ದಿ.ರಾಜಶೇಖರ ಕೋಟಿ ಸಹೋದರಿ ಅನ್ನಪೂರ್ಣ ಕುರುವಿನ ಕೊಪ್ಪ ನಿಧನ

ಮೈಸೂರು, ಜುಲೈ 05, 2020 (www.justkannada.in): ಹಿರಿಯ ಪತ್ರಿಕೋದ್ಯಮಿ ದಿ. ರಾಜಶೇಖರ ಕೋಟಿ ಅವರ ಕಿರಿಯ ಸಹೋದರಿ ಅನ್ನಪೂರ್ಣ ಕುರುವಿನ ಕೊಪ್ಪ (69) ಹೃದಯಾಘಾತದಿಂದ ಭಾನುವಾರ ಬೆಳಗಿನ ಜಾವ ನಗರದ ರಾಮಕೃಷ್ಣ ನಗರದ ಸ್ವಗೃಹದಲ್ಲಿ ನಿಧನರಾದರು.

ಇವರಿಗೆ ಪತಿ ವೀರಪ್ಪ ಕುರುವಿನ ಕೊಪ್ಪ, ಹಿರಿಯ ಪತ್ರ ಸುನಿಲ್, ಸೊಸೆ ನಯನ ಕುರುವಿನಕೊಪ್ಪ, ಮೊಮ್ಮಗಳಾದ ಗಾರ್ಗಿ ಕುರುವಿನಕೊಪ್ಪ, ದ್ವಿತೀಯ ಪುತ್ರ ಸಂಜಯ್, ಸೊಸೆ ಛಾಯಾ, ಮೊಮ್ಮಕ್ಕಳಾದ ಓಂ, ಅಸ್ಮಿ ಇದ್ದಾರೆ. ಧಾರವಾಡ ಜಿಲ್ಲೆಯ ಹುಯಿಲಗೋಳ ಕಾಶಪ್ಪ ಕೋಟಿ ಮತ್ತು ಬಸಮ್ಮ ದಂಪತಿಯ ಪುತ್ರಿಯಾಗಿ 04.04.1951 ರಲ್ಲಿ ಜನಿಸಿದರು.

ಸಾಧನೆ: ಅನ್ನಪೂರ್ಣ ಅವರು 12 ಬಾರಿ ಹಿಮಾಲಯ ಚಾರಣ ಮಾಡಿದ್ದಾರೆ. ಹಿಮಾಲಯದ 17700 ಅಡಿ ಎತ್ತರದಲ್ಲಿ ಬಸವ ಧ್ವಜವನ್ನು ಹಾರಿಸಿದ ಪ್ರಥಮ ಮಹಿಳೆ. ಮಹಾ ಪ್ರಪಾತ ಎನಿಸಿದ ನೈನಿತಾಲ್, ಡಾಲ್ ಹೌಸಿ, ಮಸ್ಸೂರಿಯಲ್ಲಿ ಚಾರಣ ಮಾಡಿ ಬಂದಿದ್ದಾರೆ. ಮೌಂಟ್ ಎವರೆಸ್ಟ್ ನ ಬೇಸ್ ಕ್ಯಾಂಪಿಗೆ ಹೋಗಿ ಬಂದಿದ್ದರು. ನೇಪಾಳದ ಅನ್ನಪೂರ್ಣ ಪರ್ವತಗಳ ಶ್ರೇಣಿಗೆ ಒಂದು ತಿಂಗಳ ಟ್ರಕ್ಕಿಂಗ್ ಹೋಗಿ ಬಂದಿದ್ದರು.

ಅಂತರಾಷ್ಟ್ರೀಯ ಮ್ಯಾರಥಾನ್ ನಲ್ಲಿ ಭಾಗವಹಿಸಿ, ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ರಾಜ್ಯಮಟ್ಟದ ಟ್ರಕಿಂಗ್ ನಲ್ಲಿ ನಾಯಕತ್ವ ವಹಿಸಿದ ಪ್ರಥಮ ಮಹಿಳೆ. ಮೂರು ಬಾರಿ ಅಮರನಾಥ ಯಾತ್ರೆ, ನಾಲ್ಕು ಬಾರಿ ವೈಷ್ಣೋದೇವಿ ಯಾತ್ರೆ ಯನ್ನು ಕೈಗೊಂಡು ಶಿಬಿರದ ನಾಯಕತ್ವ ವಹಿಸಿದ್ದರು.

ಮೈಸೂರು ಗ್ರಾಹಕರ ಪರಿಷತ್ತಿನ ಸದಸ್ಯರಾಗಿ, ಭಾರತ್ ಯೂಥ್ ಹಾಸ್ಟೆಲ್ ಉಪಾಧ್ಯಕ್ಷರಾಗಿ ಚಾರಣದ ನಾಯಕತ್ವ ವಹಿಸಿದ್ದರು. ವಿವೇಕಾನಂದ ನಗರದ ಸ್ವಚ್ಛತಾ ಸ್ನೇಹಬಳಗದ ಅಧ್ಯಕ್ಷರಾಗಿ, ಜೆಎಸ್ಎಸ್ ಆಸ್ಪತ್ರೆಯ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಬಸವದಳದಲ್ಲೂ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು.
ಅನ್ನಪೂರ್ಣ ಅವರ ನಿಧನಕ್ಕೆ ನಿರ್ಮಲ ಕೋಟಿ ಕುಟುಂಬ ವರ್ಗದವರು ಸಂತಾಪ ಸೂಚಿಸಿದ್ದಾರೆ.