ಮೈಸೂರಲ್ಲಿ ಆಗಸ್ಟ್ 4 ರಂದು ಅಡಗೂರು ವಿಶ್ವನಾಥ್ ‘ ಬಂಡಾಯ’ ಬಹಿರಂಗ..

 

ನವದೆಹಲಿ, ಆ.02, 2019 : (www.justkannada.in news) : ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಇದೇ ಭಾನುವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಈ ಗೋಷ್ಠಿಯಲ್ಲಿ, ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಲಿದ್ದಾರೆ.

ದಿಲ್ಲಿಯ ಕರ್ನಾಟಕ ಭವನದಲ್ಲಿ ಇಂದು ಮಧ್ಯಾಹ್ನ ಮಾಧ್ಯಮ ಪ್ರತಿನಿಧಿಗಳ ಜತೆ ಅನೌಪಚಾರಿಕವಾಗಿ ಮಾತನಾಡಿದ ಅಡಗೂರು ವಿಶ್ವನಾಥ್ ಹೇಳಿದಿಷ್ಟು….

ಶನಿವಾರ ಕರ್ನಾಟಕಕ್ಕೆ ತೆರಳುತ್ತಿದ್ದು, ಭಾನುವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಲು ಉದ್ದೇಶಿಸಿದ್ದೇನೆ. ಈ ಮೊದಲು ರಾಜಧಾನಿಯಲ್ಲೇ ನಡೆಸಲು ಉದ್ದೇಶಿಸಿದ್ದೆ. ಆದರೆ ಮೈಸೂರು ಜಿಲ್ಲೆಯ ಜನಪ್ರತಿನಿಧಿಯಾಗಿರುವ ಕಾರಣ ರಾಜಕಾರಣದ ಪ್ರಸ್ತುತ ಬೆಳವಣಿಗೆಗಳ ಬಗೆಗೆ ಹಾಗೂ ನಾನು ಕೈಗೊಂಡ ತೀರ್ಮಾನಗಳ ಬಗ್ಗೆ ಮಾಧ್ಯಮ ಮಿತ್ರರ ಜತೆ ಮುಕ್ತವಾಗಿ ಮಾತನಾಡಬೇಕಾಗಿದೆ. ಆ ಮೂಲಕ ಕ್ಷೇತ್ರದ ಮತದಾರರನ್ನು ತಲುಪುವುದು ನನ್ನ ಉದ್ದೇಶ ಎಂದರು.

ಯಾವ ಸನ್ನಿವೇಶದಲ್ಲಿ ಜೆಡಿಎಸ್ ಸೇರ್ಪಡೆಗೊಂಡೆ, ಬಳಿಕ ಅಲ್ಲಿ ನಡೆದ ಬೆಳವಣಿಗೆಗಳು, ರಾಜ್ಯಾಧ್ಯಕ್ಷನಾಗಿದ್ದು, ನಂತರ ಅದಕ್ಕೆ ರಾಜೀನಾಮೆ ನೀಡಿದ್ದು, ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭ ಸೃಷ್ಠಿಯಾದದ್ದು. ಈ ಎಲ್ಲದರ ಬಗೆಗೂ ನಾನು ಸ್ಪಷ್ಟನೆ ನೀಡಬೇಕಾಗಿದ್ದು, ಪತ್ರಿಕಾಗೋಷ್ಠಿಯಲ್ಲಿ ಈ ಎಲ್ಲದರ ಬಗೆಗೂ ಸಂಪೂರ್ಣ ಮಾಹಿತಿ ನೀಡುವೆ ಎಂದರು.

ಚುನಾವಣಾ ರಾಜಕೀಯದಿಂದ ನಿವೃತ್ತಿ :

ಮಾಜಿ ಸಚಿವ ಹೆಚ್.ವಿಶ್ವನಾಥ್., ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದು, ಚುನಾವಣಾ ಕಣದಿಂದ ಹಿಂದೆ ಸರಿಯಲು‌ ನಿರ್ಧಾರಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ರಾಜಕೀಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಜನತೆ ನೀಡಿರುವ ರಾಜಕೀಯ ಅನುಭವಗಳನ್ನು ಸದ್ಬಳಕೆ ಮಾಡಿಕೊಳ್ಳಲು ರಾಜಕೀಯ ರಂಗದಲ್ಲಿ ಮುಂದುವರೆಯುತ್ತೇನೆ. ಈ ಹಿಂದೆ ನಾನು ತಿಳಿಸಿದಂತೆ, ‘ ಅಂತಾರಾಷ್ಟ್ರೀಯ ರಾಜಕೀಯ ಅಕಾಡೆಮಿ’ ಸ್ಥಾಪನೆಯತ್ತಲೂ ಗಮನಹರಿಸುವೆ ಎಂದು ವಿಶ್ವನಾಥ್ ತಿಳಿಸಿದರು.

ಗೌರ್ನರ್ ಆಗುವಷ್ಟು ವಯಸ್ಸಾಗಿಲ್ಲ :

ಇದೇ ವೇಳೆ ಬಿಜೆಪಿಯವರು ತಮ್ಮನ್ನು‌ ರಾಜ್ಯಪಾಲರಾಗಿ ನೇಮಕ ಮಾಡುತ್ತಾರೆ ಎಂಬ ವದಂತಿ ಇದೆಯಲ್ಲ ಎಂಬ ಪ್ರಶ್ನೆಗೆ ಅದು ಕೇವಲ ಊಹಾಪೋಹ.‌ ನನಗೆ ರಾಜ್ಯಪಾಲ ಆಗುವಷ್ಟು ಇನ್ನು‌ ವಯಸ್ಸಾಗಿಲ್ಲ ಎಂದ ವಿಶ್ವನಾಥ್ ನಕ್ಕರು.

ಪ್ರತ್ಯೇಕ ಪಾರ್ಟಿ ಮಾಡ್ತೀವಿ :

ಅನರ್ಹ ಶಾಸಕರು ಸದ್ಯದ ಸ್ಥಿತಿ ಬಗ್ಗೆ ಪ್ರಶ್ನಿಸಿ, ಯಾವ ಪಕ್ಷದವರು ಕೈ ಹಿಡಿಯದಿದ್ದರೆ ಮುಂದೇನು ಎಂಬ ಪ್ರಶ್ನೆಗೆ, ನಾವೇ 20 ಜನ ಇದ್ದೀವಿ. ಒಂದ್ ಹೊಸ ಪಕ್ಷನೇ ಕಟ್ಟಿದ್ರಾಯ್ತು ಎಂದು ವಿಶ್ವನಾಥ್ ಹೇಳುವ ಮೂಲಕ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿಸಿದರು.

key words : adaguru.vishwanath-pressmeet-mysore-politics

Rebel disqualified MLA, A. H. Vishwanath said in Delhi that the rebels may choose to form their own party if things fail to work in their favour