀಯ ಭಾವೈಕ್ಯ ಮೂಡಿಸಲು ಸಾಧ್ಯವಾಗಲಿದೆ. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಇಲ್ಲಿ ಸಂಗ್ರಹಿಸಿರುವ ನೀತಿಯುಕ್ತ ಉಪದೇಶಗಳು ವಿದ್ಯಾರ್ಥಿಗಳಲ್ಲಿ ದ್ವೇಷ, ಅಸೂಯೆ ಮೊದಲಾದ ದುಷ್ಟಗುಣಗಳು ದೂರವಾಗಿ ಪರಸ್ಪರ ಸ್ನೇಹ-ಸೌಹಾರ್ದಭಾವವು ಉಂಟಾಗುವಂತೆ ಮಾಡುತ್ತವೆ. ಇಲ್ಲಿ ಉಪದೇಶಿಸಿರುವ ಸತ್ಯ, ಅಹಿಂಸೆ, ತ್ಯಾಗ, ಸಜ್ಜನರ ಸಂಗ, ನಡವಳಿಕೆಯಲ್ಲಿ ವಿನಯ, ತಂದೆ-ತಾಯಿ ಗುರುಹಿರಿಯರಲ್ಲಿ ಗೌರವ, ಪೂಜ್ಯಭಾವನೆ ಇವೇ ಮೊದಲಾದ ಗುಣಗಳು ಯಾವುದೇ ಮತ, ಧರ್ಮ, ಜಾತಿಗೆ ಸೀಮಿತವಾದವುಗಳಲ್ಲ. ಬದಲಾಗಿ ಪ್ರತಿಯೊಬ್ಬ ಮನುಷ್ಯನೂ ಅಳವಡಿಸಿಕೊಳ್ಳಬೇಕಾದ ಗುಣಗಳು. ಇಂತಹ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಚಿಕ್ಕವಯಸ್ಸಿನಲ್ಲಿಯೇ ಬೋಧಿಸಿದರೆ ಅವರು ಮುಂದೆ ಸಮಾಜದಲ್ಲಿ ಶ್ರೇಷ್ಠವ್ಯಕ್ತಿಗಳಾಗಿ ಬೆಳೆಯಬಲ್ಲರು ಎಂದರು.

ವೇದಾಂತ ಭಾರತಿ ಟ್ರಸ್ಟ್ ನ ನಿರ್ದೇಶಕ ಶ್ರೀಧರ್ ಭಟ್ ಮಾತನಾಡಿ, ವಿವೇಕದೀಪೀನಿ ಬೋಧಿಸಲು ಬೆಂಗಳೂರು ಮಹಾನಗರದಲ್ಲಿ ಮೂರರಿಂದ ನಾಲ್ಕು ಸಾವಿರ ಮಾತೆಯರಿಗೆ ತರಬೇತಿ ನೀಡಲಾಗಿದೆ. ರಾಜ್ಯಾದ್ಯಂತ ಉತ್ತಮ ಪ್ರಶಿಕ್ಷಕರನ್ನು ತಯಾರು ಮಾಡಲಾಗುತ್ತಿದೆ. ವಿವೇಕದೀಪೀನಿಯಿಂದ ಮಕ್ಕಳಲ್ಲಿ ಶಿಸ್ತು ಮತ್ತು ಸ್ಮರಣೆ ಶಕ್ತಿ ಸಹ ಹೆಚ್ಚಾಗಿರುವುದು ಇತ್ತೀಚಿನ ಅಧ್ಯಯನದಿಂದ ಸಾಬೀತಾಗಿದೆ ಎಂದು ಹೇಳಿದರು.

ವೇದಾಂತಭಾರತಿಯಿಂದ ವಿವೇಕದೀಪಿನೀಯನ್ನು ವಿಸ್ತೃತರೂಪದಲ್ಲಿ 10 ಭಾಷೆಗಳಲ್ಲಿ ಮುದ್ರಿಸಿದ್ದು ಈ ಪುಸ್ತಕಗಳನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕಳೆದ ಜುಲೈ 7 ರಂದು ಶಂಕರಭಾರತೀ ಮಹಾಸ್ವಾಮಿಗಳ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಿದ್ದರು. ಕನ್ನಡವಷ್ಟೇ ಅಲ್ಲದೆ ಇತರೆ ಭಾಷೆಗಳಲ್ಲೂ ವಿವೇಕದೀಪಿನಿಯನ್ನ ಬೋಧಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

Key words:  Bangalore-jan 18th -National Convention – Vivekadeepini -Union Home Minister -Amit Shah – attend