ಸ್ಥಳೀಯ ಸಂಘ ಸಂಸ್ಥೆಗಳ ಮೀಸಲಾತಿಯಲ್ಲಿ ಅತಿ ಹಿಂದುಳಿದ ವರ್ಗಗಳಿಗೆ ಅನ್ಯಾಯ -ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ಮನವಿ

backward-commission-Bangalore

ಬೆಂಗಳೂರು,ಫೆ. 21, 2022 : (www.justkannada.in news ) ಕರ್ನಾಟಕದ ಸ್ಥಳೀಯ ಸಂಸ್ಥೆಗಳ ಮೀಸಲಾತಿಯಲ್ಲಿ ಅತೀ ಹಿಂದುಳಿದ ವರ್ಗಗಳಿಗೆ ಅನ್ಯಾಯ ಆಗುತ್ತಿದೆ. ಸುಪ್ರೀಂಕೋರ್ಟ್ ಇತ್ತೀಚೆಗೆ ಮೀಸಲಾತಿ ಕೊಡುವಂತೆ ನಿರ್ದೇಶಿಸಿದೆ. ಈ ಸಂಬಂದ ರಾಜ್ಯ ಸರ್ಕಾರಕ್ಕೆ ಸಲಹೆ ಕೊಡುವಂತೆ ರಾಜ್ಯಪಾಲರಿಗೆ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತ್ತು.

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಎಮ್. ಸಿ. ವೇಣುಗೋಪಾಲ್ ನೇತೃತ್ವದ ನಿಯೋಗ, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಇಂದು ಭೇಟಿ ಮಾಡಿದೆ.

ರಾಜ್ಯಪಾಲರ ಭೇಟಿಯ ನಂತರ ಮಾತನಾಡಿದ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಎಮ್. ಸಿ. ವೇಣುಗೋಪಾಲ್, ಅತೀ ಹಿಂದುಳಿದ ವರ್ಗಗಳಿಗೆ ಮೀಸಲಾತಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಲು ಸರ್ಕಾರಕ್ಕೆ ನಿರ್ದೇಶಿಸಿಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಅಲ್ಲದೆ ಮೀಸಲಾತಿ ನಿಗದಿ ಮಾಡುವ ಸಂಬಂಧ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿಕೊಂಡಿದ್ದೇವೆ ಎಂದು ತಿಳಿಸಿದ್ರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂಬಂಧ ಕರ್ನಾಟಕ ಸರ್ಕಾರ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಮಾಡಿರುವ ಪಟ್ಟಿಯಲ್ಲಿರುವ  ಜಾತಿ ಮತ್ತು ಉಪಜಾತಿಗಳನ್ನು ಸ್ಥಳೀಯ ಸಂಸ್ಥೆಗಳಿಗೂ ಸಹ ಅಳವಡಿಸಿಕೊಂಡಿರುವುದು ಸರಿಯಲ್ಲ. ಸರ್ಕಾರ ಆಯೋಗವೊಂದನ್ನು ರಚಿಸಿ ರಾಜಕೀಯವಾಗಿ ಹಿಂದುಳಿದ ಜಾತಿಗಳನ್ನು ಗುರುತಿಸಿ, ಅಂತಹವುಗಳನ್ನು ಪಟ್ಟಿಮಾಡಿ ರಾಜಕೀಯ ಮೀಸಲಾತಿ ನೀಡಬೇಕು. ಸ್ಥಳೀಯ ಸಂಸ್ಥೆಗಳ ಮೀಸಲಾತಿಯಂತೆಯೇ ಶಾಸನಸಭೆ ಮತ್ತು ಸಂಸತ್ತಿನಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದ್ರು.

ಇನ್ನೊಂದೆಡೆ, ಹೆಚ್. ಕಾಂತರಾಜು ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿರುವ ಸಾಮಾಜಿಕ – ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಕೂಡಲೇ ಸ್ವೀಕರಿಸಿ ಬಹಿರಂಗ ಪಡಿಸಬೇಕು ಎಂದು ಎಮ್. ಸಿ. ವೇಣುಗೋಪಾಲ್ ಒತ್ತಾಯಿಸಿದರು. ಕರ್ನಾಟಕ ಸರ್ಕಾರ 2015ರಲ್ಲಿ ಅಂದಾಜು 162 ಕೋಟಿ ರೂಪಾಯಿ ಖರ್ಚು ಮಾಡಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದೆ.  ಆಯೋಗವು ವಿಷಯ ತಜ್ಞರ ಸಲಹೆ ಮತ್ತು ಬಿಇಎಲ್ ಸಂಸ್ಥೆಯ ಸಹಯೋಗದೊಂದಿಗೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಅಸ್ಥಿತ್ವದಲ್ಲಿರುವ ಎಲ್ಲಾ ಜಾತಿ ಸಮುದಾಯಗಳ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ಆಯೋಗ ಸಂಗ್ರಹಿಸಿರುವ ದತ್ತಾಂಶಗಳನ್ನು ಪಡೆದು ಎಲ್ಲಾ ಸಮುದಾಯಗಳ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಕೂಲವಾಗುತ್ತದೆ. ಆದ್ದರಿಂದ ಸಮೀಕ್ಷೆ ದತ್ತಾಂಶವನ್ನು ಸರ್ಕಾರ ಕೂಡಲೇ ಸ್ವೀಕರಿಸಿ ಸಾರ್ವಜನಿಕರ ಅವಗಾಹನೆಗೆ ತರಬೇಕು ಎಂದು ಅವರು ಹೇಳಿದರು.

ಈಗಾಗಲೇ ಸಮೀಕ್ಷೆ ವರದಿ ಸ್ವೀಕರಿಸಿ ಬಹಿರಂಗಪಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಹೈಕೋರ್ಟ್ ನಲ್ಲಿ  ರಿಟ್ ಅರ್ಜಿ ಸಲ್ಲಿಸಲಾಗಿದೆ. [W P 13803/2021] ಮಾನ್ಯ ಉಚ್ಛ ನ್ಯಾಯಾಲಯ ರಿಟ್ ಅರ್ಜಿ ಸ್ವೀಕರಿಸಿ ವಿಚಾರಣೆ ಇಟ್ಟುಕೊಂಡಿದೆ ಎಂದು ಅವರು ತಿಳಿಸಿದರು.
ಇನ್ನುಳಿದಂತೆ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2 ಎ ಗೆ ಸೇರಿಸಬಾರದು, ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ರಾಜ್ಯದ ಸುಮಾರು 73 ಜಾತಿ-ಉಪಜಾತಿಗಳನ್ನು ಸೇರಿಸಬೇಕು, ನ್ಯಾ. ಸುಭಾಷ್ ಆಡಿ ಸಮಿತಿಯನ್ನು ರದ್ದುಗೊಳಿಸಬೇಕು ಎಂಬುದರ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸೇರಿದಂತೆ ಸಂಬಂಧ ಪಟ್ಟ ಇಲಾಖೆಯವರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.

ಇದೇ ವೇಳೆ ಕರ್ನಾಟಕ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಕಾರ್ಯದರ್ಶಿ ನಾಗರಾಜ್, ಖಜಾಂಚಿ ಮಂಜುನಾಥ್, ನೆ.ಲ.ನರೇಂದ್ರ ಬಾಬು, ಪದಾಧಿಕಾರಿಗಳಾದ ಮೋಹನ್ ಬಾಬು, ನರಸಿಂಹ ಮೂರ್ತಿ, ಚಂದ್ರ ಶೇಖರ್ ಬಾಬು ಹಾಗೂ ನಿವೃತ ಐಎಎಸ್ ಅಧಿಕಾರಿಗಳಾದ ಕೆ.ಎಸ್. ಪ್ರಭಾಕರ್, ನಿರಂಜನ್ ಉಪಸ್ಥಿತರಿದ್ದರು.

key words : backward-commission-Bangalore