ಶಾಸಕರ ಮನೆ ಬಳಿ ಧರಣಿ ಮಾಡಿ ದೊಡ್ಡ ನಾಯಕನಾಗ್ತಿಯಾ ನೀನು..?-ಜಮೀರ್ ಅಹ್ಮದ್ ಖಾನ್ ಗೆ ಸಚಿವ ಶ್ರೀರಾಮುಲು ಟಾಂಗ್…

ಚಿತ್ರದುರ್ಗ,ಜ,13,2020(www.justkannada.in):  ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿ ಶಾಸಕ ಸೋಮಶೇಖರರೆಡ್ಡಿ ಮನೆ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಗೆ ಆರೋಗ್ಯ ಸಚಿವ ಶ್ರೀರಾಮುಲು ಟಾಂಗ್ ನೀಡಿದ್ದಾರೆ.

ಶಾಸಕರ ಮನೆ ಎದುರು ಧರಣಿ ಮಾಡುವುದು ಸಂಸ್ಕೃತಿ ಅಲ್ಲ. ಶಾಸಕರ ಮನೆ ಬಳಿ ಧರಣಿ ಮಾಡಿ ದೊಡ್ಡ ನಾಯಕನಾಗ್ತಿಯಾ ನೀನು? ಎಂದು ಜಮೀರ್ ಅಹ್ಮದ್ ಖಾನ್ ವಿರುದ್ದ ಸಚಿವ ಶ್ರೀರಾಮುಲು ಕಿಡಿ ಕಾರಿದ್ದಾರೆ.

ಮೊಳಕಾಲ್ಮೂರು ಪಟ್ಟಣದಲ್ಲಿ ಇಂದು ಮಾತನಾಡಿದ ಸಚಿವ ಬಿ.ಶ್ರೀರಾಮುಲು,  ಬಿಎಸ್ ವೈ ಸಿಎಂ ಆದರೆ ಅವರ ಮನೆಯ ವಾಚ್ ಮನ್ ಆಗುತ್ತೇನೆಂದಿದ್ದರು. ವಿಧಾನಸೌಧದ ಗೋಡೆ ಹೊಡೆಯುತ್ತೇನೆ ಎಂದಿದ್ದರು. ಕೆಲ ಸಂದರ್ಭದಲ್ಲಿ ಸೋಮಶೇಖರರೆಡ್ಡಿ ಮಾತಾಡಿರಬಹುದು. ಜಮೀರ್ ಅಹ್ಮದ್ ಅವರೇನು ಕಡಿಮೆ ಇಲ್ಲ ಅವರೂ ಮಾತಾಡಿದ್ದಾರೆ. ಜಮೀರ್, ಸಿದ್ಧರಾಮಯ್ಯ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧರಣಿ. ಶಾಸಕರ ಮನೆ ಎದುರು ಧರಣಿ ಮಾಡುವುದು ಸಂಸ್ಕೃತಿ ಅಲ್ಲ ಎಂದರು.

ಹಿಂದೂ ಮುಸ್ಲಿಂರ ಮಧ್ಯೆ ಜಗಳ ಇಡಲು ಧರಣಿ ಮಾಡುತ್ತಿದ್ದಾರೆ. ಶಾಸಕರ ಮನೆ ಬಳಿ ಧರಣಿ ಮಾಡಿ ದೊಡ್ಡ ನಾಯಕನಾಗ್ತಿಯಾ ನೀನು? ಸಿಎಎ ಬಗ್ಗೆ ಜಮೀರ್, ಸಿದ್ಧರಾಮಯ್ಯ ಓದಿ ಕೊಳ್ಳಲಿ. ಸಿದ್ಧರಾಮಯ್ಯ ವಕೀಲರು, ಬುದ್ಧಿವಂತರು ಸಿಎಎ ಬಗ್ಗೆ ತಿಳಿದುಕೊಳ್ಳಲಿ. ಕಾಂಗ್ರೆಸ್ ಜಾತಿ ಜನರನ್ನು ಕೆರಳಿಸುವ ಕೆಲಸ ಮಾಡುತ್ತಿದೆ ಎಂದು ಶ್ರೀರಾಮುಲು ಕಿಡಿಕಾರಿದರು.

ರಾಮನಗರದಲ್ಲಿ ಯೇಸುಕ್ರೈಸ್ತ ಪ್ರತಿಮೆ ನಿರ್ಮಾಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಶ್ರೀರಾಮುಲು, ಯೇಸು ಬೇರೆ, ಹಿಂದೂ ದೇವರು ಬೇರೆ, ಮುಸ್ಲಿಂ ದೇವರು ಬೇರೆ ಅಲ್ಲ. ಯಾರೇ ಬೇರೆ ಮಾಡಲು ಹೋದರೂ ಸಹ ಸ್ವಾರ್ಥ ರಾಜಕಾರಣ ಆಗುತ್ತದೆ. ಸದ್ಯ ಕಾಂಗ್ರೆಸ್ ನಾಯಕರಿಗೆ ಯಾವುದೇ ವಿಷಯ ಇಲ್ಲವಾಗಿದೆ. ಹೀಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದರು.

Key words:  chitradurga- minister-shriramulu-mla- jameer ahamad khan