ಪಿಯುಸಿ ಸೀಟುಗಳ ಹೆಚ್ಚಳಕ್ಕೆ ಕ್ರಮ -ಶಿಕ್ಷಣ ಸಚಿವ ಸುರೇಶ್ ಕುಮಾರ್

ಬೆಂಗಳೂರು,ಜುಲೈ,9,2021(www.justkannada.in):  ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪರೀಕ್ಷೆಗೆ ನೊಂದಾಯಿಸಿದ ಎಲ್ಲ ವಿದ್ಯಾರ್ಥಿಗಳನ್ನು ಪಿ.ಯು.ಸಿ ತರಗತಿಗಳ ಪ್ರವೇಶಕ್ಕೆ ಅವಕಾಶ ನೀಡಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್   ಅಭಿಪ್ರಾಯಪಟ್ಟಿದ್ದಾರೆ.jk

ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಕುರಿತು ರಾಜ್ಯದ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಶುಕ್ರವಾರ ಡಿ.ಎಸ್.ಇ.ಆರ್.ಟಿ ಯಲ್ಲಿ “ಬನ್ನಿ ವಿದ್ಯಾರ್ಥಿಗಳೇ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಆತ್ಮಸ್ಥೈರ್ಯದಿಂದ ಬರೆಯೋಣ” ಎಂಬ ಧ್ಯೇಯದೊಂದಿಗೆ ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆದ ಮುಕ್ತ ಸಂವಾದದಲ್ಲಿ ವಿದ್ಯಾಥಿಗಳ ಪ್ರಶ್ನೆ/ ಸಲಹೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಎಲ್ಲರೂ ಪಾಸಾಗುವುದರಿಂದ ಪಿಯು ಪ್ರವೇಶ ಸಮಸ್ಯೆಯ ಕುರಿತು ಯಾರಿಗೂ ಯಾವುದೇ ಆತಂಕ ಬೇಡವೇ ಬೇಡ ಎಂದರು.

“ಈಗಾಗಲೇ ವಿದ್ಯಾರ್ಥಿಗಳಾದ ನೀವು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧವಾಗಿರುವುದರಿಂದ ಧೈರ್ಯದಿಂದ ಪರೀಕ್ಷೆ ಬರೆಯುವುದರತ್ತ ಗಮನ ಹರಿಸಿ ನಾವು ನಿಮ್ಮನ್ನು ಪಿಯುಸಿ ತರಗತಿಗಳಿಗೆ ಪ್ರವೇಶ ನೀಡಲು ಎಲ್ಲ ವ್ಯವಸ್ಥೆ ಮಾಡುತ್ತೇವೆ” ಎಂದು ಸುರೇಶ್ ಕುಮಾರ್ ತಿಳಿಸಿದರು.

ರಾಜ್ಯದ ಸರ್ಕಾರಿ ಪಿಯು ಕಾಲೇಜಗಳಲ್ಲಿ ಪಿಯು ಸೀಟುಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಖಾಸಗಿ ಶಾಲೆಗಳಿಂದ ಪಿಯು ಸೀಟುಗಳ ಹೆಚ್ಚಳದ ಕೋರಿಕೆಗಳು ಬಂದರೆ ಪರಿಗಣಿಸಿ ಎಲ್ಲ ವಿದ್ಯಾರ್ಥಿಗಳಿಗೂ ಪಿಯುಸಿ ಸೀಟು ದೊರೆಯುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ಶಾಲೆಗಳಿಗೆ ಕುಡಿಯುವ ನೀರು-ಶೌಚಾಲಯ ವ್ಯವಸ್ಥೆ:

ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಗಳಿಲ್ಲದ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಈ ಸೌಲಭ್ಯಗಳನ್ನು  ಕಲ್ಪಿಸಲು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪಕವಾದ ಕಾರ್ಯಕ್ರಮವನ್ನು ಹಾಕಿಕೊಂಡಿದ್ದು, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದು ಸಚಿವರು ಹೇಳಿದರು.

ಡಿವೈಸರ್ ಪೂರೈಕೆ- ಇಂಟರ್ನೆಟ್ ಬಲಪಡಿಸಲು ಕ್ರಮ: 

ಗ್ರಾಮೀಣ ಪ್ರದೇಶದ ಹಲವಾರು ಮಕ್ಕಳು ಈ ಪರ್ಯಾಯ ಬೋಧನೆಯ ವಿಧಾನಗಳಾದ ದೂರದರ್ಶನ ಚಂದನ, ಮೊಬೈಲ್, ಲ್ಯಾಪ್ ಟಾಪ್ ಸೌಲಭ್ಯದ ಮೂಲಕ ನೀಡುವ ತರಗತಿಗಳಿಗೆ ಉಪಕರಣಗಳಿಲ್ಲದೇ ವಂಚಿತವಾಗಿದ್ದಾರೆ. ಹಾಗೆಯೇ ಈ ಸೌಲಭ್ಯವಿದ್ದವರಿಗೆ ಇಂಟರ್ನೆಟ್-ಅಂತರ್ಜಾಲ ವ್ಯವಸ್ಥೆ ಬಲಯುತವಾಗಿಲ್ಲದೇ ಇರುವುದರಿಂದ ತರಗತಿಗಳನ್ನು ಸರಿಯಾಗಿ ಆಲಿಸಲಾಗುತ್ತಿಲ್ಲ ಎಂಬ ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಸುರೇಶ್ ಕುಮಾರ್,  ಈ ಕುರಿತು ಇಂತಹ ಸೌಲಭ್ಯಗಳನ್ನು ಹೇಗೆ ಒದಗಿಸಬೇಕೆಂಬ ಕುರಿತು ಚಿಂತನೆ ನಡೆಸುತ್ತಿದೆ. ಹಲವಾರು ತಾಲೂಕುಗಳಲ್ಲಿ ಬಿಇಒ ಹಂತದಲ್ಲಿ ಮೊಬೈಲ್ ಬ್ಯಾಂಕ್ ಮೂಲಕ ದಾನಿಗಳಿಂದ ಮೊಬೈಲ್ ಫೋನ್ಗಳನ್ನು ಸಂಗ್ರಹಿಸಲಾಗುತ್ತಿದೆ. ರೋಟರಿ ಮತ್ತಿತರ ಸಂಸ್ಥೆಗಳಿಂದ ಇದಕ್ಕೆ ಅಗತ್ಯವಾದ ಉಪಕರಣಗಳನ್ನು ಪಡೆಯಲು ಕ್ರಮ ವಹಿಸಲಾಗಿದೆ. ಹಾಗೆಯೇ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಬಲಯುತಗೊಳಿಸಲು ಅನುವಾಗುವಂತೆ ಇಂಟರ್ನೆಟ್ ಒದಗಿಸುವ ಸಂಸ್ಥೆಗಳ ಸಭೆ ಕರೆದು ಚರ್ಚಿಸುವಂತೆ ಮುಖ್ಯಮಂತ್ರಿಗಳು ಮತ್ತು ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಗ್ರಾಮ ಪಂಚಾಯ್ತಿ ಗ್ರಂಥಾಲಯಗಳಲ್ಲಿ ಟಿ.ವಿ.:

ಗ್ರಾಮ ಪಂಚಾಯ್ತಿ ಗ್ರಂಥಾಲಯಗಳಲ್ಲಿ ಟಿ.ವಿ. ವ್ಯವಸ್ಥೆ ಮಾಡಿ ಅಲ್ಲಿಗೆ ಯಾರ ಮನೆಯಲ್ಲಿ ಟಿ.ವಿ. ಸೆಟ್ ಇಲ್ಲವೋ ಅಂತಹ ಮಕ್ಕಳು ತಮ್ಮ ತರಗತಿಗೆ ನಿಗದಿಪಡಿಸಿದ ಪಠ್ಯಗಳನ್ನು ದೂರದರ್ಶನ ಚಂದನಾ ವಾಹಿನಿ ವೀಕ್ಷಿಸುವಂತಹ ವೇದಿಕೆಯನ್ನು ಕಲ್ಪಿಸುವ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ಅದು ಪ್ರಗತಿಯಲ್ಲಿದೆ ಎಂದೂ ಸಚಿವರು ತಿಳಿಸಿದರು.

ಪರೀಕ್ಷೆ ಬರೆಯಲು ಉತ್ಸುಕರಾಗಿದ್ದೇವೆ:

ಅನೇಕ ರಾಜ್ಯಗಳು ಮಂಡಳಿ ಪರೀಕ್ಷೆಯನ್ನು ರದ್ದು ಮಾಡಿದ ಸಂದರ್ಭದಲ್ಲಿ ಯಾವುದೇ ರೂಪದಲ್ಲೇ ಆಗಲಿ ಪರೀಕ್ಷೆ ನಡೆಸುವ ಮೂಲಕ ನಮ್ಮ ಆತ್ಮವಿಶ್ವಾಸ  ಮೂಡಿಸಿದ್ದಲ್ಲದೇ ನಮ್ಮ ಪ್ರತಿಭೆ, ಸಾಮಥ್ರ್ಯ ಪ್ರದರ್ಶನಕ್ಕೆ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟು, ಪರೀಕ್ಷೆಯಿಲ್ಲದೇ ಉತ್ತೀರ್ಣರಾದವರೆಂದು ಜೀವನವಿಡೀ ಕಾಡುತ್ತಿದ್ದ ಮುಜುಗರ, ತಪ್ಪಿತಸ್ಥ ಭಾವನೆಯಿಂದ ನಮ್ಮನ್ನು ಮುಕ್ತಗೊಳಿಸಿದ್ದಕ್ಕೆ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ ಎಂದು ಇಂದು ಸಂವಾದದಲ್ಲಿ ಭಾಗಿಯಾದ ಮಕ್ಕಳು ಹರ್ಷ ವ್ಯಕ್ತಪಡಿಸಿದರು.

ಈಗಾಗಲೇ ಪರೀಕ್ಷಾ ಮಂಡಳಿಯಿಂದ ಕಳಿಸಿದ ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ಒಎಂಆರ್ ಶೀಟ್ ಗಳನ್ನು ಉತ್ತರಿಸಿದ್ದೇವೆ.  ನಮಗೆ ಪರೀಕ್ಷೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮಕ್ಕಳು ಅಭಿಪ್ರಾಯಪಟ್ಟರು. ಪರೀಕ್ಷೆ ಅಂಕಗಳು, ಪರೀಕ್ಷಾ ಸಮಯ ಕುರಿತು ತಮ್ಮ ಆತಂಕ/ಗೊಂದಲಗಳನ್ನು ನಿವಾರಿಸಿಕೊಂಡ ಮಕ್ಕಳು ರಫ್ ವರ್ಕ್ ಗೆ ಪ್ರಶ್ನೆ ಪತ್ರಿಕೆಯೊಂದಿಗೆ ಹೆಚ್ಚುವರಿ ಹಾಳೆಗಳನ್ನು ಒದಗಿಸುವ ಮಂಡಳಿ  ಕ್ರಮವನ್ನು ಮುಕ್ತಕಂಠದಿಂದ ಸ್ವಾಗತಿಸಿ ಹರ್ಷವ್ಯಕ್ತಪಡಿಸಿದರು. ಬಹುತೇಕ ಮಕ್ಕಳು ಪರೀಕ್ಷಾ ವೇಳೆ ನಿಗದಿ ಕುರಿತು ಸಮಾಧಾನ ವ್ಯಕ್ತಪಡಿಸಿದರು. ಪರೀಕ್ಷೆ ಕುರಿತು ಕೈಗೊಂಡ ವಿವಿಧ ಕ್ರಮಗಳು, ಪರೀಕ್ಷಾ ಪಾವಿತ್ರ್ಯತೆಯ ಕ್ರಮಗಳನ್ನು ಮಕ್ಕಳು  ಶ್ಲಾಘಿಸಿದರು.

ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು ತಮ್ಮೂರಿಗೆ ಇನ್ನು ಪೂರ್ಣಪ್ರಮಾಣದಲ್ಲಿ ಬಸ್ ಸಂಚಾರವಿಲ್ಲದೇ ಇರುವುದರಿಂದ ಬಸ್ ಸೌಲಭ್ಯ ಒದಗಿಸುವ ಕುರಿತ ಅವಳ ಆತಂಕ ನಿವಾರಿಸಿದ ಸಚಿವ ಸುರೇಶ್ ಕುಮಾರ್, ಬಸ್ ಸೌಲಭ್ಯ ಒದಗಿಸುವ ಕುರಿತು ಇಂದು ನಿಮ್ಮ ಜಿಲ್ಲಾಧಿಕಾರಿಗಳ ಗಮನಕ್ಕೆ ವಿಷಯ ತರಲಾಗುವುದು. ನೀವು ಪರೀಕ್ಷೆ ತಯಾರಾಗುವುದಕ್ಕೆ ಮಾತ್ರವೇ ತಮ್ಮ  ಏಕಾಗ್ರತೆ ಇರಲಿ ಎಂದು ಸುರೇಶ್ ಕುಮಾರ್ ಅಭಯ ನೀಡಿದರು.

ಪರೀಕ್ಷೆ  ಬರೆಯಲು ಸಾಕ್ಷಿ:

ಕಾರವಾರ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷಿ ಎಂಬ ವಿದ್ಯಾರ್ಥಿನಿ, ʼನೀವು ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ನಡೆಯುತ್ತದೆ ಮತ್ತು ಪರೀಕ್ಷೆ ಬರೆಯುವ ಮೂಲಕವೇ ನಮ್ಮ ಸಾಮಥ್ರ್ಯ ಸಾಬೀತು ಪಡಿಸಲು ಅವಕಾಶ ನೀಡಿರುವುದರಿಂದ ನಾವೆಲ್ಲ ಧೈರ್ಯವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆಯಲು ಸಿದ್ಧವಾಗಿರುವುದಕ್ಕೆ ನಾನೇ ಸಾಕ್ಷಿʼ ಎಂದು ಆತ್ಮವಿಶ್ವಾಸ ಪ್ರದರ್ಶಿಸಿದಾಗ ಮುಕ್ತ ಸಂವಾದದಲ್ಲಿ ಭಾಗಿಯಾದ ರಾಜ್ಯದ 1000ಕ್ಕೂ ಹೆಚ್ಚು ಮಕ್ಕಳು ಖುಷಿಯಿಂದ ಚಪ್ಪಾಳೆ ತಟ್ಟಿ  ತಾವೆಲ್ಲ ಪರೀಕ್ಷೆ ಬರೆಯಲು ದಿನಗಣನೆ ಮಾಡುತ್ತಿರುವುದನ್ನು ಮುಕ್ತವಾಗಿ ಹಂಚಿಕೊಂಡರು.

ಪರೀಕ್ಷೆ ನಡೆಸದೇ ಹೋಗಿದ್ದರೆ ನಾವು ಕೊರೋನಾ ಬ್ಯಾಚ್ನಲ್ಲಿ ಪರೀಕ್ಷೆ ಬರೆಯದೇ ಪಾಸಾದವರೆಂಬ ಒಂದು ಅಪಖ್ಯಾತಿ ನಮ್ಮ ಮೇಲೆ ಉಳಿದುಬಿಡುತ್ತಿತ್ತೇನೋ ಎಂಬ ಆತಂಕ ನಮ್ಮಲ್ಲಿ ಉಳಿಯದಂತೆ ಮಾಡಿದ್ದಕ್ಕೆ ನಾವು ಕರ್ನಾಟಕ ಸರ್ಕಾರಕ್ಕೆ ನಮ್ಮ ಕೃತಜ್ಞತೆಗಳನ್ನು ತಿಳಿಸಲು ಈ ವೇದಿಕೆಯನ್ನು ಮೊದಲು ಬಳಸಿಕೊಳ್ಳುತ್ತೇವೆಂದು ಅನೇಕ ಮಕ್ಕಳು ಹೇಳಿದ್ದು ವೈಯಕ್ತಿಕವಾಗಿ ನಮ್ಮ ಅಧಿಕಾರಿಗಳು, ಶಿಕ್ಷಕರು ಮತ್ತು ನಮಗೆಲ್ಲರಿಗೂ ಅತ್ಯಂತ ಖುಷಿಯಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಇಳಿಮುಖವಾದ ಕೊರೋನಾ- ಭಯ ಬೇಡ:

ನಾವು ಪರೀಕ್ಷೆ ಮಾಡಲು ಮುಂದಾದಾಗ ನಮ್ಮ ಮುಖ್ಯಮಂತ್ರಿಯವರು ಕೊರೋನಾ ಪ್ರಕರಣಗಳು ಕಡಿಮೆಯಾದರೆ ಮಾತ್ರವೇ ಪರೀಕ್ಷೆ ಮಾಡಲು ಮುಂದಾಗುತ್ತೇವೆ ಎಂದು ಹೇಳಿದಂತೆ ಈಗ ನಾವು ಪರೀಕ್ಷೆ ನಡೆಸಲು ಮುಂದಾಗಿದ್ದೇವೆ ಎಂದು ಸುರೇಶ್  ಕುಮಾರ್ ತಿಳಿಸಿದರು.

ಕಳೆದ ವರ್ಷ ಪರೀಕ್ಷೆ ನಡೆಸಿದಾಗ ಕೊರೋನಾ ಪಾಸಿಟಿವಿಟಿ ದರ 13.2ರಷ್ಟಿದ್ದರೆ ಅದು ಈ ವರ್ಷ 1.7ರ ಆಸುಪಾಸಿನಲ್ಲಿದೆ, ಈ ಬಾರಿಯ ಪರೀಕ್ಷೆ ಕಳೆದ ಬಾರಿಯ ಪರೀಕ್ಷೆಗಿಂತ ಹೆಚ್ಚಿನ ಸುರಕ್ಷಿತ ವಾತಾವರಣದಲ್ಲಿ ನಡೆಯಲಿದೆ. ಪರೀಕ್ಷಾ ಕೇಂದ್ರಗಳು ದ್ವಿಗುಣವಾಗಿವೆ. ಪರೀಕ್ಷಾ ಕೊಠಡಿಗಳು ಮೂರು ಪಟ್ಟು ಹೆಚ್ಚಾಗಿವೆ. ಪ್ರಶ್ನೆ ಪತ್ರಿಕೆಗೆ ಉತ್ತರಿಸಲು ಸಾಕಷ್ಟು ಸಮಯಾವಕಾಶ ದೊರೆಯಲಿದೆ. ಕೇವಲ ಎರಡೇ ದಿನಗಳ ಕಾಲ ಪರೀಕ್ಷೆ ನಡೆಯುವುದರಿಂದ ಯಾವುದೇ ತೊಂದರೆಗೆ ಅವಕಾಶವೇ ಇಲ್ಲ. ರಾಜ್ಯದ ಎಲ್ಲ ಇಲಾಖೆಗಳ ಸಹಯೋಗದಲ್ಲಿ ಪರೀಕ್ಷೆ ನಡೆಯುತ್ತಿರುವುದರಿಂದ ಮತ್ತು ಪರೀಕ್ಷೆಗಳು ಸುರಕ್ಷಿತ ವಾತಾವರಣದಲ್ಲಿ ನಡೆಯುತ್ತಿರುವ ಕುರಿತು ನಮಗೆಲ್ಲಾ ಭರವಸೆಯಿದ್ದು ತಮ್ಮ ಪೋಷಕರು ನಮ್ಮನ್ನು ಧೈರ್ಯವಾಗಿ ಪರೀಕ್ಷೆಗೆ ಕಳಿಸಲು ಉತ್ಸುಕರಾಗಿದ್ದಾರೆಂದು ಮಕ್ಕಳು ಹೇಳಿದರು.

ರಾಜ್ಯದ 34ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐ ಕಚೇರಿ ಮತ್ತು ಡಯಟ್ ಕೇಂದ್ರಗಳಲ್ಲಿ ಹಾಜರಿದ್ದ ಮಕ್ಕಳು ಸಚಿವರೊಂದಿಗೆ ಪರೀಕ್ಷೆ ಕುರಿತ ತಮ್ಮ ಶಂಕೆಗಳನ್ನು ನಿವಾರಿಸಿಕೊಂಡರು. 90 ಮಕ್ಕಳು ನೇರವಾಗಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಶೇ. 98ರಷ್ಟು ಸಿಬ್ಬಂದಿ ವ್ಯಾಕ್ಸಿನೇಷನ್:

ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾಗುವ 1,33,926 ಸಿಬ್ಬಂದಿಗಳಲ್ಲಿ 1,30,522 ಮಂದಿ ಮೊದಲ ಡೋಸ್ ಕೊರೋನಾ ವ್ಯಾಕ್ಸಿನೇಷನ್ ಪಡೆದಿದ್ದಾರೆ. 48,938 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಶೇ. 98 ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ. 3404 ಮಂದಿ ಇನ್ನೆರೆಡು ದಿನಗಳಲ್ಲಿ ಲಸಿಕೆ ಪಡೆಯಲಿದ್ದಾರೆಂದು ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪರೀಕ್ಷೆ ನಡೆಸಲು ಯಾವುದೇ ರಹಸ್ಯ ಕಾರ್ಯಸೂಚಿ ಇಲ್ಲ:

ಪರೀಕ್ಷೆ ನಡೆಸುವುದು ಸರ್ಕಾರಕ್ಕೆ ಪ್ರತಿಷ್ಠೆ ಇಲ್ಲವೇ ಹಠದ ವಿಷಯವಲ್ಲ. ಪರೀಕ್ಷೆ ಕೈಬಿಡುವುದು  ಯಾರಿಗೇ ಆಗಲಿ ಸುಲಭದ ಸಂಗತಿ. ಆದರೆ ನಾವು ನಮ್ಮ ಮಕ್ಕಳ ಭವಿಷ್ಯ ಮತ್ತು ಹಿತದೃಷ್ಟಿಯಿಂದ ಅವರ ಮುಂದಿನ ಶಿಕ್ಷಣ ಅಯ್ಕೆಯ ಅನುಕೂಲಕ್ಕಾಗಿ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ಸಚಿವರು ಪುನರುಚ್ಛರಿಸಿದರು. ಪರೀಕ್ಷೆ ನಡೆಸುವುದರಲ್ಲಿ ಶಿಕ್ಷಣ ಇಲಾಖೆಯ ಯಾವುದೇ ರಹಸ್ಯ ಕಾರ್ಯಸೂಚಿಯೇನಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ರಾಜ್ಯದ ಆರೋಗ್ಯ ಇಲಾಖೆ ಮತ್ತು ರಾಜ್ಯದ ಕೋವಿಡ್  ತಾಂತ್ರಿಕ ಸಲಹಾ ಸಮಿತಿ ನೀಡಿದ ನಿರ್ದೇಶನದ ಆಧಾರದಲ್ಲೇ ಅವರು ರೂಪಿಸಿದ ಎಸ್ಒಪಿಯನ್ವಯವೇ ಪರೀಕ್ಷೆ ನಡಯುತ್ತಿದೆ. ಅದಕ್ಕೆ ರಾಜ್ಯದ ಮುಖ್ಯಮಂತ್ರಿಯವರೂ ಅನುಮೋದನೆ ನೀಡಿದ್ದಾರೆಂದೂ ಸುರೇಶ್ ಕುಮಾರ್ ತಿಳಿಸಿದರು.

ಶೀಘ್ರವೇ ಕಾರ್ಯಪಡೆ ಕಾರ್ಯಾರಂಭ:

ಬರುವ ಶೈಕ್ಷಣಿಕ ವರ್ಷದಲ್ಲಿ ಕಲಿಕಾ ನಿರಂತರತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವರದಿ ನೀಡಲು ಸಾಶಿಇ ಆಯುಕ್ತರ ನೇತೃತ್ವದಲ್ಲಿ ಶಿಕ್ಷಣ  ತಜ್ಞರು, ಅಧಿಕಾರಿಗಳು, ಪೋಷಕರು, ಖಾಸಗಿ ವಿದ್ಯಾಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಕಾರ್ಯಪಡೆ ರಚಿಸಲಾಗಿದ್ದು, ಶಿಕ್ಷಣದ ಮುಂದುವರಿಕೆ ಕುರಿತಂತೆ ಕ್ರಿಯಾಯೋಜನೆಯನ್ನು ರೂಪಿಸಲಿದೆ ಎಂದು ಸಚಿವರು ವಿವರಿಸಿದರು.

ಜುಲೈ ಕೊನೆ ವಾರದಲ್ಲಿ ಪಿಯುಸಿ ಫಲಿತಾಂಶ:

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶಗಳನ್ನು ಜುಲೈ 20ರ ಆಸುಪಾಸಿನಲ್ಲಿ ಪ್ರಕಟಿಸಲಾಗುವುದು ಎಂದು ಸುರೇಶ್ ಕುಮಾರ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು. ಸಾಶಿಇ ಆಯುಕ್ತ ವಿ. ಅನ್ಬುಕುಮಾರ್, ಎಲ್ಲ ಜಿಲ್ಲೆಗಳ ಡಿಡಿಪಿಐಗಳು, ಡಯಟ್ ಪ್ರಾಚಾರ್ಯರು ಭಾಗವಹಿಸಿದ್ದರು.

Key words: Action -increase -PUC -Education Minister- Suresh Kumar-video-conference