ಬೆಂಗಳೂರು ನಗರದ ವಿವಿಧ ೩೦ ವೃತ್ತಗಳಲ್ಲಿ ಪುಟಿಯಲಿದೆ ವರ್ಣರಂಜಿತ ಕಾರಂಜಿಗಳು..

bangalore-BBMP- bengaluru-to-get-30-fountains-of-joy

 

ಬೆಂಗಳೂರು, ಸೆಪ್ಟೆಂಬರ್ ೧೭,೨೦೨೧ (www.justkannada.in): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಬೆಂಗಳೂರು ನಗರ ಸೌಂದರ್ಯೀಕರಣ ಯೋಜನೆಯ ಭಾಗವಾಗಿ ಬೆಂಗಳೂರು ನಗರದಲ್ಲಿ ಬರುವ ದಿನಗಳಲ್ಲಿ ಹಲವಾರು ಬದಲಾವಣೆಗಳು ಕಾಣಿಸಿಕೊಳ್ಳಲಿವೆ.

ಈ ಹಿಂದೆ ಬೆಂಗಳೂರಿನ ಹಲವು ಪ್ರಮುಖ ರಸ್ತೆಗಳ ವೃತ್ತಗಳಲ್ಲಿದ್ದಂತಹ ಕಾರಂಜಿಗಳಿಗೆ ಬಿಬಿಎಂಪಿ ಪುನಃ ಜೀವ ತುಂಬಲು ಯೋಜಿಸಿದ್ದು, ನಗರದ ೩೦ ವಿವಿಧ ಅತ್ಯಂತ ಜನನಿಬಿಡ ರಸ್ತೆಗಳ ವೃತ್ತಗಳು ಮತ್ತೊಮ್ಮೆ ತನ್ನ ಹಿಂದಿನ ವೈಭವವನ್ನು ಪಡೆದುಕೊಳ್ಳಲಿವೆ. ಈ ಯೋಜನೆಯ ಮೊದಲ ಹೆಜ್ಜೆಯಾಗಿ ಕೆ.ಆರ್. ವೃತ್ತದಲ್ಲಿ ಈಗಾಗಲೇ ಕಾರಂಜಿಯನ್ನು ಆರಂಭಿಸಿದ್ದು, ಬುಧವಾರ ಉದ್ಘಾಟಿಸಲಾಯಿತು. ಮುಂದಿನದು ಚಾಲುಕ್ಯ ವೃತ್ತದ ಬಳಿ ಬರಲಿದೆ.

ಬಿಬಿಎಂಪಿಯ ಮೂಲಗಳ ಪ್ರಕಾರ, “ಈ ಯೋಜನೆಯ ಕಾಮಗಾರಿಗಳು ವಿವಿಧ ಹಂತಗಳಲ್ಲಿದ್ದು, ಸದ್ಯದಲ್ಲೇ ಬೆಂಗಳೂರಿನ ನಿವಾಸಿಗಳು ಹಾಗೂ ಇಲ್ಲಿಗೆ ಆಗಮಿಸುವವರ ಕಣ್ಮನಗಳನ್ನು ತಣಿಸಲಿದೆ. ಕೆಲವು ವೃತ್ತಗಳಲ್ಲಿ ನಾವು ನೀರಿನ ಕಾರಂಜಿಗಳಿಗೆ ಬಣ್ಣದ ದೀಪಗಳನ್ನು ಅಳವಡಿಸಲು ಆಲೋಚಿಸುತ್ತಿದ್ದೇವೆ. ಅದರಿಂದ ರಾತ್ರಿ ವೇಳೆ ಕಾರಂಜಿಗಳು ವರ್ಣರಂಜಿತವಾಗಿ ಕಾಣುತ್ತವೆ,” ಎಂದು ತಿಳಿಸಿದರು.

ಹಿಂದಿನ ಬೆಂಗಳೂರು ನಗರದ ಬಗ್ಗೆ ನೆನಪಿಸಿಕೊಳ್ಳುವ ಕೆಲವು ಹಿರಿಯ ನಾಗರಿಕರ ಪ್ರಕಾರ ‘ನಮ್ಮ ಬೆಂಗಳೂರಿ’ನಲ್ಲಿ ಹಿಂದೆ ಹಲವು ಕಡೆ ಈ ರೀತಿಯ ಕಾರಂಜಿಗಳಿದ್ದವು. ರಮೇಶ್ ಕುಮಾರ್ ಎಂಬ ವ್ಯಾಪಾರಿಯೊಬ್ಬರು ಸ್ಮರಿಸಿಕೊಳ್ಳುವಂತೆ, “ಬೆಂಗಳೂರಿನ ಪ್ರಮುಖ ವೃತ್ತಗಳಲ್ಲಿ ಪುನಃ ಕಾರಂಜಿಗಳನ್ನು ಆರಂಭಿಸುವ ಯೋಜನೆ ತುಂಬಾ ಸಂತೋಷದ ವಿಷಯ. ಹಿಂದೆ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಒಂದು ದೊಡ್ಡ ಕಾರಂಜಿಯಿತ್ತು. ಅದು ನಗರಕ್ಕೆ ಆಗಮಿಸುವವರಿಗೆ ಅತ್ಯಂತ ದೊಡ್ಡ ಆಕರ್ಷಣೆಯ ತಾಣವಾಗಿತ್ತು. ಅದೇ ರೀತಿ ಕಾರ್ಪೊರೇಷನ್ ವೃತ್ತದ ಬಳಿಯೂ ಒಂದು ಕಾರಂಜಿಯಿತ್ತು. ಆದರೆ ಈಗ ಆ ಕಾರಂಜಿಗಳನ್ನು ನಿರ್ಲಕ್ಷಿಸಲಾಗಿದೆ. ಕೆಲವು ವೃತ್ತಗಳಲ್ಲಿರುವ ಕಾರಂಜಿಗಳು ನಾಶವಾಗಿರುವುದು ಕಂಡಾಗ ಬಹಳ ಬೇಸರವಾಗುತ್ತದೆ. ಈಗ ಮತ್ತೊಮ್ಮೆ ಅದನ್ನು ಪುನರುಜ್ಜೀವನಗೊಳಿಸುತ್ತಿರುವುದು ಸಂತಸದ ವಿಷಯ. ಆದರೆ ಅವುಗಳನ್ನು ಸರಿಯಾಗಿ ನಿರ್ವಹಿಸಬೇಕು, ಮತ್ತೊಮ್ಮೆ ಹೀಗೆ ನಿರ್ಲಕ್ಷಿಕ್ಕೆ ಒಳಗಾಗದೆ ಇರುವ ಹಾಗೆ ನೋಡಿಕೊಂಡರೆ ಒಳಿತು,” ಎಂದರು.

Water- Fountain –mysore- Nivedita Park-minister- st somshekar

ಬಿಬಿಎಂಪಿ ನಗರದ ಮುಖ್ಯರಸ್ತೆಗಳ ಮಧ್ಯಭಾಗದಲ್ಲಿರುವ ಮೀಡಿಯನ್‌ಗಳನ್ನೂ ಸಹ ಸುಂದರೀಕರಿಸುವ ಕಾಮಗಾರಿಗಳನ್ನು ಕೈಗೊಂಡಿದೆ. ಮೇಖ್ರಿ ವೃತ್ತ ಹಾಗೂ ಸಿಎನ್‌ಆರ್ ರಾವ್ ವೃತ್ತಗಳ ಬಳಿಯ ಮೀಡಿಯನ್‌ಗಳನ್ನು ವಿಶೇಷ ಆಕಾರದ ಸಸ್ಯಗಳಿಂದ ಅಲಂಕರಿಸಲಾಗುತ್ತಿದ್ದು, ಇದು ಆಕರ್ಷಣೆಯನ್ನು ಹೆಚ್ಚಿಸಲಿದೆ. “ಬೆಂಗಳೂರು ಒಂದು ವಿಶ್ವಮಾನ್ಯತೆಯುಳ್ಳ ನಗರ. ಆದರೆ ಪ್ರಸ್ತುತ ಬೆಂಗಳೂರನ್ನು ಪ್ರವೇಶಿಸುವ ಯಾವುದೇ ವ್ಯಕ್ತಿಗೆ ಮೊದಲು ಕಾಣುವುದು ಎಲ್ಲೆಂದರಲ್ಲಿ ಎಸೆದಿರುವ ಕಸ. ಹಾಗಾಗಿ ಬಿಬಿಎಂಪಿ ವೃತ್ತಗಳನ್ನು ಸುಂಕರೀಕರಣಗೊಳಿಸಿ ಉತ್ತಮಪಡಿಸಬೇಕು. ಈ ವೃತ್ತಗಳ ಸೌಂದರ್ಯವನ್ನು ಹೆಚ್ಚಿಸುವುದು ಕೇವಲ ಹೊಸಬರಲ್ಲಿ ಅಲ್ಲ, ಬದಲಿಗೆ ಸದಾ ಕಾಲ ನಗರದ ರಸ್ತೆಗಳಲ್ಲಿ ಓಡಾಡುವವರಿಗೂ ಸಹ ಉತ್ತಮ ಉತ್ತಮ ಭಾವನೆ ಹಾಗೂ ಆಹ್ಲಾದಕರ ಭಾವನೆಯನ್ನು ಉಂಟು ಮಾಡುತ್ತದೆ,” ಎನ್ನುವುದು ಶೇಷಾದ್ರಿ ಎಂಬ ಹೆಸರಿನ ಟೆಕ್ಕಿಯೊಬ್ಬರ ಅಭಿಪ್ರಾಯವಾಗಿದೆ.

ಬಿಬಿಎಂಪಿ ಈವರೆಗೆ ನಗರದ ಸೌಂದರ್ಯೀಕರಣಕ್ಕಾಗಿ ರೂ.೨ ಕೋಟಿ ವೆಚ್ಚ ಮಾಡಿದೆ. ಈ ಕಾಮಗಾರಿಗಳಲ್ಲಿ ಬಣ್ಣಬಣ್ಣದ ಪಾದಚಾರಿ ಮಾರ್ಗಗಳ ನಿರ್ಮಾಣ, ನೀರಿನ ಕಾರಂಜಿ ನಿರ್ಮಾಣ, ಎಲ್‌ಇಡಿ ದೀಪಗಳ ಅಳವಡಿಕೆ ಇತ್ಯಾದಿಗಳು ಸೇರಿವೆ. ಕೆ.ಆರ್. ವೃತ್ತ ಸೌಂದರ್ಯೀಕರಣ ಬಿಬಿಎಂಪಿಯ ಯೋಜನೆಯ ಎರಡನೆಯ ಕಾಮಗಾರಿಯಾಗಲಿದೆ. ಇದೇ ರೀತಿ ಬಿಬಿಎಂಪಿ ನಗರದ ಒಟ್ಟು ೪೫ ವೃತ್ತಗಳನ್ನು ಮರುವಿನ್ಯಾಸಪಡಿಸುತ್ತಿದೆ.

ಬಿಬಿಎಂಪಿ ಇತ್ತೀಚೆಗಷ್ಟೇ ವಿಂಡ್ಸರ್ ಮ್ಯಾನರ್ ಹೋಟೆಲ್ ವೃತ್ತವನ್ನು ‘ಮೇಕ್ ಇನ್ ಇಂಡಿಯಾ’ ಲೋಗೊ ಅಳವಡಿಕೆಯೂ ಒಳಗೊಂಡಂತೆ ಹಲವು ವಿಧಾನಗಳ ಮೂಲಕ ಅಭಿವೃದ್ಧಿಪಡಿಸಿತು.

ಅಭಿವೃದ್ಧಿಪಡಿಸಲಿರುವ ವೃತ್ತಗಳು :

೧. ಹಡ್ಸನ್ ವೃತ್ತ, ೨. ಎನ್.ಆರ್. ವೃತ್ತ, ೩. ವಿಧಾನ ಸೌಧ, ೪. ಬೆಂಗಳೂರು ಗಾಲ್ಫ್ ಕೋರ್ಸ್ ವೃತ್ತ , (ಸೋಫಿಯಾ ಹೈಸ್ಕೂಲ್) ೫. ಬ್ರಿಗೇಡ್ ರಸ್ತೆ ವೃತ್ತ, ೬. ಮೇಯೊ ಹಾಲ್ ವೃತ್ತ, ೭. ಟೌನ್‌ಹಾಲ್ ವೃತ್ತ, ೮. ಎಸ್.ಜೆ.ಪಾರ್ಕ್, ೯. ಕರ್ಲೆ ವೃತ್ತ, ೧೦. ಸರ್ಕಲ್ ಮಾರಮ್ಮ ವೃತ್ತ, ೧೧. ಗುಟ್ಟಳ್ಳಿ ವಋತ್ತ, ೧೨. ಹೆಬ್ಬಾಳ ವೃತ್ತ, ೧೩. ಗುಬ್ಬಿ ತೋಟದಪ್ಪ ವೃತ್ತ, ೧೪. ಉಪ್ಪಾರಪೇಟೆ ವೃತ್ತ, ೧೫. ನಾಯಂಡಹಳ್ಳಿ ವೃತ್ತ, ೧೬. ಬನಶಂಕರಿ ವೃತ್ತ, ೧೭. ಲಾಲ್‌ಬಾಗ್ ಪಶ್ಚಿಮ ದ್ವಾರದ ಬಳಿಯ ವೃತ್ತ, ೧೮. ಲಾಲ್‌ಬಾಗ್ ಮುಖ್ಯ ದ್ವಾರದ ಬಳಿಯ ವೃತ್ತ (ಎಂಟಿಆರ್ ದ್ವಾರ), ೧೯. ಲಾಲ್‌ಬಾಗ್ ಉತ್ತರ ದ್ವಾರದ ಬಳಿಯ ವೃತ್ತ (ಕೆಂಗಲ್ ಹನುಮಂತಯ್ಯ ವೃತ್ತ), ೨೦. ಲಾಲ್‌ಬಾಗ್ ಸಿದ್ದಾಪುರ ಗೇಟ್, ೨೧. ಅಶೋಕಾ ಪಿಲ್ಲರ್ ವೃತ್ತ, ೨೨. ಜ್ಞಾನಭಾರತಿ ವೃತ್ತ, ಮೈಸೂರು ರಸ್ತೆ, ೨೩. ದೊಮ್ಮಲೂರು ವೃತ್ತ, ೨೪. ಕೋಮರ್ಲಾ ಹೋಟೆಲ್ ವೃತ್ತ, ೨೫. ಡೈರಿ ವೃತ್ತ, ೨೬. ವಿಜಯನಗರ ಬಸ್ ನಿಲ್ದಾಣ, ೨೭. ಮಾಗಡಿ ರಸ್ತೆ ಟೋಲ್ ಗೇಟ್ ವೃತ್ತ, ೨೮. ಬೆನ್ನಿಗಾನಹಳ್ಳಿ ಕೆರೆ ವೃತ್ತ, ೨೯. ಟ್ರಿನಿಟಿ ವೃತ್ತ, ೩೦. ಕೆ.ಆರ್. ಮಾರುಕಟ್ಟೆ ವೃತ್ತ,

ಸುದ್ದಿ ಮೂಲ: ಬೆಂಗಳೂರ್ ಮಿರರ್

key words : bangalore-BBMP- bengaluru-to-get-30-fountains-of-joy